ಪಾಕಿಸ್ತಾನದ ಸೊಕ್ಕು ಮುರಿದ ಭಾರತ – ಅಭಿಷೇಕ್, ಗಿಲ್ ಆರ್ಭಟಕ್ಕೆ ಪಾಕ್ ಧೂಳಿಪಟ

ಏಷ್ಯಾಕಪ್ 2025ರ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ಎದುರಾಳಿ ಪಾಕಿಸ್ತಾನವನ್ನ ಧೂಳೀಪಟ ಮಾಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್ಗಳ ಸವಾಲಿನ ಗುರಿಯನ್ನ, 7 ಎಸೆತಗಳಿರುವಾಗಲೇ ಭಾರತ ಗೆಲುವು ಸಾಧಿಸಿತು.
ಇದನ್ನೂ ಓದಿ: IND ಪ್ರತಿಷ್ಠೆ.. PAK ಸೇಡಿನ ಜ್ವಾಲೆ – ಸೂಪರ್ ಸಂಡೇ.. ಸೂಪರ್ 4 ಫೈಟ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ 56 ರನ್ ಗಳ ನೆರವಿನೊಂದಿಗೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಒಂದು ಹಂತದಲ್ಲಿ ಪಾಕಿಸ್ತಾನ 10 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 92 ರನ್ಗಳಿಸಿತ್ತು. ಆದರೆ ಆದರೆ ಭಾರತೀಯ ಸ್ಪಿನ್ ಬೌಲರ್ಗಳು ಪಾಕ್ ರನ್ಗತಿಗೆ ಕಡಿವಾಣ ಹಾಕಿದರು. ವರುಣ್ ಚಕ್ರವರ್ತಿ 4 ಓವರ್ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿದರೆ, ಕುಲ್ದೀಪ್ 31 ರನ್ ನೀಡಿ 1 ವಿಕೆಟ್ ಪಡೆದರು. ಅಕ್ಷರ್ ಒಂದು ಓವರ್ ಬೌಲಿಂಗ್ ಮಾಡಿ 8 ರನ್ ಬಿಟ್ಟುಕೊಟ್ಟರು. ಶಿವಂ ದುಬೆ ಕೊನೆಯ ಓವರ್ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದು ಹೊರೆತು ಪಡಿಸಿದರೆ, ಉಳಿದ 3 ಓವರ್ಗಳಲ್ಲಿ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಹಾರ್ದಿಕ್ ಪಾಂಡ್ಯ 29 ರನ್ ನೀಡಿ 1 ವಿಕೆಟ್ ಪಡೆದರೆ, ಸ್ಟಾರ್ ಬೌಲರ್ ಬುಮ್ರಾ ವಿಕೆಟ್ ರಹಿತ 45 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ನಂತರ ಬ್ಯಾಟಿಂಗ್ಗೆ ಬಂದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ಅವರ ಆರಂಭಿಕ ಜೊತೆಗಾರ ಶುಭ್ಮನ್ ಗಿಲ್ 47 ರನ್ಗಳಿಸಿ ಪಾಕಿಸ್ತಾನದ ಬೌಲರ್ಗಳನ್ನು ಬೆಂಡೆತ್ತಿದರು. ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಇಬ್ಬರು ಮೊದಲ 10 ಓವರ್ಗಳಲ್ಲಿ ಪಾಕಿಸ್ತಾನ ಬೌಲರ್ಗಳನ್ನ ಸಿಕ್ಕಾಪಟ್ಟೆ ಕಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್ಗಳ ಜೊತೆಯಾಟ ನೀಡಿದರು. ಗಿಲ್ 28 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 47 ರನ್ಗಳಿಸಿ ಫಹೀಮ್ ಅಶ್ರಫ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಹಾರಿಸ್ ರೌಫ್ ಬೌಲಿಂಗ್ನಲ್ಲಿ ಅಬ್ರಾರ್ ಅಹ್ಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ತಿಲಕ್-ಸಂಜು ಮಂದಗತಿಯ ಜೊತೆಯಾಟ ಕೂಡಾ ನಿರಾಸೆ ಮೂಡಿಸಿತು. ಕೊನೆಯಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 30 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ನೋಡಿರಿ

