IND Vs SL.. 3ನೇ ಪಂದ್ಯಕ್ಕೆ 3 ಶಾಕ್! – ಕೆಎಲ್ & ದುಬೆ ಔಟ್.. ಯಾರು IN?
ರೋಹಿತ್, ಗಂಭೀರ್ ಸರ್ಜರಿ ಹೇಗಿದೆ?

IND Vs SL.. 3ನೇ ಪಂದ್ಯಕ್ಕೆ 3 ಶಾಕ್! – ಕೆಎಲ್ & ದುಬೆ ಔಟ್.. ಯಾರು IN?ರೋಹಿತ್, ಗಂಭೀರ್ ಸರ್ಜರಿ ಹೇಗಿದೆ?

ಒಂದು ಮ್ಯಾಚ್. ಇನ್ನೊಂದೇ ಮ್ಯಾಚ್. ಶ್ರೀಲಂಕಾ ವಿರುದ್ಧ ಸಮಬಲ ಸಾಧಿಸ್ಬೇಕು ಅಂದ್ರೆ ಟೀಂ ಇಂಡಿಯಾಗೆ ಇರೋದು ಇನ್ನೊಂದೇ ಚಾನ್ಸ್. ಮೊದಲ ಪಂದ್ಯವನ್ನ ಡ್ರಾ ಮಾಡ್ಕೊಂಡು ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿರೋ ಭಾರತದ ಆಟಗಾರರ ಮುಂದೆ ಈಗ ಮಾಡು ಇಲ್ಲವೇ ಮಡಿ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇರೋ ಒಂದು ಅವಕಾಶವನ್ನ ಬಳಸಿಕೊಂಡು ಗೆದ್ದರಷ್ಟೇ ವಿಶ್ವಚಾಂಪಿಯನ್ ಟೀಂ ಮರ್ಯಾದೆ ಉಳಿಯಲಿದೆ. ಇಲ್ಲದೇ ಇದ್ರೆ ಎರಡೂವರೆ ದಶಕಗಳ ಬಳಿಕ ಸಿಂಹಳೀಯರು ಹೊಸ ದಾಖಲೆ ಬರೆಯೋಕೆ ಸರ್ವ ಸನ್ನದ್ಧವಾಗ್ತಿದ್ದಾರೆ. ಹೀಗಾಗಿ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಭರ್ಜರಿ ಬದಲಾವಣೆಗಳು ಆಗಲಿವೆ. ಅಷ್ಟಕ್ಕೂ ಏನದು ಬದಲಾವಣೆ? ಕೆಎಲ್ ರಾಹುಲ್​ಗೆ ಬೆಂಚ್ ಕಾಯಿಸ್ತಾರಾ? ಗೌತಮ್ ಮತ್ತು ರೋಹಿತ್ ಮಾಡಲಿರುವ ಆ ಮೂರು ಚೇಂಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶ್ರೇಷ್ಠಾ ಮದುವೆ ಸತ್ಯ ರಿವೀಲ್‌ – ತಾಂಡವ್‌ ಕಳ್ಳಾಟ.. ಭಾಗ್ಯ ಸೈಲೆಂಟ್‌

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೇ ಶ್ರೀಲಂಕಾ ವಿರುದ್ಧದ ಎರಡೂ ಪಂದ್ಯಗಳನ್ನ ಭಾರತ ಕೈ ಚೆಲ್ಲಿಕೊಂಡಿದೆ. ಮೊದಲನೇ ಮ್ಯಾಚ್​ನಲ್ಲಿ ಗೆಲ್ಲೋಕೆ ಎಲ್ಲಾ ಅವಕಾಶ ಇದ್ರೂ ಪಂದ್ಯ ಡ್ರಾ ಮಾಡಿಕೊಂಡಿದ್ರು. ಇನ್ನು ಎರಡನೇ ಇನ್ನಿಂಗ್ಸ್​​ನಲ್ಲೂ ಕೂಡ ಸುಲಭವಾಗಿ ರೀಚ್ ಮಾಡಬಹುದಾದ ಟಾರ್ಗೆಟ್​​ನೂ ಬೀಟ್ ಮಾಡೋಕೆ ಆಗದೇ ಸೋತು ಸುಣ್ಣವಾಗಿದ್ರು. ಈಗ ಬುಧವಾರ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು ಡು ಆರ್ ಡೈ ಎನ್ನುವಂತಾಗಿದೆ. ರೋಹಿತ್ ಶರ್ಮಾ ನೇತೃತ್ವದ ಸೇನೆ ಕೊನೆಯ ಪಂದ್ಯ ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. ಆದ್ರೆ  ಆತಿಥೇಯ ತಂಡ ಗೆಲುವಿನ ಗುರಿಯೊಂದಿಗೆ ಸರಣಿ ಕೈವಶಕ್ಕೆ ಗೇಮ್ ಪ್ಲ್ಯಾನ್ ಸಿದ್ಧ ಪಡಿಸ್ತಿದೆ. ಅಚ್ಚರಿಯ ವಿಷ್ಯ ಅಂದ್ರೆ ಶ್ರೀಲಂಕಾ 1997 ರಿಂದ ಬಳಿಕ ಭಾರತದ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿಲ್ಲ. ಈಗ ಆ ಕೊರತೆಯನ್ನು ನೀಗಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅದಾಗಲೇ 2 ಪಂದ್ಯಗಳನ್ನ ಕೈಚೆಲ್ಲಿಕೊಂಡಿರೋ ಭಾರತ 3ನೇ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ.

ಮೂರನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ ಫಿಕ್ಸ್!

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಆಗಸ್ಟ್ 7 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ತಂಡ ಫೇಲ್ಯೂರ್ ಆಗಿದ್ದು. ಇದೀಗ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಲು ಕೊನೆಯ ಪಂದ್ಯವನ್ನು ಶತಾಯಗಯಾತ  ಗೆಲ್ಲಲೇಬೇಕಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಒಂದಷ್ಟು ರಿಪೇರಿ ಕೆಲಸಗಳೂ ಆಗ್ಬೇಕಿದೆ.  ಟೀಂ ಇಂಡಿಯಾ ಪರ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದು ಹಿಟ್​ಮ್ಯಾನ್ ರೋಹಿತ್ ಶರ್ಮಾ ಒಬ್ಬರೇ. ಎರಡೂ ಮ್ಯಾಚ್​ಗಳಲ್ಲೂ ಅರ್ಧಶತಕ ಬಾರಿಸಿದ್ರು. ಆದರೆ ಉಳಿದ ಬ್ಯಾಟರ್‌ಗಳ ಫ್ಲ್ಯಾಪ್ ಶೋನಿಂದಾಗಿ ಟಾರ್ಗೆಟ್ ರೀಚ್ ಆಗೋಕೆ ಆಗಲಿಲ್ಲ. ಎರಡೂ ಇನ್ನಿಂಗ್ಸ್​​ಗಳಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ಕಂಪ್ಳೀಟ್ ಫೇಲ್ಯೂರ್ ಆಗಿದ್ರು. ಅದ್ರಲ್ಲೂ ಎರಡನೇ ಪಂದ್ಯದಲ್ಲಿ ಇಬ್ಬಿಬ್ಬರು ಆಟಗಾರರು ಡಕ್ ಔಟ್ ಆಗಿದ್ರು. ಇದೇ ಕಾರಣಕ್ಕೆ ಮುಂದಿನ ಪಂದ್ಯದಲ್ಲಿ ಅಬ್ರಿಬ್ಬರನ್ನೂ ಬೆಂಚ್ ಕಾಯಿಸೋಕೆ ಟೀಂ ಮ್ಯಾನೇಜ್​ಮೆಂಟ್ ಪ್ಲ್ಯಾನ್ ಮಾಡಿದೆ.

ಕೆಎಲ್ ರಾಹುಲ್ ಮತ್ತು ಶಿವಂ ದುಬೆಗೆ ಕೊಕ್!

ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಜೊತೆ ವಿರಾಟ್ ಕೊಹ್ಲಿ ಮೂರನೇ ಪಂದ್ಯ ಆಡಲಿದ್ದಾರೆ. ಹಾಗೇ ಶ್ರೇಯಸ್ ಅಯ್ಯರ್​ಗೂ ಮತ್ತೊಂದು ಅವಕಾಶ ಸಿಗಬಹುದು. ಆದ್ರೆ ಕೆಎಲ್ ರಾಹುಲ್ ಮತ್ತು ಶಿವಂ ದುಬೆಗೆ ಕೊಕ್ ಕೊಟ್ಟು ಬದಲಿ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳೋಕೆ ಪ್ಲ್ಯಾನ್ ಸಿದ್ಧವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ 31 ರನ್ ಗಳಿಸಿದ್ದರೂ ಕೂಡ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇನ್ನು ಎರಡನೇ ಪಂದ್ಯದಲ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ರು. ಶಿವಂ ದುಬೆ ಕೂಡ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸೋ ನಿರೀಕ್ಷೆಯಿದ್ದರೂ ಹುಸಿಗೊಳಿಸಿದ್ರು.. ದುಬೆ ಮೊದಲ ODI ನಲ್ಲಿ 25 ರನ್ ಗಳಿಸಿದ್ರೆ ಎರಡನೇ ODI ನಲ್ಲಿ ಖಾತೆ ತೆರೆಯದೆಯೇ ಪೆವಿಲಿಯನ್ ಸೇರಿದ್ರು. ಹೀಗಾಗಿ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ತಂಡದ ರೀಶಫಲ್​ಗೆ ಮುಂದಾಗಿದ್ದಾರೆ. ಅದ್ರಂತೆ ರಾಹುಲ್ ಮತ್ತು ದುಬೆಗೆ ಬ್ಯಾಕಪ್ ಆಯ್ಕೆಯಾಗಿರುವ ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಅವರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳೋ ಸಾಧ್ಯತೆ ಇದೆ.

ಸ್ಪಿನ್ನರ್ಸ್ ಬಲ ಹೆಚ್ಚಿಸಲು ಟೀಂ ಇಂಡಿಯಾ ಯೋಜನೆ!

ಕೊಲೊಂಬೋದಾ ಆರ್ ಪ್ರೇಮದಾಸ ಕ್ರೀಡಾಂಗಣ ಸ್ಪಿನ್ನರ್ ಸ್ನೇಹಿ ಪಿಚ್ ಆಗಿದೆ. ಆರಂಭದ ಪಂದ್ಯದಿಂದಲೂ ಇಲ್ಲಿನ ನಿಧಾನಗತಿಯ ಪಿಚ್ ಸ್ಪಿನ್ನರ್‌ಗಳಿಗೆ ಸೂಕ್ತವಾಗಿದೆ. ಸ್ಪಿನ್ನರ್​ಗಳೇ ಮೇಲು ಗೈ ಸಾಧಿಸುತ್ತಿದ್ದಾರೆ. ಅಲ್ದೇ ರಿಯಾನ್ ಪರಾಗ್ ಕೂಡ ಸ್ಪಿನ್ ಬೌಲ್ ಮಾಡಬಲ್ಲರು. ಟಿ20 ಸರಣಿಯಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನ ತೋರಿಸಿದ್ದರು. ಮತ್ತೊಂದೆಡೆ ಲಂಕಾ ಪಡೆ ಕೂಡ ಸ್ಪಿನ್ಸರ್ಸ್​ನೇ ಹೆಚ್ಚು ಆಡಿಸುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಕೇವಲ ಒಬ್ಬ ವೇಗಿ ಅಸಿತಾ ಫೆರ್ನಾಂಡೋ ಅವರನ್ನು ಮಾತ್ರ ಆಡಿಸಿತ್ತು. ಹೀಗಾಗಿ ಭಾರತ ಕೂಡ ಇದೇ ಟ್ರಿಕ್ ಬಳಸೋಕೆ ಮುಂದಾಗಿದೆ. ಈಗಾಗಲೇ ಮೂವರು ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ಆಡುತ್ತಿದೆ. ಪರಾಗ್ ಜತೆಯಾದರೆ ಲಂಕಾ ಬ್ಯಾಟಿಂಗ್ ಕ್ರಮಾಂಕವನ್ನು ಎದುರಿಸುವ ಸಾಧ್ಯತೆ ಹೆಚ್ಚಲಿದೆ. ಆದ್ದರಿಂದ ದುಬೆ ಬದಲಿಗೆ ರಿಯಾನ್ ಪರಾಗ್ ಅವರನ್ನು ಅಂತಿಮ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ.

ರಾಹುಲ್ ಡ್ರಾಪ್ ಮಾಡಿದ್ರೆ ಟೀಂ ಇಂಡಿಯಾಗೇ ನಷ್ಟ!

ಕೆ.ಎಲ್ ರಾಹುಲ್ ಕ್ಲಾಸಿಕ್ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ಅದ್ರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಪಾಲಿಗೆ ಬೆನ್ನೆಲುಬು. ಆದ್ರೆ ಎರಡು ಏಕದಿನ ಪಂದ್ಯಗಳಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ. ಹೀಗಾಗಿ ರಿಷಬ್ ಪಂತ್​ಗೆ ಮಣೆ ಹಾಕೋ ಚಾನ್ಸಸ್ ಜಾಸ್ತಿ ಇದೆ. ಆದ್ರೆ ರಾಹುಲ್ ಅವರನ್ನು ಕೂರಿಸೋದು ನಿಜಕ್ಕೂ ಕೂಡ ತಪ್ಪು ನಿರ್ಧಾರ. ಯಾಕಂದ್ರೆ ಕಳೆದ ವರ್ಷ ರಾಹುಲ್ 66.25 ರ ಸರಾಸರಿಯಲ್ಲಿ ಮತ್ತು 87.74 ರ ಸ್ಟ್ರೈಕ್ ರೇಟ್‌ನಲ್ಲಿ 1060 ರನ್ ಗಳಿಸಿದ್ದರು. ಹೀಗಾಗಿ ರಾಹುಲ್​ರನ್ನ ಬೆಂಚ್ ಕಾಯಿಸೋದು ಬಿಟ್ಟು ಬ್ಯಾಟಿಂಗ್ ಆರ್ಡರ್​ನಲ್ಲಿ ಬದಲಾವಣೆ ತರಬಹುದು. ಪ್ರಸ್ತುತ 7ನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ರೆ ಒತ್ತಡ ಕೂಡ ಕಡಿಮೆ ಇರುತ್ತೆ. ಸೋ ಸ್ವಲ್ಪ ಸೆಟಲ್ ಆಗೋಕೆ ಟೈಂ ತಗೊಂಡು ನಂತ್ರ ಉತ್ತಮ ಸ್ಕೋರ್ ಗಳಿಸಬಹುದು.

ಮೂರನೇ ಪಂದ್ಯದಲ್ಲಿ ಹರ್ಷಿತ್ ರಾಣಾಗೆ ಸಿಗುತ್ತಾ ಚಾನ್ಸ್?

ಹೇಳಿ ಕೇಳಿ ಕೊಲಂಬೊದ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ಪಿಚ್ ಸ್ನೇಹಿಯಾಗಿಲ್ಲ. ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಇದುವರೆಗೆ ತಲಾ ಎರಡು ವಿಕೆಟ್‌ಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಬದಲಿಗೆ ಯುವ ವೇಗಿ ಹಾಗೂ ಆಕ್ರಮಣಕಾರಿ ಬೌಲರ್ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುಬಹುದು.  ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಉತ್ತಮ ಕಟ್ಟರ್ ಮತ್ತು ನಿಧಾನಗತಿಯ ಚೆಂಡುಗಳನ್ನು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ರಾಣಾ ಬ್ಯಾಟಿಂಗ್ ಮೂಲಕವೂ ಕೊಡುಗೆ ನೀಡಬಲ್ಲರು. ಹೀಗಾಗಿ ಮೂರನೇ ಪಂದ್ಯಕ್ಕೆ ರಾಣಾ ತಂಡದಲ್ಲಿ ಎಂಟ್ರಿಕೊಡುವ ಎಲ್ಲಾ ಸಾಧ್ಯತೆಗಳಿವೆ. ಇಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್​ಗೆ ದೊಡ್ಡ ಮುಳುವಾಗ್ತಿರೋದು ರಕ್ಷಣಾತ್ಮಕ ಆಟ. ರೋಹಿತ್ ಶರ್ಮಾ ಒಬ್ರನ್ನ ಬಿಟ್ರೆ ಉಳಿದವ್ರೆಲ್ಲಾ ವಿಕೆಟ್ ಉಳಿಸಿಕೊಳ್ಳೋಕೆ ತಿಣುಕಾಡ್ತಿದ್ದಾರೆ. ಇದ್ರಿಂದಲೇ ಶ್ರೀಲಂಕಾ ಬೌಲರ್ಸ್ ಪ್ರಾಬಲ್ಯ ಮೆರೆದಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ಸ್ ಎಲ್‌ಬಿಡಬ್ಲ್ಯು ಮೂಲಕವೇ ಭಾರತದ 5 ವಿಕೆಟ್‌ಗಳನ್ನು ಉರುಳಿಸಿದ್ದರು.  ಅಲ್ದೇ ಲಂಕಾ ಪರ 5 ಸ್ಪಿನ್ ಬೌಲರ್ ಗಳು ಕಣಕ್ಕಿಳಿದಿದ್ದು ಅವ್ರಿಗೆ ಪ್ಲಸ್ ಆಗಿತ್ತು.

ಪ್ರಯೋಗ ಕೈ ಬಿಡ್ತಾರಾ ಕೋಚ್ ಗಂಭೀರ್?

ಟಿ-20ಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಕ್ಲೀನ್ ಸ್ವೀಪ್ ಮಾಡಿದ್ರೂ ಏಕದಿನ ಸರಣಿಯಲ್ಲಿ ಮಾತ್ರ ನಿರೀಕ್ಷಿತ ಪ್ರದರ್ಶನ ಬರ್ತಿಲ್ಲ. ಇದಕ್ಕೆ ಕಾರಣ ಕೋಚ್ ಗಂಭೀರ್ ಅವರ ಪ್ರಯೋಗಗಳೇ ಎಂಬ ವಾದವೂ ಇದೆ. ಮೊದಲ ಹಾಗೇ ಎರಡನೇ ಪಂದ್ಯಗಳಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣಗಳೇ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ನಿರ್ಧಾರ. ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಸುಂದರ್​ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಎರಡನೇ ಪಂದ್ಯದಲ್ಲಿ ಇದೇ ತಪ್ಪು ಮಾಡಿದ ನಾಯಕ ಮತ್ತು ಕೋಚ್ ಶಿವಂ ದುಬೆ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ರು. ಈ ಪಂದ್ಯದಲ್ಲಿ ದುಬೆಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಕೊಲಂಬೊದ ಸ್ಪಿನ್ ಸ್ನೇಹಿ ಪಿಚ್​ನಲ್ಲಿ ಅನುಭವಿಗಳೇ ರನ್ ಗಳಿಸೋಕೆ ಹೆಣಗಾಡುವಾಗ ದುಬೆ ಮತ್ತು ಸುಂದರ್​ಗೆ ಮುಂಬಡ್ತಿ ನೀಡುವ ಅಗತ್ಯ ಏನಿತ್ತು?. ಅಲ್ದೇ ಅಕ್ಷರ್ ಪಟೇಲ್ ಅವರನ್ನು ಐದನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿಸಲಾಯಿತು. ಇದರಿಂದಾಗಿ ಆರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಏಳನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ಬರಬೇಕಾಯಿತು. ಕೆಎಲ್ ರಾಹುಲ್ ಅವರನ್ನು ಏಳನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದಾರೆ ಎಂದರೆ ಕೋಚ್ ಗೌತಮ್ ಗಂಭೀರ್​, ಕೆಎಲ್ ರಾಹುಲ್​ಗಿಂತ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಮೇಲೆಯೇ ಹೆಚ್ಚು ವಿಶ್ವಾಸವಿಟ್ಟಿದ್ದಾರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಸೋ ಮೂರನೇ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸ್ಥಿರವಾಗಿ ಆಡುವಂತೆ ಸೂಚನೆ ನೀಡಬೇಕು ಮತ್ತು ಯುವ ಆಲ್‌ರೌಂಡರ್‌ಗಳು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವ ಜೊತೆಗೆ ಜೊತೆಯಾಟಕ್ಕೂ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಬೇಕು. ಹಾಗಾದರೆ ಮಾತ್ರ ರನ್ ಗಳಿಸೋಕೆ ಸಾದ್ಯ. ಮತ್ತೆ ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡಿದ್ರೆ ಮೂರನೇ ಪಂದ್ಯದಲ್ಲೂ ಹೊಡೆತ ಬೀಳೋ ಸಾಧ್ಯತೆ ಇದೆ.

ಫೈನಲಿ ಮೂರನೇ ಪಂದ್ಯಕ್ಕೆ ಓಪನರ್ಸ್ ಆಗಿ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಕಣಕ್ಕಿಳಿಯೋದು ಕನ್ಫರ್ಮ್. ಹಾಗೇ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯೇ ಮುಂದುವರಿಯಲಿದ್ದಾರೆ. ನಾಲ್ಕವೇ ಕ್ರಮಾಂಕದಲ್ಲಿ ಮತ್ತೆ ಶ್ರೇಯಸ್ ಅಯ್ಯರ್​ಗೆ ಚಾನ್ಸ್ ಸಿಗಲಿದೆ. ಆದ್ರೆ ಕೆ.ಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ ಎಂಟ್ರಿ ಆಗಬಹುದು. ಶಿವಂ ದುಬೆ ಬದಲಿಗೆ ರಿಯಾನ್ ಪರಾಗ್ ಇನ್ ಆಗಬಹುದು. ಉಳಿದಂತೆ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಆಡುವ ಹನ್ನೊಂದರ ಬಳಗದಲ್ಲಿ ಉಳಿಯೋ ಸಾಧ್ಯತೆ ಇದೆ. ಆದ್ರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೋಚ್ ಗೌತಮ್ ಮತ್ತೆ ಪ್ರಯೋಗಕ್ಕೆ ಮುಂದಾಗ್ತಾರಾ ಅನ್ನೋ ಪ್ರಶ್ನೆಯೂ ಕಾಡ್ತಿದೆ.

Shwetha M

Leave a Reply

Your email address will not be published. Required fields are marked *