ರಾಹುಕಾಟಕ್ಕೆ ಬೆಲೆ ತೆತ್ತ ಕನ್ನಡಿಗ – NZ ಫೈಟ್.. KL ಗೆ ಗೇಟ್ ಪಾಸ್
ಪುಣೆ ಪಂದ್ಯದಿಂದ DSP ಸಿರಾಜ್ ಡ್ರಾಪ್
ಇದೇ ಭಯ.. ಇದೇ ಆತಂಕ.. ಇದೇ ಟೆನ್ಷನ್ ಕನ್ನಡಿಗರನ್ನ ಕಾಡಿದ್ದು. ಕೊನೆಗೂ ಯಾವುದು ಆಗ್ಬಾರ್ದು ಅಂತಾ ಇಡೀ ಕರುನಾಡೇ ಅನ್ಕೊಳ್ತಿತ್ತೋ ಅದೇ ನಡೆದು ಹೋಗಿದೆ. ಪದೇ ಪದೇ ಸಿಕ್ಕ ಅವಕಾಶಗಳನ್ನ ಕೈಚೆಲ್ಲಿಕೊಂಡ ತಪ್ಪಿಗೆ ಕನ್ನಡಿಗ ಕೆಎಲ್ ರಾಹುಲ್ ದೊಡ್ಡ ಬೆಲೆಯನ್ನೇ ತೆತ್ತಿದ್ದಾರೆ. ಬೆಂಗಳೂರಿನಲ್ಲಿನ ಫೇಲ್ಯೂರ್ ಪುಣೆ ಪಂದ್ಯದ ಮೇಲೆ ಪರಿಣಾಮ ಬೀರಿದೆ. ಟೀಂ ಇಂಡಿಯಾದಲ್ಲಿ ಪ್ಲೇಯಿಂಗ್ 11ನಿಂದ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ತಮ್ಮದೇ ತಪ್ಪಿನಿಂದ ಬೆಂಚ್ ಕಾಯಬೇಕಾದ ಸಿಚುಯೇಶನ್ ಕ್ರಿಯೇಟ್ ಆಗಿದೆ. ಅಲ್ಲದೇ ಆರ್ಸಿಬಿಯ ವೇಗಿ ಮೊಹಮ್ಮದ್ ಸಿರಾಜ್, ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ ಗೂ ಆಘಾತ ಎದುರಾಗಿದೆ. ಅಷ್ಟಕ್ಕೂ ಕಿವೀಸ್ ಪಡೆಯನ್ನ ಹಣಿಯಲು ರೋಹಿತ್ ಶರ್ಮಾ ಮಾಡಿದ ಸ್ಟ್ರಾಟರ್ಜಿ ಏನು? ಕೆಎಲ್ ರಾಹುಲ್ ಕೈ ಬಿಟ್ಟಿದ್ದು ಒಳ್ಳೇದಾ? ಸಿರಾಜ್ ಮತ್ತು ಕುಲ್ದೀಪ್ ಡ್ರಾಪ್ ಹಿಂದಿನ ಪ್ಲ್ಯಾನ್ ಏನು? ಪುಣೆ ಪಿಚ್ ಯಾರಿಗೆ ಸಹಾಯಕಾರಿ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹನುಮಂತ ಮುಗ್ದ ಅಲ್ಲ ಡ್ರಾಮ? – ದೊಡ್ಮನೆಯಲ್ಲಿ ಸಿಂಪತಿ ಪ್ಲೇಕಾರ್ಡ್
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲೇ ಭಾರತ ಮುಗ್ಗರಿಸಿದೆ. 8 ವಿಕೆಟ್ಗಳ ಅಂತರದಲ್ಲಿ ಸೋಲಿನ ಶಾಕ್ ಎದುರಿಸಿದ್ದ ಭಾರತ ಇದೀಗ 2ನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸೋ ಪಣ ತೊಟ್ಟಿದೆ. ಎರಡನೇ ಟೆಸ್ಟ್ ಪುಣೆಯಲ್ಲಿ ಆರಂಭವಾಗಿದೆ. ಟಾಸ್ ಗೆದ್ದಿರುವ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸ್ಥಾನದ ರೇಸ್‌ನಲ್ಲಿ ಟೀಮ್ ಇಂಡಿಯಾಕ್ಕೆ ಪುಣೆ ಟೆಸ್ಟ್ ಅತ್ಯಂತ ಮಹತ್ವದ್ದಾಗಿದೆ. ಭಾರತ 2012ರಿಂದ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ. ಸತತ 18 ಸರಣಿಗಳನ್ನ ಗೆದ್ದಿದೆ. ಹಾಗಾಗಿ ಪುಣೆ ಟೆಸ್ಟ್ ಸೇರಿ ಮುಂದಿನ 2 ಟೆಸ್ಟ್ ಪಂದ್ಯವನ್ನ ಗೆದ್ದು ಸರಣಿಯನ್ನ ವಶಪಡಿಸಿಕೊಳ್ಳೋ ಪ್ಲ್ಯಾನ್ನಲ್ಲಿದೆ. ಇದೇ ಕಾರಣಕ್ಕೆ ಗುರುವಾರದ ಪಂದ್ಯದಲ್ಲಿ ಮೂರು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಅದಲ್ಲಿ ಮೇಜರ್ ಟ್ವಿಸ್ಟ್ ಅಂದ್ರೆ ಕನ್ನಡಿಗ ಕೆಎಲ್ ರಾಹುಲ್ರನ್ನ ಕೈ ಬಿಟ್ಟಿರೋದು.
ತವರು ನೆಲದಲ್ಲೇ ಮುಗ್ಗರಿಸಿದ್ದ ರಾಹುಲ್ ಗೆ ಪುಣೆಯಲ್ಲಿ ಶಾಕ್!
ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಪ್ರದರ್ಶನ ಅವ್ರ ಅಭಿಮಾನಿಗಳಿಗೇ ಬೇಸರ ಮೂಡಿಸಿತ್ತು. ಮಾಜಿ ಕ್ರಿಕೆಟರ್ಸ್ ಕೂಡ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡಿ ಅಂತಾ ಕಿಡಿ ಕಾರಿದ್ರು. ಹೀಗೆ ಸಿಕ್ಕ ಅವಕಾಶಗಳನ್ನ ಪದೇಪದೆ ಕೈಚೆಲ್ಲಿಕೊಳ್ತಿರೋ ರಾಹುಲ್ ಇದೀಗ ಟೆಸ್ಟ್ ತಂಡದ ಅವಕಾಶವೂ ತೂಗುಯ್ಯಾಲೆಯಂತಾಗಿದೆ. ಮೊದಲ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಡಕ್ ಔಟ್, ಎರಡನೇ ಇನ್ನಿಂಗ್ಸ್ನಲ್ಲಿ 12 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಮಿಡಲ್ ಆರ್ಡರ್ನಲ್ಲಿ ಭಾರತ ತಂಡಕ್ಕೆ ಯಾವುದೇ ರೀತಿಯಲ್ಲೂ ನೆರವಾಗಿರಲಿಲ್ಲ. ಅಲ್ದೇ ಕುತ್ತಿಗೆ ನೋವಿನಿಂದ ಚೇತರಿಸಿಕೊಂಡಿರುವ ಶುಭಮನ್ ಗಿಲ್ ತಂಡಕ್ಕೆ ವಾಪಾಸಾಗಿದ್ದಾರೆ. ಹೀಗಾಗಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ 53 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 91 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕನ್ನಡಿಗ 8 ಶತಕ ಹಾಗೂ 15 ಅರ್ಧಶತಕಗಳೊಂದಿಗೆ 2981 ರನ್ ಕಲೆಹಾಕಿದ್ದಾರೆ. ಅಂದರೆ ಪ್ರಸ್ತುತ ತಂಡದಲ್ಲಿರುವ ಅನುಭವಿ ಆಟಗಾರರಲ್ಲಿ ರಾಹುಲ್ ಕೂಡ ಒಬ್ಬರು. ಇದಾಗ್ಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಫೇಲ್ಯೂರ್ ಆಗಿದ್ದಾರೆ.
ಸಿರಾಜ್ ಮತ್ತು ಕುಲ್ದೀಪ್ ರನ್ನೂ ಕೈ ಬಿಟ್ಟ ರೋಹಿತ್ ಶರ್ಮಾ!
ಪುಣೆಯಲ್ಲಿ ನಡೆಯುತ್ತಿರೋ ಈ ಪಂದ್ಯ ಭಾರತಕ್ಕೆ ಮೋಸ್ಟ್ ಇಂಪಾರ್ಟೆಂಟ್. ಈಗಾಗ್ಲೇ ಒಂದು ಮ್ಯಾಚ್ ಗೆದ್ದಿರೋ ಕಿವೀಸ್ ಇನ್ನೊಂದು ಪಂದ್ಯ ಗೆದ್ರೂ ಸರಣಿಯನ್ನ ಕೈವಶ ಮಾಡಿಕೊಳ್ತಾರೆ. ಹೀಗಾಗಿ ಈ ಸರಣಿಯಲ್ಲಿ ಭಾರತ ಸಮಬಲ ಸಾಧಿಸ್ಬೇಕು ಅಂದ್ರೆ ಈ ಮ್ಯಾಚ್ನ ಶತಾಯ ಗತಾಯ ಗೆಲ್ಲಲೇಬೇಕು. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಜೊತೆ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ರನ್ನೂ ತಂಡದಿಂದ ಕೈಬಿಡಲಾಗಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಇದಲ್ಲದೆ, ವೇಗಿ ಮೊಹಮ್ಮದ್ ಸಿರಾಜ್ ಬದಲಿಗೂ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಸಂಚಲನ ಮೂಡಿಸಿದ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಲಾಗಿದೆ.
ಕಳೆದ 12 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಸರಣಿ ಸೋಲದ ಭಾರತ!
ಭಾರತಕ್ಕೆ ಈ ಮ್ಯಾಚ್ ಎಷ್ಟು ಇಂಪಾರ್ಟೆಂಟೋ ನಾಯಕ ರೋಹಿತ್ ಶರ್ಮಾಗೂ ಅಷ್ಟೇ ಇಂಪಾರ್ಟೆಂಟ್. ಹಾಗೇನಾದ್ರೂ ಸರಣಿ ಕೈ ಜಾರಿದ್ರೆ ಕೆಟ್ಟ ದಾಖಲೆ ಅವ್ರದ್ದಾಗಲಿದೆ. ಹೀಗಾಗಿ ಸರಣಿಯಲ್ಲಿ ಉಳಿಯಬೇಕಾದರೆ ಭಾರತ ಪುಣೆ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಇದಾದ ಬಳಿಕ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಮುಂಬೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಭಾರತ ಗೆಲ್ಲಲೇಬೇಕು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ರೋಹಿತ್ ಪಡೆ ಹೆಸರಿನಲ್ಲಿ ವಿಶ್ವ ದಾಖಲೆ ಆಗಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ತವರಿನಲ್ಲಿ ಭಾರತಕ್ಕೆ ಸತತ 19ನೇ ಟೆಸ್ಟ್ ಸರಣಿ ಜಯವಾಗಿರಲಿದೆ. ತವರಿನಲ್ಲಿ ಸತತ 19 ಟೆಸ್ಟ್ ಸರಣಿಗಳನ್ನು ಗೆಲ್ಲಲು ವಿಶ್ವದ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಭಾರತ ತಂಡ ಕಳೆದ 12 ವರ್ಷಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ. 2012ರ ನವೆಂಬರ್‌ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಇದಾದ ನಂತರ ಭಾರತ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ತವರಿನಲ್ಲಿ ಕಳೆದ 54 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, 42 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 7 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಒಟ್ನಲ್ಲಿ ಟೀಮ್ ಇಂಡಿಯಾದ ನಾಯಕನಾಗಿ, ಖಾಯಂ ಸದಸ್ಯರಾಗಿ ಮಿಂಚುತ್ತಿದ್ದ ಕೆಎಲ್ ರಾಹುಲ್ ಇದೀಗ ಪ್ಲೇಯಿಂಗ್ 11ನಲ್ಲೂ ಚಾನ್ಸ್ ಕಳೆದುಕೊಳ್ತಿದ್ದಾರೆ. ಶ್ರೀಲಂಕಾ ಏಕದಿನ ಸರಣಿಯಲ್ಲೂ ಫೇಲ್ಯೂರ್ ಅನುಭವಿಸಿದ್ದ ರಾಹುಲ್ ಮೂರು ಪಂದ್ಯಗಳ ಪೈಕಿ ಕೊನೆಯ ಪಂದ್ಯದಲ್ಲಿ ಬೆಂಚ್ ಕಾದಿದ್ರು. ಇದೀಗ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಇದೇ ಆಗ್ತಿದೆ. ರಾಹುಲ್ರ ಈ ಕಳಪೆ ಫಾರ್ಮ್ ಹೀಗೇ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಚಾನ್ಸ್ ಸಿಗೋದೇ ಅನುಮಾನ ಇದೆ.