IND Vs SA.. ಯಾರು ಚಾಂಪಿಯನ್? – ಚೋಕರ್ಸ್ ​ಗೆ HITಮ್ಯಾನ್ ಚೋಕ್
ಟ್ರೋಫಿಗಾಗಿ ವಿರಾಟ ರೂಪ ಪಕ್ಕಾ?

IND Vs SA.. ಯಾರು ಚಾಂಪಿಯನ್? – ಚೋಕರ್ಸ್ ​ಗೆ HITಮ್ಯಾನ್ ಚೋಕ್ಟ್ರೋಫಿಗಾಗಿ ವಿರಾಟ ರೂಪ ಪಕ್ಕಾ?

ಟಿ-20 ವಿಶ್ವಕಪ್​ನ ಐತಿಹಾಸಿಕ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಶನಿವಾರ ರಾತ್ರಿ ನಡೆಯಲಿರುವ ಹೈವೋಲ್ಟೇಜ್ ಮ್ಯಾಚ್​ನಲ್ಲಿ ಚುಟುಕು ಮಹಾಯುದ್ಧದ ಚಾಂಪಿಯನ್ ಪಟ್ಟಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. 2007ರ ಚಾಂಪಿಯನ್ ಟೀಮ್ ಇಂಡಿಯಾ ಹಾಗೂ ಚೊಚ್ಚಲ ಐಸಿಸಿ ಟ್ರೋಫಿ ಕನಸಿನಲ್ಲಿರುವ ಸೌತ್ ಆಫ್ರಿಕಾ ತಂಡಗಳು, ಹಾಲಿ ವಿಶ್ವಕಪ್​ನಲ್ಲಿ ಅಜೇಯವಾಗಿ ಅಂತಿಮ ಹಂತ ಸೇರಿವೆ. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಹೊಸ ಭಾಷ್ಯ ಬರೆಯಲು ಉಳಿದಿರೋದು ಜಸ್ಟ್​ ಇನ್ನೊಂದೆ ಮ್ಯಾಚ್. ಇಂದು ನಡೆಯುವ ಫೈನಲ್​​​​ ಫೈಟ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಡಲಿದ್ದು, ಇಡೀ ವಿಶ್ವದ ಚಿತ್ತ ಮದಗಜಗಳ ಕಾದಾಟದತ್ತ ನೆಟ್ಟಿದೆ. ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಹೇಗಿದೆ? ರೋಹಿತ್ ಶರ್ಮಾ ಇಡೀ ತಂಡಕ್ಕೆ ಸ್ಪೂರ್ತಿಯಾಗಿದ್ದೇಗೆ? ಸೌತ್ ಆಫ್ರಿಕಾದ ಸ್ಟ್ರೆಂತ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಧೋನಿ ಡೈನಾಮಿಕ್ ಲುಕ್ – ಮಾಹಿ ಹೇರ್ ಸ್ಟೈಲ್ ಮತ್ತೆ ಚೇಂಜ್

ಟಿ-20 ವಿಶ್ವಕಪ್ ಆರಂಭವಾದ ವರ್ಷವೇ ಚಾಂಪಿಯನ್ ಆಗಿದ್ದ ಭಾರತ ಒಂದ್ಕಡೆ. 2007ರಿಂದ 2022ರ ತನಕ ಟೂರ್ನಿ ಆರಂಭವಾದಾಗಿನಿಂದಲೂ ಒಮ್ಮೆಯೂ ಫೈನಲ್​​ಗೇರದ ದಕ್ಷಿಣ ಆಫ್ರಿಕಾ ಮತ್ತೊಂದ್ಕಡೆ. ಏಕದಿನ ಹಾಗೂ ಟಿ20 ಐಸಿಸಿ ವಿಶ್ವಕಪ್​​ಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸೌತ್ ಆಫ್ರಿಕಾ ಫೈನಲ್ ಪ್ರವೇಶಿಸಿದೆ. ಸೌತ್ ಆಫ್ರಿಕಾ ಇದುವರೆಗಿನ ಸಾಧನೆ ಸೆಮಿಫೈನಲ್​ ಪ್ರವೇಶಿಸಿದ್ದಷ್ಟೆ ಆಗಿತ್ತು. ಹೀಗಾಗಿ, ಚೊಚ್ಚಲ ವಿಶ್ವಕಪ್​ ಗೆಲ್ಲುವ ಕನಸಿನಲ್ಲಿದೆ ಹರಿಣಗಳ ಪಡೆ ಭರ್ಜರಿ ಕಸರತ್ತು ನಡೆಸುತ್ತಿದೆ. ಟಿ-20 ವಿಶ್ವಕಪ್​ನಲ್ಲಿ 17 ವರ್ಷಗಳ ಬಳಿಕ ಟ್ರೋಫಿ ಗೆಲ್ಲೋ ತವಕದಲ್ಲಿ ರೋಹಿತ್ ಶರ್ಮಾ ಪಡೆ ಇದೆ. ಉಭಯ ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರರಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಆಡಿರುವ 7 ಪಂದ್ಯಗಳಲ್ಲೂ ವಿಜಯ ಸಾಧಿಸಿದರೆ, ಅತ್ತ ಸೌತ್ ಆಫ್ರಿಕಾ 8 ಮ್ಯಾಚ್​ಗಳನ್ನು ಗೆದ್ದು ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಹೀಗಾಗಿ ಫೈನಲ್​ನಲ್ಲಿ ಭರ್ಜರಿ ಪೈಪೋಟಿ ಇರೋದ್ರಲ್ಲಿ ಡೌಟೇ ಇಲ್ಲ.

ಲೀಗ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್​ಎ ವಿರುದ್ಧ ಜಯಿಸಿದ ಭಾರತ ಸೂಪರ್​-8 ಸುತ್ತಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಎದುರು ಗೆದ್ದಿತ್ತು. ಇದರೊಂದಿಗೆ ಸೆಮೀಸ್​​​​ ಹಂತಕ್ಕೆ ಪ್ರವೇಶಿಸಿತು. ಇಲ್ಲೂ ಕೂಡ ಇಂಗ್ಲೆಂಡ್ ತಂಡವನ್ನೂ ಮಣಿಸಿ ಫೈನಲ್​ಗೇರಿತು. ಕೆನಡಾ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಇತ್ತ ಸೌತ್ ಆಫ್ರಿಕಾ ಕೂಡ ಗುಂಪು ಹಂತದಲ್ಲಿ ಶ್ರೀಲಂಕಾ, ನೆದರ್ಲೆಂಡ್ಸ್, ಬಾಂಗ್ಲಾದೇಶ, ನೇಪಾಳ ಎದುರು ಜಯಿಸಿತ್ತು. ಹಾಗೇ ಸೂಪರ್​-8 ಹಂತದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಎದುರು ಜಯದ ನಗೆ ಬೀರಿತು. ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ಗೆದ್ದ ನಂತರ ಚೊಚ್ಚಲ ಫೈನಲ್​ ಪ್ರವೇಶಿಸಿತು. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೂ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯಗಳಲ್ಲಿ ಗೆದ್ರೆ ಸೌತ್ ಆಫ್ರಿಕಾ 11 ಸಲ ಜಯ ಸಾಧಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ.  ಇನ್ನು ಟಿ20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಒಟ್ಟು 6 ಬಾರಿ ಪರಸ್ಪರ ಕಣಕ್ಕಿಳಿದಿದೆ. ಈ ವೇಳೆ ಟೀಮ್ ಇಂಡಿಯಾ 4 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೌತ್ ಆಫ್ರಿಕಾ ಗೆದ್ದಿರುವುದು ಕೇವಲ 2 ಬಾರಿ ಮಾತ್ರ.

ಇನ್ನು ಟೀಂ ಇಂಡಿಯಾ ಆಟಗಾರರ ಪ್ರದರ್ಶನ ತುಂಬಾನೇ ಚೆನ್ನಾಗಿದೆ. ಬ್ಯಾಟರ್ಸ್​ಗಿಂತ ಬೌಲರ್ಸ್ ಬೆಂಕಿ ಚೆಂಡುಗಳಂತೆ ಎದುರಾಳಿಗಳನ್ನ ಬೇಟೆಯಾಡ್ತಿದ್ದಾರೆ. ಇಲ್ಲಿಯವರೆಗಿನ ಭಾರತ ತಂಡದ ಅತ್ಯದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಎಕ್ಸ್​ಫಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್​ನಿಂದ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ. ಆದ್ರೆ ವಿರಾಟ್ ಕೊಹ್ಲಿ ಮತ್ತು ಶಿವಂ ದುಬೆ ಮಾತ್ರ ಕಳಪೆ ಫಾರ್ಮ್​​ನಿಂದ ಹೊರಬರದೆ ಇರೋದು ಟೀಂ ಇಂಡಿಯಾದ ಆತಂಕ ಹೆಚ್ಚಿಸಿದೆ. ಇನ್ನು ಕ್ಯಾಪ್ಟನ್ ರೋಹಿತ್​ ಶರ್ಮಾ ಅಂತೂ ಭರ್ಜರಿ ಫಾರ್ಮ್​ನಲ್ಲಿದ್ದು ತಂಡದ ಬಲ ಹೆಚ್ಚಿಸಿದ್ದಾರೆ. ಟೀಂ ಇಂಡಿಯಾದ ಈ ಗ್ರೇಟ್ ಸಕ್ಸಸ್​ ಹಿಂದಿನ ರಿಯಲ್ ಮಾಸ್ಟರ್​ ಮೈಂಡ್​​ ಕ್ಯಾಪ್ಟನ್ ರೋಹಿತ್ ಶರ್ಮಾ. ಆನ್​​​ ಆ್ಯಂಡ್ ಆಫ್ ದಿ ಫೀಲ್ಡ್​ನಲ್ಲಿ ಹಿಟ್​ಮ್ಯಾನ್ ಮಾಡ್ತಿರೋ ಮ್ಯಾಜಿಕ್​​​ ಭಾರತ ತಂಡಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ ಟ್ರೋಫಿ ಗೆಲ್ಲುವ ಮಹಾದಾಸೆಯನ್ನ ಚಿಗುರಿಸಿದೆ. ಈ ವಿಶ್ವಕಪ್​​ನಲ್ಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ನೆಕ್ಸ್ಟ್​​ ಲೆವೆಲ್​​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ನಿರ್ಭೀತಿ ಆಟದ ಜೊತೆ ಅಗ್ರೆಸ್ಸಿವ್​ ಹಾಗೂ ಅಟ್ಯಾಕಿಂಗ್ ಬ್ಯಾಟಿಂಗ್ ನಡೆಸ್ತಿದ್ದಾರೆ. ಆ ಮೂಲಕ ಆರಂಭದಲ್ಲೆ ಎದುರಾಳಿ ಬೌಲರ್​ಗಳ ಮೇಲೆ ಒತ್ತಡ ಹೇರಿ ತಂಡಕ್ಕೆ ಗೆಲುವು ತಂದುಕೊಡ್ತಿದ್ದಾರೆ. ಮೊದಲ ಎಸೆತದಿಂದಲೇ ಅಬ್ಬರಿಸುವ ರೋಹಿತ್​, ಎದುರಾಳಿ ಬೌಲರ್​ಗಳ ಬಲವನ್ನೇ ಬಲ ಅಡಗಿಸಿದ್ದಾರೆ. ರೋಹಿತ್​ರ ಇಂಪ್ರೆಸ್ಸಿವ್​​ ಸ್ಟ್ರೈಕ್​ರೇಟ್​ನಿಂದ ಸಹ ಆಟಗಾರರು ಸ್ಫೋಟಕ ಆಟವಾಡುವಂತೆ ಪ್ರೇರೆಪಿಸಿದೆ. ಸದ್ಯ ಟೂರ್ನಮೆಂಟ್​ನಲ್ಲಿ 248 ರನ್​ ಗಳಿಸಿರೋ ಹಿಟ್​ಮ್ಯಾನ್​​​, ಭಾರತದ ಪರ ಅತ್ಯಧಿಕ ರನ್ ಹೊಡೆದಿದ್ದಾರೆ. ಆ ಮೂಲಕ ಇಡೀ ತಂಡಕ್ಕೆ ಸ್ಫೂರ್ತಿಯಾಗಿದ್ದಾರೆ.

ಐಸಿಸಿ ಟ್ರೋಫಿ ಮೇಲೆ ಕಣ್ಣಿಟ್ಟಿರೋ ಹಿಟ್ ಮ್ಯಾನ್, ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹಾಗೂ ಹೊಸ ತಂತ್ರದೊಂದಿಗೆ ಮೈದಾನಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಕೆರಿಬಿಯನ್ ದೇಶಗಳ ಪಿಚ್‌ಗಳಿಗೆ ಅನುಗುಣವಾಗಿ ಭಾರತ ತಂಡ ಕಣಕ್ಕಿಳಿಯಲಿದೆ. ಭಾರತ 10 ವರ್ಷಗಳಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಭಾರತ ಹಿಂದಿನ ಪಂದ್ಯದ ಆಡುವ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸೋ ಸಾಧ್ಯತೆ ಹೆಚ್ಚಿದೆ. ಆದ್ರೆ ಟೀಮ್​​ನಲ್ಲಿ ಇಬ್ಬರು ಆಟಗಾರರು ತಮ್ಮ ಕಳಪೆ ಫಾರ್ಮ್​ನಿಂದ ಹೊರ ಬರಬೇಕಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಇದುವರೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕೊಹ್ಲಿಗಿಂತ ಭಿನ್ನವಾಗಿ, ರೋಹಿತ್ ಪಂದ್ಯಾವಳಿಯಲ್ಲಿ ನಿರ್ಭಯವಾಗಿ ಮತ್ತು ನಿರರ್ಗಳವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ರೋಹಿತ್ ಬ್ಯಾಟಿಂಗ್​ನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ಕೊಹ್ಲಿ ಬ್ಯಾಟ್ ಕೊನೆ ಪಂದ್ಯದಲ್ಲಾದರೂ ಮಿಂಚಬೇಕಿದೆ. ಇತ್ತ ಆಲ್​ರೌಂಡರ್ ಶಿವಂ ದುಬೆ ಕೂಡ ನಿರೀಕ್ಷಿತ ಪ್ರದರ್ಶನ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಪರಿಣಾಮಕಾರಿ ಇನ್ನಿಂಗ್ಸ್ ಆಡಿದ್ದಾರೆ. ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್ಸ್ ಗ್ರೇಟ್ ಪರ್ಫಾಮೆನ್ಸ್ ನೀಡ್ತಿರೋದ್ರಿಂದ ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಅಷ್ಟೇನು ಟೆನ್ಷನ್ ಇಲ್ಲ.  ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಓಪನರ್ಸ್ ಆದ್ರೆ ನಂತರದಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ತಂಡವನ್ನ ಸೇರಿಕೊಳ್ತಾರೆ.

ಇನ್ನು ಸೌತ್ ಆಫ್ರಿಕಾ ಕೂಡ ಈ ಬಾರಿ ಬಲಿಷ್ಠ ತಂಡವಾಗಿದೆ. ಟೂರ್ನಿಯುದ್ದಕ್ಕೂ ಅಜೇಯವಾಗಿ ಫಿನಾಲೆಗೆ ಲಗ್ಗೆ ಇಟ್ಟಿದ್ದು ಟೈಟಲ್ ಗೆಲ್ಲೋ ವಿಶ್ವಾಸದಲ್ಲಿದ್ದಾರೆ. 32 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಅಜೇಯವಾಗಿ ಫೈನಲ್ ಪ್ರವೇಶಿಸಿರುವವ ಹರಿಣ ಪಡೆಗೆ ಈ ಬಾರಿಯಾದರೂ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.  ಕ್ರಿಕೆಟ್ ಜಗತ್ತಿನಲ್ಲಿ ದಕ್ಷಿಣಾ ಆಫ್ರಿಕಾವನ್ನ ಚೋಕರ್ಸ್ ಎಂದು ಕರೆಯಲಾಗುತ್ತೆ. ಹೀಗಾಗಿ ತನ್ನ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಇನ್ನೊಂದೆ ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಅಷ್ಟಕ್ಕೂ ಹರಿಣಗಳ ಪಡೆಯಲ್ಲ ಚೋಕರ್ಸ್ ಅನ್ನೋಕೆ ಕಾರಣ ಕೂಡ ಇದೆ. ದಕ್ಷಿಣ ಆಫ್ರಿಕಾ ತಂಡ 1992ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ​ ಸೆಮಿಫೈನಲ್​ ಪ್ರವೇಶಿಸಿತ್ತು. ಇನ್ನೇನು ಪಂದ್ಯ ಗೆಲ್ಲುತ್ತದೆ ಎನ್ನುವಷ್ಟರಲ್ಲಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. 13 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು.​ ಮತ್ತೆ ಆಟ ಮುಂದುವರಿದಾಗ ಮೊಟ್ಟ ಮೊದಲ ಬಾರಿಗೆ ಪರಿಚವಾಗಿದ್ದ ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಹರಿಣ ಪಡೆಗೆ 1 ಎಸೆತದಲ್ಲಿ 22 ರನ್​ ಗಳಿಸುವ ಗುರಿ ನೀಡಲಾಯಿತು. ಈ ಪಂದ್ಯ ಸೋತ ಬಳಿಕ 1999ರಲ್ಲಿ ಬರ್ಮಿಂಗ್‌ಹ್ಯಾಮ್​ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್‌ ಐಲೆಟ್‌ ನಲ್ಲಿ 7 ವಿಕೆಟ್‌ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಕ್ಲೆಂಡ್‌ ನಲ್ಲಿ 4 ವಿಕೆಟ್‌ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು. ಆದ್ರೆ ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನ ಮತ್ತು ಅದೃಷ್ಟ ನೋಡ್ತಿದ್ರೆ ಪ್ರಶಸ್ತಿ ಗೆದ್ದು ಚೋಕರ್ಸ್ ಹಣೆಪಟ್ಟಿಯನ್ನು ಕಳಚುವ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಯಾಕಂದ್ರೆ ಪ್ರತಿ ಬಾರಿ ಮಳೆಯಿಂದ ಹಿನ್ನಡೆ ಅನುಭವಿಸುವ ದಕ್ಷಿಣ ಆಫ್ರಿಕಾ ಈ ಬಾರಿ ವರದಾನವಾಗಿಯೇ ಪರಿಣಮಿಸಿದೆ. ಜತೆಗೆ ಸೋಲುವ ಪಂದ್ಯವನ್ನು ಕೂಡ ಅಚ್ಚರಿ ಎಂಬಂತೆ 1 ರನ್​ನಿಂದ ಗೆದ್ದ ನಿದರ್ಶನ ಕೂಡ ಇದೆ. ಹೀಗಾಗಿ ಐಡೆನ್​ ಮಾರ್ಕ್ರಮ್​ ಐತಿಹಾಸಿಕ ಕಪ್​ ಎತ್ತಿ ಹಿಡಿಯುತ್ತಾರೆ ಎಂಬ ಚರ್ಚೆಗಳೂ ನಡೀತಿವೆ. ಇನ್ನು ಹರಿಣಗಳ ತಂಡವನ್ನ ನೋಡೋದಾದ್ರೆ ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ಗಳು​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರಿಲ್ಲ. ಆದ್ರೆ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಚಿರತೆಗಳಂತೆ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಸೌತ್ ಆಫ್ರಿಕಾಗೆ ವೇಗದ ಬೌಲರ್​ಗಳಾದ ಕಗಿಸೋ ರಬಾಡ, ಮಾರ್ಕೊ ಜಾನ್ಸನ್, ಆನ್ರಿಚ್ ನೋಕಿಯಾ ಮ್ಯಾಚ್ ವಿನ್ನರ್ಸ್ ಆಗ್ತಿದ್ದಾರೆ.

ಮತ್ತೊಂದೆಡೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯಗಳಿಗೆ ಮಳೆ ಕಾಟ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಭಾರತದ ಸರಮದಲ್ಲೂ ಮಳೆಯಿಂದಾಗಿ ಪಂದ್ಯ ಡಿಲೇ ಆಗಿತ್ತು. ಸೋ ಬಾರ್ಬಡೋಸ್​ನಲ್ಲಿ ನಡೆಯಲಿರುವ ಫಿನಾಲೆ ಮ್ಯಾಚ್​ಗೂ ಶೇಕಡಾ 70 ರಷ್ಟು ಮಳೆ ಕಾಡುವ ಮುನ್ಸೂಚನೆ ಇದೆ.  ಹಾಗೇನಾದ್ರೂ ಮಳೆಯಿಂದಾಗಿ ಫೈನಲ್ ಪಂದ್ಯ ನಡೆಯದೇ ಇದ್ರೆ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಜೂನ್ 29 ರಂದು ಮಳೆಯಿಂದಾಗಿ ಪಂದ್ಯ ರದ್ದಾದರೆ ಜೂನ್ 30 ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಗೇ ಫೈನಲ್ ಪಂದ್ಯಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ಕೂಡ ಇರಿಸಲಾಗಿದೆ. ಇದರ ಹೊರತಾಗಿಯೂ, ಮೀಸಲು ದಿನದಂದು ಸಹ ಮಳೆ ಬಂದು ಪಂದ್ಯ ನಡೆಸಲು ಕಂಪ್ಲೀಟ್ ಆಗದೇ ಇದ್ರೆ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ಅಲ್ಲಿಗೆ ಇಬ್ಬರೂ ಕೂಡ ಚಾಂಪಿಯನ್ ಆಗಲಿದ್ದಾರೆ.

ಒಟ್ನಲ್ಲಿ ಚುಟುಕು ಸಮರದ ಐತಿಹಾಸಿಕ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಭಾರತ 2ನೇ ಬಾರಿಗೆ ಟ್ರೋಫಿ ಗೆಲ್ಲೂ ಉತ್ಸಾಹದಲ್ಲಿದೆ. ಇತ್ತು ಸೌತ್ ಆಫ್ರಿಕಾ ಕೂಡ ಭರ್ಜರಿ ಫಾರ್ಮ್​ನಲ್ಲಿದೆ. ಸೋ ಫೈನಲಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

Shwetha M

Leave a Reply

Your email address will not be published. Required fields are marked *