ZIM ಸರಣಿಗೆ ಗಿಲ್ ಪಡೆ ರೆಡಿ – ಯಂಗ್ ಟೈಗರ್ಸ್ಗಿರೋ ಸವಾಲೇನು?
ಪಿಚ್ ಹೇಗಿದೆ.. ಯಾವ ತಂಡಕ್ಕೆ ಲಾಭ?
ಮಾರ್ಚ್ ತಿಂಗಳಿನಿಂದ ಮೇವರೆಗೂ ಐಪಿಎಲ್ ಫೀವರ್. ಜೂನ್ನಲ್ಲಿ ಟಿ-20 ವಿಶ್ವಕಪ್ ಫೀವರ್. ಚುಟುಕು ಸಮರದ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ ಟೈಗರ್ಸ್ ಗುರುವಾರವಷ್ಟೇ ಭಾರತಕ್ಕೆ ಮರಳಿದ್ದಾರೆ. ವಿಶ್ವ ಗೆದ್ದ ವೀರರಿಗೆ ಮುಂಬೈನ ವಾಂಖೇಡೆ ಸ್ಟೇಡಿಯಮ್ನಲ್ಲಿ ಐತಿಹಾಸಿಕ ಸ್ವಾಗತವೂ ಸಿಕ್ಕಿದೆ. ಈಗ ಟೀಂ ಇಂಡಿಯಾ ಯಂಗ್ಸ್ಟರ್ಸ್ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ. ಶನಿವಾರದಿಂದ ಜಿಂಬಾಬ್ವೆ ಮತ್ತು ಭಾರತದ ನಡುವಿನ ಟಿ-20 ಸಮರ ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಫೈಟ್ನಲ್ಲಿ ಯುವ ಪಡೆಯನ್ನೇ ನೆಚ್ಚಿಕೊಂಡಿರುವ ಶುಭಮನ್ ಗಿಲ್ ಸಾರಥ್ಯದ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಬಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಈ ಸರಣಿ ಟೀಂ ಇಂಡಿಯಾ ಆಟಗಾರರ ಭವಿಷ್ಯವನ್ನ ಬದಲಿಸೋ ಸಾದ್ಯತೆಯೂ ಇದೆ. ಐಪಿಎಲ್ನಲ್ಲಿ ಮಿಂಚಿದ್ದ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳೋಕೆ ಒಂದೊಳ್ಳೆ ಅವಕಾಶ ಕೂಡ ಹೌದು.
ಇದನ್ನೂ ಓದಿ: IND ರಿಯಲ್ ಬಾಹುಬಲಿ KOHLI – ಪ್ರಭಾಸ್ ಫಿಲ್ಮ್ ರಿ ಕ್ರಿಯೇಟ್ ಮಾಡಿದ್ರಾ?
ಗಿಲ್ ಸೇನೆಗೆ ಸವಾಲ್!
ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಪಾಂಡ್ಯ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಇತರೆ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಸಿಕ್ಕ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಅಲ್ಲದೆ ಈ ಪಂದ್ಯ ಕ್ಯಾಪ್ಟನ್ ಶುಭ್ಮನ್ ಗಿಲ್ ಪಾಲಿಗೂ ನಿರ್ಣಾಯಕವಾಗಿದೆ. ರೋಹಿತ್ ನಿವೃತ್ತಿಯಿಂದ ತೆರವಾದ ಟಿ20 ತಂಡದ ನಾಯಕತ್ವಕ್ಕೆ ಈಗಾಗಲೇ ಹಾರ್ದಿಕ್ ಹೆಸರು ಕೇಳಿ ಬಂದಿದೆ. ಜಿಂಬಾಬ್ವೆ ಸರಣಿಯಲ್ಲಿ ತಂಡ ಮುನ್ನಡೆಸುತ್ತಿರುವ ಶುಭಮನ್ ಗಿಲ್ ಈ ಸರಣಿಯಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸಿಕ್ಸರ್ಗಳ ಮಳೆಯನ್ನೇ ಸುರಿಸಿದ್ದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಬ್ಯಾಟಿಂಗ್ ಪ್ರದರ್ಶನದ ಮೇಲೆಯೂ ಬಹಳ ನಿರೀಕ್ಷೆ ಇದೆ. ಈ ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನದಲ್ಲಿ ಅವರ ಮುಂದಿನ ಕ್ರಿಕೆಟ್ ಭವಿಷ್ಯ ಅಡಗಿದೆ. ಜಿಂಬಾಬ್ವೆ ತಂಡ ಕೂಡ ಬಲಿಷ್ಠವಾಗಿದೆ. ಅನುಭವಿ ಆಲ್ರೌಂಡರ್ ಹಾಗೂ ನಾಯಕನಾಗಿರುವ ಸಿಕಂದರ್ ರಾಜಾ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಜತೆಗೆ ತಂಡದ ನೂತನ ಕೋಚ್ ಆಗಿರುವ ಜಸ್ಟಿನ್ ಸ್ಯಾಮ್ಸನ್ ಅವರ ಮಾರ್ಗದರ್ಶನ ಕೂಡ ತಂಡಕ್ಕೆ ನೆರವಾಗಬಹುದು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು. ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 2 ಪಂದ್ಯ ಗೆದ್ದಿದೆ. ಕೊನೆಯ ಬಾರಿ ಆಡಿದ್ದು 2022ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ. ಈ ಪಂದ್ಯವನ್ನು ಭಾರತ 71 ರನ್ ಅಂತರದಿಂದ ಗೆದ್ದು ಬೀಗಿತ್ತು.
ಜುಲೈ 6ರಂದು ಹರಾರೆಯಲ್ಲಿ ಫಸ್ಟ್ ಮ್ಯಾಚ್ ನಡೆಸಿದ್ರೆ ಜಲೈ 7, ಜುಲೈ 10, ಜುಲೈ 13 ಹಾಗೇ ಜುಲೈ 14ರಂದು ಮುಂದಿನ ಪಂದ್ಯಗಳು ನಡೆಯಲಿವೆ. ಸರಣಿಯ ಎಲ್ಲಾ ಐದು ಪಂದ್ಯಗಳಿಗೆ ಹರಾರೆ ಸ್ಪೋರ್ಟ್ಸ್ ಕ್ಲಬ್ ಆತಿಥ್ಯ ವಹಿಸಿದೆ. ಈ ಕ್ರೀಡಾಂಗಣದ ಪಿಚ್ನಲ್ಲಿ ಹೆಚ್ಚಿನ ಬೌನ್ಸ್ ಇಲ್ಲ. ಹೀಗಾಗಿ ಸ್ಪಿನ್ನರ್ಗಳು ಇಲ್ಲಿ ಪ್ರಾಬಲ್ಯ ಮೆರೆಯುವ ಸಾದ್ಯತೆ ಇದೆ. ಈ ಮೈದಾನದಲ್ಲಿ ಕಳೆದ 50 ಟಿ20-ಐ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 29 ಬಾರಿ ಜಯ ದಾಖಲಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಹೆಚ್ಚಿದೆ. ಸದ್ಯ ಟಿ-20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ಕೆಲ ಆಟಗಾರರು ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರಿಂದ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ ಅನ್ನೋದೇ ಈಗಿರುವ ಕುತೂಹಲ.