ಬಾಂಗ್ಲಾಗೆ ಚೋಕ್ ಕೊಟ್ಟ ICC – ಮೈದಾನ ಚೇಂಜ್.. ಭಾರತದಲ್ಲೇ ಫೈಟ್
ಆಫರ್ ಕೊಟ್ಟ PAK ಶೇಪ್ ಔಟ್

ಬಾಂಗ್ಲಾಗೆ ಚೋಕ್ ಕೊಟ್ಟ ICC – ಮೈದಾನ ಚೇಂಜ್.. ಭಾರತದಲ್ಲೇ ಫೈಟ್ಆಫರ್ ಕೊಟ್ಟ PAK ಶೇಪ್ ಔಟ್

ಟಿ-20 ವಿಶ್ವಕಪ್​ ಪಂದ್ಯಗಳನ್ನ ಶಿಫ್ಟ್ ಮಾಡಿ ಅಂತಾ ಕ್ಯಾತೆ ತೆಗೆದಿದ್ದ ಬಾಂಗ್ಲಾಗೆ ಈಗ ಅದೇ ವಿಚಾರವೇ ಬ್ಯಾಕ್ ಫೈರ್ ಆಗಿದೆ. ಒಂದ್ಕಡೆ ಸ್ಪಾನ್ಸರ್​ಶಿಪ್​ಗಳು ಹೋಗ್ತಿವೆ.. ಮತ್ತೊಂದ್ಕಡೆ ಐಸಿಸಿ ಕ್ಯಾರೇ ಅಂತಿಲ್ಲ.. ಇನ್ನೊಂದ್ಕಡೆ ಬಿಸಿಸಿಐ ಎದುರು ಹಾಕಿಕೊಂಡು ಗೆಲ್ಲೋಕೆ ಆಗ್ತಿಲ್ಲ. ಕೊನೆಗೆ ಭಾರತದಲ್ಲೇ ಪಂದ್ಯಗಳನ್ನ ಆಡ್ಬೇಕಿರೋ ಅನಿವಾರ್ಯತೆಗೆ ಬಂದು ಸಿಲುಕಿದೆ. ಇದ್ರ ನಡುವೆ ಪಾಕಿಸ್ತಾನ ಹೋಸ್ಟಿಂಗ್​ಗೆ ನಾವೂ ರೆಡಿ ಅಂತಾ ಬಿಲ್ಡಪ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೊಹ್ಲಿ – ಗಿಲ್‌ ಭರ್ಜರಿ ಜೊತೆಯಾಟ – ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ

ಐಪಿಎಲ್​ನಿಂದ ಬಾಂಗ್ಲಾ ಆಟಗಾರನಿಗೆ ಗೇಟ್​ಪಾಸ್ ಕೊಟ್ಟ ಮೇಲೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಕೆರಳಿ ಕೆಂಡವಾಗಿದೆ. ನಾವು ಕೂಡ ಭಾರತದಲ್ಲಿ ನಡೆಯೋ ಟಿ-20 ವಿಶ್ವಕಪ್​ನಲ್ಲಿ ಆಡಲ್ಲ. ನಮ್ಮ ಪಂದ್ಯಗಳನ್ನ ಬೇರೆ ಕಡೆ ಶಿಫ್ಟ್ ಮಾಡಿ ಅಂತಾ ತಗಾದೆ ತೆಗೆದು ಐಸಿಸಿಗೂ ಎರಡೆರಡು ಸಲ ಪತ್ರ ಬರೆದಿತ್ತು. ಆದ್ರೆ ಐಸಿಸಿ ಮಾತ್ರ ಕ್ಯಾರೇ ಅಂತಿಲ್ಲ. ಈಗ ಬಿಸಿಬಿಗೆ ಹೊಸ ಆಫರ್ ಕೊಟ್ಟಿದೆ. ಸ್ಟೇಡಿಯಂ ಚೇಂಜ್ ಮಾಡ್ತೀವಿ ಬಟ್ ದೇಶನಲ್ಲ ಅಂತಾ ಖಡಕ್ ಆಗೇ ಹೇಳಿದೆ.

ಲಂಕಾಗೆ ಶಿಫ್ಟ್ ಮಾಡಲ್ಲ.. ದಕ್ಷಿಣ ಭಾರತದಲ್ಲಿ ಬೇಕಿದ್ರೆ ಆಡಿ!

ಫೆಬ್ರವರಿ 7ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದ್ದು ವೇಳಾಪಟ್ಟಿ ಪ್ರಕಾರ, ಬಾಂಗ್ಲಾದೇಶ ತನ್ನ ಗುಂಪು  ಹಂತದ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಬೇಕಿತ್ತು. ಆದ್ರೆ ನಮ್ಮ ಪಂದ್ಯಗಳನ್ನ ಶ್ರೀಲಂಕಾಗೆ ಸ್ಥಳಾಂತರ ಮಾಡಿ ಅಂತಾ ಐಸಿಸಿಗೆ ಪತ್ರ ಬರೆದಿತ್ತು. ಆದ್ರೆ ಇದಕ್ಕೆ ಒಪ್ಪದ ಐಸಿಸಿ ಪಂದ್ಯಗಳನ್ನ ಶಿಫ್ಟ್ ಮಾಡಲು ತೊಂದರೆಗಳಿವೆ ಎಂದಿದೆ. ಅಷ್ಟೇ ಅಲ್ಲದೆ ಶ್ರೀಲಂಕಾ ಬದಲಿಗೆ, ಭಾರತದಲ್ಲಿ ಎರಡು ಹೊಸ ಸ್ಥಳಗಳಲ್ಲಿ ಪಂದ್ಯಗಳನ್ನ ಆಡುವಂತೆ ಆಫರ್ ಕೊಟ್ಟಿದೆ. ಅಂದ್ರೆ ಕೊಲ್ಕತ್ತಾ, ಮುಂಬೈ ಬದಲಿದೆ ದಕ್ಷಿಣ ಭಾರತದ ಚೆನ್ನೈ ಮತ್ತು ತಿರುವನಂತಪುರದಲ್ಲಿ ಆಡಲು ಸೂಚಿಸಿದೆ. ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಚೆನ್ನೈನಲ್ಲಿ ಬಾಂಗ್ಲಾದೇಶ ಪಂದ್ಯಗಳನ್ನು ಆಯೋಜಿಸಲು ಒಪ್ಪಿಕೊಂಡಿದೆ. ಮತ್ತೊಂದೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ತಿರುವನಂತಪುರದಲ್ಲಿ ಬಾಂಗ್ಲಾದೇಶ ಪಂದ್ಯಗಳನ್ನು ಆಯೋಜಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ ಇದನ್ನ ಒಪ್ಪದ ಬಿಸಿಬಿ ತಮ್ಮ ರಾಷ್ಟ್ರದ ಸರ್ಕಾರದ ಜೊತೆ ಚರ್ಚಿಸೋದಾಗಿ ಹೇಳಿದೆ. ಒಂದ್ಕಡೆ ಪಂದ್ಯಗಳು ಶಿಫ್ಟ್ ಆಗ್ತಿಲ್ಲ ಇನ್ನೊಂದ್ಕಡೆ ಆರ್ಥಿಕವಾಗಿಯೂ ಹೊಡೆತ ಬೀಳ್ತಿದೆ.

ಆರ್ಥಿಕವಾಗಿಯೂ ಬಾಂಗ್ಲಾದೇಶಕ್ಕೆ ಹೊಡೆತ!

ಭಾರತದ ಜೊತೆಗಿನ ಸಂಘರ್ಷದಿಂದ ಬಾಂಗ್ಲಾಗೆ ಆರ್ಥಿಕವಾಗಿಯೂ ನಷ್ಟ ಉಂಟಾಗ್ತಿದೆ. ಬಾಂಗ್ಲಾದೇಶದ ಕೆಲವು ಸ್ಟಾರ್ ಪ್ಲೇಯರ್​ಗಳು ಪ್ರಾಯೋಜಕತ್ವದ ಒಪ್ಪಂದಗಳನ್ನು ಕಳೆದುಕೊಳ್ಳಲಿದ್ದಾರೆ.  ಕ್ರಿಕೆಟ್ ಸಲಕರಣೆಗಳ ತಯಾರಕ ಎಸ್‌ಜಿ ಬಾಂಗ್ಲಾದೇಶದ ಆಟಗಾರರೊಂದಿಗೆ ಪ್ರಾಯೋಜಕತ್ವ ನವೀಕರಣಗಳನ್ನು ಸ್ಥಗಿತಗೊಳಿಸಿದೆ. ಹಾಗೇ  ಮತ್ತೊಂದು ಭಾರತೀಯ ಕ್ರೀಡಾ ಉಡುಪು ಬ್ರಾಂಡ್ ಸರೀನ್ ಸ್ಪೋರ್ಟ್ಸ್ ತನ್ನ ಉತ್ಪನ್ನಗಳನ್ನು ಬಾಂಗ್ಲಾದೇಶದಲ್ಲಿ ತಯಾರಿಸದಿರಲು ನಿರ್ಧರಿಸಿದೆ. ಹೀಗೆ ಬಾಂಗ್ಲಾದೇಶ ಭಾರತವನ್ನ ಎದುರು ಹಾಕಿಕೊಂಡು ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಿದ್ರೆ ಅತ್ತ ಪಾಕಿಸ್ತಾನ ಬೇರೆಯದ್ದೇ ವರಸೆ ತೆಗೆದಿದೆ.

ಪಾಕಿಸ್ತಾನದಲ್ಲಿ ಬಾಂಗ್ಲಾ ಪಂದ್ಯಗಳ ಆಯೋಜನೆಗೆ ಆಫರ್!

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಕಾಂಟ್ರವರ್ಸಿಯಲ್ಲಿ ಬೇಳೆ ಬೇರೆಯಿಸಿಕೊಳ್ಳೋಕೆ ಪಾಕಿಸ್ತಾನ ಮುಂದಾಗಿದೆ. ಪಾಕಿಸ್ತಾನದಲ್ಲಿ ಟಿ20 ವಿಶ್ವಕಪ್ ಆಯೋಜಿಸುವಂತೆ ಪ್ರೆಶರ್ ಹಾಕ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ, ಶ್ರೀಲಂಕಾದ ಬದಲಿಗೆ ಬಾಂಗ್ಲಾದೇಶದ ಪಂದ್ಯಗಳನ್ನು ತಮ್ಮ ದೇಶದಲ್ಲಿ ಆಯೋಜಿಸಬೇಕೆಂದು ಐಸಿಸಿಗೆ ಪ್ರಸ್ತಾಪಿಸಿದ್ದಾರೆ. ನಖ್ವಿ ಈ ವಿಷಯದ ಬಗ್ಗೆ ಐಸಿಸಿ ಅಧ್ಯಕ್ಷ ಜಯ್ ಶಾ ಅವರೊಂದಿಗೆ ಮಾತನಾಡಿದ್ದಾರೆ. ಆದ್ರೆ ಈ ಬಗ್ಗೆ ಐಸಿಸಿ ಯಾವುದೇ ಅಂತಿಮ ನಿರ್ಧಾರಗಳನ್ನ ಕೈಗೊಂಡಿಲ್ಲ. ಒಟ್ನಲ್ಲಿ ಬಾಂಗ್ಲಾ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಐಸಿಸಿಯನ್ನ ಎದುರು ಹಾಕಿಕೊಂಡ್ರೆ ಟಿ-20 ವಿಶ್ವಕಪ್​ನಿಂದಲೇ ಹೊರ ಬೀಳ್ಬೇಕಾಗುತ್ತೆ. ಟೂರ್ನಿ ಆರಂಭಕ್ಕೆ ಇನ್ನು ಮೂರೇ ವಾರ ಇರೋದ್ರಿಂದ ಸೈಲೆಂಟಾಗಿ ಭಾರತದಲ್ಲಿ ಪಂದ್ಯಗಳನ್ನ ಆಡೋದಷ್ಟೇ ಬಾಂಗ್ಲಾಗೆ ಉಳಿದಿರೋ ದಾರಿ.

Shantha Kumari