ಫಸ್ಟ್ ಮ್ಯಾಚ್ ಗಳಲ್ಲೇ ಪಾಕ್ ಬೆಂಡೆತ್ತಿದ ಭಾರತ – ಟೆಸ್ಟ್, ಏಕದಿನ, ಟಿ-20ಯಲ್ಲೂ ಭಾರತವೇ ಬಾಸ್!

ಫಸ್ಟ್ ಮ್ಯಾಚ್ ಗಳಲ್ಲೇ ಪಾಕ್ ಬೆಂಡೆತ್ತಿದ ಭಾರತ – ಟೆಸ್ಟ್, ಏಕದಿನ, ಟಿ-20ಯಲ್ಲೂ ಭಾರತವೇ ಬಾಸ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಇಡೀ ಜಗತ್ತೇ ಕುತೂಹಲದಿಂದ ಕಾಯ್ತಾ ಇರುತ್ತೆ. ಯಾಕಂದ್ರೆ ಇದು ಕ್ರೀಡೆಯನ್ನು ಮೀರಿದ ಇತಿಹಾಸವನ್ನ ಹೊಂದಿರೋ ಸ್ಪರ್ಧೆ. ಎರಡೂ ರಾಷ್ಟ್ರಗಳು ಈಗ ಐಸಿಸಿ ಈವೆಂಟ್‌ಗಳು ಮತ್ತು ಏಷ್ಯಾಕಪ್‌ನಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತಿವೆ. ಆದ್ರೆ ಒಂದು ಕಾಲದಲ್ಲಿ ದ್ವಿಪಕ್ಷೀಯ ಸರಣಿಗಳು ನಿಯಮಿತವಾಗಿ ನಡೆಯುತ್ತಿದ್ದವು. ಎರಡೂ ತಂಡಗಳು ಪರಸ್ಪರರ ದೇಶಗಳಿಗೆ ಪ್ರವಾಸ ಮಾಡುತ್ತಿದ್ದವು. ಸೋ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ರೈವರ್ಲ್ರಿ ಆರಂಭ ಆಯ್ತು ಅನ್ನೋದನ್ನ ನೋಡ್ತಾ ಹೋಗೋಣ.

1952ರಲ್ಲಿ ಭಾರತ ಮತ್ತು ಪಾಕ್ ನಡುವೆ ಮೊದಲ ಟೆಸ್ಟ್ ಮ್ಯಾಚ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಮೊಟ್ಟಮೊದಲ ಟೆಸ್ಟ್ ಪಂದ್ಯ ಹಾಗೇ ಎರಡೂ ರಾಷ್ಟ್ರಗಳ ನಡುವಿನ ಮೊದಲ ಕ್ರಿಕೆಟ್ ಪಂದ್ಯ 1952 ರಲ್ಲಿ ನಡೆದಿತ್ತು. ಈ ಐತಿಹಾಸಿಕ ಪಂದ್ಯವು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದಿತ್ತು. ಈ ಮೈದಾನವನ್ನ ಈಗ ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ. ನಾಯಕ ಲಾಲಾ ಅಮರನಾಥ್ ನೇತೃತ್ವದಲ್ಲಿ ಭಾರತ ತಂಡವು ಅಬ್ದುಲ್ ಹಫೀಜ್ ಕರ್ದಾರ್ ನೇತೃತ್ವದ ಪ್ರವಾಸಿ ಪಾಕಿಸ್ತಾನ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಹೇಮು ಅಧಿಕಾರಿ, ವಿಜಯ್ ಹಜಾರೆ ಮತ್ತು ವಿಜಯ್ ಮಂಜ್ರೇಕರ್ ಅವರ ಭರ್ಜರಿ ಬ್ಯಾಟಿಂಗ್​ನಿಂದ  72 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಪಾಕ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತ್ತು. ಫಾಲೋ ಆನ್‌ಗೆ ಒಳಗಾಗಿ ಮತ್ತೆ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಆಲ್‌ರೌಂಡರ್ ವಿನೂ ಮಂಕಡ್ ಪಂದ್ಯದಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಇನ್ನಿಂಗ್ಸ್ ಮತ್ತು 70 ರನ್‌ಗಳ ದೊಡ್ಡ ಗೆಲುವಿಗೆ ಕಾರಣರಾದರು.

1978ರಲ್ಲಿ ಉಭಯ ರಾಷ್ಟ್ರಗಳ ನಡುವೆ ಮೊದಲ ಏಕದಿನ ಪಂದ್ಯ!

ಭಾರತ ಮತ್ತು ಪಾಕ್ ನಡುವೆ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯ 1978ರ ಅಕ್ಟೋಬರ್ 1ರಂದು  ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆಯಿತು. ಆಗ 40 ಓವರ್​ಗಳಿಗೆ ಪಂದ್ಯ ಸೀಮಿತವಾಗಿತ್ತು.  ಈ ಪಂದ್ಯಕ್ಕೂ ಮುನ್ನ ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ವಾತಾವರಣ ಉದ್ವಿಗ್ನವಾಗಿತ್ತು, ಯುದ್ಧಗಳು ನಡೆದು ಬಾಂಗ್ಲಾದೇಶ ಸ್ವಾತಂತ್ರ್ಯಗೊಂಡಿತ್ತು. ಆದರೂ, ಕ್ರಿಕೆಟ್ ಪುನರಾರಂಭವಾಗಿತ್ತು. ಬಿಷನ್ ಸಿಂಗ್ ಬೇಡಿ ನಾಯಕತ್ವದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 40 ಓವರ್‌ಗಳಲ್ಲಿ 170 ರನ್ ಗಳಿಸಿತು. ಈ ಪಂದ್ಯವು ಭವಿಷ್ಯದ ಮೂವರು ಭಾರತೀಯ ದಿಗ್ಗಜರಾದ ಕಪಿಲ್ ದೇವ್, ಚೇತನ್ ಚೌಹಾಣ್ ಮತ್ತು ಸುರಿಂದರ್ ಅಮರನಾಥ್ ಅವರ ಚೊಚ್ಚಲ ಪಂದ್ಯವೂ ಆಗಿತ್ತು. ಮೊಹಿಂದರ್ ಅಮರನಾಥ್ 51 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ರು. ದಿಲೀಪ್ ವೆಂಗ್‌ಸರ್ಕಾರ್ 34 ರನ್ ಗಳಿಸಿದರು. 171 ರನ್ ಗಳ ಟಾರ್ಗೆಟ್ ಬೆನ್ನತ್ತಿದ್ದ ಪಾಕಿಸ್ತಾನ ತಂಡವು ಟಫ್ ಫೈಟ್ ಕೊಟ್ಟಿತ್ತು. ಆದರೆ ಅಂತಿಮವಾಗಿ 40 ಓವರ್‌ಗಳಲ್ಲಿ 8 ವಿಕೆಟ್‌ಗೆ 166 ರನ್ ಗಳಿಸಿತು. ನಾಲ್ಕು ರನ್‌ಗಳಿಂದ ಸೋಲನ್ನ ಕಂಡಿತ್ತು. ಪಾಕಿಸ್ತಾನ ಪರ ಮಜೀದ್ ಖಾನ್ 50 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ರು.

2007ರಲ್ಲಿ ಟಿ-20 ವಿಶ್ವಕಪ್ ನಲ್ಲಿ ಚುಟುಕು ಸಮರದಲ್ಲಿ ಮುಖಾಮುಖಿ!

ಇನ್ನು ಟಿ-20 ಫಾರ್ಮೆಟ್​ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು 2007ರಲ್ಲಿ.  ಐಸಿಸಿಯ ಉದ್ಘಾಟನಾ ಟಿ20 ವಿಶ್ವಕಪ್ ಸಮರದಲ್ಲಿ. ಈ ಪಂದ್ಯವು ಸೆಪ್ಟೆಂಬರ್ 14 ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದಿದ್ದು, ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಯಾಕಂದ್ರೆ ಉಭಯ ತಂಡಗಳೂ ಕೂಡ 20 ಓವರ್​ಗಳಲ್ಲಿ 141 ರನ್ ಗಳಿಸಿದ್ದು ಪಂದ್ಯ ಟೈ ಆಗಿತ್ತು. ಆ ಟೈಮಲ್ಲಿ ಸೂಪರ್ ಓವರ್ ಇರ್ಲಿಲ್ಲ. ಸೋ  ಪಂದ್ಯವನ್ನು ಬೌಲ್-ಔಟ್ ಮೂಲಕ ನಿರ್ಧರಿಸಲಾಯಿತು. ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಅವರ ನಿಖರವಾದ ಹೊಡೆತಗಳಿಂದ ಭಾರತ ಬೌಲ್-ಔಟ್‌ನಲ್ಲಿ 3-0 ಅಂತರದಿಂದ ಜಯಗಳಿಸಿತು, ಆದರೆ ಪಾಕಿಸ್ತಾನ ತನ್ನ ಮೂರು ಪ್ರಯತ್ನಗಳಲ್ಲಿ ಸ್ಟಂಪ್‌ಗಳನ್ನು ಹೊಡೆಯುವಲ್ಲಿ ವಿಫಲವಾಗಿತ್ತು.  ಹೀಗಾಗಿ ಅಂತಿಮವಾಗಿ ಭಾರತವೇ ಗೆದ್ದು ಬೀಗಿತ್ತು.

Shantha Kumari