IND Vs BAN.. ಪ್ಲೇಯಿಂಗ್ 11 ರೆಡಿ – ಭಾರತಕ್ಕೆ ಸ್ಪಿನ್ನರ್ಸ್ & ವೇಗಿಗಳ ಟೆನ್ಷನ್
ಕಾನ್ಪುರ ಸ್ಟೇಡಿಯಂ ಪಿಚ್ ಯಾರಿಗೆ ಲಾಭ?

IND Vs BAN.. ಪ್ಲೇಯಿಂಗ್ 11 ರೆಡಿ – ಭಾರತಕ್ಕೆ ಸ್ಪಿನ್ನರ್ಸ್ & ವೇಗಿಗಳ ಟೆನ್ಷನ್ಕಾನ್ಪುರ ಸ್ಟೇಡಿಯಂ ಪಿಚ್ ಯಾರಿಗೆ ಲಾಭ?

ಚೆನ್ನೈನ ಚೆಪಾಕ್ ಮೈದಾನದಲ್ಲಿ ಬಾಂಗ್ಲಾವನ್ನ ಬಗ್ಗು ಬಡಿದಿರೋ ಟೀಂ ಇಂಡಿಯಾ ಬಾಯ್ಸ್ ಇದೀಗ ಕಾನ್ಪುರದಲ್ಲಿ ಬಾಂಗ್ಲಾ ಪಡೆಯನ್ನ ಕ್ಲೀನ್ ಸ್ವೀಪ್ ಮಾಡೋ ಟಾರ್ಗೆಟ್ ಇಟ್ಕೊಂಡಿದ್ದಾರೆ. ಮೊದಲ ಪಂದ್ಯಕ್ಕೆ ಆಯ್ಕೆಯಾಗಿದ್ದ ಆಟಗಾರರೇ ಈ ಪಂದ್ಯಕ್ಕೂ ಸೆಲೆಕ್ಟ್ ಆಗಿರೋದ್ರಿಂದ ಪ್ಲೇಯಿಂಗ್​ 11ನಲ್ಲಿ ಹೆಚ್ಚಿನ ಬದಲಾವಣೆ ಕೂಡ ಇರೋದಿಲ್ಲ. ಆದ್ರೆ ವೇಗಿಗಳಿಗೆ ಆದ್ಯತೆ ಕೊಡ್ತಾರೋ ಅಥವಾ ಸ್ಪಿನ್ನರ್ಸ್​ಗೆ ಚಾನ್ಸ್ ಸಿಗುತ್ತೋ ಅನ್ನೋದೇ ಈಗಿರೋ ಪ್ರಶ್ನೆ. ಅಷ್ಟಕ್ಕೂ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದ ಪಿಚ್ ಹೇಗಿದೆ? ಅಲ್ಲಿ ಮೇಲುಗೈ ಸಾಧಿಸೋದು ಯಾರು? ಭಾರತದ ಪರ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಮೊದಲ 5 ಸ್ಪರ್ಧಿಗಳ ಲಿಸ್ಟ್‌ ಔಟ್‌!! – ಸ್ವರ್ಗ V/s ನರಕ ಕಾನ್ಸೆಪ್ಟ್‌ ಯಾಕೆ?

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮೂವರು ವೇಗಿಗಳನ್ನು ಕಣಕ್ಕಿಳಿಸಿತ್ತು. ಹಾಗೆ ನೋಡಿದ್ರೆ ಭಾರತದಲ್ಲಿ ನಡೆಯೋ ಟೆಸ್ಟ್ ಪಂದ್ಯದಲ್ಲಿ ಇಂಥಾ ಸನ್ನಿವೇಶ ಕಾಣೋದು ತುಂಬಾನೇ ಅಪರೂಪ. ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ ಎಂದೇ ಹೆಸರಾಗಿರುವ ಚೆಪಾಕ್‌ನಲ್ಲಿ ವೇಗಿಗಳಿಗೆ ಉಭಯ ತಂಡಗಳು ಒತ್ತು ನೀಡಿದ್ದವು. ಆದರೆ, ಎರಡನೇ ಟೆಸ್ಟ್‌ನಲ್ಲಿ ಈ ಸನ್ನಿವೇಶ ಬದಲಾಗೋ ಎಲ್ಲಾ ಸಾಧ್ಯತೆಗಳಿವೆ. ಕಾನ್ಪುರದ ಮೈದಾನ ಕಪ್ಪು ಮಣ್ಣಿನ ಪಿಚ್‌ನಲ್ಲಿ ಕಡಿಮೆ ಬೌನ್ಸ್‌ನಿಂದಾಗಿ ಸ್ಪಿನ್ನರ್‌ಗಳಿಗೆ ನೆರವಾಗುವ ಲಕ್ಷಣವಿದೆ. ಅಂದ್ರೆ ಮೊದಲ ಪಂದ್ಯ ನಡೆದ ಚೆಪಾಕ್ ಕ್ರೀಡಾಂಗಣದಲ್ಲಿನ ಪಿಚ್‌ಗಿಂತ ಇಲ್ಲಿ ಬೌನ್ಸ್ ತುಂಬಾ ಕಡಿಮೆ ಇರುತ್ತದೆ. ಪಂದ್ಯ ಕಂಟಿನ್ಯೂ ಆದಂತೆಲ್ಲಾ ಬೌನ್ಸ್‌ ಕೂಡಾ ಕಡಿಮೆಯಾಗುತ್ತೆ. ಅದಕ್ಕೆ ಕಾರಣ ಮೈದಾನದ ಪಿಚ್‌ಗೆ ಕಪ್ಪು ಮಣ್ಣನ್ನ ಬಳಕೆ ಮಾಡಿರೋದು.

ಚೆನ್ನೈನಲ್ಲಿ ಕೆಂಪು ಮಣ್ಣಿನ ಪಿಚ್ ಬಳಕೆ.. ಹೆಚ್ಚೆಚ್ಚು ಬೌನ್ಸ್!

ಚೆನ್ನೈನ ಪಿಚ್​ಗೆ ಕೆಂಪು ಮಣ್ಣನ್ನ ಬಳಕೆ ಮಾಡಿರೋದ್ರಿಂದ ಒಳ್ಳೆ ಬೌನ್ಸ್ ಜೊತೆಗೆ ಸ್ಪೀಡ್ ಕೂಡ ಜೋರಾಗಿರುತ್ತೆ.  ಸೋ ಉಭಯ ತಂಡಗಳು ಪ್ಲೇಯಿಂಗ್ 11ನಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸಿತ್ತು. ಪಂದ್ಯದ ಮೊದಲ ಸೆಷನ್‌ನಲ್ಲಿ ಭಾರತ ಬ್ಯಾಟಿಂಗ್‌ ಮಾಡಿದಾಗ, ಬಾಂಗ್ಲಾದೇಶದ ವೇಗದ ಬೌಲರ್‌ಗಳು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ರು. ಆದ್ರೆ ಪಂದ್ಯ ಮುಂದುವರೆದಂತೆ ಸಾಂಪ್ರದಾಯಿಕ ಸ್ಪಿನ್ನರ್‌ಗಳು ಸಾಮರ್ಥ್ಯ ಪ್ರದರ್ಶಿಸಿದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್‌ ದಾಳಿಗೆ ತತ್ತಸಿದ ಬಾಂಗ್ಲಾದೇಶ, ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭದ ಹೊರತಾಗಿಯೂ 234 ರನ್‌ಗಳಿಗೆ ಆಲೌಟ್ ಆಯ್ತು. ಭಾರತವು 280 ರನ್‌ಗಳ ಐತಿಹಾಸಿಗ ಜಯ ಸಾಧಿಸಿತು.

ಕುಲ್ದೀಪ್ ಅಥವಾ ಅಕ್ಷರ್ ಪಟೇಲ್ ಗೆ ಸಿಗುತ್ತಾ ಚಾನ್ಸ್?

ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌, ಆಕಾಶ್‌ದೀಪ್‌ ಜೊತೆಗೆ ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌, ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಆದರೆ 2ನೇ ಟೆಸ್ಟ್‌ನ ಪಿಚ್‌ ಬೇರೆ ಸ್ವರೂಪದಲ್ಲಿ ಇರೋದ್ರಿಂದ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಾದರೆ ಕುಲ್ದೀಪ್‌ ಯಾದವ್‌ ಅಥವಾ ಅಕ್ಷರ್ ಪಟೇಲ್‌ಗೆ ಸ್ಥಾನ ಸಿಗಲಿದೆ. ವೇಗಿಗಳಾದ ಸಿರಾಜ್‌ ಅಥವಾ ಆಕಾಶ್‌ದೀಪ್‌ ಜಾಗ ಬಿಟ್ಟುಕೊಡಬೇಕಾಗಬಹುದು. ಅತ್ತ ಬಾಂಗ್ಲಾ ಕೂಡಾ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸೋ ಸಾಧ್ಯತೆ ಇದೆ. ಹಿರಿಯ ಸ್ಪಿನ್‌ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಗಾಯಗೊಂಡಿದ್ದು ತಂಡಕ್ಕೆ ಟೆನ್ಷನ್ ತಂದಿಟ್ಟಿದೆ. ಇನ್ನು ವೇಗಿ ನಹೀದ್‌ ರಾಣಾ ಬದಲು ತೈಜುಲ್ ಇಸ್ಲಾಂರನ್ನು ಆಡಿಸುವ ಸಾಧ್ಯತೆ ಇದೆ. ಒಂದು ವೇಳೆ ಶಕೀಬ್‌ ಪಂದ್ಯಕ್ಕೆ ಅಲಭ್ಯರಾದರೆ ಹೆಚ್ಚುವರಿ ಸ್ಪಿನ್ನರ್‌ ಆಗಿ ನಯೀಮ್‌ ಹಸನ್‌ರನ್ನು ಕಣಕ್ಕಿಳಿಸಬಹುದು. ಸದ್ಯ ಕಾನ್ಪುರ ಪಿಚ್ ಬೌಲರ್‌ಗಳ ತಲೆನೋವಿಗೆ ಕಾರಣವಾಗಿದ್ರೂ ಬ್ಯಾಟರ್ಸ್ ಮಾತ್ರ ರಿಲೀಫ್ ಆಗಿದ್ದಾರೆ.  ಹೀಗಾಗಿ ರನ್‌ ಗಳಿಸುವುದು ಬ್ಯಾಟರ್‌ಗಳಿಗೆ ಸುಲಭವಾಗಬಹುದು. ಈ ಕ್ರೀಡಾಂಗಣದ ಕೊನೆ 2 ಟೆಸ್ಟ್‌ ಪಂದ್ಯಗಳು 5 ದಿನಗಳ ಕಾಲ ನಡೆದಿದ್ದವು.

ಭಾರತದ ಪಾಲಿಗೆ ಗೆಲುವಿನ ಅಖಾಡ ಕಾನ್ಪುರ! 

ಭಾರತ ತಂಡದ ಪಾಲಿಗೆ ಕಾನ್ಪುರ ಮೈದಾನ ಭದ್ರಕೋಟೆ ಇದ್ದಂತೆ. ತಂಡ ಇಲ್ಲಿ ಕಳೆದ 41 ವರ್ಷಗಳಿಂದ ಯಾವುದೇ ಟೆಸ್ಟ್‌ ಪಂದ್ಯದಲ್ಲೂ ಸೋಲನುಭವಿಸಿಲ್ಲ. 1983ರಲ್ಲಿ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್‌ ವಿರುದ್ಧ   83 ರನ್‌ಗಳ ಸೋಲು ಕಂಡಿತ್ತು. ಆ ಬಳಿಕ ಟೀಂ ಇಂಡಿಯಾ ಕಾನ್ಪುರದಲ್ಲಿ 9 ಪಂದ್ಯಗಳನ್ನಾಡಿದೆ. ಈ ಪೈಕಿ 5ರಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಒಟ್ಟಾರೆ ಭಾರತ ತಂಡ ಈವರೆಗೂ ಕಾನ್ಪುರದಲ್ಲಿ ಆಡಿರುವ 23 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿದೆ. 3ರಲ್ಲಿ ಸೋತಿರುವ ತಂಡ, 13ರಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿ ಮತ್ತೊಮ್ಮೆ ಅದೇ ಜೋಶ್​ನಲ್ಲೇ ಅಖಾಡಕ್ಕಿಳಿಯೋಕೆ ರೆಡಿಯಾಗಿದ್ದಾರೆ. ಅಂತಿಮವಾಗಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಉತ್ತರ ಪ್ರದೇಶದ ಕಾನ್ಪುರ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ 2ನೇ ಟೆಸ್ಟ್‌ ಪಂದ್ಯಕ್ಕೆ ಸ್ಪಿನ್‌ ಸ್ನೇಹಿ ಪಿಚ್‌ ಬಳಸಲಾಗುತ್ತದೆ. ಹೀಗಾಗಿ ಉಭಯ ತಂಡಗಳಿಂದಲೂ ತಲಾ ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.

Shwetha M