ಶಮಿ, ಭುವಿಗೆ ಮತ್ತೆ ಚಾನ್ಸ್? RO-KO ನಿವೃತ್ತಿ ಸೀಕ್ರೆಟ್ ರಿವೀಲ್
ಜೆಮಿಮಾ, ಶ್ರೇಯಾಂಕ OUT

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಶನಿವಾರ ಗಾಲೆಯಲ್ಲಿ ಟೀಮ್ ಇಂಡಿಯಾ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಮತ್ತು ಇತರ ತಂಡದ ಸದಸ್ಯರು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದ ವಿಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಇದು ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ ಈ ಮೈಲಿಗಲ್ಲು ತಲುಪಿದ ಮೂರನೇ ರಾಷ್ಟ್ರ ಭಾರತವಾಗಿದ್ದು, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಆಗಸ್ಟ್ 28 ರಿಂದ ದುಬೈನಲ್ಲಿ ನಡೆಯಲಿರುವ 2026ರ ಮಹಿಳಾ ಟಿ20 ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿದ್ದು, ಸ್ಮೃತಿ ಮಂಧನಾ ಉಪನಾಯಕಿ. ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಸೆಪ್ಟೆಂಬರ್ 5 ರಂದು ಪಾಕಿಸ್ತಾನದ ವಿರುದ್ಧ ಪಂದ್ಯ ನಡೆಯಲಿದೆ. ಇನ್ನೂ ಶ್ರೇಯಾಂಕ ಪಾಟೀಲ್ ಗಾಯದಿಂದ ಚೇತರಿಸಿಕೊಂಡಿಲ್ಲದ ಕಾರಣ ಟೀಂನಿಂದ ಹೊರ ಬಿದ್ದಿದ್ದಾರೆ.
ಇದನ್ನೂ ಓದಿ: ವೈಭವ್ ಆಟಕ್ಕೆ ಭಜ್ಜಿ ಬ್ರೇಕ್! – ಅಟ್ಯಾಕ್ ಮಾಡಿದ್ರೆ ವಿಕೆಟ್ ಬೀಳುತ್ತಾ?
ದಿ ಹಂಡ್ರೆಡ್‌ನಲ್ಲಿ ಗಾಯಗೊಂಡ ಜೆಮಿಮಾ ರೊಡ್ರಿಗಸ್ ಮುಂಬರುವ ಮಹಿಳಾ ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ತಂಡವು ಅವರ ಬಲ ಮಂಡಿರಜ್ಜು ಗಾಯ ಗಂಭೀರವೆಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಜೆಮಿಮಾ ಬದಲಿಗೆ ಪ್ರತೀಕಾ ರಾವಲ್ ಅವರನ್ನು ಏಷ್ಯಾಕಪ್‌ಗಾಗಿ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಅವಕಾಶ ಪಡೆಯಲು ಅರ್ಹರಿದ್ದಾರೆಂದು ನವದೀಪ್ ಸೈನಿ ಹೇಳಿದ್ದಾರೆ. ಆಯ್ಕೆಗಾರರು ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಆಟಗಾರನಾಗಿ ನೋಡಿದರೆ, ಮೊಹಮ್ಮದ್ ಶಮಿ ಅಥವಾ ಭುವನೇಶ್ವರ್ ಕುಮಾರ್ ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ನದೀಪ್ ಸೈನಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಅನ್ನೋ ಬಗ್ಗೆ ಆರ್.ಅಶ್ವಿನ್ ಮಾತನಾಡಿದ್ದಾರೆ. ವಿರಾಟ್ ಈಗಾಗಲೇ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಹೀಗಾಗಿ ವಿರಾಟ್ ಕ್ರಿಕೆಟ್‌ನಿಂದ ದೀರ್ಘಕಾಲದ ವಿರಾಮ ತೆಗೆದುಕೊಳ್ಳಬಹುದು. ಆದ್ರೆ ರೋಹಿತ್ ಶರ್ಮಾ ಅವರು ಭವಿಷ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಯಾವುದಾದರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಜಾಮೀನು ಅರ್ಜಿ ಚಿನ್ಸುರಾ ನ್ಯಾಯಾಲಯದಲ್ಲಿ ಮತ್ತೊಮ್ಮೆ ತಿರಸ್ಕೃತಗೊಂಡಿದೆ. ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪೊರೆಲ್, ಈಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಮದುವೆಯ ಭರವಸೆ ನೀಡಿ ಲೈಂಗಿಕ ಸಂಬಂಧ ಹಾಗೂ ಅದನ್ನು ರೆಕಾರ್ಡ್ ಮಾಡಿದ ಆರೋಪ ಅವರ ಮೇಲಿದೆ. ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಬಂಧಿಸಲಾಗಿತ್ತು.
ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಜೀವ ಬೆದರಿಕೆ ಹಾಕಿದರ ಬಗ್ಗೆ ಮೊದಲ ಬಾರಿಗೆ ಗಂಗೊಲಿ ಮಾತನಾಡಿದ್ದಾರೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಪ್ರಕರಣಗಳು ಮೊದಲೂ ನಡೆದಿವೆ. ಕಾಲಕ್ರಮೇಣ ಎಲ್ಲವೂ ಸರಿಯಾಗಿದೆ. ಈ ಬಾರಿಯೂ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತದೆ. ಸಾಕಷ್ಟು ಭದ್ರತೆ ಇದೆ ಎಂದು ಹೇಳಿದ್ದಾರೆ.
ಡಾರ್ವಿನ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಹಿನ್ನಡೆ ಅನುಭವಿಸುತ್ತಿರುವ ಆಸ್ಟ್ರೇಲಿಯಾ ತಂಡದ ಬೌಲರ್ ಮಿಚೆಲ್ ಸ್ಟಾರ್ಕ್, 2ನೇ ದಿನದಾಟದ ವೇಳೆ ಬಾಂಗ್ಲಾ ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ ಜೊತೆ ಪಿಚ್‌ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಓಡುವಾಗ ಸಂರಕ್ಷಿತ ಪ್ರದೇಶಕ್ಕೆ ಬಂದ ಮೆಹಿದಿ ವಿರುದ್ಧ ರೇಗಾಡಿದ ಸ್ಟಾರ್ಕ್, “ನೀವೀಗ ಬಾಂಗ್ಲಾದೇಶದಲ್ಲಿಲ್ಲ, ನೆನಪಿರಲಿ” ಎಂದು ಕೆಣಕಿದ್ದಾರೆ.
ಶ್ರೀಲಂಕಾದಲ್ಲಿ ಕ್ರಿಕೆಟ್ ಕೋಚ್ ಸುಮಿತ್ ಫರ್ನಾಂಡೋ ದುರಂತ ಅಂತ್ಯ ಕಂಡಿದ್ದಾರೆ. ಆಟಗಾರರ ನಡುವೆ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದಾಗ 17 ವರ್ಷದ ಯುವಕನ ಹಲ್ಲೆಯಿಂದ ಅವರು ಸಾವನ್ನಪ್ಪಿದ್ದಾರೆ. ಕುಸಲ್ ಮೆಂಡಿಸ್ ಅವರ ಮಾಜಿ ಕೋಚ್ ಆಗಿದ್ದ ಫರ್ನಾಂಡೋ ಶಾಲಾ ಕ್ರಿಕೆಟ್‌ನಲ್ಲಿ ಹೆಸರುವಾಸಿಯಾಗಿದ್ದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಆಘಾತ ಮೂಡಿಸಿದೆ.

ನೋಡಿರಿ

