ಅಕ್ಕಿ ಹೆಸರಿನಲ್ಲಿ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ.. ಕಳ್ಳತನಕ್ಕೇ ಇಳಿದುಬಿಟ್ಟಿದೆ – ಬಿಜೆಪಿ ಕಿಡಿ

ಅಕ್ಕಿ ಹೆಸರಿನಲ್ಲಿ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ.. ಕಳ್ಳತನಕ್ಕೇ ಇಳಿದುಬಿಟ್ಟಿದೆ – ಬಿಜೆಪಿ ಕಿಡಿ

ಬೆಂಗಳೂರು: ಯಾದಗಿರಿಯ ದರ್ಶನಾಪುರ ಅನ್ನ ಭಾಗ್ಯ ಅಕ್ಕಿಗೆ ಕನ್ನ ಹಾಕಿರೋ ಘಟನೆ ನಡೆದಿದೆ. ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಗೋದಾಮಿನಿಂದಲೇ ಅನ್ನಭಾಗ್ಯ ಅಕ್ಕಿ ಕಳ್ಳತನವಾಗಿದೆ. ಬರೋಬ್ಬರಿ 6 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿಗೆ ಕಳ್ಳರು ಕನ್ನ ಹಾಕಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ಕಿಡಿಕಾರಿದೆ. ಅಕ್ಕಿ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ, ಕಳ್ಳತನಕ್ಕೇ ಇಳಿದುಬಿಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ – ‌ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟ ಪುರಸಭೆ ಸದಸ್ಯ!

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಜಾರ್ಜ್ ಅವರ ಇಂಧನ ಇಲಾಖೆ ಮಾತ್ರವಲ್ಲ, ಕೆಎಚ್ ಮುನಿಯಪ್ಪ ಅವರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲೂ ಹೆಗ್ಗಣಗಳ ಕಾಟ ಜೋರಾಗಿದೆ. ಲಂಚ ಕೊಡುವುದಕ್ಕಾಗಿಯೇ ಅಕ್ರಮ ಅಕ್ಕಿ ಮಾರಾಟ ಮಾಡುತ್ತಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ, ತನ್ನಿಂದ ಕೊಡಲು ಅಕ್ಕಿಯೇ ಇಲ್ಲ ಎನ್ನುತ್ತಿರುವ ಕರ್ನಾಟಕ, ಕಲೆಕ್ಷನ್ ಆಸೆಗೆ ಟನ್‌ಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ ಎಂದು ಲೇವಡಿ ಮಾಡಿದೆ.

ಇನ್ನು ಮತ್ತೊಂದು ಟ್ವೀಟ್‌ನಲ್ಲಿ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು ಎಂದು ಪಟ್ಟಿಯೊಂದನ್ನು ಪೋಸ್ಟ್‌ ಮಾಡಿದೆ. ಬಿಜೆಪಿ ಪೋಸ್ಟ್‌ ಮಾಡಿರುವ ಪ್ರಶ್ನೆಗಳ ಪಟ್ಟಿ ಹೀಗಿದೆ..

  • ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
  • ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
  • ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು ವಂಚಿಸಿದ್ದು ಏಕೆ?
  • ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ?
  • ಬರಗಾಲವನ್ನು ನಿರ್ವಹಣೆ ಮಾಡಲಿಲ್ಲ, ಪರಿಹಾರವೂ ಕೊಟ್ಟಿಲ್ಲ ಏಕೆ?
  • ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಪಂಚ ರಾಜ್ಯ ಚುನಾವಣೆ ಮುಖ್ಯವೇ?
  • ನಮ್ಮನ್ನು ಉದ್ಧಾರ ಮಾಡುತ್ತೇವೆಂದು ಬಂದು ಬೆಲೆ ಏರಿಕೆ ಮೂಲಕ ತುಳಿದಿದ್ದು ಸರಿಯೇ?
  • ಕಾವೇರಿಯನ್ನು ಕಳ್ಳತನದಿಂದ ಬಿಟ್ಟು ನಮಗೆ ವಂಚಿಸಿದ್ದೇಕೆ?
  • ತೆಲಂಗಾಣ ಚುನಾವಣೆ ಹಣವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು ಅಲ್ಲದೆ ಮೋಜು ಮಾಡಲು ಸರ್ಕಾರ ಅಲ್ಲಿಗೆ ಟೂರ್ ಹೋಗಿದ್ದೇಕೆ?

ಸ್ವಯಂಘೋಷಿತ ಆರ್ಥಿಕ ತಜ್ಞ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಜನರ ಈ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರವಿದೆಯೇ? ಎಂದು ಪ್ರಶ್ನಿಸಿದೆ.

Shwetha M