ಭಾರತಕ್ಕೆ ಬರುತ್ತಿದ್ದ ಹಡಗು ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಹೈಜಾಕ್ – ಇಸ್ರೇಲ್ ಮೇಲಿನ ಸಿಟ್ಟಿಗೆ ಜಲಮಾರ್ಗ ಬಂದ್?

ಭಾರತಕ್ಕೆ ಬರುತ್ತಿದ್ದ ಹಡಗು ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಹೈಜಾಕ್ – ಇಸ್ರೇಲ್ ಮೇಲಿನ ಸಿಟ್ಟಿಗೆ ಜಲಮಾರ್ಗ ಬಂದ್?

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಈಗಾಗಲೇ ಜಾಗತಿಕವಾಗಿ ಭಯಾನಕ ಪರಿಣಾಮಗಳನ್ನೇ ಬೀರಿದೆ.  ಆರ್ಥಿಕವಾಗಿ ಬಹುದೊಡ್ಡ ಹೊಡೆತ ನೀಡಿದೆ. ಯುದ್ಧ ಶುರುವಾಗಿ ಒಂದೂವರೆ ತಿಂಗಳೇ ಕಳೆದ್ರೂ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಪ್ಯಾಲೆಸ್ತೀನ್ ನ ಇಡೀ ಗಾಜಾಪಟ್ಟಿಯನ್ನ ತನ್ನ ಕಂಟ್ರೋಲ್ ಗೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ ಆಸ್ಪತ್ರೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಆಸ್ಪತ್ರೆಗಳೇ ಹಮಾಸ್ ಬಂಡುಕೋರರ ಅಡಗುತಾಣ ಎಂದು ಒಂದೊಂದೇ ವಿಡಿಯೋಗಳನ್ನ ರಿಲೀಸ್ ಮಾಡ್ತಿದೆ. ಇದೀಗ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಹೌತಿ ಬಂಡುಕೋರರು ಧುಮುಕಿದ್ದಾರೆ. ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಹಡಗನ್ನು ಹೈಜಾಕ್ ಮಾಡಿದ್ದಾರೆ.

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವೆ ಅಕ್ಟೋಬರ್ 7ರಿಂದ ಯುದ್ಧ ನಡೆಯುತ್ತಿದೆ. ಪ್ಯಾಲೆಸ್ತೀನ್‌ ನಲ್ಲಿ  15,000ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸುರಂಗಗಳಲ್ಲಿ ಅಡಗಿ ಕುಳಿತಿರುವ ಹಮಾಸ್ ಬಂಡುಕೋರರು ಧುತ್ತನೆ ಮೇಲೆದ್ದು ಇಸ್ರೇಲ್ ಸೇನೆ ಮೇಲೆಯೂ ಪ್ರತಿದಾಳಿ ನಡೆಸುತ್ತಿದ್ದಾರೆ. ಆದ್ರೆ ಬಲಿಷ್ಠ ಸೇನೆ ಹೊಂದಿರುವ ಇಸ್ರೇಲ್, ಗಾಜಾಪಟ್ಟಿಯನ್ನು ಛಿದ್ರ ಛಿದ್ರ ಮಾಡಿದ್ದು ಈಗ ಆಸ್ಪತ್ರೆಗಳ ಮೇಲೆ ದಾಳಿ ತೀವ್ರಗೊಳಿಸಿದೆ. ಅತಿದೊಡ್ಡ ಆಸ್ಪತ್ರೆಯಾಗಿರುವ ಅಲ್-ಶಿಫಾ ಹಾಸ್ಪಿಟಲ್ ನಲ್ಲಿ ತಪಾಸಣೆ ವೇಳೆ, ಆಸ್ಪತ್ರೆಯ 10 ಮೀಟರ್‌ ಆಳದಲ್ಲಿ 55 ಮೀಟರ್‌ ಉದ್ದದ ಸುರಂಗ ಪತ್ತೆಯಾಗಿದೆ. ಇದು ಆಸ್ಪತ್ರೆಯನ್ನು ಉಗ್ರರು ತಮ್ಮ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದರು ಎಂಬುದಕ್ಕೆ ಸಾಕ್ಷಿ ಎಂದು ಇಸ್ರೇಲ್ ಸೇನೆ ವಿಡಿಯೋ ರಿಲೀಸ್ ಮಾಡಿದೆ. ಹೀಗೆ ಇಸ್ರೇಲ್ ಯುದ್ಧವನ್ನು ತೀವ್ರಗೊಳಿಸುತ್ತಿರುವ ಹೊತ್ತಲ್ಲೇ ಹೌತಿ ಬಂಡುಕೋರರು ಬಿಗ್ ಶಾಕ್ ನೀಡಿದ್ದಾರೆ. ಇಸ್ರೇಲ್ ಹಡಗನ್ನೇ ಹೈಜಾಕ್ ಮಾಡಿ ಆಘಾತ ನೀಡಿದ್ದಾರೆ.

ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಗ್ಯಾಲಕ್ಸಿ ಲೀಡರ್ ಹೆಸರಿನ ಹಡಗನ್ನು ಹೌತಿ ಬಂಡುಕೋರರು ಹೈಜಾಕ್ ಮಾಡಿದ್ದಾರೆ. ಸರಕು ಸಾಗಣೆ ಹಡಗನ್ನು ಅಪಹರಿಸಿದ್ದು, ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂದು ಇಸ್ರೇಲ್ ಸೇನೆ ಸ್ಪಷ್ಟನೆ ನೀಡಿದೆ. ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆ ಸಾಮಾಜಿಕ ಜಾಲತಾಣ ಎಕ್ಸ್‌ ವೇದಿಕೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನ ಹೈಜಾಕ್ ಮಾಡಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆ ಇದಾಗಿದ್ದು, ಹಡಗು ಟರ್ಕಿಯಿಂದ ಭಾರತಕ್ಕೆ ಹೊರಟಿತ್ತು. ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಹಡಗಿನಲ್ಲಿ ಇದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ : ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿ ಇತಿಹಾಸ – ಮೋದಿಯ ಮೌನ.. ಸತ್ಯವೋ, ಸುಳ್ಳೋ?

ಯಹೂದಿಗಳ ಮೇಲೆ ಕೆಂಡ ಕಾರುತ್ತಿರುವ ಹೌತಿ ಬಂಡುಕೋರರ ಈ ನಡೆ ಇಸ್ರೇಲ್ ಪ್ರಧಾನಿಯ ಪಿತ್ತ ನೆತ್ತಿಗೇರಿಸಿದೆ. ಈ ಬಗ್ಗೆ ಮಾತನಾಡಿರುವ ಬೆಂಜಮಿನ್ ನೆತನ್ಯಾಹು ಹೈಜಾಕ್ ಆಗಿರುವ ಹಡಗು ಇಸ್ರೇಲ್‌ ಗೆ ಸೇರಿದ್ದಲ್ಲ ಎಂದಿದ್ದಾರೆ. ಗ್ಯಾಲಕ್ಸಿ ಲೀಡರ್ ಹಡಗು ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆ ನಿರ್ವಹಣೆ ಮಾಡುತ್ತಿರುವ ಹಡಗಾಗಿದೆ. ಯೆಮೆನ್ ಹೌತಿ ಬಂಡುಕೋರರು ಇರಾನ್ ಅಣತಿಯಂತೆ ಕೃತ್ಯ ಎಸಗಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕರಿಸಿರುವುದು ಖಂಡನಾರ್ಹವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ. ಇನ್ನು ಇಸ್ರೇಲ್ ಹಡಗನ್ನು ಹೈಜಾಕ್ ಮಾಡಿರುವ ಹೌತಿ ಬಂಡುಕೋರರು ವಿಡಿಯೋ ಕ್ಲಿಪ್ ರಿಲೀಸ್ ಮಾಡಿದ್ದಾರೆ.

ಗ್ಯಾಲಕ್ಸಿ ಹಡಗನ್ನು ಹೈಜಾಕ್ ಮಾಡಿದ ಹೌತಿಗಳು ಎರಡು ನಿಮಿಷಗಳ ಹೈಜಾಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಬಂಡುಕೋರರು ಹೆಲಿಕಾಪ್ಟರ್‌ ನಲ್ಲಿ ಬಂದು ಹಡಗಿನ ಮೇಲೆ ದಾಳಿ ನಡೆಸುವ ದೃಶ್ಯ ಇದಾಗಿದ್ದು, ಹೆಲಿಕಾಪ್ಟರ್ ನೇರವಾಗಿ ಹಡಗಿನ ಡೆಕ್‌ ನಲ್ಲಿ ಇಳಿದಿದೆ. ಈ ವೇಳೆ ಡೆಕ್ ನಲ್ಲಿ ರಕ್ಷಣೆಗೂ ಯಾರೂ ಇರಲಿಲ್ಲ. ನಂತರ ಘೋಷಣೆಗಳನ್ನು ಕೂಗುತ್ತಾ ಮತ್ತು ಗುಂಡು ಹಾರಿಸುತ್ತಾ ಬಂಡುಕೋರರು ಡೆಕ್‌ ನಾದ್ಯಂತ ಓಡಿದ್ದಾರೆ. ಹಾಗೇ  ವೀಲ್‌ ಹೌಸ್ ಮತ್ತು ಹಡಗಿನ ನಿಯಂತ್ರಣ ಕೇಂದ್ರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹಡಗಿನಲ್ಲಿದ್ದ ಕೆಲವು ಸಿಬ್ಬಂದಿ ದಿಢೀರ್ ದಾಳಿಯಿಂದ ಆಶ್ಚರ್ಯ ಮತ್ತು ಆಘಾತಗೊಂಡಿದ್ದು ತಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ಶರಣಾಗತಿಯಾಗಿದ್ದಾರೆ. ಅಪಹರಣದ ಬಳಿಕ ಹಡಗನ್ನು ಹೊಡೆಡಾ ಪ್ರಾಂತ್ಯದ ಸಲೀಫ್ ಬಂದರು ಮಾರ್ಗವಾಗಿ ಯೆಮೆನ್ ಬಂದರಿಗೆ ಮರು-ಮಾರ್ಗ ಮಾಡಲಾಗಿದೆ ಎಂದು ಕಡಲ ಭದ್ರತಾ ಕಂಪನಿ ವರದಿ ಮಾಡಿದೆ. ಹಡಗಿನ ಹೈಜಾಕ್ ಬಳಿಕ ಇದು ಆರಂಭ ಮಾತ್ರ ಎಂದು ಹೌತಿ ಸಂಘಟನೆ ವಕ್ತಾರ ಮೊಹಮ್ಮದ್ ಅಬ್ದುಲ್-ಸಲಾಮ್ ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.  ಹಾಗೂ ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ತನ್ನ ಗಾಜಾ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಪ್ರತಿಜ್ಞೆ ಮಾಡಿದ್ದಾರೆ.

ಇನ್ನು ಹೈಜಾಕ್ ಆದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಇನ್ನು ಹಡಗು ಅಪಹರಣ ಮಾಡಿರುವ ಹೌತಿ ಬಂಡುಕೋರರ ಕೃತ್ಯವನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, ಹಡಗಿನಲ್ಲಿದ್ದ ಸಿಬ್ಬಂದಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಯೆಮೆನ್ ದೇಶದ ವಾಯುವ್ಯ ದಿಕ್ಕಿನಲ್ಲಿನ ಸಾದ ಪ್ರದೇಶದಲ್ಲಿ ಹೌತಿಗಳು ವಾಸವಿದ್ದಾರೆ,.  ಒಂದು ಜನಾಂಗಕ್ಕೆ ಸೇರಿರುವ ಹೌತಿಗಳು ಶಿಯಾ ಇಸ್ಲಾಮಿನ ಜೈದಿ ವಿಭಾಗದ ಅನುಯಾಯಿಗಳಾಗಿದ್ದಾರೆ. ಯೆಮೆನ್ ದೇಶದ ಜನಸಂಖ್ಯೆಯ ಶೇಕಡಾ 25ರಷ್ಟು ಪಾಲು ಹೊಂದಿದ್ದಾರೆ. ಇರಾನ್ ಸಹ ಶಿಯಾ ಪ್ರಾಬಲ್ಯದ ಮುಸ್ಲಿಂ ರಾಷ್ಟ್ರವಾಗಿದ್ದು ಹೌತಿಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಹಾಗೇ ಲೆಬನಾನ್ ನಲ್ಲಿರುವ ಶಿಯಾ ಉಗ್ರಗಾಮಿ ಸಂಘಟನೆ ಹೆಜ್ಬುಲ್ಲಾ ಕೂಡ ಹೌತಿಗಳಿಗೆ ನಿರಂತರ ತರಬೇತಿ, ಆಧುನಿಕ ಆಯುಧಗಳು, ಡ್ರೋನ್‌ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಪ್ಯಾಲೆಸ್ತೇನ್ ಪರ ಒಲವು ಹೊಂದಿರುವ ಹೌತಿಗಳು ಸಹಜವಾಗಿ ಇಸ್ರೇಲ್ ವಿರೋಧಿಗಳಾಗಿದ್ದಾರೆ. ಹಮಾಸ್ ಮೇಲೆ ಯುದ್ಧ ಸಾರಿದ್ದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಯುದ್ಧ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಇದೀಗ  ಇಸ್ರೇಲ್ ನ ಹಡಗುಗಳನ್ನ ಟಾರ್ಗೆಟ್ ಮಾಡಿ ಹೈಜಾಕ್ ಮಾಡುತ್ತಿದ್ದಾರೆ.

 

Shantha Kumari