ರಾಜ್ಯದಲ್ಲಿ ಹೆಚ್ಚಾಯ್ತು ಬಿಸಿಲ ಝಳ – ಹೊರಾಂಗಣ ಕಾರ್ಯಕ್ರಮಗಳಿಗೆ ಬ್ರೇಕ್!

ರಾಜ್ಯದಲ್ಲಿ ಹೆಚ್ಚಾಯ್ತು ಬಿಸಿಲ ಝಳ – ಹೊರಾಂಗಣ ಕಾರ್ಯಕ್ರಮಗಳಿಗೆ ಬ್ರೇಕ್!

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಬಿಸಿಲಿನ ತಾಪವೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಹೊರಾಂಗಣದಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಜನರನ್ನು ಸೇರಿಸಿ ಸಭೆ, ಸಮಾರಂಭ ನಡೆಸಬಾರದು, ಒಂದು ವೇಳೆ ಜನರನ್ನು ಸೇರಿಸಿದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಇದರಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇದನ್ನು ನಿಭಾಯಿಸಲು ಬಿಸಿಲಿನ ಪ್ರಖರತೆ ಹೆಚ್ಚಿರುವಂತಹ ಸಮಯದಲ್ಲಿ (ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ವರೆಗೆ) ಹೊರಾಂಗಣ ಪ್ರದೇಶಗಳಲ್ಲಿ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಈ ಸ್ಥಳದಲ್ಲಿ ಸೆಲ್ಫಿ ತೆಗೆದ್ರೆ 24 ಸಾವಿರ ರೂ. ದಂಡ! – ಯಾಕಪ್ಪಾ ಇಂತಹ ಟಫ್ ರೂಲ್ಸ್?

ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಗಳ ಅವಧಿಯಲ್ಲಿ ಅನಿವಾರ್ಯವಾಗಿ ಕಾರ್ಯಕ್ರಮ ಆಯೋಜಿಸಬೇಕಾದ ಸಂದರ್ಭ ಬಂದಾಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಭಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್‌ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆ ಇರುವುದನ್ನು  ಖಚಿತಪಡಿಸಿಕೊಳ್ಳಬೇಕು. ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಅಂಶಗಳ ಪಾಲನೆ ಮಾಡುವುದು ಕಡ್ಡಾಯ. ಇದನ್ನು ಬಿಬಿಎಂಪಿ ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತಗಳು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

suddiyaana