IND Vs AFG.. ಯಾರು ಸ್ಟ್ರಾಂಗ್? – ಸೂಪರ್ 8 ಸುತ್ತಿನಲ್ಲಿ ಗೆದ್ರೆ LUCK
ರೋಹಿತ್ ಪಡೆಗೆ ಆಫ್ಘನ್ ಸವಾಲಾಗುತ್ತಾ?

ಟಿ-20 ವಿಶ್ವಕಪ್ ಸಮರದಲ್ಲಿ ಅಸಲಿ ಅಗ್ನಿಪರೀಕ್ಷೆ ಇಂದಿನಿಂದ ಶುರುವಾಗಲಿದೆ. ಲೀಗ್ ಹಂತದಲ್ಲಿ ಗೆದ್ದು ಸೂಪರ್ 8ಗೆ ಕಾಲಿಟ್ಟಿರೋ 8 ತಂಡಗಳು ಮುಂದಿನ ಹಂತಕ್ಕೇರಲು ಪೈಪೋಟಿ ನಡೆಯಲಿವೆ. ಭಾರತ ಕೂಡ ತನ್ನ ಸೂಪರ್ 8ನ ಮೊದಲ ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಅಷ್ಟಕ್ಕೂ ಇವತ್ತಿನ ಪಂದ್ಯದಲ್ಲಿ ಯಾರೆಲ್ಲಾ ಮುಖಾಮುಖಿಯಾಗ್ತಿದ್ದಾರೆ..? ಭಾರತ ಮತ್ತು ಆಫ್ಘನ್ ಸ್ಟ್ರೆಂಥ್ ಏನು? ಸೆಮೀಸ್ಗೆ ಹೋಗೋ ತಂಡಗಳು ಯಾವು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಮೆಸ್ಸಿ ನಿವೃತ್ತಿ ಸುಳಿವು – ಮೆಸ್ಸಿ ಆಟ ಮಿಸ್ ಮಾಡ್ಕೋಬೇಕಾ?
ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿಯಲಿದೆ. ಗ್ರೂಪ್ 1ನಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳಿದ್ರೆ ಗ್ರೂಪ್-2 ನಲ್ಲಿ ಯುಎಸ್ಎ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಮತ್ತು ಇಂಗ್ಗೆಂಡ್ ತಂಡಗಳಿವೆ. ಇಲ್ಲಿ 8 ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದ್ದರೂ ಗುಂಪುಗಳ ನಡುವೆ ಮುಖಾಮುಖಿಯಾಗುವುದಿಲ್ಲ. ಬದಲಾಗಿ ಒಂದೇ ಗ್ರೂಪ್ನಲ್ಲಿರುವ ತಂಡಗಳು ಪರಸ್ಪರ ಸೆಣಸಲಿದೆ. ಅದರಂತೆ ಒಂದು ತಂಡಕ್ಕೆ 3 ಪಂದ್ಯಗಳಿರಲಿವೆ. ಭಾರತ ತಂಡವು ಗ್ರೂಪ್-1 ರಲ್ಲಿದ್ದು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ.
ಬುಧವಾರ ಸೌತ್ ಆಫ್ರಿಕಾ ಮತ್ತು ಅಮೆರಿಕ ನಡುವೆ ನಡೆಯುತ್ತಿರೋ ಮೊದಲ ಕದನ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಎನಿಸಿಕೊಂಡಿದ್ದರೂ ಕೂಡ ಅಮೆರಿಕವನ್ನು ಕಡೆಗಣಿಸುವಂತಿಲ್ಲ. ಬಲಿಷ್ಠ ಪಾಕಿಸ್ತಾನಕ್ಕೆ ನೀರು ಕುಡಿಸಿದ್ದು ಮತ್ತು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದನ್ನ ಮರೆಯೋಕಾಗಲ್ಲ. ಅಮೆರಿಕ ಕ್ರಿಕೆಟ್ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್ ಹೊಸತಲ್ಲ. ಎಲ್ಲರು ಉತ್ಕೃಷ್ಟ ಮಟ್ಟದ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತೊಂದೆಡೆ ಈ ಬಾರಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಲೀಗ್ ಪಂದ್ಯಗಳಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿತ್ತು. ಒಮ್ಮೆಯೂ 120ರ ಗಡಿ ದಾಟಿರಲಿಲ್ಲ. ಹಾಗಂತ ದಕ್ಷಿಣ ಆಫ್ರಿಕಾಗೆ ದೊಡ್ಡ ಮೊತ್ತ ಬಾರಿಸುವ ಸಾಮರ್ಥ ಇಲ್ಲವೆಂದಲ್ಲ. ಅದು ಆಡಿದ ಪಿಚ್ ನ್ಯೂಯರ್ಕ್ನ ಅಪಾಯಕಾರಿ ನಾಸೌ ಕೌಂಟಿ ಸ್ಟೇಡಿಯಂನ ಪಿಚ್ನಲ್ಲಿ. ಇಲ್ಲಿ ಹರಿಣ ಪಡೆ ಮಾತ್ರವಲ್ಲ ಆಡಿದ ಎಲ್ಲ ತಂಡಗಳು ಕೂಡ 120ಕ್ಕಿಂತ ಅಧಿಕ ಮೊತ್ತವನ್ನು ಬಾರಿಸಿಲ್ಲ. ಪಾಕ್ ವಿರುದ್ಧ ಭಾರತ 119 ರನ್ ಬಾರಿಸಿದ್ದೇ ಗರಿಷ್ಠ ಮೊತ್ತ. ಇದೀಗ ಸೂಪರ್-8 ಪಂದ್ಯಗಳನ್ನು ವಿಂಡೀಸ್‌ನಲ್ಲಿ ಆಡುತ್ತಿರುವ ಕಾರಣ ಮಾರ್ಕ್ರಮ್ ಪಡೆ ದೊಡ್ಡ ಮೊತ್ತವನ್ನು ಪೇರಿಸುವ ಸಾಧ್ಯತೆ ಇದೆ. ಹೀಗಾಗಿ ಸೂಪರ್ 8ನ ಮೊದಲ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಇನ್ನು ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಆಡಲಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಜೂನ್ 22 ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಹಾಗೆಯೇ ಜೂನ್ 24 ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಈ ವೇಳೆ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಇದೀಗ ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿನಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಎರಡೂ ತಂಡಗಳು ಮುಂಬರುವ ಪಂದ್ಯಗಳಲ್ಲಿ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಬೇಕಿದೆ. ಹೀಗಾಗಿ ಮೊದಲ ಪಂದ್ಯದಲ್ಲೇ ಗೆಲ್ಲುವ ಮೂಲಕ ಶುಭಾರಂಭ ಮಾಡುವ ಅನಿವಾರ್ಯತೆ ಎರಡೂ ತಂಡಗಳಿಗಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಹಗಲಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ಇರಲಿದೆ.
ಇನ್ನು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ನಿರೀಕ್ಷೆ ಇದೆ. ಯಾಕಂದ್ರೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ-20 ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳನ್ನ ಅಮೆರಿಕದಲ್ಲಿ ಆಡಿತ್ತು. ಆದ್ರೀಗ ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿವೆ. ನ್ಯೂಯಾರ್ಕ್ ಪಿಚ್ ಹಾಗೂ ಕೆರಿಬಿಯನ್ ಪಿಚ್‌ಗಳ ನಡುವೆ ಸಾಕಷ್ಟು ಡಿಫ್ರೆನ್ಸಸ್ ಇದೆ. ಹೀಗಾಗಿ ಕೆರಿಬಿಯನ್‌ಗೆ ಕಂಡೀಷನ್ಸ್‌ಗೆ ತಕ್ಕಂತೆ ಭಾರತ ತಂಡ ತನ್ನ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಬೇಕು. ಸಾಮಾನ್ಯವಾಗಿ ವಿಂಡೀಸ್‌ನಲ್ಲಿ ನಿಧಾನಗತಿಯ ಪಿಚ್‌ಗಳಿವೆ ಹಾಗೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸೋ ಸಾಧ್ಯತೆ ಇರುತ್ತೆ. ಇದೇ ಕಾರಣಕ್ಕೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಯು ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿತ್ತು. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಜೊತೆಗೆ ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ರು. ಇದೀಗ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಯಾರಿಗೆಲ್ಲಾ ಚಾನ್ಸ್ ನೀಡಬಹುದು ಅನ್ನೋ ಬಗ್ಗೆ ಸಲಹೆ ನೀಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಆಡಿದ್ದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟು ಹೆಚ್ಚುವರಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಿದ್ದಾರೆ. ಎರಡನೇ ಫಾಸ್ಟ್ ಬೌಲರ್ ಆಗಿ ಅರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡು, ಮೊಹಮ್ಮದ್ ಸಿರಾಜ್ ಅವರ ಸ್ಥಾನಕ್ಕೆ ಮೂರನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ಗೆ ಮಣೆ ಹಾಕಿದ್ದಾರೆ. ಸದ್ಯ ಟೀಂ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ವಿರಾಟ್ ಕೊಹ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಆದರೂ ಅವರನ್ನೇ ಓಪನರ್ ಆಗಿ ಮುಂದುವರಿಸಬೇಕೆಂದು ಪಠಾಣ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಬಯಸಿದರೆ, ಯಶಸ್ವಿ ಜೈಸ್ವಾಲ್ ಅವರನ್ನು ಇನಿಂಗ್ಸ್ ಆರಂಭಿಸಲು ಅವಕಾಶ ಕಲ್ಪಿಸಬೇಕೆಂದು ಪಠಾಣ್ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಪ್ಲೇಯಿಂಗ್ 11ನಲ್ಲಿ ಇರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೀಗ್ ಸ್ಟೇಜ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಂತೆ ಸೂಪರ್-8 ಹಂತಕ್ಕೆ ಕಾಲಿಟ್ಟಿದೆ. ಅಮೆರಿಕದಿಂದ ವೆಸ್ಟ್ ಇಂಡೀಸ್ಗೆ ಕಾಲಿಟ್ಟಿರುವ ರೋಹಿತ್ ಪಡೆ ಇದೀಗ, ಮಹತ್ವದ ಪಂದ್ಯಗಳನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ದೋಸ್ತ್ ಅಫ್ಘಾನಿಸ್ತಾನದ ಸವಾಲು ಎದುರಾಗಲಿದೆ. ಅಫ್ಘಾನಿಸ್ತಾನ ಟಿ-20 ಪಂದ್ಯಗಳಲ್ಲಿ ಭಾರತದ ವಿರುದ್ಧ ಗೆದ್ದಿಲ್ಲ ನಿಜ. ಬಟ್ ಈ ಸಲ ಅವ್ರನ್ನ ಅಷ್ಟು ಈಸಿಯಾಗಿ ತಗೊಳ್ಳೋಕೆ ಚಾನ್ಸೇ ಇಲ್ಲ. ಯಾಕಂದ್ರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರಿಗೆ ಅಫ್ಘಾನ್ ಪಡೆಯ ಆಟಗಾರರು ದೋಸ್ತ್ಗಳಿದ್ದಾರೆ. ಹಾಗಂತ ಚೂರು ಯಾಮಾರಿದ್ರೂ ಭಾರತಕ್ಕೆ ಶಾಕ್ ಕೊಡೋದು ಪಕ್ಕಾ. ಚುಟುಕು ವಿಶ್ವಕಪ್ ದಂಗಲ್ನಲ್ಲಿ ಅಫ್ಘಾನಿಸ್ತಾನ ಆಟಗಾರರು ಅಬ್ಬರದ ಪರ್ಫಾಮೆನ್ಸ್ ನೀಡ್ತಿದ್ದಾರೆ. ತಂಡದ ವೇಗಿ ಫಝಲ್ಹಕ್ ಫಾರೂಕಿಯಂತೂ ಧೂಳೆಬ್ಬಿಸಿದ್ದಾರೆ. ಫಾರೂಕಿಯ ಬೌಲಿಂಗ್ ದಾಳಿಗೆ ಬ್ಯಾಟ್ಸ್ಮನ್ಗಳು ತತ್ತರಿಸಿ ಹೋಗಿದ್ದಾರೆ. ವಿಶ್ವಕಪ್ನ ಪರ್ಫಾಮೆನ್ಸ್ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ವಾರ್ನಿಂಗ್ ಬೆಲ್ ಅಂದ್ರೂ ತಪ್ಪಾಗಲ್ಲ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 4 ಪಂದ್ಯಗಳನ್ನ ಆಡಿರುವ ಫಝಲ್ಹಲ್ ಫಾರೂಕಿ, 14.2 ಓವರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಬರೋಬ್ಬರಿ 12 ವಿಕೆಟ್ ಬೇಟೆಯಾಡಿದ್ದು, 5.58ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅಲ್ದೇ ಈ ಟೂರ್ನಿಯ ಹೈಯೆಸ್ಟ್ ವಿಕೆಟ್ ಕೀಪರ್ ಲಿಸ್ಟ್ನಲ್ಲಿ ಫಸ್ಟ್ ಪ್ಲೇಸ್ನಲ್ಲಿದ್ದಾರೆ. ವೇಗಿ ನವಿನ್ ಉಲ್ ಹಕ್ ಕೂಡ ವಿಂಡೀಸ್‌ನಲ್ಲಿ ಧೂಳೆಬ್ಬಿಸಿದ್ದಾರೆ. ನವೀನ್ ಉಲ್ ಹಕ್ ಬೌಲಿಂಗ್ನಲ್ಲಿ ಬ್ಯಾಟ್ಸ್ಮನ್ಗಳು ರನ್ ಗಳಿಕೆಗೆ ಅಕ್ಷರಶಃ ಪರದಾಡಿದ್ದಾರೆ. ಆಡಿದ 4 ಪಂದ್ಯಗಳಲ್ಲಿ 11.5 ಓವರ್ ಬೌಲಿಂಗ್ ಮಾಡಿ 5 ವಿಕೆಟ್ ಉರುಳಿಸಿದ್ದಾರೆ. ಕೇವಲ 4.98ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಸ್ಪಿನ್ ಮಾಂತ್ರಿಕ, ಅಫ್ಘಾನ್ ತಂಡದ ಕ್ಯಾಪ್ಟನ್ ರಶೀದ್ ಖಾನ್ ಕೂಡ ಕೆರಬಿಯನ್ ನಾಡಲ್ಲಿ ಮೋಡಿ ಮಾಡಿದ್ದಾರೆ. ಸ್ಪಿನ್ ಮ್ಯಾಜಿಕ್ನಿಂದಲೇ ಎದುರಾಳಿ ಪಡೆಗಳನ್ನ ಕಾಡಿರುವ 4 ಪಂದ್ಯಗಳಿಂದ 16 ಓವರ್ ಬೌಲಿಂಗ್ ಮಾಡಿ 6 ವಿಕೆಟ್ ಬೇಟೆಯಾಡಿದ್ದಾರೆ. ಬ್ಯಾಟಿಂಗ್ನಲ್ಲೂ ಕೂಡ ಅಫ್ಘಾನ್ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್ ವಿಶ್ವಕಪ್ನ ಟಾಪ್ ರನ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. ನಾಲ್ಕು ಇನ್ನಿಂಗ್ಸ್ಗಳಿಂದ 150ರ ಸ್ಟ್ರೈಕ್ ರೇಟ್ನಲ್ಲಿ 167 ರನ್ ಗಳಿಸಿದ್ದಾರೆ. ಹಾಗೇ ಅಫ್ಘನ್ನ ಮತ್ತೊಬ್ಬ ಬ್ಯಾಟರ್ ಇಬ್ರಾಹಿಂ ಝರ್ದಾನ್ ಕೂಡ ಎದುರಾಳಿ ಬೌಲರ್ಗಳ ಬೆವರಿಳಿಸಿದ್ದಾರೆ. 4 ಪಂದ್ಯಗಳಿಂದ 38ರ ಸರಾಸರಿಯಲ್ಲಿ 152 ರನ್ ಗಳಿಸಿದ್ದಾರೆ. ಹೈಯೆಸ್ಟ್ ರನ್ ಸ್ಕೋರರ್ ರೇಸ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ರೆ ಮಾತ್ರ ಗೆಲುವು ನಮ್ಮದಾಗಲಿದೆ. ಸ್ವಲ್ಪ ಯಾಮಾರಿದ್ರೂ ಸಂಕಷ್ಟ ತಪ್ಪಿದ್ದಲ್ಲ.
ಇನ್ನು ಟೂರ್ನಿಯ ಮೊದಲ ಸುತ್ತಿನಂತೆ ದ್ವಿತೀಯ ಸುತ್ತಿನಲ್ಲೂ ಪಾಯಿಂಟ್ಸ್ ಟೇಬಲ್ ಲೆಕ್ಕಚಾರ ಇರಲಿದೆ. ಅಂದರೆ ಇಲ್ಲಿ ಎರಡು ಗ್ರೂಪ್ಗಳಿಗೂ ಪತ್ಯೇಕ ಅಂಕ ಪಟ್ಟಿ ಇರಲಿದೆ. ಈ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಗ್ರೂಪ್-1 ರಿಂದ 2 ತಂಡಗಳು, ಗ್ರೂಪ್-2 ರಿಂದ 2 ತಂಡಗಳು ನಾಕೌಟ್ ಹಂತಕ್ಕೇರಲಿದೆ. ಎರಡು ಗಂಪುಗಳಿಂದ ಒಟ್ಟು 4 ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಯಲಿದೆ. ಇದಾದ ಬಳಿಕ ಎರಡು ಗುಂಪುಗಳ ತಂಡಗಳು ವಿರುದ್ಧವಾಗಿ ಸೆಣಸಲಿದೆ. ಅಂದರೆ ಗ್ರೂಪ್-1 ನಲ್ಲಿನ ತಂಡಗಳು ಗ್ರೂಪ್-2 ನಲ್ಲಿನ ತಂಡಗಳ ವಿರುದ್ಧ ನಾಕೌಟ್ ಪಂದ್ಯಗಳನ್ನಾಡಲಿದೆ. ಸೆಮಿಫೈನಲ್ಗಳಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಲಿದ್ದು, ಅದರಂತೆ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ. ಒಟ್ನಲ್ಲಿ ಸೂಪರ್ 8 ಸುತ್ತಿನ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ.