ಕುನೋದಲ್ಲಿ ‘ವಿಂಟರ್ ಕೋಟ್’ನಿಂದ ಚೀತಾಗಳ ಸಾವು – ಉತ್ತರ ಆಫ್ರಿಕಾದಿಂದ ಚೀತಾಗಳನ್ನ ತರಿಸಲು ಸಿದ್ಧತೆ
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಕಾರ್ಯಕ್ರಮದ ಅಡಿಯಲ್ಲಿ ನಮೀಬಿಯಾದಿಂದ ತರಿಸಿದ್ದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನ ಬಿಡಲಾಗಿದೆ. ಈ ಪೈಕಿ ಹಲವು ಕಾರಣಗಳಿಂದ ಕೆಲ ಚೀತಾಗಳು ಮೃತಪಟ್ಟಿವೆ. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳಿಗೆ ಸ್ಥಳೀಯ ಬೇಸಿಗೆ ಕಾಲದಲ್ಲಿ ಮೈಮೇಲೆ ‘ವಿಂಟರ್ ಕೋಟ್’ ಪರಿಣಾಮ ಕಡಿತ, ಕುತ್ತಿಗೆ ಭಾಗದಲ್ಲಿಗಂಭೀರ ಪ್ರಮಾಣ ಗಾಯಗಳು ಉಂಟಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿವೆ. ಹೀಗಾಗಿ ಈ ಬಾರಿ ಉತ್ತರ ಆಫ್ರಿಕಾದಿಂದ ಚೀತಾಗಳನ್ನು ಕರೆತರಲು ಕೇಂದ್ರ ಸರಕಾರವು ಸಿದ್ಧತೆ ಆರಂಭಿಸಿದೆ.
ಇದನ್ನೂ ಓದಿ : ಮತ್ತೊಮ್ಮೆ ಜಗತ್ತನ್ನು ಕಾಡಲಿದ್ಯಾ ಕೊರೋನಾ ರೂಪಾಂತರಿ? – ಚೀನಾದ ಖ್ಯಾತ ವೈರಾಣು ತಜ್ಞೆ ಎಚ್ಚರಿಕೆ!
ಉತ್ತರ ಆಫ್ರಿಕಾದ ಹವಾಗುಣ ಭಾರತಕ್ಕೆ ಬಹಳ ಹೋಲಿಕೆ ಆಗುತ್ತದೆ. ಅಲ್ಲಿನ ಚೀತಾ ಸಂತತಿಯ ಸಂಶೋಧನೆ ನಡೆಸಲಾಗುತ್ತಿದೆ. ಅಮೆರಿಕ, ಬ್ರಿಟನ್ ಕೂಡ ಉತ್ತರ ಆಫ್ರಿಕಾದಿಂದ ಚೀತಾ ತರಿಸಿಕೊಂಡಿವೆ. ಭಾರತದಲ್ಲಿ ವಿನಾಶಗೊಂಡಿದ್ದ ಚೀತಾ ಸಂತತಿಯನ್ನು ಮರು ಅಭಿವೃದ್ಧಿಪಡಿಸುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾಗಳಿಂದ ಚೀತಾಗಳನ್ನು ತರಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 12 ಚೀತಾಗಳು ಭಾರತಕ್ಕೆ ಬಂದು ಒಂದು ವರ್ಷ ಕಳೆದಿದೆ. ಬೇಸಿಗೆ ಹಾಗೂ ಮಳೆಗಾಲದ ಅವಧಿಯಲ್ಲಿ ಚೀತಾಗಳಲ್ಲಿ ವಿಂಟರ್ ಕೋಟ್ ಉಂಟಾಗುತ್ತದೆ ಎಂದು ತಜ್ಞರು ಊಹಿಸಿರಲಿಲ್ಲ.
ವಿಂಟರ್ ಕೋಟ್ ಎಂದರೇನು?
ಅಧಿಕ ಆರ್ದ್ರತೆ ಮತ್ತು ತಾಪಮಾನಗಳಿಂದ ವಿಂಟರ್ ಕೋಟ್ ಉದ್ಭವಿಸುತ್ತದೆ. ಅಂದರೆ ಹೆಚ್ಚಿನ ತುಪ್ಪಳ ಬೆಳೆಯುತ್ತದೆ. ಮೈಯಲ್ಲಿ ವಿಪರೀತ ತುರಿಕೆ ಉಂಟಾಗುವುದರಿಂದ ಪ್ರಾಣಿಗಳು ತಮ್ಮ ಕತ್ತಿನ ಭಾಗವನ್ನು ಮರದ ಕಾಂಡ ಅಥವಾ ನೆಲಕ್ಕೆ ಜೋರಾಗಿ ತಿಕ್ಕಿಕೊಳ್ಳುತ್ತವೆ. ಇದರಿಂದ ಚರ್ಮ ಕಿತ್ತು ಗಾಯವಾಗುತ್ತದೆ. ಅವುಗಳ ಮೇಲೆ ನೊಣದಂತಹ ಕೀಟಗಳು ಮೊಟ್ಟೆ ಇರಿಸುತ್ತವೆ. ಇದರಿಂದ ಗಾಯಗಳನ್ನು ಹುಳುಗಳು ಮುತ್ತಿಕೊಳ್ಳುತ್ತವೆ. ಅಂತಿಮವಾಗಿ ಬ್ಯಾಕ್ಟೀರಿಯಾ ಸೋಂಕು ಹಾಗೂ ರಕ್ತ ನಂಜು ಉಂಟಾಗುತ್ತದೆ. ಮೂರು ಚೀತಾಗಳ ಸಾವಿಗೆ ಈ ವಿಂಟರ್ ಕೋಟ್ ಕಾರಣವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಉತ್ತರ ಆಫ್ರಿಕಾ ಚೀತಾಗಳು ಸೇಫ್
ಉತ್ತರ ಆಫ್ರಿಕಾದ ವಾತಾವರಣ ಭಾರತಕ್ಕೆ ಹೆಚ್ಚು ಪೂರಕವಾಗಿರುವುದರಿಂದ ಅಲ್ಲಿನ ಚೀತಾಗಳನ್ನು ತರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಆದರೆ ಇದಿನ್ನೂ ಅಂತಿಮಗೊಂಡಿಲ್ಲ. ಅವುಗಳ ಸಂಖ್ಯೆ, ಆರೋಗ್ಯ ಸ್ಥಿತಿ, ತಳಿ ಅಭಿವೃದ್ಧಿ ಸನ್ನಿವೇಶ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದದ್ದಾರೆ. ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ವಿವಿಧ ದೇಶಗಳು ಉತ್ತರ ಆಫ್ರಿಕಾ ಚೀತಾಗಳನ್ನು ಆಮದು ಮಾಡಿಕೊಂಡಿದ್ದವು. ಹೀಗಾಗಿ ಭಾರತ ಕೂಡ ಈ ಪ್ರಯತ್ನ ಮಾಡಬಹುದು ಎಂದು ಅನೇಕ ಅಂತಾರಾಷ್ಟ್ರೀಯ ತಜ್ಞರು ಸಲಹೆ ನೀಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್ ಮತ್ತು ಫೆಬ್ರವರಿಯಲ್ಲಿ ಎರಡನೇ ಬ್ಯಾಚ್ ಸೇರಿದಂತೆ ಒಟ್ಟಾರೆ 20 ಚೀತಾಗಳನ್ನು ತರಿಸಿಕೊಂಡು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿತ್ತು. ಮಾರ್ಚ್ ತಿಂಗಳಿನಿಂದ ಒಟ್ಟು ಆರು ಚೀತಾಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ. ನಮೀಬಿಯಾದ ಹೆಣ್ಣು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಲ್ಲಿ ಮೂರು ಮೃತಪಟ್ಟಿದ್ದು, ಬದುಕುಳಿದಿರುವ ಒಂದನ್ನು ಅರಣ್ಯ ಅಧಿಕಾರಿಗಳ ಆರೈಕೆಯಲ್ಲಿ ಬೆಳೆಸಲಾಗುತ್ತಿದೆ.