ರಾಜ್ಯದಲ್ಲಿ ಹುಲಿ ಗಣತಿಯಲ್ಲಿ ಏರಿಕೆ –ಕ್ಯಾಮರಾ ಟ್ರ್ಯಾಪ್‌ನಲ್ಲಿ ಪತ್ತೆಯಾದ 435 ಹುಲಿಗಳು
ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಫಲವಾಗಿ ವ್ಯಾಘ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಹುಲಿದಿನಕ್ಕೂ ಮೊದಲು ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರವನ್ನು ಸಚಿವರು ಬಿಡುಗಡೆ ಮಾಡಿದ್ದಾರೆ. ರಾಷ್ಟ್ರೀಯ ಹುಲಿ ಪ್ರಾಧಿಕಾರ (ಎನ್.ಟಿ.ಸಿ.ಎ.) ಮಾರ್ಗಸೂಚಿಯ ಪ್ರಕಾರ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಇದರ ಭಾಗವಾಗಿ ಆನೆ, ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳ ಗಣತಿಯನ್ನೂ ದೇಶಾದ್ಯಂತ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಿದ್ದು, ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗದಲ್ಲಿ ನಡೆಸಲಾಗಿದೆ. ಈ ಗಣತಿಗೆ ಕ್ಯಾಮರಾ ಟ್ರ್ಯಾಪ್ ಮತ್ತು ಲೈನ್ ಟ್ರನ್ಸ್ಯಾಕ್ಟ್ ವಿಧಾನ ಬಳಸಲಾಗಿದೆ. ರಾಜ್ಯದ ಎಲ್ಲಾ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5399 ಕ್ಯಾಮರಾ ಟ್ರ್ಯಾಪ್ ನಲ್ಲಿ 66 ಲಕ್ಷಕ್ಕೂ ಹಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಡೀಕರಣವಾಗದ್ದು, ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ. 2018ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ನಲ್ಲಿ 404 ಹುಲಿಗಳು ಪತ್ತೆಯಾಗಿದ್ದವು ಇದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ 475 ರಿಂದ 573 ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿತ್ತು. 2022 ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿದ್ದು ಈ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.