ಗೆಲ್ಲೋ ಮ್ಯಾಚ್ ಬಿಟ್ಟು ಕೆಟ್ಟ ಭಾರತ – 2ನೇ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ ಔಟ್?
IND Vs SL.. ಪ್ಲೇಯಿಂಗ್ 11 ಹೇಗಿದೆ?
ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಬಿಗ್ ಟ್ವಿಸ್ಟ್ ನಲ್ಲಿ ಅಂತ್ಯ ಕಂಡಿತ್ತು. ಆರಂಭದಿಂದಲೂ ಕೊನೇವರೆಗೂ ರೋಚಕತೆಯಿಂದ ಕೂಡಿದ್ದ ಮ್ಯಾಚ್ ಟೈ ಆಗಿತ್ತು. ಇದೀಗ ಭಾನುವಾರ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಉಭಯ ತಂಡಗಳೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಅದ್ರಲ್ಲೂ ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇರೋದ್ರಿಂದ ರೋಹಿತ್ ಪಡೆ ಮೇಲೆ ತುಂಬಾನೇ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹೀಗಾಗಿ ಎರಡನೇ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಬದಲಾವಣೆಗಳಾಗೋ ಸಾಧ್ಯತೆ ಇದೆ. ಅಷ್ಟಕ್ಕೂ ಭಾನುವಾರದ ಪಂದ್ಯ ಭಾರತಕ್ಕೆ ಎಷ್ಟು ಮಹತ್ವ? ಟೀಂ ಇಂಡಿಯಾ ಗೆದ್ರೆ ಬರೆಯೋ ವಿಶ್ವದಾಖಲೆ ಏನು? ಪ್ಲೇಯಿಂಗ್ 11ನಲ್ಲಿ ಯಾರಿಗೆ ಕೊಕ್ ಕೊಡಲಾಗುತ್ತೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 2 ಸಲ ತರುಣ್ ಸೋನಲ್ ವಿವಾಹ – ಗೆಳೆಯನ ಮದುವೆಗೆ ದರ್ಶನ್ ಬರ್ತಾರಾ?
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಸರಣಿ ಟೈ ಆಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಗೆಲ್ಲಬೇಕೆಂದರೆ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಎರಡನೇ ಪಂದ್ಯವನ್ನ ಹೇಗಾದ್ರೂ ಮಾಡಿ ವಿನ್ ಆಗ್ಲೇ ಬೇಕು ಅಂತಾ ಟಾರ್ಗೆಟ್ ಇಟ್ಟುಕೊಂಡಿರೋ ಟೀಂ ಇಂಡಿಯಾ ಅದಕ್ಕಾಗಿ ಭರ್ಜರಿ ರಣತಂತ್ರಗಳನ್ನೂ ರೂಪಿಸುತ್ತಿದೆ. ಮತ್ತೊಂದೆಡೆ ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಆದ ಸೇಡು, ಹಾಗೇ ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಪೈಪೋಟಿ ನೀಡಿದ್ದ ಲಂಕಾ ತಂಡ 2ನೇ ಮ್ಯಾಚ್ನಲ್ಲೇ ಅದೇ ಉತ್ಸಾಹದಿಂದ ಮುನ್ನುಗ್ಗೋ ತವಕದಲ್ಲಿದೆ. ಎರಡನೇ ಪಂದ್ಯ ಕೂಡ ಕೊಲಂಬೋದ ಆರ್.ಪ್ರೇಮದಾಸ ಸ್ಟೇಡಿಯಮ್ನಲ್ಲೇ ನಡೆಯಲಿದೆ. ಭಾನುವಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೆ ಸ್ಲೋ ಪಿಚ್ ಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಲು ಟೀಂ ಇಂಡಿಯಾ ಪ್ಲ್ಯಾನ್ ಮಾಡಿದೆ. ಭಾನುವಾರದ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋದನ್ನೇ ಹೇಳ್ತೇನೆ ನೋಡಿ.
ಸರಣಿ ಕೈ ವಶ ಸವಾಲ್!
ಲಂಕಾ ವಿರುದ್ಧದ ಮೊದಲ ಪಂದ್ಯ ಟೈ ಆಗಿರೋದ್ರಿಂದ ಉಳಿದ 2 ಪಂದ್ಯಗಳನ್ನ ಭಾರತ ಗೆಲ್ಲಲೇಬೇಕಿದೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಪ್ಲೇಯಿಂಗ್ 11 ಬದಲಿಸೋ ನಿರ್ಧಾರ ಮಾಡಿದೆ. ಅದ್ರಂತೆ ಆಲ್ ರೌಂಡರ್ ಶಿವಂ ದುಬೆ ಸ್ಥಾನದಲ್ಲಿ ಸ್ಪಿನ್ ಆಲ್ ರೌಂಡರ್ ರಿಯಾನ್ ಪರಾಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಟೀಂ ಇಂಡಿಯಾ ಪ್ಲ್ಯಾನ್ ಮಾಡಿದೆ. ಜಿಂಬಾಬ್ವೆ ಟೂರ್ನಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 22 ವರ್ಷದ ರಿಯಾನ್ ಪರಾಗ್ ಆರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೊಲಂಬೋ ಪಿಚ್ ಸ್ಪಿನ್ ಗೆ ಅನುಕೂಲ ನೀಡುತ್ತಿರೋ ಕಾರಣಕ್ಕೆ ಮೊದಲ ಏಕದಿನ ಪಂದ್ಯದ ಡೆತ್ ಓವರ್ ಗಳಲ್ಲಿ ಕೂಡ ಲಂಕಾ ಸ್ಪಿನ್ನರ್ ಗಳು ಬೌಲಿಂಗ್ ಮಾಡಿದ್ದರು. ಈ ಕಾರಣದಿಂದಲೇ ದುಬೆ ಸ್ಥಾನದಲ್ಲಿ ಪರಾಗ್ ಅವರನ್ನು ತೆಗೆದುಕೊಳ್ಳಬೇಕು ಎಂದು ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ಉಳಿದಂತೆ ಮೊದಲ ಏಕದಿನ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಎರಡನೇ ಪಂದ್ಯದಲ್ಲಿ ಆಡುವ ಪ್ಲ್ಯಾನ್ ಬಿ ಅನ್ನು ಕೂಡ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಹೊಂದಿದೆ. ಇದು ಮತ್ತೆ ರಿಪೀಟ್ ಆದ್ರೆ ರಿಷಭ್ ಪಂತ್, ಹರ್ಷಿತ್ ರಾಣಾ, ಖಲೀಲ್ ಅಹ್ಮದ್ ಬೆಂಚ್ ಕಾಯೋದು ಫಿಕ್ಸ್ ಆಗುತ್ತೆ. ಅಷ್ಟಕ್ಕೂ ಇಲ್ಲಿ ಸ್ಪಿನ್ ಬಲ ಹೆಚ್ಚಿಸೋದು ಟೀಂ ಇಂಡಿಯಾ ಪ್ಲ್ಯಾನ್. ಅದಕ್ಕೆ ಕಾರಣವೂ ಇದೆ. ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ತಂಡ, 230 ರನ್‌ಗಳನ್ನು ಕಲೆ ಹಾಕಿತ್ತು. ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ಒಳ್ಳೆ ಓಪನಿಂಗ್ ಪಡೆದ್ರೂ ನಂತರ 15ನೇ ಓವರ್‌ನಲ್ಲಿ ಭಾರತ 132ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಅವರ 52 ರನ್‌ಗಳ ನಿರ್ಣಾಯಕ ಜೊತೆಯಾಟದ ಬಲದಿಂದ ಗೆಲುವಿನ ಸನಿಹಕ್ಕೆ ಬಂದಿದ್ರು. ಆದ್ರೆ ಲಂಕನ್ ಸ್ಪಿನ್ನರ್‌ಗಳು ಇವರಿಬ್ಬರನ್ನು ಔಟ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು. 48ನೇ ಓವರ್‌ನಲ್ಲಿ ಭಾರತಕ್ಕೆ ಒಂದು ರನ್ ಬೇಕಿತ್ತು ಹಾಗೂ ಒಂದು ವಿಕೆಟ್ ಕೈಯಲ್ಲಿತ್ತು. ಆದರೆ, ಚರಿತ ಅಸಲಂಕ ಸ್ಪಿನ್ ಮೋಡಿ ಮಾಡಿ ಶಿವಂ ದುಬೆ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಔಟ್ ಮಾಡಿದರು. ಹೀಗಾಗಿ ಸ್ಪಿನ್ ಬಲ ಹೆಚ್ಚಿಸೋ ಯೋಜನೆಯಲ್ಲಿದೆ ಟೀಂ ಇಂಡಿಯಾ. ಸೋ ಫೈನಲಿ ಟೀಂ ಇಂಡಿಯಾದ ಸೆಕೆಂಡ್ ಮ್ಯಾಚ್ಗೆ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹುದು ಅನ್ನೋದನ್ನ ನೋಡೋದಾದ್ರೆ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ರಿಯಾನ್ ಪರಾಗ್ ಅಥವಾ ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೇ ಅರ್ಷದೀಪ್ ಸಿಂಗ್ ಕಣಕ್ಕಿಳಿಯೋ ಸಾಧ್ಯತೆ ಇದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನ ಕೈ ವಶ ಮಾಡಿಕೊಳ್ಳೋದು ಟೀಂ ಇಂಡಿಯಾಗೆ ತುಂಬಾನೇ ಮಹತ್ವದ್ದಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ಗೂ ಕೂಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಟಿ-20 ವಿಶ್ವಕಪ್ ಬಳಿಕ ಜಿಂಬಾಬ್ವೆ ಸರಣಿಯಲ್ಲಿ ಟೀಂ ಇಂಡಿಯಾ ಯಂಗ್ಸ್ಟರ್ಸ್ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬಂದಿದ್ರು. ಹಾಗೇ ಲಂಕಾ ವಿರುದ್ಧದ ಟಿ-20 ಪಂದ್ಯವನ್ನ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ರೋಹಿತ್ ಶರ್ಮಾಗೂ ಕೂಡ ಟೀಂ ಇಂಡಿಯಾದ ವಿನ್ನಿಂಗ್ ಪರೇಡ್ ಕಂಟಿನ್ಯೂ ಮಾಡೋ ಜವಾಬ್ದಾರಿ ಇದೆ. ಅಲ್ದೇ ಶ್ರೀಲಂಕಾ ತಂಡವನ್ನು ಭಾನುವಾರ ಸೋಲಿಸಿದ್ರೆ ಇತಿಹಾಸ ನಿರ್ಮಾಣವಾಗಲಿದೆ. ಒಂದು ತಂಡದ ವಿರುದ್ಧ 100 ಏಕದಿನ ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡವಾಗಿ ಭಾರತ ಸಾಧನೆ ಮಾಡಲಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಭಾನುವಾರದ ಪಂದ್ಯದ ಮೇಲೆ ನೆಟ್ಟಿದೆ.