ENG ಲೆಕ್ಕ ಚುಕ್ತಾ ಮಾಡುತ್ತಾ IND? – ಮಳೆಗೆ ಪಂದ್ಯ ರದ್ದಾದ್ರೆ ಯಾರಿಗೆ ಲಾಭ?
ಕೊಹ್ಲಿಗೆ ಕೊಕ್.. ಜೈಸ್ವಾಲ್ ಗೆ ಚಾನ್ಸ್?

ENG ಲೆಕ್ಕ ಚುಕ್ತಾ ಮಾಡುತ್ತಾ IND? – ಮಳೆಗೆ ಪಂದ್ಯ ರದ್ದಾದ್ರೆ ಯಾರಿಗೆ ಲಾಭ?ಕೊಹ್ಲಿಗೆ ಕೊಕ್.. ಜೈಸ್ವಾಲ್ ಗೆ ಚಾನ್ಸ್?

20 ರಾಷ್ಟ್ರಗಳು. ಒಂದು ಟ್ರೋಫಿ. ನಾಲ್ಕು ವಾರಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದ ಟಿ-20 ವಿಶ್ವಕಪ್ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಚಾಂಪಿಯನ್ ಪಟ್ಟಕ್ಕೇರಲು ನಾಲ್ಕು ತಂಡಗಳ ನಡುವೆ ಜಿದ್ದಾಜಿದ್ದಿನ ಕದನಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಸೆಮೀಸ್​ನ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಕಣಕ್ಕಿಳಿದ್ರೆ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಾಟ ನಡೆಸಲಿವೆ. ಅಷ್ಟಕ್ಕೂ ಪಂದ್ಯ ಭಾರತಕ್ಕೆ ಸೇಡಿನ ಪಂದ್ಯವಾಗಿದ್ದೇಗೆ? ಫಿನಾಲೆ ತಲುಪಲು ಯಾರಿಗೆ ಹೆಚ್ಚು ಅವಕಾಶ ಇದೆ? ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್‌ಗೆ ಆಸಿಸ್ ಬಾಹುಬಲಿ ಗುಡ್ ಬೈ -ಡೇವಿಡ್ ವಾರ್ನರ್ ನೋವಿನ ವಿದಾಯ

2024ರ ಟಿ-20 ರೇಸ್​ನಲ್ಲಿ ಒಟ್ಟಾರೆ 20 ರಾಷ್ಟ್ರಗಳು ಭಾಗಿಯಾಗಿದ್ವು. ಈ ಪೈಕಿ ಆಸ್ಟ್ರೇಲಿಯಾ, ಪಾಕಿಸ್ತಾನ್, ಬಾಂಗ್ಲಾದೇಶ್, ಕೆನಡಾ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್​ಲೆಂಡ್ಸ್, ನ್ಯೂಝಿಲೆಂಡ್, ಒಮಾನ್, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡ, ಯುಎಸ್​ಎ, ವೆಸ್ಟ್ ಇಂಡೀಸ್ ತಂಡಗಳು ಟೂರ್ನಿಯಿಂದ ಹೊರ ಬಿದ್ದಿದ್ರೆ ಭಾರತ, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಮೀಸ್ ಸಮರಕ್ಕೆ ಸಜ್ಜಾಗಿವೆ. 8 ತಂಡಗಳ ಸೂಪರ್‌ 8 ಹಂತದಲ್ಲಿ ನಾಲ್ಕು ತಂಡಗಳು ಹೊರಬಿದ್ದಿವೆ. ಮೊದಲ ಗುಂಪಿನಿಂದ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಹೊರಬಿದ್ದರೆ, ಎರಡನೇ ಗುಂಪಿನಿಂದ ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ತಂಡ ನಿರ್ಗಮಿಸಿವೆ. ಇದರೊಂದಿಗೆ ನಾಲ್ಕು ತಂಡಗಳ ನಡುವಿನ ಸೆಮಿಫೈನಲ್‌ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಯುಎಸ್ಎ ವಿರುದ್ಧ ಭರ್ಜರಿ ಗೆಲುವಿನ ನಂತರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮೊದಲ ತಂಡವಾಗಿ ಸೆಮೀಸ್‌ ಅರ್ಹತೆ ಪಡೆಯಿತು. ಗ್ರೂಪ್ 1ರಿಂದ ದಕ್ಷಿಣ ಆಫ್ರಿಕಾ ಎರಡನೇ ತಂಡವಾಗಿ ಸೆಮೀಸ್‌ ಲಗ್ಗೆ ಹಾಕಿತು. ಸೇಂಟ್ ಲೂಸಿಯಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ವಿಶ್ವಕಪ್‌ನಲ್ಲಿ ಅಜೇಯ ದಾಖಲೆಯೊಂದಿಗೆ ಮೂರನೇ ತಂಡವಾಗಿ ಸೆಮಿಫೈನಲ್‌ ಟಿಕೆಟ್‌ ಪಡೆಯಿತು. ಅಲ್ಲಿಗೆ ಕೊನೆಯ ಒಂದು ತಂಡಕ್ಕಾಗಿ ನಡೆದ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ರೋಚಕತೆ ಸೃಷ್ಟಿಸಿತು. ಕಿಂಗ್ಸ್ ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ನಾಲ್ಕನೇ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿತು. ಅಲ್ಲಿಗೆ ಬಾಂಗ್ಲಾದೇಶದೊಂದಿಗೆ ಆಸ್ಟ್ರೇಲಿಯಾ ಕೂಡಾ ಟೂರ್ನಿಯಿಂದ ಹೊರಬಿತ್ತು.

ಜೂನ್ 27 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಟ್ರಿನಿಡಾಡ್​-ಟೊಬೊಗೊದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಯಿಂದ ಶುರುವಾಗಲಿದೆ. ಹಾಗೇ ಜೂನ್ 27 ರಂದೇ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಈ ಎರಡು ಸೆಮಿಫೈನಲ್​ನಲ್ಲಿ ಗೆಲ್ಲುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದ್ದು, ಅದರಂತೆ ಜೂನ್ 29 ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅಂತಿಮವಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡ ಟಿ-20 ವಿಶ್ವಕಪ್​ನ 9ನೇ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೇರಲಿದೆ.

ರೇಸ್​ನಲ್ಲಿ ಉಳಿದಿರೋದು ನಾಲ್ಕು ತಂಡಗಳೇ ಆಗಿದ್ರೂ ಚಾಂಪಿಯನ್ ಪಟ್ಟಕ್ಕೇರೋ ಚಾನ್ಸ್ ಟೀಂ ಇಂಡಿಯಾಗೆ ಸ್ವಲ್ಪ ಜಾಸ್ತಿನೇ ಇದೆ. ಯಾಕಂದ್ರೆ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿದ್ದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಗೇಟ್​ಪಾಸ್ ನೀಡಿದೆ. ಸೋ ಕಾಂಗರೂಗಳು ಇಲ್ದೇ ಇರೋದೇ ರೋಹಿತ್ ಬಣಕ್ಕೆ ಒಂದು ದೊಡ್ಡ ಅಡ್ವಾಂಟೇಜ್. ಅಲ್ದೇ ಭಾರತ ತಂಡದ ಮುಂದಿರುವ ಏಕೈಕ ಸವಾಲು ಅಂದ್ರೆ ಅದು ಇಂಗ್ಲೆಂಡ್. ಸೆಮೀಸ್​ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದರೆ ಈ ಸಲ ಕಪ್ ನಮ್ಮದೇ ಅಂತಿದ್ದಾರೆ ಕ್ರಿಕೆಟ್ ಎಕ್ಸ್​ಪರ್ಟ್ಸ್. ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ಕದನದಲ್ಲಿ ಯಾರೇ ಗೆದ್ದು ಫೈನಲ್ ತಲುಪಿದರೂ ಭಾರತ ತಂಡವೇ ವಿಜಯಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಲ್ದೇ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಭಾರತ ತಂಡಕ್ಕೆ ಒಂದೊಳ್ಳೆ ಅವಕಾಶ ಕೂಡ ಇದೆ. ಈಗಾಗ್ಲೇ ಆಸ್ಟ್ರೇಲಿಯಾವನ್ನ ಮನೆಗೆ ಕಳಿಸೋ ಮೂಲಕ ರೋಹಿತ್ ಸೇನೆ ಕಳೆದ ವರ್ಷದ ಸೋಲಿನ ಲೆಕ್ಕ ಚುಕ್ತಾ ಮಾಡಿದೆ. 2023ರ ಏಕದಿನ ವಿಶ್ವಕಪ್​ನಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಟೀಂ ಇಂಡಿಯಾವನ್ನ ಸೋಲಿಸುವ ಮೂಲಕ ಆಸಿಸ್ ಪಡೆ ಚಾಂಪಿಯನ್ ಆಗಿತ್ತು. ಬಹುಶಃ ಇದೇ ಸಿಟ್ಟಿನಿಂದ್ಲೇ ಅನ್ಸುತ್ತೆ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಆರ್ಭಟಿಸಿ 92 ರನ್ ಗಳಿಸಿದ್ರು. ಹಿಟ್​ಮ್ಯಾನ್ ಸಿಡಿಸಿದ ಇದೇ ಸ್ಕೋರ್ ಕಾಂಗರೂಗಳನ್ನ ಚುಟುಕು ಕ್ರಿಕೆಟ್​ನಿಂದ ಹೊರ ದಬ್ಬೋಕೇ ಕಾರಣವಾಗಿತ್ತು. ಇಂಥದ್ದೇ ರಿವೇಂಜ್ ಇಂಗ್ಲೆಂಡ್ ವಿರುದ್ಧ ತೀರಿಸಿಕೊಳ್ಳೋಕೆ ಅವಕಾಶ ಸಿಕ್ಕಿದೆ. 2022ರ ಟಿ20 ವಿಶ್ವಕಪ್‌ನಲ್ಲೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆಗ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿ ಫೈನಲ್ ತಲುಪಿತ್ತು. ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು ಚಾಂಪಿಯನ್ ಕೂಡ ಆಗಿತ್ತು. ಸೋ 2 ವರ್ಷಗಳ ಹಿಂದಿನ ಸೇಡನ್ನ ತೀರಿಸಿಕೊಳ್ಬೇಕು ಅಂದ್ರೆ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡ್ಬೇಕಿದೆ. ಸ್ವಲ್ಪ ಯಾಮಾರಿದ್ರೂ 2022ರ ಸೆಮಿಸ್ ಫಲಿತಾಂಶದಂತೆಯೇ ಈ ಸಲವೂ ಟೀಂ ಇಂಡಿಯಾ ಸೆಮಿಫೈನಲ್​ನಲ್ಲೇ ಟೂರ್ನಿಯಿಂದ ಹೊರ ಬೀಳಬೇಕಾಗುತ್ತೆ.

ಇನ್ನು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಈ ಹಿಂದಿನ ಪಂದ್ಯಗಳ ಫಲಿತಾಂಶ ಕೂಡ ಅಚ್ಚರಿಯಾಗಿದೆ. ಉಭಯ ತಂಡಗಳು ಟಿ20 ಕ್ರಿಕೆಟ್​ನಲ್ಲಿ 23 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ತಂಡವು 12 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ತಂಡ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇಲ್ಲಿ ಮೇಲ್ನೋಟಕ್ಕೆ ಟೀಮ್ ಇಂಡಿಯಾ ಬಲಿಷ್ಠವಾಗಿದ್ದರೂ ಕೂಡಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿವೆ. ಅದ್ರಲ್ಲೂ 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಫೈಟ್ ಮರೆಯೋಕೆ ಸಾಧ್ಯನೇ ಇಲ್ಲ. ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ನಡೆದಿದ್ದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಆಂಗ್ಲರು ಮನೆಗೆ ಕಳಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ನೀರು ಕುಡಿದಷ್ಟೇ ಸಲೀಸಾಗಿ ಟಾರ್ಗೆಟ್ ರೀಚ್ ಆಗಿತ್ತು. ಜಸ್ಟ್ 16 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್​ ಬಾರಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಅಲ್ಲದೆ ಈ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ 2 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲೇ ಎದುರು ಬದುರಾಗ್ತಿವೆ. ಹೀಗಾಗಿ ಕಳೆದ ಟಿ20 ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ಇನ್ನೊಂದು ವಿಚಾರ ಅಂದ್ರೆ ಟೂರ್ನಿಯಲ್ಲಿ ಭಾರತ ಇದುವರೆಗೂ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಗುಂಪು ಹಂತದಲ್ಲಿ ಪಾಕಿಸ್ತಾನ, ಐರ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತಂಡಗಳ ವಿರುದ್ಧ ಗೆದ್ದರೆ, ಕೆನಡಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ನಂತರ ಅವರು ಸೂಪರ್ 8 ನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್ ತಲುಪಿದೆ. ಬಟ್ ಇಲ್ಲಿ ಭಾರತ ಸೋತಿಲ್ಲ ಅನ್ನೋದು ಎಷ್ಟು ಸತ್ಯವೋ ಹಾಗೇ ಟೀಂ ಇಂಡಿಯಾದ ಓಪನರ್ಸ್ ಜೋಡಿ ಫೇಲ್ ಆಗಿದೆ ಅನ್ನೋದೂ ಅಷ್ಟೇ ಸತ್ಯ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸೆಮೀಸ್ ಕದನಲ್ಲಿ ಟೀಂ ಇಂಡಿಯಾದಲ್ಲಿ ಒಂದಷ್ಟು ಬದಲಾವಣೆಗಳಾಗೋ ಸಾಧ್ಯತೆ ಇದೆ. ಈ ಟೂರ್ನಿಯಲ್ಲಿ ಓಪನರ್ ಜೋಡಿಯಾಗಿದ್ದ ರೋಹಿತ್ ಮತ್ತು ಕೊಹ್ಲಿ ನಿರೀಕ್ಷೆಗೆ ತಕ್ಕಂತೆ ರನ್ಸ್ ಬಂದಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಗುಂಡಿನಂತೆ ಅಬ್ಬರಿಸಿದ್ರೂ ಕೂಡ ಕಿಂಗ್ ಕೊಹ್ಲಿ ಕಂಪ್ಲೀಟ್ ಫೇಲ್ ಆಗಿದ್ದಾರೆ. 5 ಬಾಲ್​ಗಳನ್ನ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನ್ ಸೇಡಿದ್ರು. ಸೋ ಸೆಮಿಫೈನಲ್​ನಲ್ಲಿ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಸಬೇಕೆಂಬ ಕೂಗು ಜೋರಾಗುತ್ತಿದೆ. ಇಂಗ್ಲೆಂಡ್ ವಿರುದ್ಧ ಸ್ಟ್ರಾಂಗ್​ ಲೈನ್​ ಅಪ್ ಮೂಲಕ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸೋ ಚಿಂತನೆ ಕೂಡ ನಡೆದಿದೆ. ಈ ವಿಶ್ವಕಪ್​ನಲ್ಲಿ ಕೊಹ್ಲಿ ಒಂದೇ ಒಂದು ಪಂದ್ಯದಲ್ಲೂ ಸರಿಯಾದ ಇನ್ನಿಂಗ್ಸ್ ಆಡಿಲ್ಲ. ಈ ಹಿಂದೆ ಟೀಂ ಇಂಡಿಯಾದಲ್ಲಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ ಈ ಬಾರಿ ರೋಹಿತ್ ಅವರೊಂದಿಗೆ ಓಪನರ್ ಆಗಿ ಕಳುಹಿಸಲಾಗಿತ್ತು. ಆದರೆ ಈ ಪ್ರಯೋಗ ಫೇಲ್ ಆಗಿದೆ. ಅಲ್ದೇ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಬಾರಿ ಒಂದೇ ಅಂಕಿ ಸ್ಕೋರ್ ಗೆ ಔಟಾಗಿದ್ದಾರೆ. ಹೀಗಾಗಿ ಮ್ಯಾನೇಜ್ಮೆಂಟ್ ಎಂದಿನಂತೆ ಕೊಹ್ಲಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಲು ಯೋಜಿಸಿದರೆ, ಸೆಮಿಫೈನಲ್​ನಲ್ಲಿ ಯುವ ಓಪನರ್​ ಯಶಸ್ವಿ ಜೈಸ್ವಾಲ್ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆಯಲಿದ್ದಾರೆ. ಜೈಸ್ವಾಲ್​ಗೆ ಅವಕಾಶ ನೀಡಿದರೆ ಶಿವಂ ದುಬೆಯನ್ನ ತಂಡದಿಂದ ಹೊರ ಹಾಕುವ ಸಾಧ್ಯತೆ ಇದೆ. ರಿಷಭ್ ಪಂತ್ ಅವರ ಬ್ಯಾಟಿಂಗ್ ಸ್ಥಾನ ಕೂಡ ಬದಲಾಗಬಹುದು.

ಇದೆಲ್ಲದ್ರ ನಡುವೆ ಚುಟುಕು ಕ್ರಿಕೆಟ್​ನ ಸೆಮೀಸ್ ಸಮರಕ್ಕೆ ಮಳೆ ಭೀತಿ ಕೂಡ ಇದೆ. ಜೂನ್ 27 ರಂದು ಗಯಾನಾದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಹಾಗೇನಾದ್ರೂ ಮಳೆಯಿಂದ ಪಂದ್ಯ ವಿಳಂಬವಾದರೆ, ಹೆಚ್ಚುವರಿ 250 ನಿಮಿಷಗಳನ್ನು ಬಳಸಲಾಗುತ್ತದೆ. ಅಂದ್ರೆ 4 ಗಂಟೆ 16 ನಿಮಿಷಗಳು. ಪಂದ್ಯಕ್ಕೆ ನಿಗದಿ ಮಾಡಲಾದ 3 ಗಂಟೆಯೊಳಗೆ ಮ್ಯಾಚ್ ನಡೆಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ 4 ಗಂಟೆ 16 ನಿಮಿಷಗಳವರೆಗೆ ಕಾಯಲಾಗುತ್ತೆ. ಹಂಗೂ ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದಂತ ಪರಿಸ್ಥಿತಿ ಇದ್ರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹಾಗೇನಾದ್ರೂ ಪಂದ್ಯ ರದ್ದಾದ್ರೆ ಭಾರತಕ್ಕೆ ಪ್ಲಸ್ ಆಗಲಿದೆ. ಸೀದಾ ಫೈನಲ್ ಪ್ರವೇಶ ಮಾಡಲಿದೆ. ಅದು ಹೇಗಂದ್ರೆ ಸೆಮಿಫೈನಲ್ ಪಂದ್ಯ ರದ್ದಾದರೆ, ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಇಲ್ಲಿ ಭಾರತ ತಂಡವು ಗ್ರೂಪ್-1 ರಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಗ್ರೂಪ್-2 ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸುವುದು ಖಚಿತ. ಸೋ ಮಳೆ ಬಂದ್ರೂ ರೋಹಿತ್ ಬಣಕ್ಕೆ ನೋ ಟೆನ್ಷನ್.  ಒಟ್ನಲ್ಲಿ 20 ತಂಡಗಳೊಂದಿಗೆ ಆರಂಭವಾದ ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿಯಲ್ಲಿ ಬರೋಬ್ಬರಿ 52 ಪಂದ್ಯಗಳ ಬಳಿಕ ಸೆಮಿಫೈನಲ್ ಗೆ ನಾಲ್ಕು ತಂಡಗಳು ಅಂತಿಮವಾಗಿವೆ.

Shwetha M