ಚಿನ್ನಸ್ವಾಮಿ ದುರಂತ ಎಫೆಕ್ಟ್‌! – ಜಂಬೂಸವಾರಿ ಬಳಿ 11,600 ಆಸನ ಕಡಿತ!

ಚಿನ್ನಸ್ವಾಮಿ ದುರಂತ ಎಫೆಕ್ಟ್‌! – ಜಂಬೂಸವಾರಿ ಬಳಿ 11,600 ಆಸನ ಕಡಿತ!

ನಾಡಹಬ್ಬ ಮೈಸೂರು ದಸರಾ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಈ ಬಾರಿಯೂ 59 ವರ್ಷದ ಅಭಿಮನ್ಯು ಆನೆಯೇ ಚಿನ್ನದ ಅಂಬಾರಿ ಹೊರಲಿದೆ. ಆದ್ರೀಗ ಅರಮನೆ ಆವರಣದಲ್ಲಿ ಕೂತು ಜಂಬೂಸವಾರಿ ವೀಕ್ಷಿಸ್ಬೇಕು ಅಂತ ಕಾಯ್ತಿದ್ದವರಿಗೆ ಮೈಸೂರು ಜಿಲ್ಲಾಡಳಿತ ಶಾಕ್‌ ಕೊಟ್ಟಿದೆ. ಈ ಬಾರಿ ಆಸನ ವ್ಯವಸ್ಥೆ 59 ಸಾವಿರದಿಂದ 48 ಸಾವಿರಕ್ಕೆ ಸೀಮಿತಗೊಳಿಸಿದೆ.

ಇದನ್ನೂ ಓದಿ: ಆನ್‌ಲೈನ್‌ ಗೇಮ್ ಬ್ಯಾನ್ – ಮಹತ್ವದ ವಿದೇಯಕಕ್ಕೆ ರಾಜ್ಯಸಭೆಯಲ್ಲೂ ಅನುಮೋದನೆ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಜೂನ್‌ 4ರಂದು ಆರ್‌ಸಿಬಿ ತಂಡ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವದ ಸಂದರ್ಭದಲ್ಲಿ ದುರಂತ ಸಂಭವಿಸಿತ್ತು. ಜನಸಂದಣಿಯಲ್ಲಿ ಸಿಲುಕಿ 11 ಯುವಕರು ಕಾಲ್ತುಳಿತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಈ ಬಾರಿ ಅರಮನೆ ಆವರಣದಲ್ಲಿ ಕುಳಿತು ದಸರಾ ಜಂಬೂ ಸವಾರಿ ವೀಕ್ಷಿಸುವವರ ಸಂಖ್ಯೆಯನ್ನು 59 ಸಾವಿರದಿಂದ 48 ಸಾವಿರಕ್ಕೆ ಸೀಮಿತಗೊಳಿಸಿದೆ. ಇದಲ್ಲದೆ ದಸರೆಗೆ ಭೇಟಿ ನೀಡುವವರ ಸುರಕ್ಷತೆಗಾಗಿ ಇನ್ನಿತರ ಹಲವು ಬದಲಾವಣೆ ತರಲಾಗಿದೆ.

ಇನ್ನು ರಾಜ್ಯ ಸರಕಾರವು ದೊಡ್ಡ ಪ್ರಮಾಣದ ಸಭೆಗಳು, ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳಿಗೆ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪೊಸೀಜರ್‌ (ಎಸ್‌ಒಪಿ) ಜಾರಿಗೊಳಿಸಿದೆ. ಅಂತೆಯೇ ಅಕ್ಟೋಬರ್‌ 2ರಂದು ನಡೆಯುವ ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಕುಳಿತು ವೀಕ್ಷಿಸುವ ಸಂಖ್ಯೆಯಲ್ಲಿ 11 ಸಾವಿರ ಆಸನಗಳನ್ನು ಕಡಿತಗೊಳಿಸಿದೆ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೇಕಾಂತ್‌ ರೆಡ್ಡಿ ತಿಳಿಸಿದ್ದಾರೆ.

ರಾಜಮಾರ್ಗದ ಉದ್ದಕ್ಕೂ ಇರುವ ದುರ್ಬಲ ಮತ್ತು ಅಪಾಯಕಾರಿ ಕಟ್ಟಡಗಳಾದ ಲ್ಯಾನ್ಸ್‌ಡೌನ್‌ ಕಟ್ಟಡ, ದೇವರಾಜ ಮಾರುಕಟ್ಟೆ, ಕೆ.ಆರ್‌. ವೃತ್ತದ ವಿಶ್ವೇಶ್ವರಯ್ಯ ಕಟ್ಟಡ, ಸಯ್ಯಾಜಿರಾವ್‌ ರಸ್ತೆಯ ಆಯುರ್ವೇದ ಕಾಲೇಜು ಕಟ್ಟಡ ಮುಂತಾದವುಗಳನ್ನು ಸಾರ್ವಜನಿಕರಿಗೆ ಸಂಪೂರ್ಣವಾಗಿ ಮುಚ್ಚಲಾಗುವುದು. ಜನರು ಈ ಕಟ್ಟಡಗಳ ಚಾವಣಿಗಳಿಗೆ ಏರಿ ಮೆರವಣಿಗೆ ವೀಕ್ಷಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರಿಗೆ ಈ ಕಟ್ಟಡಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಲು ಸೂಚನೆ ನೀಡಲಾಗಿದೆ. ಇದಲ್ಲದೇ ಜನರು ಮರಗಳು, ಗೋಪುರಗಳಂತಹ ಎತ್ತರದ ಕಟ್ಟಡಗಳನ್ನು ಏರಲು ಅವಕಾಶವಿಲ್ಲ. ಜನಸಂದಣಿ ನಿಯಂತ್ರಣಕ್ಕೆ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಸರಾ ಚಟುವಟಿಕೆಗಳ ಎಲ್ಲಾ ವಿವರಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಒಂದು ತಿಂಗಳೊಳಗೆ ದಸರಾ ಗೋಲ್ಡ್‌ ಕಾರ್ಡ್‌ಗಳ ಆನ್‌ಲೈನ್‌ ಮಾರಾಟ ಆರಂಭವಾಗಲಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಮಾರಾಟದ ವಿವರಗಳನ್ನು ಬದಲಿಸಲಾಗುವುದು. ದಸರೆಯನ್ನು ಸುರಕ್ಷಿತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಈ ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೇಕಾಂತ್‌ ರೆಡ್ಡಿ ಅವರು ತಿಳಿಸಿದ್ದಾರೆ.

Shwetha M