IND Vs NZ.. ರಚಿನ್ HERO – ಟೀಂ ಇಂಡಿಯಾಗೆ ಕನ್ನಡಿಗ ವಿಲನ್
12 ವರ್ಷ.. ಸೆಂಚುರಿ.. ಏನಿದು ಇತಿಹಾಸ?

IND Vs NZ.. ರಚಿನ್ HERO – ಟೀಂ ಇಂಡಿಯಾಗೆ ಕನ್ನಡಿಗ ವಿಲನ್12 ವರ್ಷ.. ಸೆಂಚುರಿ.. ಏನಿದು ಇತಿಹಾಸ?

ವಿರಾಟ್ ಕೊಹ್ಲಿ 0.. ಸರ್ಫರಾಜ್ ಖಾನ್ 0.. ಕೆಎಲ್ ರಾಹುಲ್ 0.. ರವೀಂದ್ರ ಜಡೇಜಾ 0.. ರವಿಚಂದ್ರನ್ ಅಶ್ವಿನ್ 0.. ಟೋಟಲ್ ಐವರು ಆಟಗಾರರು ಡಕ್​ಔಟ್ ಆಗಿದ್ರು. ಕೊನೆಗೆ 31 ಓವರ್​ಗಳಲ್ಲಿ 46 ರನ್ ಸಿಡಿಸಿ ಆಲೌಟ್ ಆದ್ರು. ಟೀಂ ಇಂಡಿಯಾ ಆಟಗಾರರಿಗೆ ಅವ್ರದ್ದೇ ನೆಲದಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ದ ಕಿವೀಸ್ ಬೌಲರ್ಸ್ ಅಕ್ಷರಶಃ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿದ್ರು. ಜಸ್ಟ್ ಬೌಲಿಂಗ್​ನಲ್ಲಿ ಅಷ್ಟೇ ಅಲ್ಲ. ಬ್ಯಾಟಿಂಗ್​ನಲ್ಲೂ ಕೂಡ ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿದ್ದಾರೆ. ನಮ್ಮವ್ರು 46ಕ್ಕೆ ಆಲೌಟ್ ಆದ್ರೆ ಅವ್ರು ಭರ್ಜರಿ 402 ರನ್ ಸಿಡಿಸಿ ಇನ್ನಿಂಗ್ಸ್ ಮುಗಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಇತಿಹಾಸ ನಿರ್ಮಿಸಲು ರೆಡಿಯಾಗಿದ್ದಾರೆ. ಅದ್ರಲ್ಲೂ ಇಲ್ಲಿ ನಮ್ಮ ಟೀಂ ಇಂಡಿಯಾ ಪಾಲಿಗೆ ವಿಲನ್ ಆಗಿದ್ದೇ ಭಾರತೀಯ ಆಟಗಾರ. ನಮ್ಮ ಕರ್ನಾಟಕ ಮೂಲಕ ರಚಿನ್ ರವೀಂದ್ರ. ಅಷ್ಟಕ್ಕೂ ಈ ರವಿನ್ ರವೀಂದ್ರ ಯಾರು? ಭಾರತೀಯ ಮೂಲದವ್ರೇ ಆಗಿದ್ರೂ ಕಿವೀಸ್ ತಂಡ ಸೇರಿದ್ದೇಗೆ? ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕೆ ಮೊದಲ ಪಂದ್ಯ ಗೆಲ್ಲುವ ಅವಕಾಶ ಇದ್ಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಎಂಗೆ ತಲೆನೋವಾಯ್ತು ಮುಡಾ ಕೇಸ್‌ – ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಆದ್ರೆ ಕಿವೀಸ್‌ ಆಟಗಾರರು ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ್ದಾರೆ. ಅದ್ರಲ್ಲೂ ನ್ಯೂಜಿಲೆಂಡ್​ನ ಮಧ್ಯಮ ಕ್ರಮಾಂಕದ ಆಟಗಾರ ರಚಿನ್‌ ರವೀಂದ್ರ ಇತಿಹಾಸ ನಿರ್ಮಿಸಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಶತಕ ಬಾರಿಸಿದ್ದಾರೆ. ಅದ್ರಲ್ಲೂ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ರಚಿನ್ ರವೀಂದ್ರ ನಮ್ಮ ಕರ್ನಾಟಕದ ಹುಡುಗ. ಬೆಂಗಳೂರಿನ ಮೂಲದವ.

12 ವರ್ಷಗಳ ಬಳಿಕ ಶತಕದ ದಾಖಲೆ ಬರೆದ ರಚಿನ್!

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ಶತಕ ಬಾರಿಸಿದ್ದಾರೆ. ಕೇವಲ 124 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 24 ವರ್ಷದ ಯುವ ಆಟಗಾರನ ಎರಡನೇ ಶತಕವಾಗಿದೆ. . ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ 240 ರನ್‌ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದರು. ಈ ಟೆಸ್ಟ್ ಶತಕವು ರಚಿನ್ ರವೀಂದ್ರ ಅವರ ಮೊದಲ ವಿದೇಶಿ ಟೆಸ್ಟ್ ಶತಕವಾಗಿದೆ. ಬೆಂಗಳೂರಿನಲ್ಲಿ 157 ಎಸೆತಗಳಲ್ಲಿ 13 ಬೌಂಡರಿ ಹಾಗೇ 2 ಸಿಕ್ಸರ್​ಗಳ ಸಹಿತ 134 ರನ್​ಗಳನ್ನ ಬಾರಿಸಿ ಪಂದ್ಯದ ಹೀರೋ ಆಗಿ ಮಿಂಚಿದ್ದಾರೆ. ಅದ್ರಲ್ಲೂ 12 ವರ್ಷಗಳ ನಂತರ ಭಾರತದಲ್ಲಿ ಮೂರಂಕಿ ಮುಟ್ಟಿದ ನ್ಯೂಜಿಲೆಂಡ್‌ನ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ 2012 ರಲ್ಲಿ ನ್ಯೂಜಿಲೆಂಡ್ ಪರ ಕೊನೆಯ ಶತಕವನ್ನು ರಾಸ್ ಟೇಲರ್ ಬಾರಿಸಿದ್ದರು. ಇದರಲ್ಲಿ ವಿಶೇಷತೆ ಅಂದರೆ ರಾಸ್‌ ಟೇಲರ್‌ ಸಹ ಇದೇ ಅಂಗಳದಲ್ಲಿ ಶತಕ ಬಾರಿಸಿದ್ದರು.

ಚಿನ್ನಸ್ವಾಮಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ರಚಿನ್!

ಅಷ್ಟಕ್ಕೂ ರಚಿನ್ ರವೀಂದ್ರ ಬೆಂಗಳೂರು ಮೂಲದವರೇ ಆಗಿದ್ದು, ಚಿನ್ನಸ್ವಾಮಿಯಲ್ಲಿ ರಚಿನ್‌ಗೆ ಇದು ಮೊದಲ ಟೆಸ್ಟ್ ಪಂದ್ಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿಯೇ ಶತಕ ಬಾರಿಸಿದ್ದಾರೆ. ಇದಕ್ಕೂ ಮುನ್ನ ಇಲ್ಲಿ ಆಡಿದ 2 ಏಕದಿನ ಪಂದ್ಯಗಳಲ್ಲಿ ಶತಕದೊಂದಿಗೆ 150 ರನ್ ಗಳಿಸಿದ್ದರು. ಕಳೆದ ಏಕದಿನ ವಿಶ್ವಕಪ್​ ನಲ್ಲಿ ರವೀಂದ್ರ ಪಾಕಿಸ್ತಾನದ ವಿರುದ್ಧ 108ರನ್ ​ಗಳಿಸಿದ್ದರು. ಶ್ರೀಲಂಕಾ ವಿರುದ್ಧ 42 ರನ್​ಗಳಿಸಿದ್ದರು. ರಚಿನ್ ಬೆಂಗಳೂರಿನಲ್ಲಿ ಆರ್​ಸಿಬಿ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದರು. ಕಳೆದ ವರ್ಷ ರವೀಂದ್ರ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 25 ವರ್ಷದೊಳಗಿನವರ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದರು.

ರಚಿನ್ ರವೀಂದ್ರ ಕುಟುಂಬ ಮೂಲತಃ ಕರ್ನಾಟಕದವರು!

ಅಷ್ಟಕ್ಕೂ ರಚಿನ್ ರವೀಂದ್ರ ಬಗ್ಗೆ ನಾವು ಇಷ್ಟೆಲ್ಲಾ ಹೇಳ್ತಾ ಇರೋದಕ್ಕೆ ಕಾರಣ ಅವ್ರ ನಮ್ಮ ಕರ್ನಾಟಕ ಮೂಲದವ್ರು. ರಚಿನ್ ರವೀಂದ್ರ ಕುಟುಂಬ ಮೂಲತ: ಭಾರತೀಯ ಮೂಲದವರೇ. ಅದ್ರಲ್ಲೂ ಕನ್ನಡಿಗರು ಬೇರೆ. ರಚಿನ್ ತಂದೆ-ತಾಯಿ ಇಬ್ಬರೂ ಬೆಂಗಳೂರಿನವರಾಗಿದ್ದಾರೆ. ತಂದೆ ರವಿಕೃಷ್ಣಮೂರ್ತಿ ಸಾಫ್ಟ್​​ವೇರ್ ಆರ್ಕಿಟೆಕ್ಟ್ ಆಗಿದ್ದು, ಬೆಂಗಳೂರಿನಲ್ಲಿದ್ದಾಗ ಕ್ಲಬ್ ಲೆವೆಲ್ ಕ್ರಿಕೆಟ್ ಕೂಡ ಆಡಿದ್ರು. ವಿದ್ಯಾಭ್ಯಾಸದ ಬಳಿಕ ಸಾಫ್ಟ್​​ವೇರ್ ಆರ್ಕಿಟೆಕ್ಟ್ ಆಗಿ ರಚಿನ್ ರವೀಂದ್ರ ತಂದೆ ನ್ಯೂಜಿಲ್ಯಾಂಡ್​​ಗೆ ಹೋಗಿದ್ರು. 1999 ನವೆಂಬರ್​ 18ರಂದು ವೆಲ್ಲಿಂಗ್ಟನ್​​ನಲ್ಲಿ ರಚಿನ್ ರವಿಂದ್ರ ಜನಿಸಿದ್ರು.

ರಚಿನ್ ರವೀಂದ್ರ ಹೆಸರಿನಲ್ಲಿದೆ ರಾಹುಲ್ & ಸಚಿನ್ ಅಭಿಮಾನ!

ರಚಿನ್ ರವೀಂದ್ರ ಅನ್ನೋ ಹೆಸರು ಇಟ್ಟಿರೋದ್ರ ಹಿಂದೆಯೂ ಒಂದು ಇಂಟ್ರೆಸ್ಟಿಂಗ್​ ಸ್ಟೋರಿ ಇದೆ. ರಚಿನ್ ತಂದೆ ರವಿಕೃಷ್ಣಮೂರ್ತಿ ಸಚಿನ್ ತೆಂಡೂಲ್ಕರ್​ ಮತ್ತು ರಾಹುಲ್​ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಹೀಗಾಗಿ ತಮ್ಮ ಹೆಸರಿನ ಆರಂಭದ ಅಕ್ಷರ ರಾದ ಜೊತೆ ಸಚಿನ್ ಮತ್ತು ರಾಹುಲ್ ದ್ರಾವಿಡ್​​ ಹೆಸರಿಗೂ ಕನೆಕ್ಟ್ ಆಗಿರುವಂತೆ ಇರಬೇಕು ಅನ್ನೋ ಕಾರಣಕ್ಕಾಗಿ ತಮ್ಮ ಪುತ್ರನಿಗೆ ರವಿನ್ ರವೀಂದ್ರ ಅಂತಾ ನಾಮಕರಣ ಮಾಡಿದ್ರು. ರಚಿನ್ ಅಂದ್ರೆ ಸಚಿನ್​.. ರವೀಂದ್ರ ಅಂದ್ರೆ ರಾಹುಲ್ ದ್ರಾವಿಡ್ ಅನ್ನೋ ಅರ್ಥದಲ್ಲಿ ರಚಿನ್ ರವೀಂದ್ರ ಅಂತಾ ಹೆಸರಿಟ್ಟಿದ್ರು. ಇನ್ನು ರಚಿನ್ ರವೀಂದ್ರ ಪಾಲಿಗೂ ಸಚಿನ್ ಮತ್ತು ದ್ರಾವಿಡ್​​ ರೋಲ್​ಮಾಡೆಲ್​​ಗಳಂತೆ. ರಚಿನ್ ರವೀಂದ್ರ ಕೇವಲ ಒಬ್ಬ ಬ್ಯಾಟ್ಸ್​​ಮನ್ ಅಷ್ಟೇ ಅಲ್ಲ, ಲೆಫ್ಟ್​ ಆರ್ಮ್ ಸ್ಪಿನ್​​ ಬೌಲರ್ ಕೂಡ. 2021ರಲ್ಲಿ ಬಾಂಗ್ಲಾದೇಶ ವಿರುದ್ಧ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರು. ಅದೇ ವರ್ಷ ಕಾನ್ಪುರ್​​ನಲ್ಲಿ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೂ ಪಾದಾರ್ಪಣೆ ಮಾಡಿದ್ರು. ಇದೀಗ ಅದೇ ಭಾರತದ ವಿರುದ್ಧ ಟೆಸ್ಟ್​ನಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ಕುಟುಂಬಸ್ಥರ ಹುಟ್ಟೂರಿನಲ್ಲೇ ಸೆಂಚುರಿ ಬಾರಿಸಿ ಸಂಭ್ರಮಿಸಿದ್ದಾರೆ. ಒಟ್ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಆಟಗಾರರು ಎಡವಿದ್ರೂ ಕೂಡ ಕರ್ನಾಟಕ ಮೂಲದ ರಚಿನ್ ರವೀಂದ್ರ ಹೀರೋ ಆಗಿ ಮೆರೆದಾಡಿದ್ದು ನಿಜಕ್ಕೂ ವಿಶೇಷ.

Shwetha M

Leave a Reply

Your email address will not be published. Required fields are marked *