ರಾಣಾಗಾಗಿ ವರುಣ್ ಗೆ ಬೆಂಚ್ ಕಾಯಿಸಿದ್ರಾ ಗಂಭೀರ್ – ಓಮನ್ ವಿರುದ್ಧದ ಪಂದ್ಯ ಭಾರತಕ್ಕೆ ಸವಾಲಾಗಿದ್ದೆಲ್ಲಿ?

ರಾಣಾಗಾಗಿ ವರುಣ್ ಗೆ ಬೆಂಚ್ ಕಾಯಿಸಿದ್ರಾ ಗಂಭೀರ್ – ಓಮನ್ ವಿರುದ್ಧದ ಪಂದ್ಯ ಭಾರತಕ್ಕೆ ಸವಾಲಾಗಿದ್ದೆಲ್ಲಿ?

ಏಷ್ಯಾಕಪ್ ಟೂರ್ನಿ ಸದ್ಯ ಲೀಗ್ ಹಂತದ ಪಂದ್ಯಗಳೆಲ್ಲಾ ಮುಗಿದಿದ್ದು ಸೂಪರ್ 4 ಸ್ಟೇಜ್​ಗೆ ಕಾಲಿಟ್ಟಿದೆ. ಓಮನ್ ತಂಡವನ್ನ ಸೋಲಿಸೋ ಮೂಲಕ ಹ್ಯಾಟ್ರಿಕ್ ಜಯದೊಂದಿಗೆ ಭಾರತ ಕೂಡ ಎಂಟ್ರಿ ಕೊಟ್ಟಿದೆ. ಆದ್ರೆ ಓಮನ್ ವಿರುದ್ಧದ ಮ್ಯಾಚ್ ಭಾರತದ ಪಾಲಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಒಂದರ್ಥದಲ್ಲಿ ಸೋಲಿನ ಭಯವನ್ನೂ ಹುಟ್ಟಿಸಿದ್ರು. ಕೊನೆಗೆ ಹಂಗೋ ಹಿಂಗೋ ಮಾಡಿ ಸ್ಕೋರ್ ಡಿಫೆನ್ಸ್ ಮಾಡಿಕೊಂಡು ಪಂದ್ಯ ಗೆದ್ರು. ಆದ್ರೆ ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11 ಬಗ್ಗೆಯೇ ಅಪಸ್ವರಗಳು ಕೇಳಿ ಬರ್ತಿವೆ.

ಇದನ್ನೂ ಓದಿ : PCB ಬ್ಯಾಡ್ ಟೈಂ ಸ್ಟಾರ್ಟ್ – ಶೇಕ್ ಹ್ಯಾಂಡ್ ಮಾಡದೇ ಶೇಕ್ ಶೇಕ್

ಇಬ್ಬರಿಗೆ ಚಾನ್ಸ್.. ಬ್ಯಾಟಿಂಗ್ ತ್ಯಾಗ ಮಾಡಿದ ಸೂರ್ಯ!

ಶುಕ್ರವಾರ ಅಬುಧಾಬಿಯಲ್ಲಿ ನಡೆದ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಪಂದ್ಯಕ್ಕೆ ತಂಡದ ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆಗಳನ್ನ ಮಾಡಲಾಗಿತ್ತು. ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ನೀಡಿ ಅರ್ಶದೀಪ್ ಸಿಂಗ್ ಅವ್ರನ್ನ ಕಣಕ್ಕಿಳಿಸಲಾಗಿತ್ತು. ಹಾಗೇ ವರುಣ್ ಚಕ್ರವರ್ತಿ ಬದಲಿಗೆ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ರು. ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್​ನ ಆಯ್ಕೆ ಮಾಡಿಕೊಳ್ತು. ಎಂದಿನಂತೆ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಪವರ್​ ಹಿಟ್ಟಿಂಗ್ ಶಾಟ್​ಗಳ ಮೂಲಕವೇ ಅಬ್ಬರಿಸಿದ ಅಭಿಷೇಕ್ 15 ಎಸೆತಗಳಲ್ಲಿ 38 ರನ್ ಕಲೆ ಹಾಕಿದ್ರು. ಬಟ್ ಗಿಲ್ 5 ರನ್​ಗಳಿಗೆ ಸುಸ್ತಾದ್ರು. ಇನ್ನು ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ ಬೀಸಿದ್ದು ಅರ್ಧ ಶತಕ ಕಂಪ್ಲೀಟ್ ಮಾಡಿದ್ರು. ಪಾಂಡ್ಯ ಒಂದೇ ರನ್​ಗೆ ಔಟ್ ಆದ್ರು. ಆದ್ರೆ ಸೂರ್ಯ ಬ್ಯಾಟಿಂಗ್​ಗೆ ಬರಲೇಇಲ್ಲ. ಹೀಗೆ ಭಾರತ 20 ಓವರ್​ ವೇಳೆಗೆ 8 ವಿಕೆಟ್ ನಷ್ಟಕ್ಕೆ 188 ರನ್ ​ಗಳಿಸಿತ್ತು. ಆದ್ರೆ ಈ ಸ್ಕೋರ್​ನ ಡಿಫೆನ್ಸ್ ಮಾಡಿಕೊಳ್ಳೋದೇ ಭಾರತಕ್ಕೆ ಚಾಲೆಂಜಿಂಗ್ ಅನ್ಸಿತ್ತು.

ಭಾರತೀಯ ಬೌಲರ್ಸ್ ಕಾಡಿದ ಓಮನ್ ಬ್ಯಾಟರ್ಸ್!

ಅಬುದಾಭಿಯಂತ ಸ್ಪಿನ್ ಫ್ರೆಂಡ್ಲಿ ಪಿಚ್​ಗಳಲ್ಲಿ ಟಿ-20 ಫಾರ್ಮೆಟ್​ನಲ್ಲಿ 188 ರನ್​ ಕಲೆ ಹಾಕೋದು ಚಾಲೆಂಜಿಂಗ್ ನಂಬರೇ. ಭಾರತದ ಪರ 8 ವಿಕೆಟ್ಸ್ ಬಿದ್ರೂ ಕೂಡ ರನ್ಸ್​​ನಲ್ಲೇನು ಕಡಿಮೆ ಇರಲಿಲ್ಲ. ಆದ್ರೆ ಈ ನಂಬರ್​ನ ಡಿಫೆನ್ಸ್ ಮಾಡಿಕೊಳ್ಳೋದ್ರಲ್ಲಿ ತಿಣುಕಾಡಬೇಕಾಯ್ತು. ಓಮನ್ ಪರ ಕ್ಯಾಪ್ಟನ್ ಜಿತೇಂದರ್ ಸಿಂಗ್ ಮತ್ತು ಆಮೀರ್ ಖಲೀಂ ಇನ್ನಿಂಗ್ಸ್ ಆರಂಭಿಸಿದ್ರು. ಇಬ್ಬರ ಪಾರ್ಟ್ನರ್​ಶಿಪ್ ಬ್ರೇಕ್ ಮಾಡೋದೇ ದೊಡ್ಡ  ಸವಾಲಾಗಿತ್ತು. ನೋಡ ನೋಡುತ್ತಲೇ 50 ರನ್ಸ್ ಕೂಡ ಕಂಪ್ಲೀಟ್ ಮಾಡಿದ್ರು. ಈ ನಡುವೆ ಎಲ್​ಬಿಡಬ್ಲ್ಯೂಗಾಗಿ ಸಾಕಷ್ಟು ಡಿಆರ್​ಎಸ್​ಗಳನ್ನೂ ತಗೊಂಡ್ರು. ಅಂತಿಮವಾಗಿ ಜಿತೇಂದರ್ 32 ರನ್ ಗಳಿಸಿದ್ದಾಗ ಕುಲ್ದೀಪ್ ಯಾದವ್ ಬೌಲಿಂಗ್​ನಲ್ಲಿ ಬೌಲ್ಡ್ ಆದ್ರು. ಖಲೀಲ್ 64 ರನ್ ಕಲೆ ಹಾಕಿದ್ರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಹಮ್ಮದ್ ಮಿರ್ಜಾ ಅರ್ಧಶತಕ ಬಾರಿಸಿದ್ರು. ಬಟ್ ಆ ನಂತ್ರ ಬಂದವರ್ಯಾರೂ ಕ್ರೀಸ್​ ಕಚ್ಚಿ ನಿಲ್ಲೋಕೆ ಸಾಧ್ಯವಾಗ್ಲಿಲ್ಲ. 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಅಷ್ಟೇ ಕಲೆ ಹಾಕಿದ್ರು. ರೋಚಕವಾಗಿ ಹೋರಾಡಿ 21 ರನ್​ಗಳಿಂದ ಸೋಲು ಕಾಣಬೇಕಾಯ್ತು.

ಓಮನ್ ತಂಡವನ್ನ ಆಲೌಟ್ ಮಾಡದ ಏಕೈಕ ತಂಡ ಭಾರತ!

ಏಷ್ಯಾಕಪ್​ನಲ್ಲಿ ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ತಲಾ ಮೂರ್ಮೂರು ಪಂದ್ಯಗಳನ್ನ ಆಡಿವೆ. ಈ ಪೈಕಿ ಓಮನ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಅಂದ್ರೆ ಯುಎಇ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಆಲೌಟ್ ಆಗಿತ್ತು. ಬಟ್ ಭಾರತದ ವಿರುದ್ಧ ಮಾತ್ರ ವೀರೋಚಿತ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. 4 ವಿಕೆಟ್ ನಷ್ಟವನ್ನಷ್ಟೇ ಅನುಭವಿಸಿತ್ತು. ಈ ಮೂಲಕ  ಏಷ್ಯಾಕಪ್​ನಲ್ಲಿ ಓಮನ್ ತಂಡವನ್ನ ಆಲೌಟ್ ಮಾಡದ ಏಕೈಕ ತಂಡ ಭಾರತವಾಗಿದೆ. ಓಮನ್ ತಂಡದ ಸ್ಟ್ರೈಕ್ ರೇಟ್ ಸ್ಲೋ ಇತ್ತು ಅನ್ನೋದನ್ನ ಬಿಟ್ರೆ ಅವ್ರಿಗೆ ಗೆಲ್ಲುವಂತ ಎಲ್ಲಾ ಅವಕಾಶವೂ ಇತ್ತು. ಹೀಗಾಗಿ ಮ್ಯಾಚ್ ಕೊನೇವರೆಗೂ ಭಾರತೀಯರಿಗೆ ಸೋಲಿನ ಭೀತಿ ಹುಟ್ಟಿಸಿದ್ರು.

ಬ್ಯಾಟಿಂಗ್ ಮಾಡದ ಸೂರ್ಯ.. 8 ಆಟಗಾರರ ಬೌಲಿಂಗ್!

ಇನ್ನು ಓಮನ್ ವಿರುದ್ಧದ ಮ್ಯಾಚಲ್ಲಿ ಭಾರತದ ಎಲ್ಲಾ ಆಟಗಾರರಿಗೂ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅವಕಾಶ ಕೊಡ್ಲೇಬೇಕು ಅನ್ನೋ ಥರ ಟೀಂ ಸೆಟ್ ಮಾಡಿದ್ರು. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟ್ ಬೀಸದ ಸಂಜುಗೆ 3ನೇ ಸ್ಲಾಟ್ ಬ್ಯಾಟಿಂಗ್​ಗೆ ಅವಕಾಶ ಸಿಕ್ಕಿತ್ತು. ಪಾಂಡ್ಯ 4ನೇ ಕ್ರಮಾಂಕದಲ್ಲಿ ಎಂಟ್ರಿಯಾಗಿದ್ರು. ಅಕ್ಷರ್ ಪಟೇಲ್ 5ನೇ ಸ್ಥಾನಕ್ಕೆ ಬಡ್ತಿ ಪಡೆದ್ರೆ ದುಬೆ 6ನೇ ಕ್ರಮಾಂಕದಲ್ಲಿದ್ರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ 11ನಲ್ಲಿದ್ರೂ ಎಲ್ಲಾ ಆಟಗಾರರಿಗೆ ಬ್ಯಾಟಿಂಗ್ ಅವಕಾಶ ಕೊಡೋಕೆ 11ನೇ ಬ್ಯಾಟರ್ ಆಗಿ ಡಗ್​ಔಟ್ ನಲ್ಲಿ ಕುಳಿತಿದ್ರು. ಹಾಗೇ ಬೌಲಿಂಗ್​ನಲ್ಲೂ ಸೇಮ್ ಫಾರ್ಮೂಲಾ ಬಳಸಿದ್ರು. ವಾರ್ಮ್ ಅಪ್ ಮ್ಯಾಚ್ ಥರ 8 ಆಟಗಾರರಿಂದ ಬೌಲಿಂಗ್ ಮಾಡಿದ್ರು. ಆದ್ರೆ ಇಲ್ಲಿ ಹರ್ಷಿತ್ ರಾಣಾಗೆ ಯಾಕೆ ಅವಕಾಶ ಕೊಡ್ಬೇಕಿತ್ತು ಅಂತಾ ಕೆಲ ಮಾಜಿ ಆಟಗಾರರು ಗರಂ ಆಗಿದ್ದಾರೆ. ಅರ್ಶದೀಪ್ ಸಿಂಗ್ ಅನುಭವಿ. ಸೋ ಬುಮ್ರಾ ಬದಲಿಗೆ ಆಡಲಿ. ಆದ್ರೆ ವರುಣ್​ರನ್ನ ಕೂರಿಸೋ ಅವಶ್ಯಕತೆ ಏನಿತ್ತು. ರಾಣಾ ವಿಚಾರದಲ್ಲಿ ಗೌತಮ್ ಗಂಭೀರ್ ಧ್ರುತರಾಷ್ಟ್ರ ಪ್ರೇಮ ತೋರಿಸ್ತಿದ್ದಾರಾ ಅನ್ನೋ ಪ್ರಶ್ನೆಗಳು ಮೂಡಿವೆ. ಸ್ಪಿನ್ನರ್​ನ ಕೂರಿಸಿ ಪೇಸರ್​ಗೆ ಅವಕಾಶ ಕೊಡೋ ಬದ್ಲು ಬ್ಯಾಟಿಂಗ್ ಡೆಪ್ತ್ ಜಾಸ್ತಿ ಮಾಡ್ಬೋದಿತ್ತು. ರಿಂಕು ಸಿಂಗ್ ಕೈಲಿ ಬ್ಯಾಟಿಂಗ್​ಗೆ ಮಾಡಿಸ್ಬೇಕಿತ್ತು. ಅದನ್ನ ಬಿಟ್ಟು ರಿಂಕುಗೆ ಫೀಲ್ಡಿಂಗ್ ಟೈಮಲ್ಲಿ ಚಾನ್ಸ್ ಕೊಟ್ರೆ ಏನ್ ಪ್ರಯೋಜನ ಅಂತಿದ್ದಾರೆ.

ಭಾರತ ಓಮನ್ ವಿರುದ್ಧ ಗೆದ್ರೂ ಕೂಡ ಬೌಲಿಂಗ್ ವೀಕ್​ನೆಸ್ ಬಗ್ಗೆ ಇಲ್ಲಿ ಡೀಪ್ ಆಗಿ ಥಿಂಕ್ ಮಾಡ್ಲೇಬೇಕಿದೆ. ಸೂಪರ್ 4 ಹಂತದಲ್ಲಿ ಒಂದೊಂದು ಪಂದ್ಯಗಳು ಡು ಆರ್ ಡೈನಂತೆಯೇ ಇರೋದ್ರಿಂದ ಟೆಸ್ಟಿಂಗ್ ಟೀಂ ಸೆಟ್ ಮಾಡೋಕೆ ಸಾಧ್ಯವಿಲ್ಲ. ಅದೂ ಅಲ್ದೇ ಭಾನುವಾರ ಪಾಕಿಸ್ತಾನ ವಿರುದ್ಧ ಮ್ಯಾಚ್ ಇರೋದ್ರಿಂದ ಪ್ಲೇಯಿಂಗ್ 11 ಆಯ್ಕೆ ಕೂಡ ತುಂಬಾನೇ ಮುಖ್ಯವಾಗುತ್ತೆ.

Shantha Kumari