ಪಾಕಿಸ್ತಾನವನ್ನು ಸರ್ವನಾಶ ಮಾಡ್ತಿದೆ ಭಾರತ – ನಖ್ವಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್

ಪಾಕಿಸ್ತಾನವನ್ನು ಸರ್ವನಾಶ ಮಾಡ್ತಿದೆ ಭಾರತ – ನಖ್ವಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್

ಭಾರತ ವರ್ಸಸ್ ಪಾಕಿಸ್ತಾನ ನಡುವೆ ಪಂದ್ಯ ಇದ್ದಾಗ ಭಾರತ ಗೆಲ್ಲೋದು ಪಾಕಿಸ್ತಾನ ಸೋಲೋದು ಹೊಸದೇನು ಅಲ್ಲ. ಬಟ್ ಈ ಸಲ ಏಷ್ಯಾಕಪ್​ನಲ್ಲಿ ಬರೀ ಸೋತಿಲ್ಲ. ಮರ್ಯಾದೆನೇ ಕಳ್ಕೊಂಡಿದ್ದಾರೆ. ಟೀಂ ಇಂಡಿಯಾ ಆಟಗಾರರ ದಿಟ್ಟ ಹೆಜ್ಜೆ ಇಡೀ ಪಾಕಿಸ್ತಾನದ ಅಹಂಕಾರಕ್ಕೆ ದೊಡ್ಡ ಪೆಟ್ಟು ನೀಡಿದೆ. ಒಂಥರಾ ಈಗೋ ಹರ್ಟ್ ಅಂತಾರಲ್ಲ ಹಾಗೇ. ಅದೇ ಅಸಹಾಯಕತೆ ಸಿಟ್ಟಾಗಿ ಕನ್ವರ್ಟ್ ಆಗಿದೆ. ಪಾಕ್ ಆಟಗಾರರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ : ಪಾಕ್‌ ನ ಬಗ್ಗುಬಡಿದ ಭಾರತ – ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

ಮ್ಯಾಚ್ ಸೋಲು.. ಹ್ಯಾಂಡ್ ಶೇಕ್ ಅವಮಾನ.. ಸಿಡಿದ ಫ್ಯಾನ್ಸ್!

ಸೆಪ್ಟೆಂಬರ್ 14ರಂದು ನಡೆದ ಭಾರತ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋಲು ಕಂಡಿದೆ. ಸೋಲೋದು ಅವ್ರಿಗೆ ಹೊಸದೇನು ಅಲ್ಲ. ಆದ್ರೆ ಕ್ಯಾಪ್ಟನ್ಸ್ ಮೀಟಪ್, ಟಾಸ್, ಮ್ಯಾಚ್ ಮುಗಿದ್ಮೇಲೆ ಹ್ಯಾಂಡ್​ಶೇಕ್ ಟೈಮಲ್ಲಿ ಭಾರತೀಯ ಆಟಗಾರರು ಪಾಕ್ ನಾಯಕ ಮತ್ತು ತಂಡವನ್ನ ಕಂಪ್ಲೀಟ್ ಇಗ್ನೋರ್ ಮಾಡಿದ್ರು. ಇದನ್ನ ಪಾಕ್ ಅಭಿಮಾನಿಗಳಿಂದ ಅರಗಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಸಲ್ಮಾನ್ ಅಲಿ ಅಘಾ ನಾಯಕತ್ವದ ಟೀಂ ವಿರುದ್ಧ ಸಿಟ್ಟಾಗಿದ್ದಾರೆ. ನೀವು ಭಾರತದ ಎದುರು ಪಂದ್ಯ ಗೆದ್ದಿದ್ರೆ ಇಂಥಾ ಪರಿಸ್ಥಿತಿ ಬರ್ತಿತ್ತಾ? ನಾವೇ ವಿನ್ ಆಗಿದ್ರೆ ಅವ್ರು ಇಷ್ಟೆಲ್ಲಾ ಅವಮಾನ ಮಾಡೋಕೆ ಸಾಧ್ಯವಾಗ್ತಿತ್ತಾ ಅಂತಾ ಪ್ರಶ್ನಿಸಿದ್ದಾರೆ. ಹಾಗೇ ಬಾಬರ್ ಅಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವ್ರನ್ನ ಏಷ್ಯಾಕಪ್ ತಂಡಕ್ಕೆ ಸೆಲೆಕ್ಟ್ ಮಾಡದೇ ಇದ್ದದ್ದಕ್ಕೂ ಆಕ್ರೋಶ ಹೊರ ಹಾಕಿದ್ದಾರೆ. ಬಾಬರ್ ಅಜಂ ತಂಡದಲ್ಲಿ ಇದ್ರೆ ಪಾಕಿಸ್ತಾನ ಇಷ್ಟು ಹೀನಾಯವಾಗಿ ಸೋಲ್ತಾ ಇರ್ತಿಲ್ಲ. ಟಿ-20ಐನಲ್ಲಿ ಪಾಕ್ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ರಿಜ್ವಾನ್ ಕೂಡ ಸೆಕೆಂಡ್ ಹೈಯೆಸ್ಟ್ ಸ್ಕೋರರ್. ಟಿ20ಐನಲ್ಲಿ ಇಬ್ಬರು ಟಾಪ್ ಸ್ಕೋರರ್ ಬ್ಯಾಟರ್​ಗಳನ್ನೇ ಬಿಟ್ಟು ಸಲ್ಮಾನ್ ಅಲಿ ಅಘಾನಂಥ ಆಟಗಾರನನ್ನ ಕ್ಯಾಪ್ಟನ್ ಮಾಡಿದ್ದೇ ಇದಕ್ಕೆಲ್ಲಾ ಕಾರಣ ಅಂತಾ ಕಿಡಿ ಕಾರಿದ್ದಾರೆ. ಇನ್ನು ಪಿಸಿಬಿ ಅಧ್ಯಕ್ಷನಾಗಿರುವ ಮೊಹ್ಸಿನ್ ನಖ್ವಿ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ. ಭಾರತ ತಂಡ ಇವತ್ತು ಪಾಕಿಸ್ತಾನ ತಂಡವನ್ನ ಡೆಸ್ಟ್ರಾಯ್ ಅಂದ್ರೆ ಸರ್ವನಾಶ ಮಾಡೋಕೆ ಮೊಹ್ಸಿನ್ ನಖ್ವಿಯೇ ಮುಖ್ಯ ಕಾರಣ ಅಂತಾ ಸಿಟ್ಟು ಹೊರ ಹಾಕಿದ್ದಾರೆ. ಹೀಗೆ ಒಂದಷ್ಟು ಅಭಿಮಾನಿಗಳು ತಮ್ಮದೇ ಮ್ಯಾನೇಜ್​ಮೆಂಟ್ ಮೇಲೆ ತಿರುಗಿ ಬಿದ್ದಿದ್ರೆ ಇನ್ನೊಂದಷ್ಟು ಜನ ಭಾರತವನ್ನ ಬ್ಲೇಮ್ ಮಾಡ್ತಿದ್ದಾರೆ.

ಭಾರತ ಕೈಕುಲುಕದೇ ಇದ್ದಿದ್ದಕ್ಕೆ ಪಾಕ್ ಮಾಧ್ಯಮಗಳ ಕೆಂಗಣ್ಣು!

ಇನ್ನು ಟಾಸ್ ಟೈಮಲ್ಲಿ, ಮ್ಯಾಚ್ ಮುಗಿದ್ಮೇಲೆ ಪಾಕ್ ಕ್ಯಾಪ್ಟನ್ ಮತ್ತು ಆಟಗಾರರಿಗೆ ಭಾರತ ಹ್ಯಾಂಡ್ ಶೇಕ್ ಮಾಡದೇ ಇದ್ದಿದ್ದಕ್ಕೆ ಪಾಕಿಸ್ತಾನದ ಒಂದಷ್ಟು ಮಾಜಿ ಆಟಗಾರರು ಸಿಟ್ಟಾಗಿದ್ದಾರೆ. ಅಲ್ಲಿನ ಮಾಧ್ಯಮಗಳಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಕ್ರೀಡಾಸ್ಫೂರ್ತಿ ಅಂದ್ರೇನು ಅನ್ನೋದೇ ಗೊತ್ತಿಲ್ಲ. ಆಟ ಅಂದ್ಮೇಲೆ ಅದರ ನಿಯಮಗಳನ್ನ ಪಾಲಿಸಬೇಕು. ಅದನ್ನ ಬಿಟ್ಟು ವೈಯಕ್ತಿಕವಾಗಿ ಯಾಕೆ ತಗೊಳ್ಬೇಕು ಅಂತೆಲ್ಲಾ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಹಾಗೇ ಪಾಕ್ ಆಟಗಾರರನ್ನ ಅವಮಾನ ಮಾಡಿದ್ದಾರೆ ಅಂತಾ ಕಿಡಿ ಕಾರಿದ್ದಾರೆ. ಇದೀಗ ಟೀಂ ಇಂಡಿಯಾ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ.

ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ ಗೆಲುವಿನ ಸಿಕ್ಸರ್ ಬಾರಿಸುತ್ತಿದ್ದಂತೆ, ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕದೇ ನೇರವಾಗಿ ಡ್ರೆಸ್ಸಿಂಗ್ ರೂಮ್‌ಗೆ ಹೋಗಿದ್ರು. ಇದ್ರಿಂದ ಪಾಕ್ ಆಟಗಾರರು ಮುಖಭಂಗ ಅನುಭವಿಸಿದ್ರು. ಇದು ಕೇವಲ ಆಟದ ಮೈದಾನಕ್ಕೆ ಸೀಮಿತವಾಗದೆ, ಈಗ ಅಧಿಕೃತ ದೂರಿನ ಹಂತಕ್ಕೂ ತಲುಪಿದೆ. ಪಾಕ್ ತಂಡದ ಮ್ಯಾನೇಜರ್ ನವೀದ್ ಅಕ್ರಮ್ ಚೀಮಾ, ತಕ್ಷಣವೇ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಈ ನಡವಳಿಕೆಯು ಕ್ರೀಡಾ ಸ್ಫೂರ್ತಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಭಾರತೀಯ ಕ್ರಿಕೆಟ್ ತಂಡದ ವರ್ತನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಅಧಿಕೃತವಾಗಿ ಪ್ರತಿಭಟನೆ ದಾಖಲಿಸಿದ್ದಾರೆ. ಭಾರತ ತಂಡದ ಅಗೌರವದ ವರ್ತನೆಯನ್ನು ವಿರೋಧಿಸಿ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿದರು ಎಂದು ಪಿಸಿಬಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ತಮ್ಮ ಸೋಲಿನ ಹತಾಶೆಗೆ ತೇಪೆ ಹಚ್ಚೋ ಕೆಲಸ ಮಾಡ್ತಿದ್ದಾರೆ.

Shantha Kumari