ಗೆದ್ದ ಭಾರತ.. ಸೋತ ನಾಯಕ – ಅಭಿ ಸೆಂಚುರಿ, ರಿಂಕು ರೌದ್ರಾವತಾರ
ಟಿ-20ಗೆ ಬಲಿಷ್ಠ ಪಡೆ ಸಿದ್ಧವಾಯ್ತಾ?

ಗೆದ್ದ ಭಾರತ.. ಸೋತ ನಾಯಕ – ಅಭಿ ಸೆಂಚುರಿ, ರಿಂಕು ರೌದ್ರಾವತಾರಟಿ-20ಗೆ ಬಲಿಷ್ಠ ಪಡೆ ಸಿದ್ಧವಾಯ್ತಾ?

ಒಂದ್ಕಡೆ ಟೀಂ ಇಂಡಿಯಾ ಸೀನಿಯರ್ಸ್ ವಿಶ್ವಚಾಂಪಿಯನ್. ಮತ್ತೊಂದ್ಕಡೆ ಯಂಗ್ ಟೈಗರ್ಸ್ ಜಸ್ಟ್ 102 ರನ್​ಗೆ ಆಲೌಟ್. ಛೇ ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಇರ್ಬೇಕಿತ್ತಪ್ಪಾ. ಇವ್ರನ್ನೆಲ್ಲಾ ನಂಬಿಕೊಂಡು ಭವಿಷ್ಯದಲ್ಲಿ ಭಾರತದ ಕ್ರಿಕೆಟ್ ಹೇಗಿರುತ್ತೋ ಅಂತಾ ಕೋಟಿ ಕೋಟಿ ಭಾರತೀಯರು ಶನಿವಾರ ಟೆನ್ಷನ್ ಆಗಿದ್ರು. ಬಟ್ ಅದೇ ಭಾರತೀಯರು ಭಾನುವಾರ ಸಂಭ್ರಮದ ಅಲೆಯಲ್ಲಿ ತೇಲಾಡ್ತಿದ್ರು. ಯಾಕಂದ್ರೆ ಜಿಂಬಾಬ್ವೆ ವಿರುದ್ಧ ಫಸ್ಟ್​ ಮ್ಯಾಚ್​ನಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾದ ಯಂಗ್ ಪ್ಲೇಯರ್ಸ್, ಮುಯ್ಯಿಗೆ ಮುಯ್ಯಿ ಸೇಡಿಗೆ ಸೇಡು ಅಂತಾ ಪ್ರತೀಕಾರ ತೀರಿಸಿಕೊಂಡಿದ್ರು. ಟಾರ್ಗೆಟ್ ನೋಡೇ ಎದುರಾಳಿಗಳು ಶೇಕ್ ಆಗುವಂತೆ ಅಬ್ಬರಿಸಿ ಬೊಬ್ಬಿರಿದಿದ್ರು. ಆದ್ರೆ ಭಾರತ ಗೆದ್ರೂ ನಾಯಕ ಸೋತಿದ್ದಾರೆ. ಭವಿಷ್ಯದ ಕ್ಯಾಪ್ಟನ್ಸಿ ರೇಸ್​ನಲ್ಲಿರೋ ಶುಭ್​ಮನ್ ಗಿಲ್ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳೋಕೆ ಆಗ್ದೇ ಒದ್ದಾಡ್ತಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು? ಸಿಕ್ಕಿರೋ ಅವಕಾಶವನ್ನ ಬಳಸಿಕೊಳ್ತಿಲ್ವಾ ಗಿಲ್? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆ ಮೊದಲೋ..? – ಸೀತಾರಾಮ ಕಲ್ಯಾಣವೇ ಮೊದಲೋ?

ಗೇಮ್ ಅಂದ್ಮೇಲೆ ಸೋಲು ಗೆಲುವು ಇದ್ದದ್ದೇ. ಬಟ್ ಸೋಲಿನ ಬಳಿಕವೂ ಹೇಗೆ ಕಮ್​ ಬ್ಯಾಕ್ ಮಾಡ್ಬೇಕು ಅನ್ನೋದನ್ನ ಟೀಂ ಇಂಡಿಯಾದ ಹುಡುಗರ ಗ್ಯಾಂಗ್ ತೋರಿಸಿಕೊಟ್ಟಿದೆ. ಶನಿವಾರ ಜಿಂಬಾಬ್ವೆ ನೀಡಿದ್ದ 116ರನ್​ಗಳನ್ನು ಬೆನ್ನತ್ತಲಾಗದೇ 102 ರನ್​ಗಳಿಗೆ ಆಲ್​ಔಟ್ ಆಗಿ ಸೋಲು ಕಂಡಿದ್ದ ಟೀಮ್ ಇಂಡಿಯಾ ಭಾನುವಾರ ಭರ್ಜರಿ ಕಮ್​ಬ್ಯಾಕ್ ಮಾಡಿದೆ. 116ರನ್​ ಚೇಸ್ ಮಾಡಲಾಗದ ತಂಡ ಬರೋಬ್ಬರಿ 100ರನ್​ಗಳ ದಾಖಲೆಯ ಅಂತರದಿಂದ ಗೆಲುವು ಸಾಧಿಸಿ 5 ಪಂದ್ಯಗಳ ಟಿ20 ಸರಣಿಯನ್ನ 1-1ರಲ್ಲಿ ಸಮಬಲ ಸಾಧಿಸಿದೆ. ವಿಶ್ವಚಾಂಪಿಯನ್ ತಂಡ ಹೇಗಿರಬೇಕು ಎಂಬುದನ್ನ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ಬೌಲರ್​ಗಳು ಕ್ರಿಕೆಟ್​ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆಟಗಾರರು ಅಕ್ಷರಶಃ ಸುನಾಮಿಯಂತೆ ಅಬ್ಬರಿಸಿದ್ರು. ನಿಗದಿತ 20 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗಳನ್ನು ಕಳೆದುಕೊಂಡ ಟೀಂ ಇಂಡಿಯಾ ಬರೋಬ್ಬರಿ 234 ರನ್ ಬಾರಿಸಿತ್ತು. ಈ ಮೂಲಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ಸೃಷ್ಟಿಸಿತು. ಇದಕ್ಕೂ ಮುನ್ನ 229 ರನ್ ಬಾರಿಸಿದ್ದ ಆಸ್ಟ್ರೇಲಿಯಾದ ಹೆಸರಿನಲ್ಲಿ ಈ ದಾಖಲೆ ಇತ್ತು.

ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಪರ ನಾಯಕ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ವಿಪರ್ಯಾಸ ಅಂದ್ರೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ತಂಡಕ್ಕೆ ಒಳ್ಳೆ ಓಪನಿಂಗ್ ಸಿಗ್ಲಿಲ್ಲ.  ಟೀಂ ಇಂಡಿಯಾ ಜಸ್ಟ್ 10 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ವಿಕೆಟ್ ಒಪ್ಪಿಸಿದ್ರು. ಮತ್ತೊಂದ್ಕಡೆ ಫಸ್ಟ್​ ಮ್ಯಾಚ್​ನಲ್ಲಿ ಡಕ್ ಔಟ್ ಆಗಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ವಿಶ್ವದಾಖಲೆ ಬರೆಯೋ ಜೋಶ್​ನಲ್ಲೇ ಬ್ಯಾಟ್ ಬೀಸ್ತಿದ್ರು. ಅಭಿಷೇಕ್​ಗೆ ಉತ್ತಮ ಸಾಥ್ ಕೊಟ್ಟ ರುತುರಾಜ್ ಗಾಯಕ್ವಾಡ್​​ ಒಳ್ಳೆ ಇನ್ನಿಂಗ್ ಕಟ್ಟಿದ್ರು.  ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲೇ ಅಭಿಷೇಕ್ ಭರ್ಜರಿ ಸೆಂಚುರಿ ಸಿಡಿಸಿದ್ರು. ಕೇವಲ 47 ಎಸೆತಗಳಲ್ಲೇ 7 ಬೌಂಡರಿ 8 ಸಿಕ್ಸರ್ ಸಮೇತ 100 ರನ್ ಬಾರಿಸಿದ್ರು. ಇನ್ನು ರುತುರಾಜ್ ಗಾಯಕ್ವಾಡ್ ಕೂಡ 47 ಎಸೆತಗಳಲ್ಲಿ 77 ರನ್ ಸಿಡಿಸಿದ್ರು. ಪರಿಣಾಮ ಎರಡನೇ ವಿಕೆಟ್ ವೇಳೆಗೆ 137 ರನ್‌ಗಳ ಜೊತೆಯಾಟ ನೀಡಿದ್ರು. ಅಭಿಷೇಕ್ ಔಟಾದ ಬಳಿಕ ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ಸ್ಫೋಟಕ ಜೊತೆಯಾಟ ಮುಂದುವರಿಸಿದ್ರು. 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಬಾರಿಸಿ ಗಾಯಕ್ವಾಡ್ ಅಜೇಯರಾಗಿ ಉಳಿದ್ರು. ಹಾಗೇ ರಿಂಕು ಸಿಂಗ್ ಕೂಡ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 48 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. 235ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ತಂಡಕ್ಕೆ ಭಾರತೀಯ ಬೌಲರ್ಸ್ ನೀರಿಳಿಸಿದ್ರು. ಇನ್ನೂ 8 ಎಸೆತಗಳು ಬಾಕಿ ಇರುವಂತೆ 134ಕ್ಕೆ ಆಲೌಟ್ ಆಯ್ತು. ಈ ಮೂಲಕ ಭಾರತಕ್ಕೆ ಭರ್ಜರಿ  100 ರನ್​ಗಳ ಅಂತರದ ಗೆಲುವು ಸಿಕ್ಕಿತು. ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ತಲಾ 3 ವಿಕೆಟ್ ಪಡೆದರೆ, ಸ್ಪಿನ್ನರ್​ಗಳಾದ ರವಿ ಬಿಷ್ಣೋಯ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು. ಜಿಂಬಾಬ್ವೆ ಪರ ವೆಸ್ಲೆ ಮಾಧೆವೆರೆ 43 ರನ್​ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯ್ತು.

ಈ ಪಂದ್ಯದ ಮೂಲಕ ಭಾರತ ಹಲವು ದಾಖಲೆಗಳನ್ನೂ ಸಹ ಬರೆದಿದೆ. ಅಭಿಷೇಕ್, ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ಸಿಡಿಲಬ್ಬರದಿಂದ ರನ್ ಮಳೆಯೇ ಸುರಿಯಿತು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅಂತಿಮ 10 ಓವರ್​ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು. 2007 ರಲ್ಲಿ ಕೀನ್ಯಾ ವಿರುದ್ಧದ ಟಿ20 ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟರ್​ಗಳು ಕೊನೆಯ 10 ಓವರ್​ಗಳಲ್ಲಿ 159 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಈ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಮೊದಲ 10 ಓವರ್​ಗಳಲ್ಲಿ 74 ರನ್ ಬಾರಿಸಿದ್ದ ಭಾರತೀಯ ಬ್ಯಾಟರ್​ಗಳು, ಕೊನೆಯ 10 ಓವರ್​ಗಳಲ್ಲಿ ಬರೋಬ್ಬರಿ 160 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಂತಿಮ ಹತ್ತು ಓವರ್​ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ ಟೀಂ ಇಂಡಿಯಾ ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಗೆದ್ದು ಬೀಗಿದೆ. ಬರೋಬ್ಬರಿ 100 ರನ್​ಗಳಿಂದ ಕ್ಯಾಪ್ಟನ್​​ ಶುಭ್ಮನ್​ ಗಿಲ್​ ಪಡೆ ಗೆಲುವು ಸಿಕ್ಕಿದೆ. ಹೀಗಾಗಿ ಟೀಂ ಇಂಡಿಯಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತ ತಂಡದ ಕ್ಯಾಪ್ಟನ್​ ಆಗಿ ಶುಭ್ಮನ್​ ಗಿಲ್​ ಅವರಿಗೆ ಮೊದಲ ಗೆಲುವಾಗಿದೆ. ಒಂದೆಡೆ ಶುಭ್ಮನ್​​ ಗಿಲ್​​ಗೆ ಕೆಲವ್ರು ಶಹಬ್ಬಾಸ್ ಅಂತಿದ್ರೆ ಮತ್ತೊಂದ್ಕಡೆ ಸೋಷಿಯಲ್​ ಮೀಡಿಯಾದಲ್ಲಿ ಕಳಪೆ ಪ್ರದರ್ಶನಕ್ಕಾಗಿ ಟ್ರೋಲ್​ ಮಾಡಲಾಗುತ್ತಿದೆ. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಸುಲಭ ಗೆಲವು ಸಾಧಿಸಬಹುದಿತ್ತು. ಆದರೆ, 29 ಬಾಲ್​ನಲ್ಲಿ 31 ರನ್​ ಗಳಿಸಿದ್ರೂ ಗಿಲ್ ತಂಡವನ್ನು ಗೆಲ್ಲಿಸಲಿಲ್ಲ. ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಆಡಲೇ ಇಲ್ಲ. ಭಾನುವಾರ ಟೀಮ್​ ಇಂಡಿಯಾ ಗೆದ್ರೂ ಗಿಲ್​ ಕಳಪೆ ಪ್ರದರ್ಶನ ನೀಡಿದ್ರು. ಕೇವಲ 4 ಬಾಲ್​ನಲ್ಲಿ 2 ರನ್​ಗೆ ವಿಕೆಟ್​ ಒಪ್ಪಿಸಿ ಭಾರತ ತಂಡವನ್ನು ಸಂಕಷ್ಟಕ್ಕೆ ದೂಡಿದ್ರು. ಹೀಗಾಗಿ ಗಿಲ್ ಐಪಿಎಲ್​​ನಲ್ಲಿ ಹೀರೋ, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೀರೋ ಎಂದು ಟ್ವೀಟ್ ಮಾಡ್ತಿದ್ದಾರೆ. ಒಟ್ನಲ್ಲಿ 5 ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ತಲಾ ಒಂದೊಂದು ಪಂದ್ಯಗಳನ್ನ ಗೆದ್ದಿದ್ದು ಸಮಬಲ ಸಾಧಿಸಿದೆ. ಸೋ ಮುಂದೆ ಮೂರು ಪಂದ್ಯಗಳು ಬಾಕಿ ಇದ್ದು, ಟೀಂ ಇಂಡಿಯಾ ಸರಣಿ ಗೆಲ್ಲೋ ಹಾಟ್ ಫೇವರೆಟ್ ಎನಿಸಿಕೊಂಡಿದೆ.

Shwetha M