ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ –ರೆಡಿಯಾಯ್ತು ಬಲಿಷ್ಠ 15 ಸದಸ್ಯರ ಟೀಮ್
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ. ಅಕ್ಟೋಬರ್ 5 ರಿಂದ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಆರಂಭವಾಗಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜೊತೆಯಾಗಿ ತಂಡವನ್ನು ಪ್ರಕಟಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ನೇಪಾಳದ ವಿರುದ್ಧ ಪಂದ್ಯದಲ್ಲಿ ಅಬ್ಬರಿಸಿದ ಹಿಟ್‌ಮ್ಯಾನ್- ಒಂದೇ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಗಳ ಸರದಾರ
ಅಕ್ಟೋಬರ್ 5 ರಿಂದ ಆರಂಭವಾಗಲಿರುವ ವಿಶ್ವಕಪ್ ಮಹಾಸಮರಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 15 ಸದಸ್ಯರ ಟೀಮ್ ಇಂಡಿಯಾವನ್ನು ಹೆಸರಿಸಿದೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕ್ಯಾಂಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಜೊತೆಯಾಗಿ ತಂಡವನ್ನು ಹೆಸರಿಸಿದ್ದಾರೆ. ಕೆಎಲ್ ರಾಹುಲ್ ಭಾರತ ತಂಡದ ಪ್ರಮುಖ ವಿಕೆಟ್-ಕೀಪರ್ ಬ್ಯಾಟರ್ ಆಗಿ ಆಯ್ಕೆ ಆಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಏಷ್ಯಾಕಪ್ 2023 ಕ್ಕಾಗಿ ಪ್ರಸ್ತುತ ಶ್ರೀಲಂಕಾದಲ್ಲಿರುವ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಭಾರತ ತಂಡದ ವಿಶ್ವಕಪ್ ಪಟ್ಟಿಯಿಂದ ಹೊರಗುಳಿದಿದ್ದಾರೆ. ವೆಸ್ಟ್ ಇಂಡೀಸ್ ಏಕದಿನ ಸರಣಿ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಜವಾಬ್ದಾರಿಯುತ ಅರ್ಧಶತಕ ಬಾರಿಸಿದ ಯುವ ಆಟಗಾರ ಇಶಾನ್ ಕಿಶನ್ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ವಾಷಿಂಗ್ಟನ್ ಸುಂದರ್ ಮತ್ತು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಬ್ಬರನ್ನೂ ಕೈಬಿಡಲಾಗಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.