8 ತಂಡ.. 2 ಗುಂಪು.. IND ರೆಡಿ – ಚಾಂಪಿಯನ್ಸ್ ಟ್ರೋಫಿಗೆ ಡೇಟ್ ಫಿಕ್ಸ್
RO ಕ್ಯಾಪ್ಟನ್.. KO ಟಾರ್ಗೆಟ್ ಏನು?

ಟಿ-20 ವಿಶ್ವಕಪ್ನಲ್ಲಿ ಜಗತ್ತನ್ನೇ ಗೆದ್ದಿರೋ ಟೀಂ ಇಂಡಿಯಾ ಇದೀಗ ಮತ್ತೊಂದು ಮಹಾಯುದ್ಧಕ್ಕೆ ಸಜ್ಜಾಗಬೇಕಿದೆ. 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈಟ್ಗೆ ಈಗಾಗ್ಲೇ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಚುಟುಕು ಸಮರದಲ್ಲಿ ಭಾರತವನ್ನು ವಿಶ್ವಗುರು ಮಾಡಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಮತ್ತೊಂದು ದೊಡ್ಡ ಜವಾಬ್ದಾರಿ ನೀಡಲಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ನಲ್ಲಿ ಅಜೇಯವಾಗಿ ತಂಡವನ್ನ ಮುನ್ನಡೆಸಿದ್ದ ರೋಹಿತ್ ಶರ್ಮಾ ಮೇಲೆ ಬಿಸಿಸಿಐ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಅಷ್ಟಕ್ಕೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಂದ್ಯಗಳು ಯಾವಾಗ? ರೋಹಿತ್ರನ್ನೇ ಕ್ಯಾಪ್ಟನ್ ಮಾಡಿದ್ದೇಕೆ? ಕಿಂಗ್ ವಿರಾಟ್ಗೆ ಕೊಹ್ಲಿಗೆ ಇರೋ ಡ್ರೀಮ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: WWE ಸ್ಟಾರ್ ಜಾನ್ ಸಿನಾ ನಿವೃತ್ತಿ – ಹೀರೋ ಕನಸು.. ರಿಂಗ್ ಗೆ ವಿದಾಯ
17 ವರ್ಷಗಳ ಮಹಾತಪಸ್ಸಿನ ಬಳಿಕ ಭಾರತ ಟಿ-20 ವಿಶ್ವಕಪ್ ಚಾಂಪಿಯನ್ ಆಗಿದೆ. ಟ್ರೋಫಿ ಗೆದ್ದು ವಾರ ಕಳೆದ್ರೂ ಗೆಲುವಿನ ಕ್ಷಣಗಳು ಇನ್ನೂ ಕೂಡ ಹಸಿಹಸಿಯಾಗಿಯೇ ಇವೆ. ಇದೀಗ ಚುಟುಕು ಸಮರ ಗೆದ್ದ ಭಾರತಕ್ಕೆ 2025ರಲ್ಲಿ ಮತ್ತೊಂದು ಮಹಾಕದನ ಗೆಲ್ಲೋ ಸವಾಲು ಎದುರಾಗಿದೆ. ಅದ್ರಲ್ಲೂ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿರೋದೇ ಕುತೂಹಲ ಮೂಡಿಸಿದೆ. ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಅದರಂತೆ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಟೀಮ್ ಇಂಡಿಯಾದ ಪಂದ್ಯಗಳ ಕರಡು ವೇಳಾಪಟ್ಟಿ ಕೂಡ ರಿಲೀಸ್ ಆಗಿದೆ. ಈ ವೇಳಾಪಟ್ಟಿಯಂತೆ ಭಾರತ ತಂಡ ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಅಷ್ಟಕ್ಕೂ ಯಾವ ದಿನ ಎದುರಾಳಿ ಯಾರು ಅನ್ನೋದನ್ನ ಹೇಳ್ತೇನೆ ನೋಡಿ.
ಭಾರತ ಸಮರಕ್ಕೆ ಟೈಂ ಫಿಕ್ಸ್!
ಚಾಂಪಿಯನ್ಸ್ ಟ್ರೋಫಿಗೆ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳಿವೆ. ಹಾಗೇ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ್ ಟೀಮ್ಗಳಿವೆ. ಸದ್ಯ ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಫೆಬ್ರವರಿ 20ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ಅಂದ್ರೆ ಫೆಬ್ರವರಿ 23ರಂದು ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಅಂದ್ರೆ ಮಾರ್ಚ್ 1ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಾಡಲಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗಾಗಿ ಪಾಕಿಸ್ತಾನದ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದ್ದು, ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ. ಇಲ್ಲಿ ಟೀಮ್ ಇಂಡಿಯಾದ ಮೊದಲ ಸುತ್ತಿನ ಎಲ್ಲಾ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ನಿಗದಿ ಮಾಡಲಾಗಿದೆ. ಲಾಹೋರ್ ನಗರವು ಭಾರತದ ಗಡಿಗೆ ಸಮೀಪದಲ್ಲಿದೆ. ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಫ್ಯಾನ್ಸ್ಗಳಿಗೆ ಅನುಕೂಲ ಕಲ್ಪಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಂದೇ ಸ್ಟೇಡಿಯಂನಲ್ಲಿ ಭಾರತದ ಪಂದ್ಯಗಳನ್ನ ಆಯೋಜಿಸಲು ನಿರ್ಧರಿಸಿದೆ. ಆದ್ರೆ ಪಾಕಿಸ್ತಾನಕ್ಕೆ ಭಾರತ ಹೋಗುತ್ತಾ ಅನ್ನೋದೇ ಡೌಟಿದೆ. ಯಾಕಂದ್ರೆ 2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಟೂರ್ನಿಗಾಗಿ ಸಕಲ ಸಿದ್ಧತೆಯಲ್ಲಿದ್ರೆ, ಇತ್ತ ಬಿಸಿಸಿಐ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಿದರೆ ಮಾತ್ರ ಟೀಮ್ ಇಂಡಿಯಾ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಇಲ್ಲದಿದ್ದರೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ಐಸಿಸಿಗೆ ಮನವಿ ಮಾಡಬಹುದು. ಐಸಿಸಿ ಈ ಮನವಿಗೆ ಒಪ್ಪದಿದ್ದರೆ ಟೀಮ್ ಇಂಡಿಯಾದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಕೋರಬಹುದು. ಈ ಮೂಲಕ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಆಡುವ ಸಾಧ್ಯತೆಯಿದೆ.
ಇನ್ನು ಮುಂದಿನ ವರ್ಷ ನಡೆಯಲಿರುವ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಟೀಂ ಇಂಡಿಯಾವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜೈ ಶಾ ಅವ್ರೇ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಎರಡೂ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ರೋಹಿತ್ ಶರ್ಮಾ ಟ್ರೋಫಿಗಳನ್ನು ಗೆದ್ದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಮೇಲೆ ಇಂಥಾದ್ದೊಂದು ನಂಬಿಕೆ ಇಡೋಕೆ ಕಾರಣವೂ ಇದೆ. ರೋಹಿತ್ ಸಾರಥ್ಯದಲ್ಲಿ ಭಾರತ ತಂಡ 2024ರ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ಸ್ ಪಟ್ಟ ಪಡೆದಿದೆ. 2013ರ ಬಳಿಕ ಅನುಭವಿಸಿದ್ದ ಟ್ರೋಫಿ ಗೆಲುವಿನ ಬರವನ್ನು ನೀಗಿಸಿಕೊಂಡಿದೆ. 2007ರ ಬಳಿಕ ಟಿ20 ವಿಶ್ವಕಪ್ ಅಖಾಡದಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟ ನಾಯಕನ ಮೇಲೆ ಈಗ ಬಿಸಿಸಿಐ ಮತ್ತಷ್ಟು ಭರವಸೆಗಳೊಂದಿಗೆ ಜವಾಬ್ದಾರಿ ಹೊರಿಸಿದೆ. ಅಲ್ದೇ 2023ರ ಸಾಲಿನಲ್ಲಿ ಭಾರತ ತಂಡ ರೋಹಿತ್ ಶರ್ಮಾ ಸಾರಥ್ಯದಲ್ಲಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಮತ್ತು ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಎರಡರಲ್ಲೂ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಮತ್ತೆ ರೋಹಿತ್ ರನ್ನ ನಾಯಕನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಇನ್ನು ಕಿಂಗ್ ವಿರಾಟ್ ಕೊಹ್ಲಿ ಕೂಡ ಈ ಎರಡೂ ಟೂರ್ನಿಗಳಲ್ಲಿ ಭಾರತವನ್ನ ಚಾಂಪಿಯನ್ ಮಾಡೋ ಗುರಿ ಇಟ್ಟುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಕೂಡ ರೋಹಿತ್ ಮತ್ತು ಕೊಹ್ಲಿಗೆ ಇದೇ ಟಾಸ್ಕ್ ನೀಡಿದ್ದಾರೆ.