IND ಟಾಪ್ ಆರ್ಡರ್ FAIL – AFG ವಿರುದ್ಧ ಗೆದ್ದರೂ ಸಂಕಷ್ಟ
ಸೂರ್ಯ, ಬುಮ್ರಾ ಸುನಾಮಿ ಆಟ!

IND ಟಾಪ್ ಆರ್ಡರ್ FAIL – AFG ವಿರುದ್ಧ ಗೆದ್ದರೂ ಸಂಕಷ್ಟಸೂರ್ಯ, ಬುಮ್ರಾ ಸುನಾಮಿ ಆಟ!

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಗ್ರೂಪ್​​​ ಸ್ಟೇಜ್​​ನಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿದ್ದ ತಂಡ, ಸೂಪರ್​ 8 ಹಂತದಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಅಫ್ಘಾನಿಸ್ತಾನ​ ಎದುರು ಬಾರ್ಬಡೋಸ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಸ್ಟಾರ್ಟಿಂಗ್​ನಲ್ಲಿ ಘಟಾನುಘಟಿ ಬ್ಯಾಟರ್​ಗಳು ಕೈಕೊಟ್ರೂ ಕೂಡ ಮಿಡಲ್ ಆರ್ಡರ್​ನಲ್ಲಿ ಚೇತರಿಸಿಕೊಂಡ ತಂಡ ಒಳ್ಳೆ ಸ್ಕೋರ್ ಮೂಲಕ ಪಂದ್ಯವನ್ನ ತನ್ನದಾಗಿಸಿಕೊಳ್ತು. ಆದ್ರೆ ಅಫ್ಘನ್ ವಿರುದ್ಧದ ಪಂದ್ಯ ಟೀಂ ಇಂಡಿಯಾದಲ್ಲಿನ ಫೇಲ್ಯೂರ್​ಗಳನ್ನ ಬಿಚ್ಚಿಟ್ಟಿದೆ. ಹಾಗೇ ಸ್ಟಾರ್ ಬ್ಯಾಟರ್ಸ್ ರನ್ ಗಳಿಸೋಕೆ ಒದ್ದಾಡ್ತಿರೋದು ಕೂಡ ಆತಂಕ ಮೂಡಿಸಿದೆ. ಅಷ್ಟಕ್ಕೂ ಅಫ್ಘನ್ನರ ವಿರುದ್ಧ ಗೆದ್ರೂ ಕೂಡ ಭಾರತ ತಂಡದ ಮುಂದೆ ಏನೆಲ್ಲಾ ಸವಾಲುಗಳಿವೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್​ಗಾಗಿ ಪ್ರಾಣ ಪಣಕ್ಕಿಟ್ಟ ಪಂತ್ – ಚಿಕನ್​ಗೆ ಬೈ.. 22 ಕೆಜಿ weight loss

ಗುರುವಾರ ಬಾರ್ಬಡೋಸ್​ನಲ್ಲಿ ನಡೆದ ಇಂಡಿಯಾ ವರ್ಸಸ್ ಆಫ್ಗನ್ ನಡುವಿನ ಸೂಪರ್ 8 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದ್ರೆ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಸ್ ರನ್ ಗಳಿಸೋಕೆ ಒದ್ದಾಡಿದ್ದಾರೆ. ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಫೇಲ್ಯೂರ್ ಅನುಭವಿಸಿತು. ಓಪನರ್ಸ್ ಆಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ರು. ಅಪ್ಘಾನಿಸ್ತಾನದ ಸ್ಪಿನ್ ದಾಳಿಗೆ ಪರದಾಡಿದ ಟೀಮ್ ಇಂಡಿಯಾ ಸ್ಟಾರ್​​ ಬ್ಯಾಟ್ಸ್​​ಮನ್​ಗಳು ಅನಾವಶ್ಯಕವಾಗಿ ವಿಕೆಟ್ ಒಪ್ಪಿಸಿದ್ರು. ಕ್ಯಾಪ್ಟನ್ ರೋಹಿತ್ ಶರ್ಮಾ​ರಿಂದ ಹಿಡಿದು ಶಿವಂ ದುಬೆವರೆಗೆ ಎಲ್ಲರೂ ಕೂಡ ಈಸಿಯಾಗಿ ಔಟಾದ್ರು. ಅದ್ರಲ್ಲೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟ್ ಸೌಂಡ್ ಮಾಡುತ್ತೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಬಟ್ ಹಿಟ್​ಮ್ಯಾನ್​​ ಆ ಭರವಸೆಯನ್ನ ಹುಸಿಯಾಗಿಸಿದ್ರು. ರೋಹಿತ್​​​ 13 ಎಸೆತಗಳಲ್ಲಿ 8 ರನ್ ಮಾತ್ರ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನು ರೋಹಿತ್ ಔಟಾದ ಬಳಿಕ ಕ್ರೀಸ್​ಗೆ ಎಂಟ್ರಿ ಕೊಟ್ಟ ರಿಷಬ್ ಪಂತ್ ಸ್ಟಾರ್ಟಿಂಗ್​ನಲ್ಲೇ ಸಿಡಿಯೋಕೆ ಶುರು ಮಾಡಿದ್ರು. 4 ಬೌಂಡರಿಗಳನ್ನ ಚಚ್ಚಿದ್ರು. ಬಟ್ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಬೌಲಿಂಗ್​ನಲ್ಲಿ ಆತುರಕ್ಕೆ ಬಿದ್ದು, ರಿವರ್ಸ್​ ಸ್ವೀಪ್ ಆಡಲು ಹೋಗಿ 11 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಇನ್ನು ಕಳಪೆ ಫಾರ್ಮ್​ನಿಂದ ಒದ್ದಾಡ್ತಿರೋ ವಿರಾಟ್ ಕೊಹ್ಲಿ ಕೂಡ ಸೂಪರ್​​​​​-8 ನಲ್ಲಿ ಕಮ್​​ಬ್ಯಾಕ್ ಮಾಡುವ​ ಕನಸು ಭಗ್ನವಾಯ್ತು. 24 ಎಸೆತಗಳಲ್ಲಿ 24 ರನ್ ಗಳಿಸಿ ಲಾಂಗ್​ ಆಫ್​​ನಲ್ಲಿ ಕ್ಯಾಚ್​ ನೀಡಿ ಹೊರನಡೆದ್ರು. ಬಳಿಕ ಬಂದ ಶಿವಂ ದುಬೆ ಫ್ಲಾಪ್ ಶೋ ಮೂಲಕ ಮತ್ತೊಮ್ಮೆ ತಂಡಕ್ಕೆ ಭಾರವಾದ್ರು. ರಶೀದ್ ಖಾನ್​ ಬೌಲಿಂಗ್​​ನಲ್ಲಿ ಸ್ಪಿನ್​ ಬಲೆಗೆ ಬಿದ್ರು.

ಬಟ್ ಟೀಂ ಇಂಡಿಯಾಗೆ ಆಸರೆಯಾಗಿದ್ದೇ ಸೂರ್ಯಕುಮಾರ್ ಯಾದವ್ ಹಾಗೇ ಹಾರ್ದಿಕ್ ಪಾಂಡ್ಯ ಜೋಡಿ. 5ನೇ ವಿಕೆಟ್​ಗೆ ಜೊತೆಯಾದ ಹಾರ್ದಿಕ್​ ಪಾಂಡ್ಯ-ಸೂರ್ಯಕುಮಾರ್​ ಯಾದವ್​ ಸೂಪರ್​ ಡೂಪರ್ ಆಗಿ ಬ್ಯಾಟ್ ಬೀಸಿದ್ರು. 90 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ತಂಡಕ್ಕೆ ನೆರವಾದ ಈ ಜೋಡಿ 60 ರನ್​ಗಳ ಕಾಣಿಕೆ ನೀಡಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ 28 ಬಾಲ್​ನಲ್ಲಿ 53 ರನ್​​ಗಳಿಸಿ ಎದುರಾಳಿ ಬೌಲರ್​ಗಳ ಬೆವರಿಳಿಸಿದ್ರು. 189.29ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಸೂರ್ಯಕುಮಾರ್​, ಮೂರು ಸಿಕ್ಸರ್​, ಐದು ಬೌಂಡರಿಗಳನ್ನು ಬಾರಿಸಿದರು. ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಸೂರ್ಯ ಕುಮಾರ್​ ಯಾದವ್​ಗೆ ಸಾಥ್ ನೀಡಿದ ಪಾಂಡ್ಯ, 24 ಬಾಲ್​ನಲ್ಲಿ 32 ರನ್​​ಗಳ ಕಾಣಿಕೆಯನ್ನು ನೀಡಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. 133.33 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ ಎರಡು ಸಿಕ್ಸರ್, ಮೂರು ಬೌಂಡರಿಗಳನ್ನು ಬಾರಿಸಿದರು. ಆಲ್​ರೌಂಡರ್​ ಜಡೇಜಾ ಮತ್ತೆ ವೈಫಲ್ಯ ಅನುಭವಿಸಿದ್ರು. ಅಂತಿಮವಾಗಿ 2 ಬೌಂಡರಿ ಸಿಡಿಸಿದ ಅಕ್ಷರ್​ ಪಟೇಲ್​, ತಂಡದ ಮೊತ್ತವನ್ನ ಹೆಚ್ಚಿಸಿದ್ರು. ಕೊನೆಯ 10 ಓವರ್​ಗಳಲ್ಲಿ 102 ರನ್​ಗಳಿಸಿದ ಟೀಮ್​ ಇಂಡಿಯಾ, 181 ರನ್​ಗಳ ಬಿಗ್​ ಸ್ಕೋರ್​ ಕಲೆಹಾಕಿತು.

182 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಅಫ್ಘನ್​ ತಂಡಕ್ಕೆ ಟೀಮ್ ಇಂಡಿಯಾದ ಬಾದ್​ ಷಾ ಬೂಮ್ರಾ ಶಾಕ್​ ನೀಡಿದ್ರು. ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್​, ಹಝರತ್ತುಲ್ಲಾ ಝಝೈಗೆ ಗೇಟ್​ಪಾಸ್​ ನೀಡಿದ್ರು. ಇದ್ರ ಬೆನ್ನಲ್ಲೇ ಅಕ್ಷರ್​ ಪಟೇಲ್​ ಸ್ಪಿನ್​ ಮೋಡಿಗೆ ಇಬ್ರಾಹಿಂ ಝರ್ದಾನ್​ ಕೂಡ ಪೆವಿಲಿಯನ್​ ಸೇರಿದ್ರು. 23 ರನ್​ಗಳಿಸುವಷ್ಟರಲ್ಲೇ ಅಫ್ಘನ್​ ತಂಡ 3 ವಿಕೆಟ್​ ಕಳೆದುಕೊಳ್ತು. ಆರಂಭಿಕ ಆಘಾತ ಕಂಡ ತಂಡಕ್ಕೆ ಗುಲ್ಬದ್ದೀನ್​ ನೈಬ್ ಮತ್ತು ಅಝಮತ್ತುಲ್ಲಾ ಒಮರ್​ಝೈ ಕೊಂಚ ಚೇತರಿಕೆ ಕೊಟ್ರು. ಆದ್ರೆ ಹೆಚ್ಚು ಹೊತ್ತು ಕ್ರಿಸ್​ ಕಚ್ಚಿ ನಿಲ್ಲೋಕೆ  ಭಾರತದ ಸ್ಪಿನ್ನರ್ಸ್ ಬಿಡ್ಲೇ ಇಲ್ಲ. ಗುಲ್ಭದ್ದೀನ್ ಆಟಕ್ಕೆ ಕುಲ್​ದೀಪ್​, ಒಮರ್​ಝೈ ಓಟಕ್ಕೆ ಜಡೇಜಾ ಬ್ರೇಕ್​ ಹಾಕಿದ್ರು. ನಂತರ ಕಣಕ್ಕಿಳಿದ ನಜೀಬುಲ್ಲಾ ಝರ್ದಾನ್​​ ಬೂಮ್ರಾ ಬಿರುಗಾಳಿ ತತ್ತರಿಸಿ ಹೋದ್ರು. ಮೊಹಮ್ಮದ್​ ನಬಿ 14 ರನ್​ಗಳಿಸಿ ಆಟ ಅಂತ್ಯಗೊಳಿಸಿದ್ರು. ಬಳಿಕ ಬಂದ ಯಾರೊಬ್ಬರೂ ಕೂಡ ಕಮಾಲ್ ಮಾಡ್ಲಿಲ್ಲ. ಸೋ ಈ ಮೂಲಕ ರಶೀದ್ ಖಾನ್ ಪಡೆ 134 ರನ್​ಗಳಿಗೆ ಸರ್ವಪತನ ಕಾಣ್ತು. ರೋಹಿತ್​​​​ ಶರ್ಮಾ ಬಳಗ ಭರ್ಜರಿ 47 ರನ್​ಗಳಿಂದ ಗೆದ್ದು ಬೀಗಿತು. ಭಾರತದ ಪರ ನಾಲ್ಕು ಓವರ್​ಗಳ ಬೌಲ್ ಮಾಡಿದ ಬೂಮ್ರಾ ನೀಡಿದ್ದು ಕೇವಲ 7 ರನ್​ಗಳು ಮಾತ್ರ. 1.80 ಎಕನಾಮಿಯಲ್ಲಿ ಬೌಲ್ ಮಾಡಿರುವ ಬೂಮ್ರಾ, ಕೇವಲ 7 ರನ್​ನೀಡಿ ಒಂದು ಮೇಡನ್ ಓವರ್​ ಕೂಡ ಮಾಡಿದರು. ಇನ್ನು ಭಾರತದ ಗೆಲುವಿಗೆ ಮೂರು ವಿಕೆಟ್ ಪಡೆದು ಮಿಂಚಿದರು. ಹಾಗೇ ಅರ್ಷದೀಪ್ ಸಿಂಗ್ ಟೀಂ ಇಂಡಿಯಾಗೆ ಕೊಂಚ ದುಬಾರಿಯಾದ್ರೂ ಕೂಡ ನಾಲ್ಕು ಓವರ್​ನಲ್ಲಿ 36 ರನ್​​ಗಳನ್ನು ನೀಡಿ ಮೂರು ವಿಕೆಟ್ ಕಬಳಿಸಿದ್ರು. ಹಾಗೇ ಕುಲ್ದೀಪ್ ಯಾದವ್ 2, ಅಕ್ಸರ್ ಪಟೇಲ್, ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ರು.

ಇನ್ನು ಅಫ್ಘನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಕೈಗೆ ಕಪ್ಪು​​ ಪಟ್ಟಿಕಟ್ಟಿ ಆಡಿದರು. ಅದಕ್ಕೆ ಕಾರಣ ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ ಡೆವಿಡ್ ಜಾನ್ಸನ್​ ನಿಧನರಾಗಿರೋದು. ಅವರ ಅಗಲಿಕೆಗೆ ಸಂತಾಪ ಸೂಚಿಸುವ ಸಂಕೇತವಾಗಿ ಕಪ್ಪುಪಟ್ಟಿ ಕಟ್ಟಿಕೊಂಡು ಆಡಿದ್ರು. ಟೀಂ ಇಂಡಿಯಾ ಪರ 1996ರಲ್ಲಿ ಭಾರತದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕನ್ನಡಿಗ ಡೆವಿಡ್ ಜಾನ್ಸನ್, ಗುರುವಾರ ಬೆಂಗಳೂರಿನಲ್ಲಿ ತಾವು ವಾಸಿಸುತ್ತಿದ್ದ ಫ್ಲ್ಯಾಟ್​ನಲ್ಲೇ 4ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದರು.

ಟೀಮ್ ಇಂಡಿಯಾ ಟಿ-20 ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ ನಿಜ. ಬಟ್ ಮಹತ್ವದ ಸ್ಟೇಜ್​​ನಲ್ಲಿ ಭಾರತಕ್ಕೆ ಟಾಪ್​ ಆರ್ಡರ್ ಬ್ಯಾಟರ್ಸ್ ಕೈಕೊಡ್ತಿದ್ದಾರೆ. ಅಲ್ಲದೆ ಸೂಪರ್ 8 ಸುತ್ತು ಸೇರಿದಂತೆ ಮುಂದಿನ ಒಂದೊಂದು ಪಂದ್ಯಗಳೂ ತುಂಬಾನೇ ಇಂಪಾರ್ಟೆಂಟ್. ಬಟ್ ಇಂಥಾ ಟೈಮಲ್ಲಿ ರನ್ ಗಳಿಸೋಕೆ ಹೆಣಗಾಡ್ತಿದ್ದಾರೆ. ಇನ್ನು ಶನಿವಾರ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಸೂಪರ್​ 8 ಹಂತದ ಎರಡನೇ ಪಂದ್ಯವನ್ನ ಆಡ್ಲಿದೆ. ಈ ಪಂದ್ಯದಲ್ಲಾದ್ರೂ ಕಮ್ ಬ್ಯಾಕ್ ಮಾಡ್ತಾರಾ ನೋಡ್ಬೇಕಿದೆ.

Shwetha M