NZ ಬೇಟೆಗೂ ಸೇಮ್ SQUAD – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?
ಬುಮ್ರಾ ವೈಸ್ ಕ್ಯಾಪ್ಟನ್ ಟ್ರಿಕ್ಸ್ ಏನು?

NZ ಬೇಟೆಗೂ ಸೇಮ್ SQUAD – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?ಬುಮ್ರಾ ವೈಸ್ ಕ್ಯಾಪ್ಟನ್ ಟ್ರಿಕ್ಸ್ ಏನು?

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಜೋಶ್​ನಲ್ಲಿರೋ ಟೀಂ ಇಂಡಿಯಾ ಬಾಯ್ಸ್ ಇದೀಗ ಕಿವೀಸ್ ಪಡೆಯನ್ನೂ ಬೇಟೆಯಾಡೋ ಹುಮ್ಮಸ್ಸಿನಲ್ಲಿದ್ದಾರೆ. ಬಾಂಗ್ಲಾ ಬಳಗವನ್ನ ಮಣ್ಣು ಮುಕ್ಕಿಸಿದ್ದ ಬಹುತೇಕ ಆಟಗಾರರೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಫೈಟ್​ಗೂ ಅನೌನ್ಸ್ ಮಾಡಲಾಗಿದೆ. ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರ ತಂಡ ಪ್ರಕಟ ಮಾಡಲಾಗಿದೆ.  ಹದಿನೈದು ಸದಸ್ಯರಲ್ಲಿ ಆಲ್ ರೌಂಡರ್​ಗಳಾಗಿ ಆಯ್ಕೆಯಾಗಿರುವುದು ಕೇವಲ ಮೂವರು ಆಟಗಾರರು ಮಾತ್ರ. ಹಾಗೆಯೇ ಆರು ಬ್ಯಾಟರ್​ಗಳಿಗೆ ಆಯ್ಕೆ ಸಮಿತಿ ಮಣೆಹಾಕಿದೆ. ಇವರ ಜೊತೆಗೆ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್​ಗಳು ತಂಡದಲ್ಲಿದ್ದಾರೆ. ಅಷ್ಟಕ್ಕೂ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ವೈಸ್ ಕ್ಯಾಪ್ಟನ್ ಪಟ್ಟ ಜಸ್ಪ್ರೀತ್ ಬುಮ್ರಾಗೆ ಕಟ್ಟಿದ್ದೇಕೆ? ಪ್ಲೇಯಿಂಗ್ 11 ಹೇಗಿರಲಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ಬಾಂಗ್ಲಾದೇಶದ ಆಟಗಾರರು ಭಾರತ ಪ್ರವಾಸದಲ್ಲಿರುವಾಗಲೇ ನ್ಯೂಜಿಲೆಂಡ್ ತಂಡವೂ ಭಾರತ ಪ್ರವಾಸ ಕೈಗೊಂಡಿದೆ. ಅಕ್ಟೋಬರ್ 16ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಮಾಡಿದೆ. ಬಟ್ ಮ್ಯಾನೇಜ್​ಮೆಂಟ್ ಇಲ್ಲೊಂದು ಟ್ವಿಸ್ಟ್ ಇಟ್ಟಿದೆ. ಕಳೆದ ಪಂದ್ಯದಲ್ಲಿ ಯಾರಿಗೂ ಕೂಡ ವೈಸ್ ಕ್ಯಾಪ್ಟನ್ಸಿ ನೀಡಿರಲಿಲ್ಲ. ಬಟ್ ಈ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ನಾಯಕನಾಗಿದ್ರೆ ಜಸ್ಪ್ರೀತ್ ಬುಮ್ರಾಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಮರಳಿ ಪಡೆದಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳಿಂದ 12.81ರ ಸರಾಸರಿಯಲ್ಲಿ 11 ವಿಕೆಟ್ ಪಡೆದ ವೇಗಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಉಪನಾಯಕತ್ವ ನೀಡಲಾಗಿದೆ.

ಕಿವೀಸ್ ಬೇಟೆಗೆ ಟೀಂ ರೆಡಿ!

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್, ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್

15 ಜನರ ಬಳಗದಲ್ಲಿ ಸೀನಿಯರ್ಸ್ ಜೊತೆ ಜೂನಿಯರ್ಸ್ ಗೆ ಚಾನ್ಸ್!

ಅಕ್ಟೋಬರ್ 16 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭ ಆಗಲಿದೆ. ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಬಿಸಿಸಿಐ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಅನುಭವಿ ಆಟಗಾರರ ಜತೆಗೆ ಹೊಸ ಆಟಗಾರರಿಗೂ ಕೂಡ ಅವಕಾಶ ನೀಡಲಾಗಿದೆ. ಇತ್ತೀಚೆಗಷ್ಟೇ ಟೀಂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆದ್ದಿರುವ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧವೂ ಬಹುತೇಕ ಅದೇ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

ಸ್ಟ್ರಾಂಗ್ ಬ್ಯಾಟಿಂಗ್ ಸ್ಕ್ವಾಡ್ ನೊಂದಿಗೆ ಕಣಕ್ಕಿಳಿಯಲಿದೆ ಭಾರತ!

ಕಿವೀಸ್ ವಿರುದ್ಧದ ಸರಣಿಗೂ ಭಾರತ ಬಲಿಷ್ಠ ಬ್ಯಾಟಿಂಗ್ ಲೈನಪ್​ನೊಂದಿಗೆ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ತಂಡದ ಭಾಗವಾಗಿದ್ದಾರೆ. ಉಳಿದಂತೆ ಯುವ ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರ ಮೇಲೂ ಕೂಡ ಸಾಕಷ್ಟು ನಿರೀಕ್ಷೆ ಇದೆ. ಆಲ್​ರೌಂಡರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಅವರಿಗೂ ಟೀಂ ಇಂಡಿಯಾ ಅವಕಾಶ ನೀಡಿದೆ. ಬೌಲಿಂಗ್  ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಚಾನ್ಸ್ ಪಡೆದಿದ್ದಾರೆ. ಆಕಾಶ್ ದೀಪ್ ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಬೌಲಿಂಗ್​ ಮಾಡಿ ಮಿಂಚಿದ್ದರು. ಸ್ಪಿನ್ನರ್ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಸ್ಥಾನ ಪಡೆದುಕೊಂಡಿದ್ದಾರೆ.

ಬಾಂಗ್ಲಾ ಸರಣಿಗೆ ಆಯ್ಕೆಯಾಗಿದ್ದ ಯಶ್ ದಯಾಳ್ ಡ್ರಾಪ್!

ಇನ್ನು ಭಾರತದ ಯುವ ವೇಗದ ಬೌಲರ್ ಯಶ್ ದಯಾಳ್ ಅವರು ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಮೊದಲ ಬಾರಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದರು. ಆದರೆ, ಒಂದೇ ಒಂದು ಪಂದ್ಯವನ್ನು ಕೂಡ ಆಡುವ ಅವಕಾಶ ಸಿಗಲಿಲ್ಲ. ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ನಿಂದ ಕೈಬಿಡಲಾಗಿದೆ. ಹಾಗೇ 30 ವರ್ಷದ ವೇಗದ ಬೌಲರ್ ಮುಖೇಶ್ ಕುಮಾರ್ ಭಾರತ ತಂಡದ ಪರ ಇದುವರೆಗೆ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ವಿಕೆಟ್ ಪಡೆದಿದ್ದಾರೆ. ಹಾಗೇ 47 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 186 ವಿಕೆಟ್​ಗಳನ್ನು ಕಿತ್ತಿದ್ದಾರೆ. ಆದರೆ, ಬಾಂಗ್ಲಾದೇಶ ಸರಣಿಯಲ್ಲೂ ಅವರಿಗೆ ಅವಕಾಶ ಸಿಗಲಿಲ್ಲ. ಇದೀಗ ನ್ಯೂಜಿಲೆಂಡ್ ಸರಣಿಯಿಂದಲೂ ಕುಮಾರ್ ಅವರನ್ನು ಕೈಬಿಡಲಾಗಿದೆ. ದೇಶಿಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್‌ರಂತೆ ರನ್ ಗಳಿಸಿದ್ದ ಅಭಿಮನ್ಯು ಈಶ್ವರನ್‌ರನ್ನೂ ಕಡೆಗಣಿಸಲಾಗಿದೆ. ಸದ್ಯ ಈಶ್ವರನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ನಡೆದ ಇರಾನಿ ಕಪ್‌ನಲ್ಲಿ ಅವರು 191 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ದುಲೀಪ್ ಟ್ರೋಫಿಯಲ್ಲಿ 3 ಪಂದ್ಯಗಳಲ್ಲಿ 2 ಶತಕಗಳನ್ನು ಗಳಿಸಿದರು. 29 ವರ್ಷದ ಈಶ್ವರನ್ ಇದುವರೆಗೆ ಆಡಿರುವ 98 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬರೋಬ್ಬರಿ 7506 ರನ್ ಗಳಿಸಿದ್ದಾರೆ.

ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯುತ್ತಾರಾ ಸರ್ಫರಾಜ್?

ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಸರ್ಫರಾಜ್‌ ಖಾನ್‌ಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಸರ್ಫರಾಜ್‌ ಖಾನ್‌ ಅವರು ಇರಾನಿ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಮ್ಮನ್ನು ಆಯ್ಕೆ ಮಾಡುವಂತೆ ಬಿಸಿಸಿಐ ಆಯ್ಕೆ ಸಮಿತಿಗೆ ಒತ್ತಾಯಿಸಿದರು. ಇದರ ಪರಿಣಾಮ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತೋ ಇಲ್ವೋ ಅನ್ನೋದೇ ಈಗಿರೋ ಪ್ರಶ್ನೆ. ಹಾಗೇ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆರ್‌ ಅಶ್ವಿನ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಇನ್ನು ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಅಕ್ಟೋಬರ್ 24 ರಿಂದ ಶುರುವಾಗಲಿರುವ ಎರಡನೇ ಪಂದ್ಯಕ್ಕೆ ಪುಣೆ ಎಂಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ನವೆಂಬರ್ 1 ರಿಂದ ಆರಂಭವಾಗಲಿರುವ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಒಟ್ನಲ್ಲಿ ಬಾಂಗ್ಲಾ ಪಡೆಯನ್ನ ವೈಟ್ ವಾಶ್ ಮಾಡಿರೋ ಟೀಂ ಇಂಡಿಯಾ ಬಾಯ್ಸ್ ಇದೀಗ ಕಿವೀಸ್ ಟೀಮ್​ನೂ ಬೇಟೆಯಾಡೋ ಹುಮ್ಮಸ್ಸಿನಲ್ಲಿದ್ದಾರೆ. ಇನ್ನೂ ಕೆಲ ಆಟಗಾರರಿಗೆ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಹುಸಿಯಾಗಿದ್ದು ನಿರಾಸೆಗೊಂಡಿದ್ದಾರೆ.

Shwetha M