US ಸೋಲಿಸಿದ್ರೂ INDಗೆ ಶಾಕ್ – 111 ರನ್ ಟಾರ್ಗೆಟ್ ಕಷ್ಟವಾಗಿದ್ದೇಕೆ?
ಭಾರತ ಗೆಲ್ಲಿಸಿದ್ದೇ 3 HEROES!
ಟಿ-20 ವಿಶ್ವಕಪ್ನಲ್ಲಿ ಗೆಲುವಿನ ಓಟ ಮುಂದುವರಿಸಿರೋ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಲಗ್ಗೆ ಇಟ್ಟಿದೆ. ಆಡಿರೋ ಮೂರೂ ಮ್ಯಾಚ್ಗಳನ್ನ ಗೆದ್ದು ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ. ಬುಧವಾರ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಬಟ್ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಭಾರತದ ಗೆಲುವು ಸುಲಭವಾಗಿರಲಿಲ್ಲ. ರೋಹಿತ್ ಪಡೆ ಮೇಲೆ ಅಕ್ಷರಶಃ ಅಮೆರಿಕ ಬೌಲರ್ಸ್ ಮೇಲುಗೈ ಸಾಧಿಸಿದ್ರು. ಬಟ್ ಅಂತಿಮವಾಗಿ ಗೆಲುವು ಭಾರತದ ಪಾಲಾಯ್ತು. ಅಷ್ಟಕ್ಕೂ ಬುಧವಾರದ ಪಂದ್ಯದಲ್ಲಿ ಅಮೆರಿಕ ಶಾಕ್ ಕೊಟ್ಟಿದ್ದೇಗೆ? ಸಣ್ಣ ಟಾರ್ಗೆಟ್ ಚೇಸ್ ಮಾಡೋಕೆ ಕಷ್ಟ ಆಗಿದ್ದೇಕೆ? ವಿರಾಟ್ ಕೊಹ್ಲಿ ರನ್ ಗಳಿಸೋಕೆ ಪರದಾಡ್ತಿರೋದೇಕೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಹಾಕ್ಸಿದ್ರಾ? – ಹೊಸ ರೂಲ್ಸ್ ತಿಳ್ಕೊಂಡಿಲ್ವಾ?
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಮ್ನಲ್ಲಿ ಬುಧವಾರ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ ನಿಜ. ಬಟ್ ಮ್ಯಾಚ್ ಆರಂಭದಲ್ಲೇ ಅಮೆರಿಕ ಬೌಲರ್ಸ್ ಟೀಂ ಇಂಡಿಯಾಗೆ ದೊಡ್ಡ ಆಘಾತವನ್ನೇ ನೀಡಿದ್ದರು. ಒಂದು ರೀತಿ ಭಾರತದ ಕೈಯಿಂದ ಗೆಲುವನ್ನ ಕಿತ್ತುಕೊಳ್ಳೋ ಮಟ್ಟಕ್ಕೂ ಹೋಗಿದ್ರು. ಬಟ್ ಫೈನಲಿ ರೋಹಿತ್ ಸೇನೆ ಮ್ಯಾಚ್ನ ತನ್ನದಾಗಿಸಿಕೊಳ್ತು. ಅಮೆರಿಕ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭದಲ್ಲೇ ಅಮೆರಿಕಕ್ಕೆ ಬಿಗ್ ಶಾಕ್ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಯುಎಸ್‌ಗೆ ಆರಂಭಿಕ ಆಘಾತ ಉಂಟಾಯ್ತು. ಅಮೆರಿಕ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಳ್ಳಬೇಕಾಯ್ತು. ಯುಎಸ್ ಪರ ಓಪನರ್ ಆಗಿ ಕಣಕ್ಕಿಳಿದಿದ್ದ ಶಯನ್ ಜಹಾಂಗೀರ್ ಶೂನ್ಯಕ್ಕೆ ಅರ್ಷದೀಪ್ಗೆ ಬಲಿಯಾದರು. ಬಳಿಕ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪತನವಾಯ್ತು. ಆಂಡ್ರೂಸ್ ಗೌಸ್ 2 ರನ್ ಬಾರಿಸಿ ಔಟಾದರು. ಅರ್ಷದೀಪ್ ಸಿಂಗ್ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದುಕೊಂಡ್ರು. ಬಳಿಕ ಅಮೆರಿಕ ಪರ ಕಣಕ್ಕಿಳಿದ ಯಾವೊಬ್ಬ ಆಟಗಾರ ಕೂಡ ಉತ್ತಮ ಸ್ಕೋರ್ ಮಾಡೋಕೆ ಆಗ್ಲೇ ಇಲ್ಲ. ನಿತೀಶ್ ಕುಮಾರ್ ಅಮೆರಿಕ ಪರ 27 ರನ್ ಸಿಡಿಸಿದ್ದೇ ಹೈಯೆಸ್ಟ್ ಸ್ಕೋರ್ ಆಗಿತ್ತು. ಸೋ ಈ ಮೂಲಕ ಆರೋನ್ ಜೋನ್ಸ್ ಪಡೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಲಷ್ಟೇ ಸಾಧ್ಯವಾಯ್ತು.
ಟೀಂ ಇಂಡಿಯಾದಂಥ ತಂಡಕ್ಕೆ 111 ರನ್‌ಗಳ ಟಾರ್ಗೆಟ್ ಚೇಸ್ ಮಾಡೋದು ದೊಡ್ಡ ವಿಚಾರವೇ ಅಲ್ಲ ಅಂತಾ ಇಡೀ ಕ್ರಿಕೆಟ್ ಜಗತ್ತೇ ಅಂದುಕೊಳ್ತಿತ್ತು. ಬಟ್ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಮ್ನಲ್ಲಿ ಈ ಟಾರ್ಗೆಟ್ ಕೂಡ ಬಿಗ್ ಸ್ಕೋರ್ ಅನ್ನೋದು ಮತ್ತೆ ಪ್ರೂವ್ ಆಯ್ತು. 111 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಬೇಕಾಯ್ತು. ಟೀಂ ಇಂಡಿಯಾದ ಆರಂಭಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡಕೌಟ್ ಆದ್ರು. ಮತ್ತೊಂದ್ಕಡೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಮ್ಮೆ ಆಸರೆಯಾಗಿದ್ದು ರಿಷಭ್ ಪಂತ್. 20 ಬಾಲ್‌ಗಳಲ್ಲಿ 18 ರನ್‌ಗಳಿಸಿ ಟೀಂ ಇಂಡಿಯಾ ಸ್ವಲ್ಪ ಚೇತರಿಸಿಕೊಳ್ಳುವಂತೆ ಮಾಡಿದರು. ಇನ್ನೇನು ಸೆಟಲ್ ಆದ್ರು ಅನ್ಕೊಳ್ಳುವಷ್ಟರಲ್ಲಿ ಅಲಿಖಾನ್ಗೆ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ರು. ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಬಲ ತುಂಬಿದ್ದೇ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ. ಸ್ಲೋ ಪಿಚ್‌ನಲ್ಲಿ ಸ್ಲೋ ಆಗಿಯೇ ರನ್‌ಗಳನ್ನು ಕಲೆ ಹಾಕಿದ್ರು. 49 ಎಸೆತಗಳನ್ನು ಎದುರಿಸಿದ ಸೂರ್ಯ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 50 ರನ್ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿ, 7 ವಿಕೆಟ್ಗಳ ಜಯ ತಂದುಕೊಟ್ಟರು. ಯಾವುದೇ ದೊಡ್ಡ ಹೊಡೆತಕ್ಕೆ ಕೈ ಹಾಕದೇ ಸ್ಲೋ ಆಗಿಯೇ ರನ್ ಕಲೆಹಾಕಿ ಟೀಂ ಇಂಡಿಯಾ ಗೆಲ್ಲುವಂತೆ ಮಾಡಿದ್ರು. ಟೀಂ ಇಂಡಿಯಾ 18.2 ಓವರ್‌ಗಳಲ್ಲಿ ಮೂರು ವಿಕೆಟ್ ಕೆಳದುಕೊಂಡು 111 ರನ್‌ಗಳಿಸಿ ಜಯಗಳಿಸಿತು. ಆರಂಭದಲ್ಲಿ 10 ಓವರ್ನಲ್ಲೇ ಟಾರ್ಗೆಟ್ ರೀಚ್ ಆಗ್ತಾರೆ ಅಂತಾ ಎಲ್ರೂ ಅನ್ಕೊಂಡ್ರೂ ಕೂಡ ಅಲ್ಲಿನ ಪಿಚ್ ಇದಕ್ಕೆ ಸಹಾಯ ಮಾಡ್ಲಿಲ್ಲ. ಸೋ ಹಂಗೋ ಹಿಂಗೋ ಮಾಡಿ ಭಾರತ ಅಮೆರಿಕವನ್ನ ಮಣಿಸಿ ಮೂರನೇ ಪಂದ್ಯವನ್ನೂ ಗೆದ್ದು ಸೂಪರ್ 8 ಹಂತಕ್ಕೆ ಲಗ್ಗೆ ಇಟ್ಟಿದೆ.
ಬಟ್ ಈ ಮ್ಯಾಚ್ನಲ್ಲಿ ನಾವು ಇಬ್ಬರ ಬಗ್ಗೆ ಹೇಳಲೇಬೇಕು. ಒಂದು ಅರ್ಶದೀಪ್ ಸಿಂಗ್ ಮತ್ತೊಂದು ವಿರಾಟ್ ಕೊಹ್ಲಿ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಅರ್ಶದೀಪ್ ಹೀರೋ ಆದ್ರೆ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದೆ. ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಹಾಕಿದ ಅರ್ಶದೀಪ್ ಎರಡು ವಿಕೆಟ್ ಪಡೆದುಕೊಂಡ್ರು. ಇದು ಅವರ ಕೆರಿಯರ್‌ನ ಬೆಸ್ಟ್ ಸ್ಪೆಲ್ ಅಂತ ಅಂದ್ರೆ ತಪ್ಪಾಗಲ್ಲ. 4 ಓವರ್ ಬೌಲಿಂಗ್ ಮಾಡಿದ ಅರ್ಶದೀಪ್ 9 ರನ್‌ಗಳಷ್ಟೇ ನೀಡಿ ಜೊತೆಗೆ ಪ್ರಮುಖ 4 ವಿಕೆಟ್‌ಗಳನ್ನು ಪಡೆದುಕೊಂಡ್ರು. ಈ ಎಡಗೈ ವೇಗಿ ಅಮೆರಿಕದ ಆರಂಭಿಕ ಆಟಗಾರ ಜಹಾಂಗೀರ್ ಅವರನ್ನು ಮೊದಲ ಎಸೆತದಲ್ಲಿಯೇ ಪೆವಿಲಿಯನ್ಗಟ್ಟಿದರು. ಈ ವಿಕೆಟ್‌ನೊಂದಿಗೆ ಅರ್ಷದೀಪ್ ಸಿಂಗ್ ಟಿ20 ಅಂತರಾಷ್ಟ್ರೀಯ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಭಾರತದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನೂ ನಿರ್ಮಿಸಿದರು. ಅಮೆರಿಕ ವಿರುದ್ಧದ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ಅದೆನೆಂದರೆ ಟಿ20ಯಲ್ಲಿ ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳ ಪವರ್‌ಪ್ಲೇಯಲ್ಲಿ ಇದುವರೆಗೆ 28 ವಿಕೆಟ್ ಪಡೆದಿರುವ ಅರ್ಷದೀಪ್ ಸಿಂಗ್, 26 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿದ್ದಾರೆ. ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲೂ ನಿರಾಸೆ ಮೂಡಿಸಿದ್ರು. ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಒಂದಂಕಿಯನ್ನೂ ದಾಟದ ಕೊಹ್ಲಿ ಯುಎಸ್ ವಿರುದ್ಧದ ಪಂದ್ಯದಲ್ಲಂತೂ ಖಾತೆ ತೆರೆಯದೇ ಔಟಾದ್ರು.
ಇನ್ನು ಅಮೆರಿಕ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ಕಠಿಣ ಪಿಚ್ ಎಂಬುದು ತಿಳಿದಿತ್ತು. ಆದರೆ ನಾವು ಉತ್ತಮ ಜೊತೆಯಾಟದೊಂದಿಗೆ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಬುದ್ಧತೆಯ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ಸು ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆಗೆ ಸಲ್ಲುತ್ತದೆ. ಹಾಗೆಯೇ ಅಮೆರಿಕ ತಂಡದಲ್ಲಿರುವ ಭಾರತೀಯ ಆಟಗಾರರೊಂದಿಗೆ ನಮ್ಮಲ್ಲಿನ ಕೆಲ ಆಟಗಾರರು ಜೊತೆಯಾಗಿ ಕ್ರಿಕೆಟ್ ಆಡಿದ್ದಾರೆ. ಇದೀಗ ಅವರು ಕೂಡ ಬೇರೊಂದು ದೇಶದ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಪ್ರಗತಿ ನಿಜಕ್ಕೂ ಸಂತೋಷಕರ. ಏಕೆಂದರೆ ಅವರೆಲ್ಲರೂ ಕಷ್ಟಪಟ್ಟು ಈ ಮಟ್ಟಕ್ಕೇರಿದ್ದಾರೆ. ಯುಎಸ್ಎ ಆಟಗಾರರ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ ಎಂದು ರೋಹಿತ್ ಶರ್ಮಾ ಹೇಳಿದರು.
ಕ್ರಿಕೆಟ್ ಲೋಕದ ಶಿಶು ಅಂತಾ ಕರೆಸಿಕೊಳ್ಳೋ ಅಮೆರಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿತ್ತು. ಆದ್ರೆ ದಶಕಗಳಿಂದಲೂ ಕ್ರಿಕೆಟ್ ಲೋಕವನ್ನ ಆಳುತ್ತಾ ಬಂದಿರುವ ಬಲಿಷ್ಠ ಭಾರತ ತಂಡಕ್ಕೆ ಶಾಕ್ ನೀಡಿದ್ರು. ಅಲ್ಪ ಟಾರ್ಗೆಟ್ ನೀಡಿಯೂ ಗೆಲುವಿಗಾಗಿ ಅಮೆರಿಕ ನಡೆಸಿದ ಹೋರಾಟ ಶ್ಲಾಘನೀಯವಾಗಿತ್ತು. ಸ್ಟಾರ್ ಆಟಗಾರರೇ ಹೊಂದಿರುವ ಟೀಂ ಇಂಡಿಯಾವನ್ನು ಅಮೆರಿಕ ವೇಗಿಗಳು ಕಟ್ಟಿಹಾಕಿದ್ದು ನಿಜಕ್ಕೂ ಮೆಚ್ಚುವಂಥದ್ದು.