‘ಏರ್ ಸುವಿಧಾ’ ನಿಯಮಗಳನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ವಿದೇಶಗಳಿಂದ ವಿಮಾನದಲ್ಲಿ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ಸಮಯದಲ್ಲಿ ಕಡ್ಡಾಯ ಮಾಡಲಾಗಿದ್ದ ‘ಏರ್ ಸುವಿಧಾ’ ನಿಯಮಗಳನ್ನು ಕೇಂದ್ರ ಸರಕಾರ ನ. 21ರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ರದ್ದುಗೊಳಿಸಿದೆ. ಇದರೊಂದಿಗೆ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪ್ರಯಾಣ ಪ್ರಕ್ರಿಯೆ ಸುಲಭವಾಗಲಿದೆ.
ಪ್ರಯಾಣಿಕರು ಇನ್ನು ಮುಂದೆ ‘ಏರ್ ಸುವಿಧಾ’ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ. ಅಲ್ಲದೆ, ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ. ದೇಶೀಯ ವಿಮಾನ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ನಿಯಮವನ್ನು ರದ್ದುಗೊಳಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನೂ ಕೇಂದ್ರ ಸರಕಾರ ಸಡಿಲಗೊಳಿಸಿದೆ. ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಮತ್ತು ಹೆಚ್ಚಿನ ವ್ಯಾಕ್ಸಿನೇಷನ್ ಪ್ರಮಾಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ – ಜೈ ಮೋದಿ ಎಂದವರಿಗೆ ಕೌಂಟರ್ ಕೊಟ್ಟ ಕೇಜ್ರಿವಾಲ್
“ಕೋವಿಡ್ 19 ಸೋಂಕು ಸುಸ್ಥಿರವಾಗಿ ಇಳಿಕೆಯಾಗುತ್ತಿರುವುದರಿಂದ ಮತ್ತು ಜಾಗತಿಕ ಹಾಗೂ ಭಾರತದಲ್ಲಿ ಕೋವಿಡ್ ಲಸಿಕಾಕರಣ ವ್ಯಾಪ್ತಿಯಲ್ಲಿನ ಮಹತ್ವದ ಸಾಧನೆಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಅಂತಾರಾಷ್ಟ್ರೀಯ ಆಗಮನದ ಮಾರ್ಗಸೂಚಿ’ಯನ್ನು ಪರಿಷ್ಕರಣೆ ಮಾಡಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಆರೋಗ್ಯ ಸಚಿವಾಲಯದ ಹೊಸ ಸೂಚನೆಯಂತೆ, ವಿಮಾನ ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಮಾಡುವುದು ಇನ್ನು ಅಗತ್ಯವಿಲ್ಲ. ಆದರೆ ಕೋವಿಡ್ ಸನ್ನಿವೇಶ ಬದಲಾದರೆ, ಈ ನಿಯಮವನ್ನು ಕೂಡ ಪರಾಮರ್ಶೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ.
ಈ ನಿಯಮ ಸಡಿಲಿಕೆ ಮಾಡಿದರೂ, ಪ್ರಯಾಣಿಕರು ಸಂಪೂರ್ಣ ಲಸಿಕೆ ಡೋಸ್ಗಳನ್ನು ತೆಗೆದುಕೊಳ್ಳಬೇಕು ಎಂದು ಸರಕಾರ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡುವಿಕೆಯಂತಹ ಎಲ್ಲ ಅಗತ್ಯ ಪರಿಪಾಠಗಳನ್ನು ಪಾಲಿಸಬೇಕು ಎಂದು ಸಲಹೆ ಕೊಟ್ಟಿದೆ.
ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಆದರೆ ಕೊರೊನಾ ವೈರಸ್ ಹೆಚ್ಚದಂತೆ ತಡೆಯಲು ಮಾಸ್ಕ್ ಧರಿಸುವುದಕ್ಕೆ ಆದ್ಯತೆ ನೀಡವೇಕು ಎಂದು ಕಳೆದ ವಾರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿತ್ತು.