BBMP ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ – ಮೂವರು ಡಿ ಗ್ರೂಪ್ ನೌಕರರು ವಶಕ್ಕೆ

BBMP ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ – ಮೂವರು ಡಿ ಗ್ರೂಪ್ ನೌಕರರು ವಶಕ್ಕೆ

ಬೆಂಗಳೂರು: ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಶುಕ್ರವಾರ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಚೀಫ್ ಎಂಜಿನಿಯರ್ ಶಿವಕುಮಾರ್, ನಾಲ್ವರು ಎಂಜಿನಿಯರ್‌ಗಳು ಸೇರಿ 9 ನೌಕರರು ಗಾಯಗೊಂಡಿದ್ದಾರೆ.

ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಸರ್ಕಾರದ ಮುಂದಾದ ಹೊತ್ತಲ್ಲಿಯೇ ಬಿಬಿಎಂಪಿ ಕಚೇರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ಸಂಜೆ 5 ಗಂಟೆ ಹೊತ್ತಲ್ಲಿ ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, 9 ನೌಕರರು ಗಾಯಗೊಂಡಿದ್ದಾರೆ. ದಟ್ಟ ಹೊಗೆ ಕಾಣಿಸಿಕೊಂಡ ಕೂಡಲೇ ಕಟ್ಟಡದಲ್ಲಿ ಇತರರು ಆತಂಕದಿಂದ ಹೊರಗೆ ಓಡಿದ್ದಾರೆ. ಬೆಂಕಿ ಹೊತ್ತಿದ ಅರ್ಧ ಗಂಟೆ ನಂತರ ಬಂದ ಅಗ್ನಿಶಾಮಕ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: 11 ವರ್ಷಗಳ ಹಿಂದೆ ಕಳ್ಳತನ – ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಡಾಂಬರು ಸ್ಯಾಂಪಲ್ ಪರೀಕ್ಷೆ ವೇಳೆ ಏಕಾಏಕಿ ಈ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಚೇರಿ ಬಾಗಿಲಲ್ಲಿ ಆಯಿಲ್ ಮಾದರಿ ವಸ್ತು ಕಂಡುಬಂದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಎಂಜಿನಿಯರ್ ಹಾಗೂ ಒಬ್ಬ ಗುಮಾಸ್ತನನ್ನ ವಶಕ್ಕೆ ಪಡೆದಿದ್ದಾರೆ. ಇವರು ಘಟನಾ ಸ್ಥಳದಲ್ಲಿದ್ದರೂ ಗಾಯಗೊಂಡಿಲ್ಲ. ಇದರಿಂದ ಅನುಮಾನಗೊಂಡಿರುವ ಪೊಲೀಸರು  ಮೂವರನ್ನ ವಶಕ್ಕೆ ಪಡೆದು ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಶುಕ್ರವಾರ ತಡರಾತ್ರಿಯ ವರೆಗೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆದ ಮೂವರು ಡಿ ಗ್ರೂಪ್ ನೌಕರರಾಗಿದ್ದಾರೆ. ಲ್ಯಾಬ್‌ನಲ್ಲಿ ಅಗ್ನಿ ಅವಘಡ ಆದಾಗ ಮೂವರು ಸ್ಥಳದಲ್ಲೇ ಇದ್ದರು. ಅಗ್ನಿ ಅವಘಡ ಸಂಭವಿಸಿದಾಗ ಮೊದಲಿಗೆ ಆಚೆಗೆ ಓಡಿ ಬಂದಿದ್ದಾರೆ. ಸದ್ಯ ಡಿ ಗ್ರೂಪ್ ನೌಕರರು ಗುಣನಿಯಂತ್ರಣ ಪ್ರಯೋಗಾಲಯಕ್ಕೆ ಹೋಗಿದ್ದೇಕೆ? ಎಂಬ ಪ್ರಶ್ನೆ ಮೂಡಿದೆ. ಆದ್ರೆ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಹಿರಿಯ ಅಧಿಕಾರಿಗಳು ಡಿ ಗ್ರೂಪ್ ನೌಕರರಿಂದ ಕೆಲಸ ಮಾಡಿಸುತ್ತಿದ್ದರು. ಆದ್ದರಿಂದಲೇ ಈ ಮೂವರು ಅಲ್ಲಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ” ಗಾಯಾಳುಗಳನ್ನು 48 ಗಂಟೆಗಳ ಕಾಲ ನಿಗಾದಲ್ಲಿಇರಿಸಿರುವುದಾಗಿ ವೈದ್ಯರು ಹೇಳಿದ್ದಾರೆ. ಒಬ್ಬರಿಗೆ ಶೇ 38ರಷ್ಟು ಸುಟ್ಟಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಜತೆಗೆ ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿದ್ದೇನೆ ಎಂದರು.

suddiyaana