ಆಸಿಸ್ ನಲ್ಲಿ KING IS BACK  – 2024ರಲ್ಲಿ ಕೊಹ್ಲಿ ಫಸ್ಟ್ ಸೆಂಚುರಿ
ಆಸಿಸ್ ಗೆ ಸೋಲು.. ಸರಣಿ ನಮ್ದೇನಾ?

ಆಸಿಸ್ ನಲ್ಲಿ KING IS BACK  – 2024ರಲ್ಲಿ ಕೊಹ್ಲಿ ಫಸ್ಟ್ ಸೆಂಚುರಿಆಸಿಸ್ ಗೆ ಸೋಲು.. ಸರಣಿ ನಮ್ದೇನಾ?

ಕ್ರಿಕೆಟ್ ಜಗತ್ತಿನಲ್ಲೀಗ ಐಪಿಎಲ್ ಆಕ್ಷನ್​ನದ್ದೇ ಸದ್ದು. ಇದ್ರ ನಡುವೆ ಟೀಂ ಇಂಡಿಯಾದ ಕಿಂಗ್ ವಿರಾಟ್ ಕೊಹ್ಲಿ ಆಸಿಸ್ ನೆಲದಲ್ಲಿ ವಿರಾಟರೂಪ ತೋರಿಸಿದ್ದಾರೆ. ತಿಂಗಳುಗಟ್ಟಲೆ ಸೈಲೆಂಟ್ ಆಗಿದ್ದ ಬ್ಯಾಟ್​ನಲ್ಲಿ ಕಾಂಗರೂಗಳನ್ನ ಬೆಂಡೆತ್ತಿ ಸೆಂಚುರಿಯ ಬಿಸಿ ಮುಟ್ಟಿಸಿದ್ದಾರೆ. ಹರಾಜಿನಲ್ಲಿ ಇರೋಬರೋ ಸ್ಟಾರ್ ಪ್ಲೇಯರ್​ಗಳನ್ನೆಲ್ಲಾ ಆರ್ ಸಿಬಿ ಫ್ರಾಂಚೈಸಿ ಬಿಟ್ಟುಕೊಡ್ತು ಅಂತಾ ಬೇಸರದಲ್ಲಿದ್ದ ಬೆಂಗಳೂರು ಫ್ಯಾನ್ಸ್ ಗೆ ಶತಕದ ಮೂಲಕ ಮುಲಾಮು ಹಚ್ಚಿದ್ದಾರೆ. ಪರ್ತ್ ಟೆಸ್ಟ್ ನಲ್ಲಿ ವಿರಾಟ್ ಅಬ್ಬರ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಎಲ್ರೂ ಜಾಲಿ.. RCB ಖಾಲಿ ಖಾಲಿ – ಕಡ್ಲೇಕಾಯಿ ಪರಿಷೆಗೆ ಹಣ ಉಳಿಸಿದ್ರಾ?

ಟಿ-20 ವಿಶ್ವಕಪ್ ಬಳಿಕ ಭಾರತದ ಸೀನಿಯರ್ಸ್ ಟೀಂ ಸಿಕ್ಕಾಪಟ್ಟೆ ಡಲ್ ಆಗಿತ್ತು. ಲಂಕಾ ವಿರುದ್ಧದ ಏಕದಿನ ಸರಣಿ ಸೋತ್ರು. ಆ ಬಳಿಕ ಬಾಂಗ್ಲಾ ಟೆಸ್ಟ್ ಗೆದ್ರೂ ಕೂಡ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮೂರಕ್ಕೆ ಮೂರೂ ಸರಣಿಗಳನ್ನ ಸೋತು ವೈಟ್ ವಾಶ್ ಆಗಿತ್ತು. ಒಂದ್ಕಡೆ ತಂಡ ಸೋಲ್ತಿದೆ ಅಂತಾ ನೋವಲ್ಲಿದ್ದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮತ್ತಷ್ಟು ತಲೆಕೆಡುವಂತೆ ಮಾಡಿತ್ತು. ಬಟ್ ಈಗ ಕಿಂಗ್ ಈಸ್ ಬ್ಯಾಕ್. ಅದೂ ಕೂಡ ಆಸಿಸ್ ನೆಲದಲ್ಲೇ ಸೆಂಚುರಿ ಮೂಲಕ ಗ್ರೇಟ್ ಕಮ್ ಬ್ಯಾಕ್ ಮಾಡಿದ್ದಾರೆ.

ಜೈಸ್ವಾಲ್ ಮತ್ತು ವಿರಾಟ್ ಬೆಂಕಿಯಾಟ!

ಫಸ್ಟ್ ಇನ್ನಿಂಗ್ಸ್​ನಲ್ಲಿ 46 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಓಪನರ್ಸ್ ಆಗಿ ಕಣಕ್ಕಿಳಿದಿದ್ರು. ಈ ವೇಳೆ ಆರಂಭದಲ್ಲೇ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ರು. ದ್ವಿಶತಕದ ಜೊತೆಯಾಟ ಆಡುವ ಮೂಲಕ ಭರ್ಜರಿ ಆರಂಭ ಒದಗಿಸಿದರು. ಕೆಎಲ್ ರಾಹುಲ್ 77 ರನ್ ಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಬಂದ ದೆವದತ್ ಪಡಿಕ್ಕಲ್ ಕೂಡ 25 ರನ್ ಗಳಿಗೆ ಪೆವಿಲಿಯನ್ ಸೇರಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ವಿರಾಟ ರೂಪ ತೋರಿಸಿದ್ರು. ಒಂದ್ಕಡೆ ಯಶಸ್ವಿ ಜೈಸ್ವಾಲ್ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿದ್ರೆ ಮತ್ತೊಂದೆಡೆ ವಿರಾಟ್ ಸುನಾಮಿಯಂತೆ ರನ್ ಗಳನ್ನ ಬಾರಿಸಿದ್ರು. ಜೈಸ್ವಾಲ್ 161 ರನ್​ಗಳನ್ನ ಸಿಡಿಸಿ ಮಿಂಚಿದ್ರೆ ವಿರಾಟ್ ಕೂಡ ಸೆಂಚುರಿಯ ಸರದಾರನಾದ್ರು.

ಟೆಸ್ಟ್ ಕರಿಯರ್ ನಲ್ಲಿ 30 ಶತಕ ಬಾರಿಸಿದ ವಿರಾಟ್!

ಕಳೆದ ಒಂದುವರೆ ವರ್ಷದಿಂದ ಸೈಲೆಂಟ್ ಆಗಿದ್ದ ವಿರಾಟ್ ಬ್ಯಾಟ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಟೆಸ್ಟ್ ವೃತ್ತಿ ಜೀವನದಲ್ಲಿ 30ನೇ ಶತಕ ಸಿಡಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಕೊಹ್ಲಿ ಎದುರಿಸಿದ 143 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 100 ರನ್ ಕೆಲ ಹಾಕಿದರು. ಇನ್ನೂ ಅತೀ ಹೆಚ್ಚು ಶತಕ ಸಿಡಿಸಿದವರ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಪರವಾಗಿ ಅವರು ಬರೋಬ್ಬರಿ 51 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದುವರೆಗೆ ಆಸ್ಟ್ರೇಲಿಯಾ ತಂಡವೊಂದರ ವಿರುದ್ಧವೇ 9 ಶತಕ ಸಿಡಿಸುವ ಮೂಲಕ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧವೇ 8 ಶತಕ ಸಿಡಿಸಿದ್ದ ಸುನಿಲ್ ಗವಾಸ್ಕರ್ ಅವರ ದಾಖಲೆ ಹಿಂದಿಕ್ಕಿದ್ದಾರೆ.

2024ರಲ್ಲಿ ಮೊದಲ ಶತಕ ಸಿಡಿಸಿದ ವಿರಾಟ್!

ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 81ನೇ ಸೆಂಚುರಿ ಬಾರಿಸಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಈಗಾಗಲೇ ಮೂರನೇ ದಿನದಾಟದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿದ್ದಾರೆ. ಅದರ ಬೆನ್ನಲ್ಲೇ ವಿರಾಟ್‌ ಕೂಡಾ ಮೂರಂಕಿ ಗಡಿ ದಾಟಿದ್ರು. ಅದ್ರಲ್ಲೂ ಟೆಸ್ಟ್‌ನಲ್ಲಿ 16 ಇನ್ನಿಂಗ್ಸ್‌ಗಳ ಬಳಿಕ ಕೊಹ್ಲಿ ಮೂರಂಕಿ ಮೊತ್ತ ಗಳಿಸಿದ್ದಾರೆ. ಈ ಶತಕಕ್ಕೂ ಮುನ್ನ ವಿರಾಟ್ ಈ ವರ್ಷ ಟೀಂ ಇಂಡಿಯಾ ಪರ ಮೂರು ಫಾರ್ಮೆಟ್‌ಗಳಲ್ಲಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 26 ಇನ್ನಿಂಗ್ಸ್‌​​ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ನಾಲ್ಕು ಸಲ ಡಕೌಟ್ ಆಗಿದ್ದ ಕಿಂಗ್‌, ಒಂದೇ ಒಂದು ಶತಕ ಸಿಡಿಸಿರಲಿಲ್ಲ. ಎರಡು ಅರ್ಧಶತಕ ಸಿಡಿಸಿದ ಕಿಂಗ್‌ ಗರಿಷ್ಠ ಸ್ಕೋರ್ 76 ರನ್‌ ಆಗಿತ್ತು.  ಬಟ್ 2024ರಲ್ಲಿ ಇದ ಮೊದಲ ಶತಕ ಸಿಡಿಸಿದ್ದಾರೆ. 2023ರ ಜುಲೈ 21ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ ಅವರು ಮೂರಂಕಿ ಮೊತ್ತ ಕಲೆಹಾಕಿರಲಿಲ್ಲ.

ಕೊಹ್ಲಿ ಶತಕದ ಬೆನ್ನಲ್ಲೇ ಭಾರತ ತಂಡವು ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಳ್ತು. ಭಾರತವು 6 ವಿಕೆಟ್‌ ಕಳೆದುಕೊಂಡು 487 ರನ್‌ ಕಲೆ ಹಾಕಿದ್ದು, 533 ರನ್‌ಗಳ ಮುನ್ನಡೆ ಸಾಧಿಸಿತ್ತು. 533 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿರೋ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಮಾತ್ರ ಉತ್ತಮ ಪ್ರದರ್ಶನ ನೀಡಿದ್ರು. 89 ರನ್ ಸಿಡಿಸಿದ್ದ ಹೆಡ್​ಗೆ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದ್ರು.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2 ಸಾವಿರ ರನ್ ಪೂರೈಸಿದ ಕಿಂಗ್!

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2 ಸಾವಿರ ರನ್ ಪೂರೈಸಿದ 7ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಈಗ ತಮ್ಮ ಹೆಸರಿನಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 100 ಶತಕಗಳ ದಾಖಲೆಯನ್ನು ಮಾಡಿದ್ದು, ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 81 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 71 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಒಂದ್ಕಡೆ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಮೂಲಕ ಆಸ್ಟ್ರೇಲಿಯನ್ನರನ್ನ ಕಟ್ಟಿ ಹಾಕಿದ್ರು. ಮೊದಲ ಇನ್ನಿಂಗ್ಸ ್ನಲ್ಲಿ ಬುಮ್ರಾ 5 ವಿಕೆಟ್ ಕಬಳಿಸಿದ್ರೆ ಸಿರಾಜ್ ಇಬ್ಬರನ್ನ ಔಟ್ ಮಾಡಿದ್ರು. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಇಬ್ಬರೂ ತಲಾ ಮೂರು ಮೂರು ವಿಕೆಟ್ ಕಿತ್ತು ಕಾಂಗರೂಗಳ ಓಟಕ್ಕೆ ಬ್ರೇಕ್ ಹಾಕಿದ್ದಾರೆ.

Shwetha M

Leave a Reply

Your email address will not be published. Required fields are marked *