ಜಪಾನ್ ತಂಡವನ್ನು ಮಣಿಸಿದ ಭಾರತ – ‘ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಫೈನಲ್‌ಗೆ ಟೀಮ್ ಇಂಡಿಯಾ ಎಂಟ್ರಿ

ಜಪಾನ್ ತಂಡವನ್ನು ಮಣಿಸಿದ ಭಾರತ – ‘ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಫೈನಲ್‌ಗೆ ಟೀಮ್ ಇಂಡಿಯಾ ಎಂಟ್ರಿ

ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಲಗ್ಗೆಯಿಟ್ಟಿದೆ. ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡ, ಜಪಾನ್ ತಂಡವನ್ನು 0-5 ಅಂತರದಿಂದ ಸೋಲಿಸುವ ಮೂಲಕ ಭರ್ಜರಿಯಾಗಿಯೇ ಫೈನಲ್‌ಗೆ ಎಂಟ್ರಿಪಡೆದಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ಗೆ ತಂಡದಲ್ಲಿ ಸಿಗದ ಅವಕಾಶ – ಮೊದಲ ಬಾರಿ ಮೌನ ಮುರಿದ ಶಿಖರ್ ಧವನ್..!

ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಗೆಲುವ ಕಂಡಿದೆ. ಜಪಾನ್ ತಂಡವನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಜಪಾನ್ ತಂಡ ಮುಖಾಮುಖಿಯಾಗುತ್ತದೆ ಎಂದಾಗಲೇ ಪಂದ್ಯ ರೋಚಕವಾಗಿರುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಭಾರತದ ಆಟಗಾರರ ಮುಂದೆ ಜಪಾನ್ ಆಟಗಾರರ ಜಾದೂ ನಡೆಯಲೇಇಲ್ಲ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಮೂರು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತ ಈ ಬಾರಿ ಚಾಂಪಿಯನ್ ಆಗುವ ಫೆವರೇಟ್ ತಂಡ ಎಂದೇ ಹೇಳಲಾಗುತ್ತಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡದ ಆಟ ನೋಡಿದರೆ ಫೈನಲ್‌ನಲ್ಲಿ ಗೆಲುವು ಗ್ಯಾರಂಟಿ ಎನ್ನಲಾಗುತ್ತಿದೆ. ಜಪಾನ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೂ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಟೀಮ್ ಇಂಡಿಯಾ ಮುಂದಾಯಿತು. ಇದರ ಹೊರತಾಗಿಯೂ ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತದ ಪರ ಆಕಾಶದೀಪ್ 19ನೇ ನಿಮಿಷದಲ್ಲಿ ಗೋಲು ಬಾರಿಸಿ, ತಂಡದ ಖಾತೆ ತೆರೆದರು. ಇಲ್ಲಿಂದ ಗೋಲುಗಳ ಮಳೆ ಶುರುವಾಯಿತು. ಮುಂದಿನ 11 ನಿಮಿಷಗಳಲ್ಲಿ ಭಾರತ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. 23ನೇ ನಿಮಿಷದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತೊಂದು ‘ಬುಲೆಟ್’ ಪೆನಾಲ್ಟಿ ಕಾರ್ನರ್ ಮೂಲಕ ಜಪಾನ್ ರಕ್ಷಣಾ ವಿಭಾಗವನ್ನು ಭೇದಿಸಿದರೆ, 30ನೇ ನಿಮಿಷದಲ್ಲಿ ಮನದೀಪ್ ಸಿಂಗ್ ಭಾರತದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಇದಾದ ಬಳಿಕ ಭಾರತದ ಗೆಲುವು ಬಹುತೇಕ ಖಚಿತವಾಗಿದೆ. ಮುಂದಿನ ಎರಡು ಕ್ವಾರ್ಟರ್‌ಗಳಲ್ಲಿ ಭಾರತ ಇನ್ನೆರಡು ಗೋಲು ಗಳಿಸುವ ಮೂಲಕ ಜಯಭೇರಿ ಬಾರಿಸಿತು. 39ನೇ ನಿಮಿಷದಲ್ಲಿ ಸುಮಿತ್ ಮತ್ತು 51ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಗೋಲು ಬಾರಿಸಿ ಭಾರತಕ್ಕೆ 5-0 ಅಂತರದ ಜಯ ತಂದುಕೊಟ್ಟರು. ಭಾರತ ಫೈನಲ್‌ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.

suddiyaana