0 0 0 0 0.. 46 ರನ್ ಗೆ ಆಲೌಟ್! – ರೋಹಿತ್ ರಿಂದ್ಲೇ ಐವರು 0 ಸುತ್ತಿದ್ರಾ?
ಬೆಂಗಳೂರಲ್ಲಿ ದಾಖಲೆ ಬರೆಯುತ್ತಾ NZ?

0 0 0 0 0.. 46 ರನ್ ಗೆ ಆಲೌಟ್! – ರೋಹಿತ್ ರಿಂದ್ಲೇ ಐವರು 0 ಸುತ್ತಿದ್ರಾ?ಬೆಂಗಳೂರಲ್ಲಿ ದಾಖಲೆ ಬರೆಯುತ್ತಾ NZ?

ತವರಿನಲ್ಲಿ ಗೆಲುವಿನ ಅಲೆಯಲ್ಲಿ ತೇಲಾಡ್ತಿದ್ದ ಟೀಂ ಇಂಡಿಯಾಗೆ ಕಿವೀಸ್ ಪಡೆ ಮರ್ಮಾಘಾತ ನೀಡಿದೆ. ಹೋಮ್​ಟೌನ್​ನಲ್ಲಿ ಕ್ರೀಸ್​ನಲ್ಲಿ ಸೆಟಲ್ ಆಗೋಕೂ ಬಿಡ್ದೇ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದೆ. ಒಂದಲ್ಲ, ಎರಡಲ್ಲ ಐವರು ಆಟಗಾರರು ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಟೀಂ ಇಂಡಿಯಾ ದಶಕಗಳ ಬಳಿಕ ಅತೀ ಕೆಟ್ಟ ದಾಖಲೆಯನ್ನ ಬರೆದಿದೆ. ನ್ಯೂಜಿಲೆಂಡ್ ಬೌಲರ್​ಗಳ ಸಿಡಿಲಬ್ಬರಕ್ಕೆ ಎರಡಂಕಿ ದಾಟುವ ಮುನ್ನವೇ ಭಾರತ ತಂಡ ಸರ್ವಪತನ ಕಂಡಿದೆ. ಅಷ್ಟಕ್ಕೂ ಕಿವೀಸ್ ವಿರುದ್ಧ ಫೇಲ್ಯೂರ್ ಆಗಿದ್ದೇಕೆ ಭಾರತೀಯ ಆಟಗಾರರು? ಓವರ್ ಕಾನ್ಫಿಡೆನ್ಸ್ ಮುಳುವಾಯ್ತಾ? ಐವರು ಪ್ಲೇಯರ್ಸ್ ಖಾತೆ ತೆರೆಯೋಕೂ ವಿಫಲರಾಗಿದ್ದೇಗೆ? ನ್ಯೂಜಿಲೆಂಡ್ ಸ್ಟ್ರಾಟರ್ಜಿ ವರ್ಕೌಟ್ ಆಯ್ತಾ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಿಗ್ಗಾವಿ ಉಪ ಚುನಾವಣೆಗೆ ಕೌಂಟ್‌ ಡೌನ್‌ – ಬಿಎಸ್‌ ವೈಯನ್ನ ಭೇಟಿಯಾದ ಸಂಸದ ಬೊಮ್ಮಾಯಿ

0..0..0..0..0.. ಒಬ್ರಲ್ಲ ಇಬ್ರಲ್ಲ ಐವರು ಆಟಗಾರರು ಡಕ್​ಔಟ್. ಟಿ-20 ವಿಶ್ವಕಪ್​ನ ಚಾಂಪಿಯನ್ಸ್, ಟೆಸ್ಟ್ ಕ್ರಿಕೆಟ್​ನ ಲೆಜೆಂಡ್ಸ್, ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ನ ಟಾಪರ್ಸ್ ನ್ಯೂಜಿಲೆಂಡ್ ವಿರುದ್ಧ ಅಕ್ಷರಶಃ ಮಂಡಿಯೂರಿದ್ದಾರೆ. ಶ್ರೀಲಂಕಾದಂತಹ ದುರ್ಬಲ ತಂಡದ ವಿರುದ್ಧ 0-2 ಅಂತರದಲ್ಲಿ ಸೋತಿದ್ದ ನ್ಯೂಜಿಲೆಂಡ್ ತಂಡ ಬೆಂಗಳೂರಿನಲ್ಲಿ ಟೀಂ ಇಂಡಿಯಾವನ್ನು ಬ್ಯಾಟಿಂಗ್ ಬಳಗವನ್ನ ಛಿದ್ರಗೊಳಿಸಿದೆ. ಮಳೆ ಅಬ್ಬರದ ನಡುವೆ ರನ್​ಗಳ ಮಳೆಯಾಗುತ್ತೆ ಅಂತಾ ಕಾಯ್ತಿದ್ದ ಟೀಂ ಇಂಡಿಯಾ ಫ್ಯಾನ್ಸ್​ಗೆ ಕಂಡಿದ್ದು ರನ್ ಮಳೆ ಅಲ್ಲ. ವಿಕೆಟ್ಗಳ ಮಳೆ. ಒಬ್ಬರ ಹಿಂದೆ ಒಬ್ಬರಂತೆ ಎಲ್ಲರೂ ಕೂಡ ಪೆವಿಲಿಯನ್ ಪರೇಡ್ ನಡೆಸಿದ್ರು. ಅದ್ರಲ್ಲೂ ಐವರು ಶೂನ್ಯವೀರರ ಬಗ್ಗೆ ನಾವಿಲ್ಲಿ ಹೇಳಲೇಬೇಕು.

ಟೀಮ್ ಇಂಡಿಯಾ ಪರ ಸೊನ್ನೆ ಸುತ್ತಿದ ಐವರು ಸ್ಟಾರ್ಸ್!

ವಿರಾಟ್ ಕೊಹ್ಲಿ 9 ಬಾಲ್ – 0 ರನ್,  ಸರ್ಫರಾಝ್ ಖಾನ್ 3 ಬಾಲ್ – 0 ರನ್, ಕೆಎಲ್ ರಾಹುಲ್ 6 ಬಾಲ್ – 0 ರನ್, ರವೀಂದ್ರ ಜಡೇಜಾ 6 ಬಾಲ್ – 0 ರನ್, ರವಿಚಂದ್ರನ್ ಅಶ್ವಿನ್ 1 ಬಾಲ್ – 0 ರನ್, ಹೀಗೆ ಐವರು ಬ್ಯಾಟರ್ಸ್ ಖಾತೆ ತೆರೆಯದೆಯೇ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ವಿಕೆಟ್ ಒಪ್ಪಿಸಿದ್ರು. 25 ವರ್ಷಗಳ ನಂತರ ಭಾರತ ತಂಡದ ಐವರು ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದಕ್ಕೂ ಮುನ್ನ 1999 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಐವರು ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

46 ರನ್ ಗಳಿಗೆ ಟೀಂ ಇಂಡಿಯಾ ಆಲ್ ಔಟ್!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ನಿರ್ಧಾರ ತಪ್ಪು ಎಂಬುದನ್ನು ನ್ಯೂಝಿಲೆಂಡ್ ವೇಗಿಗಳು ಕೇವಲ 31.2 ಓವರ್​ಗಳಲ್ಲಿ ನಿರೂಪಿಸಿದ್ದರು. ಅಂದರೆ 188 ಎಸೆತಗಳಲ್ಲಿ ಭಾರತ ತಂಡವು ಕೇವಲ 46 ರನ್ ಗಳಿಸಿ ಆಲೌಟ್ ಆಯಿತು. ಈ ಅತ್ಯಲ್ಪ ಮೊತ್ತದೊಂದಿಗೆ ಟೀಮ್ ಇಂಡಿಯಾ 5 ಅವಮಾನಕರ ದಾಖಲೆಗಳನ್ನು ಮೈಮೇಲೆ ಎಳೆದುಕೊಂಡಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡದ ಅತ್ಯಲ್ಪ ಮೊತ್ತ!

ನ್ಯೂಜಿಲೆಂಡ್ ವಿರುದ್ಧದ ಸ್ಕೋರ್ ಭಾರತದಲ್ಲಿ ಟೀಮ್ ಇಂಡಿಯಾದ ಅತ್ಯಲ್ಪ ಮೊತ್ತ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್​ಗೆ ಆಲೌಟ್ ಆಗಿದ್ದು ಕಳಪೆ ದಾಖಲೆಯಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಟೀಮ್ ಇಂಡಿಯಾ ಬ್ಯಾಟರ್​ಗಳು ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಹಾಗೇ ಭಾರತೀಯ ಉಪಖಂಡದಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ಹೀನಾಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ 53 ರನ್ ಕಲೆಹಾಕಿದ್ದು ಅತ್ಯಲ್ಪ ಮೊತ್ತವಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ. ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಅನಗತ್ಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ.  78 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. 1946 ರಲ್ಲಿ ನ್ಯೂಝಿಲೆಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದ್ದರು.

ರಿಷಭ್ ಪಂತ್ 20 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್!

ಟೀಂ ಇಂಡಿಯಾದ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮೊತ್ತವನ್ನು ತಲುಪಿದರೆ, ಅರ್ಧದಷ್ಟು ತಂಡವು ಖಾತೆ ತೆರೆಯಲು ಫೇಲ್ಯೂರ್ ಆದ್ರು. 20 ರನ್​ಗಳಿಸಿದ ವಿಕೆಟ್ ಕೀಪರ್ ರಿಷಬ್ ಪಂತ್ ತಂಡದ ಪ್ರಮುಖ ರನ್ ಸ್ಕೋರರ್ ಎನಿಸಿಕೊಂಡರು. 49 ಬಾಲ್ ಫೇಸ್ ಮಾಡಿದ ಪಂತ್ 2 ಬೌಂಡರಿ ಸಮೇತ 20 ರನ್ ಗಳಿಸಿ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರು. ಹಾಗೇ ಯಶಸ್ವಿ ಜೈಸ್ವಾಲ್ 63 ಎಸೆತಗಳಲ್ಲಿ 13 ರನ್ ಗಳಿಸಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಎನಿಸಿಕೊಂಡ್ರು. ಅಲ್ದೇ ಭಾರತದ ಟಾಪ್-7 ಬ್ಯಾಟ್ಸ್‌ಮನ್‌ಗಳ ಪೈಕಿ ನಾಲ್ವರು ತವರು ನೆಲದಲ್ಲಿ ಡಕೌಟ್ ಆಗಿರುವುದು ಇದೇ ಮೊದಲು. ಒಟ್ಟಾರೆ, ಇನ್ನಿಂಗ್ಸ್ ಒಂದರಲ್ಲಿ ಟೀಂ ಇಂಡಿಯಾದ ಮೊದಲ ಏಳು ಬ್ಯಾಟ್ಸ್ ಮನ್ ಗಳ ಪೈಕಿ ನಾಲ್ವರು ಖಾತೆ ತೆರೆಯದೆ ವಾಪಸಾಗಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ ಅವರು 1952 ಮತ್ತು 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವಿಕೆಟ್ ಕಳೆದುಕೊಂಡಿದ್ದರು.

ಕ್ಯಾಪ್ಟನ್ & ಕೋಚ್ ನಿರ್ಧಾರದಿಂದಲೇ ಎಡವಟ್ಟು?

ಇನ್ನು ಆಟಗಾರರ ಈ ಫೇಲ್ಯೂರ್​ಗೆ ಟೀಂ ಇಂಡಿಯಾ ನಾಯಕ ಹಾಗೂ ಕೋಚ್ ಗಂಭೀರ್ ಅವರ ಕೆಟ್ಟ ನಿರ್ಧಾರವೇ ಕಾರಣ ಅಂತಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಮೊದಲ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತು. ಈ ವೇಳೆ ಪಿಚ್ ಅನ್ನು ಕವರ್ ಗಳಿಂದ ಮುಚ್ಚಿಟ್ಟ ಪರಿಣಾಮ ಪಿಚ್​ ನಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದರ ಪರಿಣಾಮ 2ನೇ ದಿನದಾಟದ ಮೊದಲ ಸೆಷನ್ ನಲ್ಲಿ ವೇಗದ ಬೌಲರ್ ಗಳಿಗೆ ಪಿಚ್ ನೆರವು ಮಾಡಿಕೊಡುತ್ತದೆ. ಇದರೊಂದಿಗೆ ಟೀಂ ಇಂಡಿಯಾ ಕೇವಲ 46 ರನ್ ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದಿದೆ. ಕೋಚ್ ಗೌತಮ್ ಗಂಭೀರ್ ಸಲಹೆ ಮೇರೆಗೆ ರೋಹಿತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸದ್ಯ ಈ ನಿರ್ಧಾರ ಬಗ್ಗೆ ಭಾರೀ ಟೀಕೆಗಳು ಕೇಳಿ ಬರುತ್ತಿದೆ.

ಚಿನ್ನಸ್ವಾಮಿಯಲ್ಲಿ ಮಿಂಚಿದ ಮ್ಯಾಟ್ ಹೆನ್ರಿ ಬೌಲಿಂಗ್!

ಅಷ್ಟಕ್ಕೂ ಇಲ್ಲಿ ರೋಹಿತ್ ಶರ್ಮಾ ಪಡೆಗೆ ಮಾರಕವಾಗಿದ್ದೇ ಮ್ಯಾಟ್ ಹೆನ್ರಿ ಬೌಲಿಂಗ್. ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ ಹೆನ್ರಿ ಒಟ್ಟು 5 ವಿಕೆಟ್​ಗಳನ್ನ ಬೇಟೆಯಾಡಿದ್ರು. ಅದ್ರಲ್ಲೂ ಮೂವರು ಭಾರತದ ಬ್ಯಾಟ್ಸ್​ಮನ್​ಗಳನ್ನ ‘0’ ಕ್ಕೆ ಔಟ್ ಮಾಡಿದರು. ಸರ್ಫರಾಜ್ ಖಾನ್, ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಕಳಿಸಿದ್ರು. ಮ್ಯಾಟ್ ಹೆನ್ರಿ ಬಿಟ್ಟರೇ ರೋಹಿತ್ ಪಡೆಗೆ ಕಾಡಿದ್ದು ಎಂದರೆ ವಿಲಿಯಂ ಒರೂರ್ಕೆ. ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್​ರನ್ನ ವಿಲಿಯಂ ಡಕೌಟ್ ಮಾಡಿದರು. ಭಾರತದ ಇಬ್ಬರು ಸ್ಟಾರ್ ಬ್ಯಾಟ್ಸ್​ಮನ್​ಗಳು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು.

ಒಟ್ನಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ ಭಾರೀ ಮುಖಭಂಗ ಆಗಿದೆ. ಟೀಂ ಇಂಡಿಯಾದ ಐದು ಬ್ಯಾಟ್ಸ್​​ಮನ್​​ಗಳು ಸೊನ್ನೆ ಸುತ್ತಿ, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ಎರಡನೇ ಇನ್ನಿಂಗ್ಸ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ.

Shwetha M