IND Vs SA ವಿಶ್ವಕಪ್ ವಾರ್ – ಚೊಚ್ಚಲ ಟ್ರೋಫಿ ಯಾರ ಮುಡಿಗೆ?
ಭಾರತಕ್ಕಿರೋ ಅಡ್ವಾಂಟೇಜ್ ಏನು?

IND Vs SA ವಿಶ್ವಕಪ್ ವಾರ್ – ಚೊಚ್ಚಲ ಟ್ರೋಫಿ ಯಾರ ಮುಡಿಗೆ?ಭಾರತಕ್ಕಿರೋ ಅಡ್ವಾಂಟೇಜ್ ಏನು?

52 ವರ್ಷಗಳ ಮಹಾತಪಸ್ಸು. ಗಗನಕುಸುಮದಂತೆಯೇ ಇರುವ ವಿಶ್ವಕಪ್ಪು. ಮೂರು ಸಲ ಫಿನಾಲೆ ತಲುಪಿದ್ರೂ ನನಸಾಗದ ಕನಸು. ಆದ್ರೆ ಈ ಸಲ ಶತಾಯಗತಾಯ ಗೆಲ್ಲಲೇಬೇಕಿದೆ. 5 ದಶಕಗಳಿಂದ ಮರೀಚಿಕೆಯಾಗಿರೋ ಐಸಿಸಿ ವುಮೆನ್ಸ್ ವಿಶ್ವಕಪ್​ನ ಎತ್ತಿಹಿಡಿಯಲೇಬೇಕಿದೆ. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಬಗ್ಗುಬಡಿದು ಫಿನಾಲೆಗೆ ಲಗ್ಗೆ ಇಟ್ಟಿರೋ ಸಿಂಹಿಣಿಯರು ಟ್ರೋಫಿ ಗೆಲ್ಲೋಕೆ ಇನ್ನೊಂದೇ ಹೆಜ್ಜೆ ಬಾಕಿ. ಮತ್ತೊಂದ್ಕಡೆ ಚೊಚ್ಚಲ ಬಾರಿಗೆ ಫೈನಲ್​ಗೆ ಅರ್ಹತೆ ಪಡೆದಿರೋ ಸೌತ್ ಆಫ್ರಿಕಾ ಕೂಡ ಚಾಂಪಿಯನ್ ಪಟ್ಟದ ಆಸೆಯಲ್ಲಿದೆ.

ಇದನ್ನೂ ಓದಿ : ಚೇರಿಸಿಕೊಂಡ ಶ್ರೇಯಸ್ ಅಯ್ಯರ್ – ಸಿಡ್ನಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್

2025ರ ಐಸಿಸಿ ವುಮೆನ್ಸ್ ಕಪ್ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್​ನಲ್ಲಿದೆ. ಭಾನುವಾರ ಹೊಸ ಚಾಂಪಿಯನ್​ನ ಉದಯದೊಂದಿಗೆ 13ನೇ ಆವೃತ್ತಿಯ ಟೂರ್ನಿಗೆ ತೆರೆ ಬೀಳಲಿದೆ. ಈ ಸಲ ಯಾರೇ ಗೆದ್ರೂ ಕೂಡ ಅದು ಚರಿತ್ರೆಯೇ. ನವೆಂಬರ್ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ  ಐತಿಹಾಸಿಕ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ವುಮೆನ್ಸ್ ಟೀಂ ಎದುರು ಬದುರಾಗಲಿವೆ.  ಇಲ್ಲಿ ಯಾರೇ ಗೆದ್ರೂ ಕೂಡ ಚರಿತ್ರೆಯೇ.

2025ರ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಇತಿಹಾಸ!

ಇನ್ನು ವುಮೆನ್ಸ್ ವಿಶ್ವಕಪ್​ನ ಇತಿಹಾಸವನ್ನ ಕೆದಕಿದ್ರೆ ಅಲ್ಲಿ ಆಸ್ಟ್ರೇಲಿಯಾದ ಪಾರುಪತ್ಯವೇ ಇದೆ. 1973 ರಲ್ಲಿ ಪ್ರಾರಂಭವಾದ ಈ ಟೂರ್ನಿಯಲ್ಲಿ ಇದು 13ನೇ ಆವತ್ತಿ. ಇನ್ನು ಟೂರ್ನಿ ಆರಂಭವಾದ ವರ್ಷ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಉಳಿದಂತೆ ಆಸ್ಟ್ರೇಲಿಯಾ ಬರೋಬ್ಬರಿ 7 ಬಾರಿ ಪ್ರಶಸ್ತಿ ಗೆದ್ದಿದೆ. ಇನ್ನು ಇಂಗ್ಲೆಂಡ್ 4 ಬಾರಿ ಮತ್ತು ನ್ಯೂಜಿಲೆಂಡ್ ಟೀಂ ಒಂದು ಸಲ ಟ್ರೋಫಿ ಮುಡಿಗೇರಿಸಿಕೊಂಡಿದೆ. ಬಟ್ ಭಾರತ ಒಮ್ಮೆಯೂ ಗೆಲ್ಲೋಕೆ ಸಾಧ್ಯವಾಗಿಲ್ಲ. 2 ಆವೃತ್ತಿಗಳಲ್ಲಿ ಫೈನಲ್ ಪ್ರವೇಶ ಪಡೆದಿದ್ರೂ ಕೂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಕೊಳ್ಬೇಕಾಗಿತ್ತು. ಇದೀಗ ಮೂರನೇ ಬಾರಿಗೆ ಫೈನಲ್​ಗೆ ಅರ್ಹತೆ ಪಡೆದಿದ್ದು ಟ್ರೋಫಿಯನ್ನೂ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದೆ. ಇನ್ನು ಸೌತ್ ಆಫ್ರಿಕಾ ಕೂಡ ಚೊಚ್ಚಲ ಕಪ್ ಕನಸಿನಲ್ಲಿದೆ. ಜೊತೆಗೆ ಗ್ರೂಪ್ ಸ್ಟೇಜ್ ನಲ್ಲಿ ಭಾರತವನ್ನ ಸೋಲಿಸಿರೋ ಕಾನ್ಫಿಡೆನ್ಸ್​ನಲ್ಲಿದೆ.

ಗ್ರೂಪ್ ಸ್ಟೇಜ್ ನಲ್ಲಿ ಭಾರತವನ್ನ ಸೋಲಿಸಿದೆ ಸೌತ್ ಆಫ್ರಿಕಾ!

ಸೆಮಿಫೈನಲ್​ನಲ್ಲಿ ಭಾರತ ಆಸ್ಟ್ರೇಲಿಯಾಗೆ ಎಂಥಾ ಏಟು ಕೊಟ್ಟಿತ್ತೋ ಈಗ ಫೈನಲ್​ನಲ್ಲಿ ಅದೇ ಕೆಲಸ ಆಗ್ಬೇಕಿದೆ. ಅಂದ್ರೆ ವುಮೆನ್ಸ್ ವಿಶ್ವಕಪ್​ನ ಗ್ರೂಪ್ ಸ್ಟೇಜ್​ನಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನ ಸೋಲಿಸಿತ್ತು. ಸೆಮೀಸ್​ನಲ್ಲಿ ಬಿಗ್ ಟಾರ್ಗೆಟ್ ನೀಡಿ ಗೆಲ್ಲೋ ಲೆಕ್ಕಾಚಾರದಲ್ಲಿತ್ತು. ಆದ್ರೆ ಎದೆಗುಂದದ ಟೀಂ ಇಂಡಿಯಾ ಐತಿಹಾಸಿಕ ರನ್​ಗಳನ್ನ ಚೇಸ್ ಮಾಡಿ ಗೆದ್ದಿತ್ತು. ಜೆಮಿಮಾ ರೋಡ್ರಿಗಸ್ ಅವ್ರ ಅದ್ಭುತ ಶತಕದ ನೇರವಿನಿಂದ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಇದೀಗ ಅದೇ ಕೆಲಸವನ್ನ ಫೈನಲ್​ನಲ್ಲೂ ಮಾಡ್ಬೇಕಿದೆ. ಯಾಕಂದ್ರೆ ಆಲ್ರೆಡಿ ಗ್ರೂಪ್ ಸ್ಟೇಜ್​ನಲ್ಲಿ  ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಂದು ಪಂದ್ಯವನ್ನು ಆಡಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 49.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತ್ತು. ಗೆಲ್ಲಲು 252 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.5 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆ ಬೀರಿತು. ಆ ಸೋಲಿನ ಸೇಡಿನ ಜೊತೆಗೆ ಟ್ರೋಫಿ ಗೆಲ್ಬೇಕು ಅಂದ್ರೆ ಭಾರತ ಫಿನಾಲೆಯಲ್ಲಿ ಹರಿಣಗಳ ಪಡೆಯನ್ನ ಬಗ್ಗುಬಡಿಯಲೇಬೇಕಿದೆ. ಇನ್ನು ಇದೆಲ್ಲದ್ರ ನಡುವೆ ಫೈನಲ್ ಪಂದ್ಯಕ್ಕೂ ರೇನ್ ಅಲರ್ಟ್ ಇದೆ. ಇದೇ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಮಳೆಯಿಂದ ಪಂದ್ಯ ರದ್ದಾದ್ರೆ ಯಾರು ಚಾಂಪಿಯನ್?

ನೀವೆಲ್ಲಾ ನೋಡಿದ ಹಾಗೇ ವುಮೆನ್ಸ್ ವಿಶ್ವಕಪ್​ನ ಸಾಕಷ್ಟು ಪಂದ್ಯಗಳು ಮಳೆಯಿಂದಾಗಿ ವಾಶ್ ಔಟ್ ಆಗಿದ್ವು. ಸೋ ಫೈನಲ್ ಪಂದ್ಯದಲ್ಲಿ ಮಳೆ ಬಂದು ಪಂದ್ಯ ಕ್ಯಾನ್ಸಲ್ ಆದ್ರೆ ಚಾಂಪಿಯನ್ ಯಾರಾಗ್ತಾರೆ ಅಂತಾ ನಿಮ್ಮಲ್ಲಿ ಪ್ರಶ್ನೆಗಳಿರಬಹುದು. ಅದಕ್ಕೆ ಉತ್ತರ ಕೊಡ್ತೇನೆ. ಸೆಮಿಫೈನಲ್‌ನಲ್ಲಿ ಮಳೆಯಿಂದ ಪಂದ್ಯ ರದ್ದಾಗಿದ್ರೆ ಪಾಯಿಂಟ್ ಟೇಬಲ್ ಆಧಾರದ ಮೇಲೆ ಫೈನಲ್ ಪಂದ್ಯಕ್ಕೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಫೈನಲ್ ಪಂದ್ಯಕ್ಕೆ ಈ ರೂಲ್ಸ್ ಅಪ್ಲೈ ಆಗಲ್ಲ. ಭಾನುವಾರವೇ ಮ್ಯಾಚ್​ ಮುಗಿಸೋಕೆ ಎಲ್ಲಾ ರೀತಿ ಪ್ರಯತ್ನ ಪಡ್ತಾರೆ. ಅಂದ್ರೆ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ ಟಾರ್ಗೆಟ್ ಫಿಕ್ಸ್ ಮಾಡ್ತಾರೆ. ಅಕಸ್ಮಾತ್ ಮಳೆ ನಿಲ್ಲಲೇ ಇಲ್ಲ ಪಂದ್ಯ ನಡೆಸೋಕೆ ಸಾಧ್ಯನೇ ಇಲ್ಲ ಅಂತಾದ್ರೆ ಮರುದಿನ ಅಂದ್ರೆ ನವೆಂಬರ್ 3ಕ್ಕೆ ಪಂದ್ಯವನ್ನ ನಿಗದಿ ಮಾಡ್ಲಾಗುತ್ತೆ.  ಮೀಸಲು ದಿನವೂ ಪಂದ್ಯ ನಡೆಯದೇ ಇದ್ರೆ ಎರಡೂ ತಂಡಗಳು ವಿಜೇತರು ಅಂತಾ ಘೋಷಣೆ ಮಾಡಲಾಗಿತ್ತೆ. ಅಂದ್ರೆ ಜಂಟಿ ವಿಜೇತರಾಗಿ ಹೊರ ಹೋಗ್ತಾರೆ.

ಭಾರತಕ್ಕೆ ಪ್ಲಸ್ & ಮೈನಸ್!
  1. ತವರಿನಲ್ಲೇ ಪಂದ್ಯಗಳನ್ನ ಆಡ್ತಿರೋದು ಪ್ಲಸ್
  2. ಆಸೀಸ್ ವಿರುದ್ಧ ಐತಿಹಾಸಿಕ ಚೇಸಿಂಗ್ ಗೆಲುವು
  3. ಮೂರನೇ ಬಾರಿಗೆ ಫೈನಲ್ ಪ್ರವೇಶ
  4. ಗುಂಪು ಹಂತದಲ್ಲಿ ಆಫ್ರಿಕಾ ಹೆಚ್ಚು ಗೆಲುವು
  5. ಕಳಪೆ ಫೀಲ್ಡಿಂಗ್ & ಕ್ಯಾಚ್ ಡ್ರಾಪ್

ಭಾರತ ಈ ಹಿಂದಿನ ಪಂದ್ಯಗಳಲ್ಲಿ ಸಾಕಷ್ಟು ಮಿಸ್ಟೇಕ್ಸ್ ಮಾಡಿದೆ. ಆದ್ರೆ ಫೈನಲ್ ಮ್ಯಾಚಲ್ಲಿ ಅದು ರಿಪೀಟ್ ಆಗ್ಬಾರ್ದು. ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34 ಬಾರಿ ಮುಖಾಮುಖಿಯಾಗಿವೆ. ಭಾರತೀಯರು 20 ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದರೆ, ದಕ್ಷಿಣ ಆಫ್ರಿಕಾ 13 ಮುಖಾಮುಖಿಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

Shantha Kumari