IND ಕಾಪಾಡಿದ್ದೇ ಬುಮ್ರಾ, ದೀಪ್.. ಫಾಲೋ-ಆನ್ ತಪ್ಪಿದ್ದೇಗೆ.. ಏನಿದು ರೂಲ್ಸ್? – AUS ವಿರುದ್ಧದ ಮ್ಯಾಚ್ ಡ್ರಾ ಆಗುತ್ತಾ?
ಬೌಲಿಂಗ್ ಕಂಟ್ರೋಲ್ ಮಾಡ್ಲಿಲ್ಲ.. ಬ್ಯಾಟರ್ಸ್ ಕೂಡ ಕೈ ಹಿಡೀಲಿಲ್ಲ. ಇನ್ನೇನು ಮೂರನೇ ಮ್ಯಾಚ್ ಕೈ ತಪ್ಪಿ ಹೋಗೇಬಿಡ್ತು ಅನ್ನುವಷ್ಟ್ರಲ್ಲಿ ಜಾದೂ ನಡೆದಿದೆ. ಗೆದ್ದೇ ಬಿಟ್ವಿ ಅನ್ನೋ ಖುಷಿಯಲ್ಲಿದ್ದ ಕಾಂಗರೂಪಡೆಗೆ ಪಿಕ್ಚರ್ ಅಭೀ ಬಾಕಿ ಹೈ ಎನ್ನುವಂತೆ ಕ್ಲೈಮ್ಯಾಕ್ಸ್ನಲ್ಲಿ ಟ್ವಿಸ್ಟ್ ಸಿಕ್ಕಿದೆ. ಫಾಲೋ ಆನ್ ತಪ್ಪಿಸಿಕೊಂಡಿರುವಂಥ ಟೀಂ ಇಂಡಿಯಾ ಗೆದ್ದಷ್ಟೇ ಖುಷಿ ಪಟ್ಟಿದೆ. ಅಷ್ಟಕ್ಕೂ ಆಸಿಸ್ ಪರವೇ ಇದ್ದ ಪಂದ್ಯದ ದಿಕ್ಕು ಬದಲಾಗಿದ್ದೆಲ್ಲಿ? ಏನಿದು ಫಾಲೋ ಆನ್? ಪಂದ್ಯ ಡ್ರಾ ಆಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 15 ಇನ್ನಿಂಗ್ಸ್.. 1 ಶತಕ.. 318 ರನ್ ಗಳಿಸಿದ ಕೊಹ್ಲಿ!- ವಿರಾಟ್ ಕೊಹ್ಲಿ ಟೆಸ್ಟ್ ಫೇಲ್ಯೂರ್!
ಬ್ರಿಸ್ಬೇನ್ನ ಗಾಬ್ಬಾ ಮೈದಾನದಲ್ಲಿ ಆರಂಭವಾಗಿದ್ದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ನಲ್ಲಿ ಕಾಂಗರೂಗಳು ಮೇಲುಗೈ ಸಾಧಿಸಿದ್ರು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಆಸಿಸ್ ಪಡೆ ಬೌಲಿಂಗ್ನಲ್ಲೂ ಕಮಾಲ್ ಮಾಡಿತ್ತು. ಇನ್ನೇನು ಮ್ಯಾಚ್ ಫಾಲೋಆನ್ ಆಗುತ್ತೆ, ಭಾರತಕ್ಕೆ ಸೋಲು ಫಿಕ್ಸ್ ಅನ್ಕೊಳ್ಳುವಾಗ್ಲೇ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಟೀಂ ಇಂಡಿಯಾ ಮಾನ ಕಾಪಾಡಿದ್ರು. ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್ ಸಿಂಗ್ ಒಂದೊಂದು ರನ್ ಸಿಡಿಸುತ್ತಿದ್ರೆ ಡ್ರೆಸ್ಸಿಂಗ್ ರೂಮ್ ನಿಂದ ಹಿಡಿದು, ಪ್ರೇಕ್ಷಕರ ಗ್ಯಾಲರಿಯಿಂದ ಚಪ್ಪಾಳೆಗಳ ಸದ್ದು ಜೋರಾಗಿತ್ತು. ಪಂದ್ಯ ಗೆದ್ದಷ್ಟೇ ಖುಷಿಯಲ್ಲಿ ಕೈಕೈ ತಟ್ಟಿ ಸಂಭ್ರಮಿಸಿದ್ರು. ಅದಕ್ಕೆ ಕಾರಣವೂ ಇದೆ.
ಭಾರತಕ್ಕೆ ಆಸರೆಯಾದ ರಾಹುಲ್ & ರವೀಂದ್ರ!
ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 252 ರನ್ಗಳಿಸಿದೆ. 51 ರನ್ಗೆ 4 ವಿಕೆಟ್ ಕಳ್ಕೊಂಡು ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡವು ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 10 ರನ್ ಗಳಿಸಿದ್ದ ರೋಹಿತ್ ವಿಕೆಟ್ ಒಪ್ಪಿಸಿದ್ರು. ಬಟ್ ಓಪನರ್ ಆಗಿ ಕಣಕ್ಕಿಳಿದು ಏಕಾಂಗಿ ಹೋರಾಟ ಮುಂದುವರೆಸಿದ್ದ ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದ್ರು. 139 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 8 ಫೋರ್ಗಳೊಂದಿಗೆ 84 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 61 ಎಸೆತಗಳನ್ನು ಎದುರಿಸಿ 16 ರನ್ಗಳಿಸಿ ಔಟಾದರು. ಆ ಬಳಿಕ ಬಂದ ಮೊಹಮ್ಮದ್ ಸಿರಾಜ್ 1 ರನ್ ಗಳಿಸಿ ಬಂದಷ್ಟೇ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ನಡೆಸಿದ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಮೊತ್ತವನ್ನು 200ರ ಗಡಿದಾಟಿಸಿದರು.123 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 77 ರನ್ಗಳಿಸಿ 9ನೇ ವಿಕೆಟ್ ಒಪ್ಪಿಸಿದ್ರು.
ಟೀಂ ಇಂಡಿಯಾಗೆ ಫಾಲೋ ಆನ್ ತಪ್ಪಿಸಿದ ಬುಮ್ರಾ & ಆಕಾಶ್!
ಭಾರತದ ಪಾಲಿಗೆ ಯಾವಾಗ್ಲೂ ಆಪದ್ಬಾಂಧವನಾಗಿ ಕಾಯುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ರು. ಕಾಂಗರೂಪಡೆಯ 6 ವಿಕೆಟ್ಗಳನ್ನ ಕಿತ್ತು ದಾಖಲೆ ಬರೆದಿದ್ರು. ಅಲ್ದೇ ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. ಬುಮ್ರಾಗೆ ಜೋಡಿಯಾದ ಆಕಾಶ್ ದೀಪ್ ಕೂಡ ಹೀರೋ ಆಗಿ ಮೆರೆದಿದ್ದಾರೆ. 10 ನೇ ವಿಕೆಟ್ಗೆ ಜೊತೆಗೂಡಿದ ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ 39 ರನ್ಗಳ ಜೊತೆಯಾಟವಾಡುವ ಮೂಲಕ ಟೀಮ್ ಇಂಡಿಯಾವನ್ನು ಫಾಲೋಆನ್ನಿಂದ ಪಾರು ಮಾಡಿದ್ದಾರೆ.. ಅಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 445 ರನ್ ಕಲೆಹಾಕಿದೆ. ಹೀಗಾಗಿ ಟೀಮ್ ಇಂಡಿಯಾ ಫಾಲೋಆನ್ ತಪ್ಪಿಸಿಕೊಳ್ಳಲು 246 ರನ್ಗಳಿಸುವುದು ಅನಿವಾರ್ಯವಾಗಿತ್ತು. 213 ರನ್ಗಳಿಗೆ 9 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ಫಾಲೋಆನ್ ಭೀತಿ ಎದುರಾಗಿತ್ತು. ಬಟ್ ಅತ್ಯುತ್ತಮ ಪ್ರದರ್ಶನ ನೀಡಿದ ಆಕಾಶ್ ದೀಪ್ ಸಿಂಗ್ ಹಾಗೂ ಬುಮ್ರಾ ತಂಡದ ಮೊತ್ತವನ್ನು 252 ಕ್ಕೆ ತಲುಪಿಸುವ ಮೂಲಕ ಆಸ್ಟ್ರೇಲಿಯಾದ ಫಾಲೋಆನ್ ಅವಕಾಶವನ್ನು ತಪ್ಪಿಸಿದ್ರು. ಬುಮ್ರಾ 10 ರನ್ ಸಿಡಿಸಿದ್ರೆ ಆಕಾಶ್ ದೀಪ್ 27 ರನ್ ಬಾರಿಸೋ ಮೂಲಕ ಸಂಜೀವಿನಿಯಾದ್ರು.
ಫಾಲೋ ಆನ್ ತಪ್ಪುತ್ತಿದ್ದಂತೆ ಟೀಂ ಇಂಡಿಯಾ ಸೆಲೆಬ್ರೇಷನ್!
ಟೀಂ ಇಂಡಿಯಾ ಪರ ಕೊನೆಯ ವಿಕೆಟ್ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆಸ್ಟ್ರೇಲಿಯನ್ನರು ಕೊನೆಯ ವಿಕೆಟ್ಗಾಗಿ ಹರಸಾಹಸ ಪಡ್ತಿದ್ರೆ ಇತ್ತ ಟೀಮ್ ಇಂಡಿಯಾ ಫಾಲೋಆನ್ ತಪ್ಪಿಸಲು 33 ರನ್ಗಳ ಲೆಕ್ಕಾಚಾರಕ್ಕೆ ಇಳಿದಿತ್ತು. ಈ ಲೆಕ್ಕಾಚಾರದೊಂದಿಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಹಾಯಕ ಕೋಚ್ ಅಭಿಷೇಕ್ ನಾಯರ್ ಡ್ರೆಸ್ಸಿಂಗ್ ರೂಮ್ನಲ್ಲಿ ಕೂತು ಟೆನ್ಷನ್ನಲ್ಲೇ ಮ್ಯಾಚ್ ನೋಡ್ತಿದ್ರು. ಬಟ್ ಪ್ಯಾಟ್ ಕಮಿನ್ಸ್ ಎಸೆದ 75ನೇ ಓವರ್ನ 2ನೇ ಎಸೆತದಲ್ಲಿ ಆಕಾಶ್ ದೀಪ್ ಫೋರ್ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾದ ಸ್ಕೋರ್ 246 ಕ್ಕೆ ತಲುಪಿತ್ತು. ಈ ಸ್ಕೋರ್ ಮೂಲಕ ಭಾರತ ತಂಡವು ಫಾಲೋಆನ್ ತಪ್ಪಿಸಿಕೊಳ್ಳುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲೂ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ರು. ವಿರಾಟ್ ಕೊಹ್ಲಿ ಎದ್ದು ಗೌತಮ್ ಗಂಭೀರ್, ರೋಹಿತ್ ಶರ್ಮಾ ಹಾಗೂ ಅಭಿಷೇಕ್ ನಾಯರ್ ಅವರೊಂದಿಗೆ ಹೈಫೈ ಮಾಡುವ ಮೂಲಕ ಖುಷಿ ಪಟ್ರು.
ಏನಿದು ಫಾಲೊ-ಆನ್ ನಿಯಮ?
ಮಂಗಳವಾರದ ಪಂದ್ಯ ಮುಗಿದ ಬಳಿಕ ಫಾಲೋ ಆನ್ ನಿಯಮ ತುಂಬಾನೇ ಸದ್ದು ಮಾಡ್ತಿದೆ. ಅಷ್ಟಕ್ಕೂ ಏನಿದು ರೂಲ್ಸ್ ಅಂದ್ರೆ MCC ಕಾನೂನು 14.1.1 ರ ಪ್ರಕಾರ, 5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಎರಡು ಇನ್ನಿಂಗ್ಸ್ ಟೆಸ್ಟ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಕನಿಷ್ಠ 200 ರನ್‌ಗಳಿಂದ ಮುನ್ನಡೆ ಸಾಧಿಸಿದರೆ, ಎದುರಾಳಿ ತಂಡಕ್ಕೆ ಅದರ ಇನ್ನಿಂಗ್ಸ್ ಅನ್ನು ಅನುಸರಿಸಲು ಅಂದ್ರೆ ಫಾಲೋ ಆನ್ ಹೇಳುವ ಆಪ್ಶನ್ಸ್ ಇರುತ್ತೆ. ಈ ಪಂದ್ಯದಲ್ಲಿ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್ ಗಳಿಸದಿದ್ದರೆ, ಆಸ್ಟ್ರೇಲಿಯಾ ತಂಡವು ಭಾರತವನ್ನು ಮತ್ತೆ ಬ್ಯಾಟಿಂಗ್ ಮಾಡಲು ಹೇಳ್ತಿತ್ತು. ಅಂದ್ರೆ ಭಾರತವು ಮೊದಲ ಇನ್ನಿಂಗ್ಸ್ ಮುಗಿಸಿದ ಬೆನ್ನಲ್ಲೇ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಬೇಕು. ಆಗಲೂ ಭಾರತ ತಂಡ ಆಸ್ಟ್ರೇಲಿಯಾ ನೀಡಿದ ಮೊದಲ ಇನ್ನಿಂಗ್ಸ್ ಗುರಿ ತಲುಪಲು ಸಾಧ್ಯವಾಗದಿದ್ದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್ ಗೆಲುವು ತನ್ನದಾಗಿಸುತ್ತದೆ. ಒಂದು ವೇಳೆ ಬ್ಯಾಟಿಂಗ್ ಮಾಡಿ ಲೀಡ್ ಪಡೆದುಕೊಂಡರೆ, ಕಾಂಗರೂಗಳು ಆ ಮೊತ್ತವನ್ನು ಚೇಸಿಂಗ್ ಮಾಡಬೇಕಾಗುತ್ತದೆ. ಆದರೀಗ ಫಾಲೋಆನ್ ತಪ್ಪಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ದೊಡ್ಡ ಸಮಾಧಾನ ಸಿಕ್ಕಿದೆ. ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋ ಆನ್ ಸುಳಿಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನ ಆರ್ ಸಿಬಿ ಮಾಜಿ ಬೌಲರ್ ಆಕಾಶ್ ದೀಪ್ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ ರೋಚಕವಾಗಿ ಹೋರಾಡಿ ತಪ್ಪಿಸಿದ್ದಾರೆ. ಒಂದು ವೇಳೆ ಫಾಲೋ ಆನ್ಗೆ ಸಿಲುಕಿದ್ದರೆ ಟೀಮ್ ಇಂಡಿಯಾ ಇನ್ನಿಂಗ್ಸ್ ಅಂತರದಲ್ಲಿ ಸೋಲು ಭೀತಿ ಎದುರಾಗುತ್ತಿತ್ತು. ಸದ್ಯ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಆಲೌಟ್ ಆದರೂ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಬೇಕು. ಇದಾದ ಬಳಿಕ ಬೃಹತ್ ಮೊತ್ತದ ಗುರಿ ನೀಡಿದರೂ, ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆ ಇದೆ.