1 ರನ್.. 14 ಬಾಲ್.. 2 ವಿಕೆಟ್! – ಮ್ಯಾಚ್ ಟೈ.. ಸೂಪರ್ ಓವರ್ ಯಾಕಿಲ್ಲ?
IND Vs SL.. ಭಾರತ ಎಡವಿದ್ದೆಲ್ಲಿ? 

1 ರನ್.. 14 ಬಾಲ್.. 2 ವಿಕೆಟ್! – ಮ್ಯಾಚ್ ಟೈ.. ಸೂಪರ್ ಓವರ್ ಯಾಕಿಲ್ಲ?IND Vs SL.. ಭಾರತ ಎಡವಿದ್ದೆಲ್ಲಿ? 

ಭಾರತೀಯ ಬೌಲರ್​ಗಳ ಅಬ್ಬರ, ಲಂಕಾದ ಟಾರ್ಗೆಟ್ ನೋಡಿದಾಗ ಟೀಂ ಇಂಡಿಯಾನೇ ಗೆಲ್ಲೋದು ಅಂತಾ ರೋಹಿತ್ ಬಾಯ್ಸ್ ಫಿಕ್ಸ್ ಆಗಿದ್ರು. ಟಿ-20 ಸರಣಿಯಲ್ಲಿ ಸಿಂಹಳೀಯರನ್ನ ಕ್ಲೀನ್ ಸ್ವೀಪ್ ಮಾಡಿದಂತೆ ಏಕದಿನ ಸರಣಿಯಲ್ಲೂ ಕೂಡ ಮೊದಲ ಪಂದ್ಯವನ್ನ ಭರ್ಜರಿಯಾಗಿ ಗೆದ್ದು ಶುಭಾರಂಭ ಮಾಡೋ ಜೋಶ್​ನಲ್ಲಿದ್ರು. ಬಟ್ ಬಲಿಷ್ಠ ಭಾರತಕ್ಕೆ ಶಾಕ್ ಕೊಟ್ಟ ಲಂಕಾ ಪಡೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಒಂದ್ಸಲ ಭಾರತ ಸೋಲುತ್ತೆ, ಮತ್ತೊಂದ್ಸಲ ಲಂಕಾ ಸೋಲುತ್ತೆ ಅನ್ನೋ ಹಾಗೇ ಹಾವು ಏಣಿಯಂತೆ ಮ್ಯಾಚ್ ಸಾಗಿತ್ತು. ಫೈನಲಿ ಅವ್ರೂ ಗೆಲ್ಲಲಿಲ್ಲ ಇವ್ರೂ ಗೆಲ್ದೇ ಪಂದ್ಯ ಟೈ ಆಯ್ತು. ಅಷ್ಟಕ್ಕೂ ಗೆಲ್ಲೋ ಪಂದ್ಯವನ್ನ ಟೀಂ ಇಂಡಿಯಾ ಆಟಗಾರರು ಕೈ ಚೆಲ್ಲಿದ್ದೇಕೆ? ಕುಸಿದಿದ್ದ ಭಾರತಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಆಸರೆಯಾಗಿದ್ದೇಗೆ..? ಟಿ-20 ಪಂದ್ಯದಂತೆ ನಿನ್ನೆ ಸೂಪರ್ ಓವರ್ ಆಡಿಸಲಿಲ್ಲ ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 1 ಫುಡ್‌.. 20 ದಿನದಲ್ಲಿ ಮ್ಯಾಜಿಕ್! – ಕ್ರಿಕೆಟ್‌ಗಾಗಿ ಪಂತ್ ಇಷ್ಟೆಲ್ಲಾ ಮಾಡಿದ್ರಾ?

ಟಿ-20 ಸಿರೀಸ್​ನಲ್ಲಿ ಕ್ಲೀನ್​ಸ್ವೀಪ್​ ಮಾಡಿದ್ದ ಟೀಮ್​ ಇಂಡಿಯಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬಿಗ್​ಸ್ಕೋರ್​ ಕಲೆ ಹಾಕೋ ಲೆಕ್ಕಾಚಾರದಲ್ಲಿ ಬ್ಯಾಟಿಂಗ್​ಗಿಳಿದ ಶ್ರೀಲಂಕಾಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಲಂಕಾ ಪರ ಅವಿಷ್ಕಾ ಫರ್ನಾಂಡೋ ಮೊಹಮ್ಮದ್ ಸಿರಾಜ್​ಗೆ ಸುಲಭಕ್ಕೆ ಬಲಿಯಾದ್ರು. ಬಳಿಕ ಕಣಕ್ಕಿಳಿದ ಕುಸಾಲ್​ ಮೆಂಡಿಸ್​ ಆಟ 14 ರನ್​​ಗಳಿಗೆ ಅಂತ್ಯವಾಯ್ತು. ಸಮರವಿಕ್ರಮ, ಕ್ಯಾಪ್ಟನ್​ ಚರಿತ ಅಸಲಂಕ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ಪರಿಣಾಮ ಲಂಕಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ದಿಟ್ಟ ಹೋರಾಟ ನಡೆಸಿದ ಫಾತುಮ್​ ನಿಸ್ಸಾಂಕ ಹಾಫ್​ ಸೆಂಚುರಿ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದ್ರೆ, ಹಾಫ್​ ಸೆಂಚುರಿ ಪೂರೈಸಿದ ಬೆನ್ನಲ್ಲೇ ನಿಸ್ಸಾಂಕರನ್ನ ವಾಷಿಂಗ್ಟನ್​ ಸುಂದರ್​ ಸ್ಪಿನ್​ ಬಲೆಗೆ ಬೀಳಿಸಿದರು. ಇನ್ನು ಜನಿತ್​ ಲಿಯನಗೆ, ದುನಿತ್​ ವೆಲ್ಲಲಗೆ 41 ರನ್​ಗಳ ಜೊತೆಯಾಟದೊಂದಿಗೆ ಕೊಂಚ ಆಸರೆಯಾದ್ರು. 20 ರನ್​ಗಳಿಸಿ ಜನಿತ್​ ಔಟಾದರೆ, ಬಳಿಕ ಬಂದ ವನಿಂದು ಹಸರಂಗ 24, ಅಖಿಲ ಧನಂಜಯ 17 ರನ್ ಬಾರಿಸಿದ್ರು. ಟೀಮ್​ ಇಂಡಿಯಾ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿದ ವೆಲ್ಲಲಗೆ ಅಜೇಯ 67 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಪರಿಣಾಮ ಶ್ರೀಲಂಕಾ 50 ಓವರ್​ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 230 ರನ್​ಗಳಿಸಿತು.

ಕೊಲಂಬೋದಲ್ಲಿ ನಾಯಕ ರೋಹಿತ್ ಶರ್ಮಾ ಆರ್ಭಟ

ಟೀಂ ಇಂಡಿಯಾದ ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳೋ ರೋಹಿತ್ ಶರ್ಮಾ ಲಂಕಾ ವಿರುದ್ಧದ ಪಂದ್ಯದಲ್ಲೂ ಕೂಡ ಅಬ್ಬರಿಸಿದ್ರು. 231 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಭರ್ಜರಿ ಓಪನಿಂಗ್​ ಸಿಕ್ಕಿತ್ತು.. ಸಿಕ್ಸ್​ ಸಿಡಿಸಿ ಅಕೌಂಟ್​ ಓಪನ್​ ಮಾಡಿದ ರೋಹಿತ್​ ಶರ್ಮಾ ಹೊಡಿಬಡಿ ಆಟವಾಡಿದ್ರು. ಮತ್ತೊಂದ್ಕಡೆ ರನ್ ಗಳಿಸೋಕೆ ಹೆಣಗಾಡಿದ ಶುಭ್​ಮನ್ ಗಿಲ್  35 ಬಾಲ್​ಗಳನ್ನ ಎದುರಿಸಿ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನು ರೋಹಿತ್ ಶರ್ಮಾ 3 ಸಿಕ್ಸ್, 7 ಫೋರ್​​ಗಳ ಮೂಲಕ 58 ರನ್ ಚಚ್ಚಿದ್ರು. ಆದ್ರೆ ಭರ್ಜರಿ ಫಾರ್ಮ್​ನಲ್ಲಿ ರೋಹಿತ್​ರನ್ನ ದುನಿತ್ ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ವಿರಾಟ್ ಕೊಹ್ಲಿ 32 ಬಾಲ್​ಗಳಲ್ಲಿ 24 ರನ್ ಕಲೆ ಹಾಕಿದ್ರು. ಇನ್ನು ಅಚ್ಚರಿಯ ರೀತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ವಾಷಿಂಗ್ ಟನ್ ಸುಂದರ್ 5 ರನ್ ಗಳಿಸಿ ಹೊರ ನಡೆಸಿದ್ರು. ಬಿಗ್ ಇನ್ನಿಂಗ್ಸ್​ ಕಟ್ಟುವ ಭರವಸೆ ಮೂಡಿದ್ದ ವಿರಾಟ್ ಕೊಹ್ಲಿ, ಶ್ರೇಯಸ್​ ಅಯ್ಯರ್​ ಕೂಡ ನಿರಾಸೆ ಮೂಡಿಸಿದರು. ವಿಕೆಟ್​ ನಷ್ಟವಿಲ್ಲದೇ 75 ರನ್​ಗಳಿಸಿದ್ದ ಟೀಮ್​ ಇಂಡಿಯಾ, 132 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕುಸಿದಿದ್ದ ಭಾರತಕ್ಕೆ ಆಸರೆಯಾದ ರಾಹುಲ್ & ಅಕ್ಷರ್ 

ಸತತ ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾಗೆ ಕೆ.ಎಲ್​ ರಾಹುಲ್, ಅಕ್ಷರ್​ ಪಟೇಲ್​ ಆಸರೆಯಾದ್ರು. ಶ್ರೀಲಂಕಾ ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ತಾಳ್ಮೆಯ ಆಟವಾಡಿದ ಈ ಜೋಡಿ 57 ರನ್​ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ರಾಹುಲ್​ 31 ರನ್​ಗಳಿಸಿದ್ರೆ, ಅಕ್ಷರ್​ ಪಟೇಲ್​ 33 ರನ್​ಗಳಿಸಿ ಔಟಾದ್ರು. ಆಕ್ಷರ್ ಔಟಾದ ಮೇಲೆ ಕ್ರೀಸ್​ಗೆ ಬಂದ ಶಿವಂ ದುಬೆ ಭಾರತದ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. 2 ಸಿಕ್ಸರ್​​​, 1 ಬೌಂಡರಿ ಒಳಗೊಂಡ 25 ರನ್ ಸಿಡಿಸಿದ್ರು. ಇನ್ನೇನು ಟೀಮ್ ಇಂಡಿಯಾ ಗೆದ್ದೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲೇ ಇತ್ತು. ಆದ್ರೆ ಕುಲ್ದೀಪ್​​ ಯಾದವ್​ 2, ಮೊಹಮ್ಮದ್​ ಸಿರಾಜ್​ 5 ರನ್​ ಗಳಿಸಿದ್ರು. ಅರ್ಷ್​ದೀಪ್​ ಸಿಂಗ್​ ಡಕೌಟ್​ ಆಗೋ ಮೂಲಕ ಗೆಲ್ಲೋ ಮ್ಯಾಚ್​ ಕೈ ಚೆಲ್ಲಿದ್ರು  ಶ್ರೀಲಂಕಾ ನೀಡಿದ್ದ 231 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 47.5 ಓವರ್​ಗಳಲ್ಲಿ ಆಲೌಟ್​ ಆಗಿ ಮ್ಯಾಚ್​ ಟೈ ಮಾಡಿಕೊಂಡಿದೆ.

ಗೆಲ್ಲಬೇಕಿದ್ದ ಮ್ಯಾಚ್ ಕೈ ಚೆಲ್ಲಿದ ದುಬೆ & ಅರ್ಶದೀಪ್!

ಶಿವಂ ದುಬೆ ಕ್ರೀಸ್​ನಲ್ಲಿ ಇರುವಷ್ಟು ಹೊತ್ತೂ ಭಾರತವೇ ಮ್ಯಾಚ್ ವಿನ್ ಆಗುತ್ತೆ ಅನ್ಕೊಂಡಿದ್ರು. ಬಟ್ ಬೌಲರ್‌ಗಳ ಜೊತೆ ನಿಂತು ಪಂದ್ಯ ಗೆಲ್ಲಿಸಬೇಕಿದ್ದ ದುಬೆ ಬೌಲರ್‌ಗಳಿಗೆ ಹೆಚ್ಚು ಬ್ಯಾಟಿಂಗ್ ನೀಡದೆ ತಾವೇ ಎದುರಿಸಬೇಕಿತ್ತು. ಯಾಕಂದ್ರೆ ಇನ್ನೂ ಸಾಕಷ್ಟು ಎಸಎತಗಳು ಬಾಕಿ ಇದ್ವು. ಆದ್ರೆ ಬಾಲ್ ಜಡ್ಜ್ ಮಾಡುವಲ್ಲಿ ಯಡವಿದ ದುಬೆ ಔಟ್ ಆಗಿ ನಿರಾಸೆ ಮೂಡಿಸಿದರು. ದುಬೆ ಹೋದ ಮೇಲೂ ಕೂಡ ಭಾರತಕ್ಕೆ ಗೆಲ್ಲೋ ಅವಕಾಶ ಇತ್ತು. ಆದ್ರೆ ಕೊನೆಯಲ್ಲಿ ಸಿಂಗಲ್ ರನ್ ತೆಗೆದು ಸುಲಭವಾಗಿ ಪಂದ್ಯ ಮುಗಿಸಬೇಕಿದ್ದ ಅರ್ಶದೀಪ್ ಗೆಲುವಿಗೆ ಕೇವಲ ಒಂದು ರನ್ ಬೇಕಿದ್ದಾಗ ಬಿಗ್ ಶಾಟ್‌‌ಗೆ ಮುಂದಾಗಿ ಎಲ್‌ಬಿಡ್ಬ್ಲೂ ಬಲೆಗೆ ಬಿದ್ದರು. ಲಂಕಾ ಬೌಲರ್ ಅಸಲಂಕಾ ಕ್ರಮವಾಗಿ ದುಬೆ ಮತ್ತು ಅರ್ಷದೀಪ್ ಅವರನ್ನು ವಿಕೆಟ್‌ಗಳನ್ನು ಕಿತ್ತು ಪಂದ್ಯ ಟೈ ಆಗೋದಕ್ಕೆ ಕಾರಣವಾದ್ರು. ಪಮದ್ಯದಲ್ಲಿ ಶ್ರೀಲಂಕಾ ಯುವ ಬೌಲರ್​​ ಚರಿತ್​ ಅಸಲಂಕಾ 3 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವನ್ನ ಕಸಿದುಕೊಂಡ್ರು.

ಪಂದ್ಯ ಟೈ ಆದ್ರೂ ಸೂಪರ್ ಓವರ್ ಆಡಿಸಲಿಲ್ಲ ಯಾಕೆ?

ಇತ್ತೀಚೆಗೆ ಲಂಕಾ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲೂ ಮ್ಯಾಚ್ ಟೈ ಆಗಿತ್ತು. ಅಂತಿಮವಾಗಿ ಸೂಪರ್ ಓವರ್ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಆದ್ರೆ ಶುಕ್ರವಾರದ ಪಂದ್ಯದಲ್ಲೂ ಮ್ಯಾಚ್ ಟೈ ಆಗಿದ್ರೂ ಸೂಪರ್ ಓವರ್ ಆಡಿಸಲಿಲ್ಲ. ಅದಕ್ಕೆ ಕಾರಣ ICCಯ ODI ನಿಯಮ. ಈ ನಿಯಮಗಳ ಪ್ರಕಾರ ದ್ವಿಪಕ್ಷೀಯ ಸರಣಿಯಲ್ಲಿ ಪಂದ್ಯದ ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ನಡೆಸಲಾಗುವುದಿಲ್ಲ. ಐಸಿಸಿ ಟೂರ್ನಿಗಳು ಏಕದಿನ ಮಾದರಿಯಲ್ಲಿ ನಡೆದರೆ ಸೂಪರ್ ಓವರ್‌ಗಳು ನಡೆಯಲಿವೆ. ಆ ಕಾರಣದಿಂದ ಮೊದಲ ಏಕದಿನ ಪಂದ್ಯಕ್ಕೆ ಸೂಪರ್ ಓವರ್ ಇರಲಿಲ್ಲ. ಅಂದ್ರೆ ಯಾವುದೇ ಎರಡು ರಾಷ್ಟ್ರಗಳ ನಡುವೆ ಮಾತ್ರ ಸರಣಿ ನಡೆದಾಗ ಏಕದಿನ ಮಾದರಿಯಲ್ಲಿ ಸೂಪರ್ ಓವರ್ ನಿಯಮ ಇರೋದಿಲ್ಲ. ಆದ್ರೆ ಏಕದಿನ ಮಾದರಿಯ ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಮಾತ್ರ ಸೂಪರ್ ಓವರ್ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಟಿ20 ಕ್ರಿಕೆಟ್‌ ಮಾದರಿಯಲ್ಲಿ  ಮಾತ್ರ ಯಾವುದೇ ಪಂದ್ಯ ಟೈ ಆದರೂ, ಸೂಪರ್ ಓವರ್ ನಡೆಸಲಾಗುತ್ತೆ.

15,000 ರನ್ ಪೂರೈಸಿದ ರೋಹಿತ್ ಶರ್ಮಾ!

ಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧ ಶತಕ ಕಂಪ್ಲೀಟ್ ಮಾಡಿದ್ರು. ಅಲ್ದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರಂಭಿಕನಾಗಿ 15,000 ರನ್ ಪೂರೈಸಿದರು. ಆರಂಭಿಕರಾಗಿ 15,000 ರನ್ ಗಳಿಸಿದ ವಿಶ್ವದ ಭಾರತದ 2ನೇ ಆಟಗಾರ ಎನಿಸಿಕೊಂಡರು. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು. ರೋಹಿತ್ ಶರ್ಮಾ 2013 ರಲ್ಲಿ ಓಪನರ್ ಆಗಿ ತಮ್ಮ ಕ್ರಿಕೆಟ್ ಜರ್ನಿ ಆರಂಭಿಸಿದ್ದರು.  ಅಂದಿನಿಂದ ಭಾರತಕ್ಕಾಗಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನಾಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಆರಂಭಿಕರಾಗಿ ವೇಗವಾಗಿ 15,000 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ ವೇಗವಾಗಿ ಈ ಸಾಧನೆ ಮಾಡಿದ 2ನೇ ಆರಂಭಿಕರಾಗಿದ್ದಾರೆ. ಸಚಿನ್ 331 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರೆ, ರೋಹಿತ್ ಶರ್ಮಾ 352 ಇನ್ನಿಂಗ್ಸ್​ ಹಾಗೂ ಡೇವಿಡ್​ ವಾರ್ನರ್​ 361 ಇನ್ನಿಂಗ್ಸ್​ಗಳಲ್ಲಿ 15 ಸಾವಿರ ರನ್​ ಸಿಡಿಸಿ ನಂತರದ ಸ್ಥಾನಗಳಲ್ಲಿದ್ದಾರೆ. ಒಟ್ಟಾರೆ ಆರಂಭಿಕರಾಗಿ 15 ಸಾವಿರ ರನ್​ ಪೂರ್ಣಗೊಳಿಸಿದ ಪಟ್ಟಿಯಲ್ಲಿ ರೋಹಿತ್ 10ನೇ ಪ್ಲೇಸ್​ನಲ್ಲಿದ್ದಾರೆ. ಶ್ರೀಲಂಕಾದ ಜಯಸೂರ್ಯ ಈ ಪಟ್ಟಿಯಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟರ್ ಆಗಿದ್ದು, 19,298ರನ್ ​ಗಳಿಸಿದ್ದಾರೆ. ಹಾಗೇ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿ ಕೂಡ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ರೋಹಿತ್ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟರ್​ ಆಗಿ 612 ಸಿಕ್ಸರ್​ ಸಿಡಿಸಿರುವ ರೋಹಿತ್, ನಾಯಕನಾಗಿ 234 ಸಿಕ್ಸರ್​ ಸಿಡಿಸಿ ಎರಡೂ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇನ್ನು ಜಸ್ಟ್ ಒಂದು ರನ್​ಗಿಂದ ಮ್ಯಾಚ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಆಟಗಾರರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ಭಾರತ ತಂಡ ಕೇವಲ ಒಂದು ರನ್‌ನಿಂದ ಗೆಲುವು ತಪ್ಪಿಸಿಕೊಂಡಿದ್ದಕ್ಕೆ ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಆ ಒಂದು ರನ್‌ ನಾವು ಹೊಡೆಯಬೇಕಾಗಿತ್ತು ಎಂದು ಹೇಳಿದ ರೋಹಿತ್‌ ಶರ್ಮಾ, ಹಲವು ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಪಿಚ್‌ಗಳಲ್ಲಿ ನಾವು ಚೆನ್ನಾಗಿ ಬ್ಯಾಟ್‌ ಮಾಡಿದ್ದೇವೆ. 14 ಎಸೆತಗಳಲ್ಲಿ ಒಂದು ರನ್‌ ಗಳಿಸದ ಬಗ್ಗೆ ತುಂಬಾ ನಿರಾಶೆಯಾಗಿದೆ. ಆದರೆ ಇದನ್ನು ನೋಡಲು ಇಷ್ಟವಿಲ್ಲ. ನೀವು ನಿಮ್ಮ ಶಾಟ್‌ ಆಡುವ ಪಂದ್ಯ ಇದಾಗಿರಲಲ್ಲ. ನಿಮ್ಮ ಆಟವನ್ನು ನೀವು ಇಲ್ಲಿ ಆಡಲು ಹೋದರೆ ಹಿನ್ನಡೆಯಾಗುತ್ತದೆ. ಆದರೆ, ನಾವು ತೋರಿದ ಹೋರಾಟದಿಂದ ನಮಗೆ ಹೆಮ್ಮೆ ಇದೆ. ನಮ್ಮ ನರ್ವಸ್‌ ಅನ್ನು ಹಿಡಿದಿಟ್ಟುಕೊಳ್ಳುವುದು ಇಲ್ಲಿ ತುಂಬಾ ಮುಖ್ಯವಾಗಿತ್ತು ಆದರೂ ನಾವು ಒಂದು ರನ್‌ ಗಳಿಸಬೇಕಾಗಿತ್ತು ಎಂದಿದ್ದಾರೆ.

ಇನ್ನು ಪಂದ್ಯದಲ್ಲಿ ಭಾರತದ ಪರ ಎರಡನೇ ಓವರ್ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್, ಶ್ರೀಲಂಕಾದ ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೋ ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟ್‌ನಲ್ಲಿ ಅದರಲ್ಲೂ ಪವರ್​ ಪ್ಲೇನಲ್ಲಿ ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. 2023 ರಿಂದ ಏಕದಿನ ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ ಇದುವರೆಗೆ ಪವರ್​ ಪ್ಲೇನಲ್ಲಿ 24 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಮೂರು ದಿನಗಳ ಏಕದಿನ ಸರಣಿಯ ಮೊದಲ ಪಂದ್ಯ ಹತ್ತು ಹಲವು ಕುತೂಹಲಗಳಿಂದ ಕೂಡಿತ್ತು. ಹಾವು ಏಣಿಯಂತೆ ಸಾಗಿದ ಪಂದ್ಯ ಕೊನೆಯಲ್ಲಿ ಟೈ ಆಗುವಲ್ಲಿ ಅಂತ್ಯಗೊಂಡಿದೆ. ಇದೀಗ ಉಭಯ ತಂಡಗಳು ತಮ್ಮ ಎರಡನೇ ಪಂದ್ಯವನ್ನು ಆಗಸ್ಟ್ 4 ರಂದು ಕೊಲಂಬೊದ ಮೈದಾನದಲ್ಲೇ ಆಡಲಿದ್ದಾರೆ. ಹೀಗಾಗಿ ಎರಡನೇ ಪಂದ್ಯ ಉಭಯ ತಂಡಗಳಿಗೂ ಕೂಡ ತುಂಬಾನೇ ಮಹತ್ವದ್ದಾಗಿದೆ. ಎರಡನೇ ಪಂದ್ಯದಲ್ಲಿ ಗೆಲ್ಲುವ ತಂಡ ಒಂದು ರೀತಿ ಮೇಲುಗೈ ಸಾಧಿಸಿದಂತಾಗುತ್ತೆ. ಅದ್ರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಸ್ಟಾರ್ ಆಟಗಾರರೇ ತಂಡದಲ್ಲಿ ಇರೋದ್ರಿಂದ ಗೆಲ್ಲಲೇಬೇಕಾದ ಒತ್ತಡ ಕೂಡ ಟೀಂ ಇಂಡಿಯಾ ಮೇಲಿದೆ.

Shwetha M

Leave a Reply

Your email address will not be published. Required fields are marked *