NZಗೆ ಶರಣಾಗಿ ಬೆಲೆ ತೆತ್ತ ಭಾರತ – WTC ಫೈನಲ್ ರೇಸ್ ನಿಂದ ಔಟ್?
6 ಪಂದ್ಯ.. 4 ಗೆಲುವು.. ಸವಾಲೇನು?
ನಿದ್ದೆಯಲ್ಲಿ ಮಲಗಿದ್ದವ್ರನ್ನ ಎಬ್ಬಿಸಿ ಕೇಳಿದ್ರೂ ಕಣ್ಮುಚ್ಚಿಕೊಂಡೇ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನ ಭಾರತ ಗೆಲ್ಲುತ್ತೆ ಅಂತಾನೇ ಹೇಳ್ತಿದ್ರು. ಆದ್ರೆ ಗೆಲ್ಲಬೇಕಿದ್ದ ಸಿರೀಸ್ನ ಭಾರತ ಈಸಿಯಾಗಿ ಕಳ್ಕೊಳ್ತು. ಬಾಂಗ್ಲಾದೇಶವನ್ನ ಕ್ಲೀನ್ ಸ್ವೀಪ್ ಮಾಡಿದ್ವಿ ಸೋ ಕಿವೀಸ್ ಗ್ಯಾಂಗ್ ಇನ್ಯಾವ ಲೆಕ್ಕ ಅಂತಾ ಫೀಲ್ಡಿಗಿಳಿದಿದ್ದ ಟೀಂ ಇಂಡಿಯಾ ಆಟಗಾರರು ಇನ್ನೂ ಒಂದು ಪಂದ್ಯ ಇದ್ದಂತೆಯೇ ಸರಣಿಯನ್ನ ಕೈಚೆಲ್ಲಿಕೊಂಡ್ರು. ಅದೂ ಕೂಡ ತವರು ನೆಲದಲ್ಲಿ ಅನ್ನೋದೇ ದೊಡ್ಡ ಶೇಮ್. ಭಾರತ ತಂಡದ ಇದೇ ಪ್ರದರ್ಶನ ಈಗ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ದೊಡ್ಡ ಪರಿಣಾಮ ಬೀರಿದೆ. ಅಂಕಪಟ್ಟಿಯಲ್ಲೂ ಕುಸಿತ ಕಂಡಿದೆ. ಹಾಗಾದ್ರೆ 2025ರ ಡಬ್ಲ್ಯುಟಿಸಿ ಫೈನಲ್ ರೇಸ್‌ನಿಂದ ಹೊರಬೀಳುತ್ತಾ ಭಾರತ? ಪುಣೆ ಸೋಲಿನಿಂದ ಏನೆಲ್ಲಾ ಪರಿಣಾಮ ಬೀರಿದೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾನಸಗಿಂತ ಕಡೆಯಾದ್ರಾ ಹಂಸ – ಮಾನಸಗೆ Vote ಹಾಕಿದ್ಯಾರು?
ಪುಣೆ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ತಂಡ 113 ರನ್ಗಳಿಂದ ಟೀಮ್ ಇಂಡಿಯಾವನ್ನ ಬಗ್ಗುಬಡಿದಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟೆಸ್ಟ್ ಸರಣಿಯನ್ನ 2-0 ಅಂತದಲ್ಲಿ ಗೆದ್ದು ಬೀಗಿದೆ. ವೀಕ್ ಟೀಂ ಅನ್ಕೊಂಡಿದ್ದ ಆಟಗಾರರು ಭಾರತದ ನೆಲದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ನೀಡಿದ್ದ ಪ್ರದರ್ಶನಕ್ಕೆ ಕಿವೀಸ್ ತಂಡಕ್ಕೂ ಇದೇ ಗತಿ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬಟ್ ಸೀನ್ ಫುಲ್ ಉಲ್ಟಾ. ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದು ಚರಿತ್ರೆ ಸೃಷ್ಟಿಸಿದೆ. 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತ ರೋಹಿತ್ ಶರ್ಮಾ ಪಡೆಗೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬೀಳೋ ಆತಂಕ ಎದುರಾಗಿದೆ. ಕಿವೀಸ್ ವಿರುದ್ಧದ ಸರಣಿಗೂ ಮುನ್ನ ಡಬ್ಲ್ಯುಟಿಸಿ ಫೈನಲ್ ಫಿಕ್ಸ್ ಎನ್ನುವಂತೆಯೇ ಇದ್ದ ಟೀಂ ಇಂಡಿಯಾ ಇದೀಗ ರೇಸ್ನಿಂದನೇ ಹೊರಬೀಳಬಹುದು. ಈಗಾಗ್ಲೇ ಪಾಯಿಂಟ್ ಪಟ್ಟಿಯಲ್ಲೂ ತಂಡದ ಗೆಲುವಿನ ಶೇಕಡಾವಾರು ಭಾರಿ ಕುಸಿತ ಕಂಡಿದೆ.
ಪುಣೆ ಸೋಲಿನ ಬಳಿಕ ಶೇಕಡಾವಾರುವಿನಲ್ಲಿ ಕೆಳಗಿಳಿದ ಭಾರತ!
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಪುಣೆ ಟೆಸ್ಟ್‌ಗೂ ಮುನ್ನ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 68.06 ಶೇಕಡಾ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಉಳಿದಂತೆ ಆಸ್ಟ್ರೇಲಿಯಾ ತಂಡವು 62.50 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಇದಲ್ಲದೇ ಶೇ.55.56 ಅಂಕಗಳೊಂದಿಗೆ ಶ್ರೀಲಂಕಾ ಮೂರನೇ ಸ್ಥಾನದಲ್ಲಿದ್ದರೆ, ಶೇ.47.62 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದ್ದು, ಶೇ.44.44 ಅಂಕಗಳೊಂದಿಗೆ ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿತ್ತು. ಆದ್ರೆ ಪುಣೆಯಲ್ಲಿನ ಸೋಲಿನ ನಂತರ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 62.82ಕ್ಕೆ ಇಳಿದಿದೆ. ಹೀಗಿದ್ರೂ ರೋಹಿತ್ ಶರ್ಮಾ ತಂಡವು ಶೇಕಡಾ 0.32 ಅಂಕಗಳ ಅಂತರದಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆದರೆ ಈ ಗೆಲುವಿನಿಂದ ನ್ಯೂಜಿಲೆಂಡ್ ತಂಡಕ್ಕೆ ಲಾಭವಾಗಿದ್ದು, ಶೇಕಡಾ 50ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ಕಿವೀಸ್ ಪಡೆ ಇದೀಗ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್ ಗೆದ್ರಷ್ಟೇ WTC ಫೈನಲ್!
ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಒಂದೇ ಆಗಿದ್ರೆ ಅಭಿಮಾನಿಗಳಿಗೆ ಇಷ್ಟೊಂದು ಬೇಸರ ಆಗ್ತಿರಲಿಲ್ಲ. ಆದ್ರೆ ಇದೇ ಸೋಲಿನ ಎಫೆಕ್ಟ್ನಿಂದ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ನ ರೇಸ್‌ನಿಂದ ಹೊರಗುಳಿಯೋ ಭೀತಿಯಲ್ಲಿದೆ. ಪ್ರಸ್ತುತ ಟೀಂ ಇಂಡಿಯಾ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇನ್ನು 6 ಟೆಸ್ಟ್ ಪಂದ್ಯಗಳು ಆಡಬೇಕಿದೆ. ಹೀಗಾಗಿ ರೋಹಿತ್ ಶರ್ಮಾ ಬಳಗ ಬೇರೆ ಯಾವುದೇ ತಂಡ ಸೋಲು, ಗೆಲುವಿನ ಮೇಲೆ ಡಿಪೆಂಡ್ ಆಗದೇ ಡೈರೆಕ್ಟ್ ಆಗಿ ಫೈನಲ್‌ಗೆ ಅರ್ಹತೆ ಪಡೀಬೇಕು ಅಂದ್ರೆ ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಆದರೆ ಈ 4 ಪಂದ್ಯಗಳನ್ನು ಗೆಲ್ಲುವುದು ಟೀಂ ಇಂಡಿಯಾಕ್ಕೆ ಅಷ್ಟು ಸುಲಭವಲ್ಲ. ಏಕೆಂದರೆ ಟೀಂ ಇಂಡಿಯಾ ಇನ್ನೊಂದು ಪಂದ್ಯವನ್ನು ಇನ್-ಫಾರ್ಮ್ ನ್ಯೂಜಿಲೆಂಡ್ ವಿರುದ್ಧ ಆಡಬೇಕಿದ್ದರೆ, ಉಳಿದ 5 ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ.
ಭಾರತ ಯಾಮಾರಿದ್ರೆ ಉಳಿದ ತಂಡಗಳು ರೇಸ್ ಗೆ!
ಟೀಂ ಇಂಡಿಯಾ ಎಡವಟ್ಟು ಮಾಡ್ಕೊಂಡ್ರೆ ಇವ್ರನ್ನ ಸೈಡ್ಲೈನ್ ಮಾಡಿ ರೇಸ್ಗೆ ಎಂಟ್ರಿ ಕೊಡೋಕೆ ಇತರೆ ತಂಡಗಳು ಕಾಯ್ತಿವೆ. ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೆ ಈ ಸೀಸನ್ನಲ್ಲಿ 4 ಪಂದ್ಯಗಳು ಬಾಕಿ ಉಳಿದಿದ್ದು, ಅದರಲ್ಲಿ 3ಪಂದ್ಯಗಳನ್ನು ಗೆದ್ದರೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲ್ಲಿದೆ. ಇದರಲ್ಲಿ 2 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ, ಉಳಿದ 2 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಬೇಕಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಈ ಸೀಸನ್ನಲ್ಲಿ ಇನ್ನು 4 ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಒಂದು ಪಂದ್ಯವನ್ನು ಮುಂಬೈನಲ್ಲಿ ಭಾರತದ ವಿರುದ್ಧ ಆಡಬೇಕಾಗಿದೆ. ಉಳಿದ 3 ಪಂದ್ಯಗಳನ್ನು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಿದೆ. ನೇರವಾಗಿ ಫೈನಲ್‌ಗೆ ಹೋಗಲು ನ್ಯೂಜಿಲೆಂಡ್ ಈ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಹಾಗೆಯೇ ಈ ಎರಡು ತಂಡಗಳೊಂದಿಗೆ ದಕ್ಷಿಣ ಆಫ್ರಿಕಾ ಕೂಡ ಡಬ್ಲ್ಯುಟಿಸಿ ಫೈನಲ್‌ಗೆ ಹೋಗುವ ಅವಕಾಶ ಹೊಂದಿದ್ದು, ಇದಕ್ಕಾಗಿ ತಂಡ ಇನ್ನುಳಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಬೇಕಿದೆ. ಈ ಪೈಕಿ ಬಾಂಗ್ಲಾದೇಶದ ವಿರುದ್ಧ 1 ಪಂದ್ಯ ಹಾಗೂ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕಿದೆ. ಹೀಗೆ ಭಾರತದ ಜೊತೆ ಉಳಿದ ತಂಡಗಳೂ ಕೂಡ ರೇಸ್ನಲ್ಲಿ ಇನ್ನೂ ಇವೆ. ಇವ್ರಲ್ಲರನ್ನ ಬೀಟ್ ಮಾಡ್ಬೇಕು ಅಂದ್ರೆ ಭಾರತ ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್ ಗೆಲ್ಲಲೇಬೇಕು.
ಒಟ್ನಲ್ಲಿ ಬಾಂಗ್ಲಾ ಬಳಗವನ್ನ ಕ್ಲೀನ್ ಸ್ವೀಪ್ ಮಾಡಿದ್ದೇವೆ, ನ್ಯೂಜಿಲೆಂಡ್ ಯಾವ ಲೆಕ್ಕ ಅಂತಾ ಹೆಡ್ವೇಯ್ಟ್ನಲ್ಲಿದ್ದ ಭಾರತಕ್ಕೆ ಕಿವೀಸ್ ಪಡೆ ಮುಟ್ಟಿನೋಡಿಕೊಳ್ಳುವಂತೆ ಪೆಟ್ಟು ನೀಡಿದೆ. ಇನ್ನಾದ್ರೂ ಎಚ್ಚೆತ್ತುಕೊಂಡು ಮುಂದಿನ ಪಂದ್ಯಗಳನ್ನ ಗೆದ್ದು ತೋರಿಸಬೇಕಿದೆ. ಇಲ್ದಿದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕನಸನ್ನ ಈ ಸಲವೂ ಕೈ ಚೆಲ್ಲಬೇಕು ಅಷ್ಟೇ.