IND Vs PAK ಪಂದ್ಯಗಳು ಬ್ಯಾನ್ – ಚಾಂಪಿಯನ್ಸ್ ಟ್ರೋಫಿಯೇ ಮುಳುವಾಯ್ತಾ?
ಟೂರ್ನಿ ಶಿಫ್ಟ್.. ಪಾಕ್ ಗೆ ನಷ್ಟವೆಷ್ಟು?

IND Vs PAK ಪಂದ್ಯಗಳು ಬ್ಯಾನ್ – ಚಾಂಪಿಯನ್ಸ್ ಟ್ರೋಫಿಯೇ ಮುಳುವಾಯ್ತಾ?ಟೂರ್ನಿ ಶಿಫ್ಟ್.. ಪಾಕ್ ಗೆ ನಷ್ಟವೆಷ್ಟು?

ಒಂದ್ಕಡೆ ಭಾರತ ವರ್ಸಸ್ ಸೌತ್ ಆಫ್ರಿಕಾ ಟಿ-20 ಸರಣಿ ಫೈಟ್.. ಮತ್ತೊಂದ್ಕಡೆ ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸಿರೀಸ್.. ಹೀಗೆ ಟೀಂ ಇಂಡಿಯಾದ ಜೂನಿಯರ್ಸ್ ಮತ್ತು ಸೀನಿಯರ್ಸ್ ಬ್ಯಾಕ್ ಟು ಬ್ಯಾಕ್ ಮ್ಯಾಚ್​ಗಳಲ್ಲಿ ಬ್ಯುಸಿ ಆಗಿದ್ರೆ ಅತ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹಲ್​ಚಲ್ ಎಬ್ಬಿಸಿದೆ. ಪಂದ್ಯಗಳ ಆಯೋಜನೆ ಸ್ಥಳವೇ ವಿವಾದದ ಕಿಡಿ ಹೊತ್ತಿಸಿದ್ದು ಇದೀಗ ಟೂರ್ನಿಯೇ ಶಿಫ್ಟ್ ಆಗೋ ಎಲ್ಲಾ ಚಾನ್ಸಸ್ ಇದೆ. ಇದೆಲ್ಲಕ್ಕಿಂತ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದುವೇ ಇನ್ಮುಂದೆ ಐಸಿಸಿ ಇವೆಂಟ್​ಗಳಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳು ನಡೆಯಲ್ಲ ಅನ್ನೋದು. ಅರೆ. ಇಡೀ ಜಗತ್ತೇ ಕಾಯುವಂಥ ಹೈವೋಲ್ಟೇಜ್ ಪಂದ್ಯ ಅಂದ್ರೆನೆ ಭಾರತ ಮತ್ತು ಪಾಕ್ ಫೈಟ್. ಇನ್ಮುಂದೆ ಇಂಥಾ ಜಿದ್ದಾಜಿದ್ದಿನ ಕಾದಾಟವನ್ನ ನೋಡೋಕೆ ಆಗೋದೇ ಇಲ್ವಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್‌ – ಶಬರಿಮಲೆಗೆ ಹೋಗಲು KSRTC ಯಿಂದ ವಿಶೇಷ ವ್ಯವಸ್ಥೆ!

ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಪಂದ್ಯಗಳು ಅಂದ್ರೇನೇ ಹಾಗೇ. ಜಸ್ಟ್ ಈ ಎರಡು ರಾಷ್ಟ್ರಗಳಿಗೆ ಮಾತ್ರ ಅಲ್ಲ. ಇಡೀ ಜಗತ್ತಿನ ಕ್ರೀಡಾಭಿಮಾನಿಗಳು ಕ್ಯೂರಿಯಾಸಿಟಿಯಿಂದ ಕೂತು ಮ್ಯಾಚ್ ನೋಡ್ತಾರೆ. ಬಟ್ ಇನ್ಮುಂದೆ ಇಂಥಾದ್ದೊಂದು ಹೈವೋಲ್ಟೇಜ್ ಫೈಟ್​ನ ಬಹುಶಃ ಮುಂದಿನ ದಿನಗಳಲ್ಲಿ ನೋಡೋಕೆ ಆಗಲ್ಲ ಅನ್ಸುತ್ತೆ.  ಅದಕ್ಕೆ ಕಾರಣ ಚಾಂಪಿಯನ್ಸ್ ಟ್ರೋಫಿ ಟೂರ್ನಿ. ಭಾರತದ ಹಠ ಮತ್ತು ಪಾಕಿಸ್ತಾನದ ಮೊಂಡಾಟ.

ಭಾರತದ ಬೇಡಿಕೆಗಳಿಗೆ ಮಣಿಯದಂತೆ ಪಾಕ್ ಸರ್ಕಾರದ ಎಚ್ಚರಿಕೆ!

ಚಾಂಪಿಯನ್ಸ್ ಟ್ರೋಫಿ. 2025ರಲ್ಲಿ ಪಾಕಿಸ್ತಾನದಲ್ಲಿ ಟೂರ್ನಿ ನಡೆಸೋಕೆ ಐಸಿಸಿ ಈಗಾಗ್ಲೇ ಒಪ್ಪಿಗೆ ನೀಡಿದ್ದು ಸಿದ್ಧತೆಗಳೂ ಕೂಡ ನಡೆದಿವೆ. ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನ ನಡೆಸೋಕೆ ಪಿಸಿಬಿ ಬ್ಲ್ಯೂಪ್ರಿಂಟ್ ರೆಡಿ ಮಾಡಿ ಕ್ರೀಡಾಂಗಳನ್ನ ರಿನೋವೇಷನ್ ಮಾಡಿಸ್ತಿದೆ. ಬಟ್ ಪಾಕಿಸ್ತಾನಕ್ಕೆ ತೆರಳೋಕೆ ಟೀಂ ಇಂಡಿಯಾ ಬಿಲ್ ಕುಲ್ ರೆಡಿ ಇಲ್ಲ. ಭದ್ರತಾ ದೃಷ್ಟಿಯಿಂದ ಭಾರತ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನ ನಡೆಸುವಂತೆ ಬಿಸಿಸಿಐ ಐಸಿಸಿ ಮುಂದೆ ಬೇಡಿಕೆ ಇಟ್ಟಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ್ ಸರ್ಕಾರದ ಮೊರೆ ಹೋಗಲಾಗಿತ್ತು. ಇದೀಗ ಪಾಕ್ ಸರ್ಕಾರದಿಂದ ಸ್ಪಷ್ಟ ಉತ್ತರ ಬಂದಿದ್ದು, ಯಾವುದೇ ಕಾರಣಕ್ಕೂ ಭಾರತದ ಬೇಡಿಕೆಗೆ ಮಣಿಯದಿರಿ ಎಂದು ಸೂಚನೆ ನೀಡಿದೆ. ಭಾರತದ ನಡೆಯೇ ಪಾಕ್ ಸರ್ಕಾರದ ಕಣ್ಣು ಕೆಂಪಾಗಿಸಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವ ಭಾರತದ ಬೇಡಿಕೆಯನ್ನ ಯಾವ್ದೇ ಕಾರಣಕ್ಕೂ ಒಪ್ಪಬಾರದು ಅಂತಾ ಪಾಕಿಸ್ತಾನ್ ಸರ್ಕಾರ ತನ್ನ ಕ್ರಿಕೆಟ್ ಮಂಡಳಿಗೆ ವಾರ್ನಿಂಗ್ ಕೊಟ್ಟಿದೆ. ಹಾಗೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧರಿಲ್ಲ. ಇದೇ ಡವಲಪ್​ಮೆಂಟ್​ನಿಮದ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಸಮಸ್ಯೆ ಮತ್ತಷ್ಟು ಜಟಿಲವಾಗುವ ಎಲ್ಲಾ ಸಾಧ್ಯತೆ ಇದೆ.

ಟೂರ್ನಿ ಶಿಫ್ಟ್ ಆದ್ರೆ ಟೂರ್ನಿಯಿಂದಲೇ ಹೊರಗುಳಿಯಲು ಪಾಕ್ ನಿರ್ಧಾರ!

ಹೇಳಿ ಕೇಳಿ ವಿಶ್ವಕ್ರಿಕೆಟ್​ನಲ್ಲಿ ಬಿಸಿಸಿಐ ಬಾಸ್. ಒಂಥರಾ ದೊಡ್ಡಣ್ಣ ಇದ್ದಂತೆ. ಭಾರತ ತಂಡವನ್ನು ಎದುರು ಹಾಕಿಕೊಂಡು ಐಸಿಸಿ ಏನೂ ಮಾಡೋಕೆ ಸಾಧ್ಯ ಇಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲೇ ಆಯೋಜನೆ ಮಾಡೋಕೆ ಪಾಕ್​ಗೆ ತಿಳಿಸಿದೆ. ಆದ್ರೆ ಪಾಕಿಸ್ತಾನ ಮಾತ್ರ ತನ್ನ ಮೊಂಡಾಟವನ್ನ ಬಿಡ್ತಿಲ್ಲ.  ಹಾಗೇನಾದ್ರೂ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರಾಕರಿಸಿದ್ದೇ ಆದ್ರೆ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಕೈ ತಪ್ಪುತ್ತೆ. ದಕ್ಷಿಣ ಆಫ್ರಿಕಾಗೆ ಟೂರ್ನಿ ಸ್ಥಳಾಂತರ ಮಾಡೋಕೆ ಚಿಂತನೆ ಕೂಡ ನಡೆದಿದೆ. ಒಂದು ವೇಳೆ ಟೂರ್ನಿ ಆತಿಥ್ಯದ ಹಕ್ಕು ಕೈ ತಪ್ಪಿದ್ರೆ, ಇಡೀ ಟೂರ್ನಿಯಿಂದಲೇ ಹೊರಗುಳಿಯಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧಾರ ಮಾಡಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಈಗ ಕುತೂಹಲ.

ಐಸಿಸಿ ಇವೆಂಟ್ ಗಳಲ್ಲೂ ಭಾರತದ ವಿರುದ್ಧ ಪಂದ್ಯಕ್ಕೆ ನಿಷೇಧ!

ಪಾಕಿಸ್ತಾನ ಸರ್ಕಾರ ಹೈಬ್ರಿಡ್ ಮಾದರಿಗೆ ಒಪ್ಪುವುದಿಲ್ಲ ಅಂತಾ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.    ಇದ್ರ ನಡುವೆ ಐಸಿಸಿ ಮತ್ತು ಎಸಿಸಿ ಈವೆಂಟ್‌ಗಳಲ್ಲಿ ಭಾರತದ ವಿರುದ್ಧ ಆಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಪಿಸಿಬಿಗೆ ಪಾಕಿಸ್ತಾನ ಸರ್ಕಾರ ಸಲಹೆ ನೀಡಿದೆ.  ಅಥವಾ ಜಿನೀವಾದಲ್ಲಿನ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್‌ನಲ್ಲಿ ಐಸಿಸಿ ಮತ್ತು ಬಿಸಿಸಿಐ ವಿರುದ್ಧ ಪಿಸಿಬಿ ಕಾನೂನು ಕ್ರಮವನ್ನು ಜರುಗಿಸುವಂತೆ ಕೋರ್ಟ್ ಮೊರೆ ಹೋಗಲು ಕಾನೂನು ಸಲಹೆ ಪಡೆದುಕೊಳ್ತಿದೆ.  ಪಾಕಿಸ್ತಾನವು ಭಾರತದ ನೆಲಕ್ಕೆ ಹೋಗಿ ಪಂದ್ಯ ಆಡೋದಾದ್ರೆ ಭಾರತ ಮಾತ್ರ ಯಾಕೆ ಪಾಕಿಸ್ತಾನಕ್ಕೆ ಬರಬಾರದು. ಭಾರತದ ಈ ನಡೆಯಿಂದ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಭದ್ರತೆ ವಿಚಾರವಾಗಿ ಸಂಶಯಗಳು ಮೂಡುತ್ತವೆ. ಇತರೆ ರಾಷ್ಟ್ರಗಳು ಕೂಡ ಮುಂದಿನ ದಿನಗಳಲ್ಲಿ ನಮ್ಮ ರಾಷ್ಟ್ರಕ್ಕೆ ಬರಲು ಹಿಂದೇಟು ಹಾಕುತ್ತವೆ. ಇದ್ರಿಂದಾಗಿ ವಿಶ್ವಮಟ್ಟದಲ್ಲಿ ಪಾಕ್​ನ ಇಮೇಜ್ ಹಾಳಾಗುತ್ತೆ. ಭಾರತ ಮತ್ತು ಪಾಕಿಸ್ತಾನ ನಡುವೆ ಎಷ್ಟೇ ಸಮಸ್ಯೆಗಳು ಇದ್ರೂ ಅದನ್ನ ಕ್ರೀಡೆಗೆ ತರಬಾರದು ಅಂತಾ ವಾದ ಮುಂದಿಡಲು ತಯಾರಿ ನಡೆಸುತ್ತಿದೆ. ಅಸಲಿಗೆ 2008ರ ಮುಂಬೈ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಎರಡೂ ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಸ್ಪರ್ಧಿಸುತ್ತಿವೆ.

ಟೂರ್ನಿ ಶಿಫ್ಟ್ ಆದ್ರೆ ಪಾಕಿಸ್ತಾನಕ್ಕೆ ಬೀಳುತ್ತಾ ಹೊಡೆತ?

ಪಾಕಿಸ್ತಾನಕ್ಕೆ ಈಗ ಇರೋ ಒಂದೇ ಆಪ್ಶನ್ ಅಂದ್ರೆ ಚಕಾರ ಎತ್ತದೆ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳೋದು. ಅದನ್ನ ಬಿಟ್ಟು ಹಠಮಾರಿ ತನ ತೋರಿಸಿದ್ರೆ ಲಾಸ್ ಆಗೋದು ಅವ್ರಿಗೇನೇ. ಯಾಕಂದ್ರೆ ಟೂರ್ನಿ ಬೇರೆ ದೇಶಕ್ಕೆ ಸ್ಥಳಾಂತರವಾದರೆ ಅಥವಾ ಪೋಸ್ಟ್ ಪೋನ್ ಆದ್ರೆ ಫ್ಯೂಚರಲ್ಲಿ ಪಾಕ್​ಗೆ ಐಸಿಸಿಯ ಯಾವುದೇ ಯೋಜನೆಗಳಾಗಲಿ, ಟೂರ್ನಿಗಳಾಗಲಿ ಸಿಗುವ ಸಾಧ್ಯತೆಗಳಿಲ್ಲ. ದೊಡ್ಡ ಪ್ರಮಾಣದಲ್ಲಿ ಹರಿದು ಬರುವ ಐಸಿಸಿಯ ಫಂಡ್ ಗೂ ಕತ್ತರಿ ಬೀಳುತ್ತೆ. ಹಾಗೇ ಈ ಟೂರ್ನಿ ಶಿಫ್ಟ್ ಆಗೋದ್ರಿಂದ ಪಿಸಿಬಿಗೆ ಸುಮಾರು 65 ಮಿಲಿಯನ್ ಡಾಲರ್ ಅಂದರೆ ಹೆಚ್ಚೂಕಮ್ಮಿ 548 ಕೋಟಿ ರೂಪಾಯಿ ನಷ್ಟವಾಗಲಿದೆ. ಟೂರ್ನಿ ಆಯೋಜನೆಗಾಗಿ ಮಾಡಿರುವ ಖರ್ಚು, ಕ್ರೀಡಾಂಗಣ ನವೀಕರಣ ವೆಚ್ಚ, ನಿರ್ವಹಣಾ ವೆಚ್ಚ ಎಲ್ಲವೂ ಎಲ್ಲವೂ ವೇಸ್ಟ್ ಆಗುತ್ತೆ.  ಟೂರ್ನಿಗಾಗಿಯೇ ಪಿಸಿಬಿಯು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗಳ ಕ್ರೀಡಾಂಗಣಗಳನ್ನು ಭಾರೀ ಖರ್ಚು ಮಾಡಿದೆ. ಕರಾಚಿಯ ಗದ್ದಾಫಿ ಸ್ಟೇಡಿಯಂನಲ್ಲೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಅನ್ನು ಆಡಿಸಬೇಕೆಂಬ ಉದ್ದೇಶದಿಂದ 7 ಮಿಲಿಯನ್ ಡಾಲರ್ ನಷ್ಟು ದೊಡ್ಡ ಮೊತ್ತ ಖರ್ಚು ಮಾಡಿದೆ.

ಸದ್ಯ ಈಗ ರೆಡಿ ಮಾಡಿರೋ ಟೈಮ್ ಟೇಬಲ್​ನಂತೆ ಪಾಕಿಸ್ತಾನದಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಚಾಂಪಿಯನ್ ಟ್ರೋಫಿ ಪಂದ್ಯಗಳು ನಡೆಯಬೇಕಿದೆ. ಅಂದ್ರೆ ಇನ್ನು 4 ತಿಂಗಳ ಕಾಲಾವಕಾಶ ಅಷ್ಟೇ ಇದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಈ ಶೀತಲ ಸಮರ ಇತ್ಯರ್ಥ್ಯ ಕಾಣದಿದ್ದರೆ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರ ಮಾಡೋದಾಗಿ ಐಸಿಸಿ ಹೇಳ್ತಿದೆ. ಸೋ ಪಾಕಿಸ್ತಾನ ಮುಂದೆ ಯಾವ ಹೆಜ್ಜೆ ಇಡುತ್ತೆ ಅನ್ನೋದೇ ಈಗಿರೋ ಕುತೂಹಲ.

Shwetha M