ಶುಕ್ರವಾರ IND Vs PAK ಯುದ್ಧ – 8 ತಂಡ.. ಏಷ್ಯಾಕಪ್ ಗೆಲ್ಲುತ್ತಾ ಭಾರತ?
ಕನ್ನಡತಿ ಶ್ರೇಯಾಂಕಾ ಕಮಾಲ್ ಮಾಡ್ತಾರಾ?

ಶುಕ್ರವಾರ IND Vs PAK ಯುದ್ಧ – 8 ತಂಡ.. ಏಷ್ಯಾಕಪ್ ಗೆಲ್ಲುತ್ತಾ ಭಾರತ?ಕನ್ನಡತಿ ಶ್ರೇಯಾಂಕಾ ಕಮಾಲ್ ಮಾಡ್ತಾರಾ?

ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಮ್ಯಾಚ್ ಇದೆ ಅಂದ್ರೆ ಇಡೀ ಕ್ರಿಕೆಟ್ ಲೋಕವೇ ಕ್ಯೂರಿಯಾಸಿಟಿಯಿಂದ ಕಾಯ್ತಿರುತ್ತೆ. ಬದ್ಧವೈರಿ ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಪ್ರತೀಬಾರಿ ಭಾರತವೇ ಮೇಲು ಗೈ ಸಾಧಿಸುತ್ತಿದೆ. ಇತ್ತೀಚೆಗಷ್ಟೇ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮುಂದೆ ಪಾಕಿಸ್ತಾನ ಸೋಲೊಪ್ಪಿಕೊಂಡಿತ್ತು. ಹಾಗೇ ವರ್ಲ್ಡ್ಸ್ ಚಾಂಪಿಯನ್ ಶಿಪ್ ಆಫ್ ಲೆಜೆಂಟ್ಸ್ ಲೀಗ್​ನಲ್ಲೂ ಪಾಕಿಸ್ತಾನವನ್ನ ಮಣಿಸುವ ಮೂಲಕ ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿರೋದ್ರಿಂದ ಟೀಂ ಇಂಡಿಯಾ ಆಟಗಾರರು ಪಾಕ್​ಗೇ ಬಂದು ಆಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ನಡುವೆ ಮಹಿಳಾ ಏಷ್ಯಾಕಪ್​ 2024ರ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಜುಲೈ 19ರಂದು ಏಷ್ಯಾಕಪ್ ಪಂದ್ಯಾವಳಿಗಳಿಗೆ ಚಾಲನೆ ಸಿಗಲಿದ್ದು ಮೊದಲ ದಿನವೇ ಇಂಡೋ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಈ ಟೂರ್ನಿಗೆ ನಮ್ಮ ಕನ್ನಡತಿ ಟಗರುಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಟೀಲ್ ಕೂಡ ಟೀಂ ಇಂಡಿಯಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿರೋದು ಮತ್ತೊಂದು ವಿಶೇಷವಾಗಿದೆ.

ಜುಲೈ 19ಕ್ಕೆ ಭಾರತ-ಪಾಕ್ ಫೈಟ್!

ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಜುಲೈ 19 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಸುತ್ತಿನಲ್ಲಿ ಗ್ರೂಪ್​​ಗಳಲ್ಲಿರುವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಭಾರತ, ಪಾಕಿಸ್ತಾನ, ಯುಎಇ ಹಾಗೂ ನೇಪಾಳ ಒಂದು ಗುಂಪಿನಲ್ಲಿದ್ದರೆ, ಮತ್ತೊಂದು ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌ ಹಾಗೂ ಮಲೇಷ್ಯಾ ತಂಡಗಳಿವೆ. ಅಂದರೆ ಎ ಗ್ರೂಪ್​ನಲ್ಲಿ ಭಾರತ ತಂಡವು ಪಾಕಿಸ್ತಾನ್, ನೇಪಾಳ ಮತ್ತು ಯುಎಇ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್​ಗಳಿಗೆ ಪಾಯಿಂಟ್ಸ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್​ಗೇರಲಿದೆ. ಅದರಂತೆ ಜುಲೈ 26 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವು ಜುಲೈ 28 ರಂದು ಜರುಗಲಿದೆ. ಅಲ್ಲದೆ ಈ ಎಲ್ಲಾ ಪಂದ್ಯಗಳಿಗೆ ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ದಿನ ನಡೆಯಲಿರುವ ಎರಡನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಹಾಲಿ ಚಾಂಪಿಯನ್‌ ಭಾರತ ತಂಡ ಜುಲೈ 19ರಂದು ಮಹಿಳಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಹಾಗೇ ಜುಲೈ 21ರಂದು ಯುಎಇ ಹಾಗೂ ಜುಲೈ 23ರಂದು ನೇಪಾಳ ವಿರುದ್ಧ ಸೆಣಸಲಿದೆ. ಜುಲೈ 26ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜುಲೈ 28ಕ್ಕೆ ಫೈನಲ್‌ ನಿಗದಿಯಾಗಿದೆ. ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿರುವ ಅಂಪೈರ್‌, ರೆಫ್ರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಮಹಿಳೆಯರೇ ಆಗಿರಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. 2012ರಲ್ಲಿ ಆರಂಭಗೊಂಡಿದ್ದ ಟೂರ್ನಿಯು ಟಿ20 ಮಾದರಿಯಲ್ಲೇ ನಡೆದುಕೊಂಡು ಬಂದಿದ್ದು, ಭಾರತ 7 ಬಾರಿ ಪ್ರಶಸ್ತಿ ಗೆದ್ದು ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿದೆ.

ಇನ್ನು ಈ ಮಹತ್ವದ ಟೂರ್ನಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಸಹ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಪಕ್ಷೀಯ ಸರಣಿಗೆ ಶ್ರೇಯಾಂಕಾ ಪಾಟೀಲ್‌ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಆದಾಗ್ಯೂ ಕನ್ನಡತಿ ಏಷ್ಯಾಕಪ್‌ ಟೂರ್ನಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.  ಇನ್ನು ಇದೇ ವರ್ಷ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ 2ನೇ ಆವೃತ್ತಿಯಲ್ಲಿ ಶ್ರೇಯಾಂಕಾ ಪಾಟೀಲ್‌ ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ಮಹಿಳಾ ತಂಡದ ಪರ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿದ್ದರು. ಇನ್ನು ಟೀಂ ಇಂಡಿಯಾ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿದ್ರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿರಲಿದ್ದಾರೆ. ಉಳಿದಂತೆ ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗ್ಸ್‌, ರಿಚಾ ಘೋಷ್, ಉಮಾ ಚೆಟ್ರಿ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಸಜನಾ ಸಜೀವನ್ ಆಯ್ಕೆಯಾಗಿದ್ದಾರೆ. ರಿಸರ್ವ್ ಪ್ಲೇಯರ್ಸ್ ಆಗಿ ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್ ಸೆಲೆಕ್ಟ್ ಆಗಿದ್ದಾರೆ. ಹಾಲಿ ಚಾಂಪಿಯನ್ ಭಾರತ ತಂಡ ಬಲಿಷ್ಠವಾಗಿದ್ದು ಈ ಬಾರಿ ಕೂಡ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ಮಹಿಳಾ ತಂಡ ಅದೇ ಪ್ರದರ್ಶನವನ್ನು ಏಷ್ಯಾಕಪ್‌ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದೆ.

Shwetha M