ಸಿಎಂ ಕುಸ್ತಿ ನಡುವೆಯೇ ಡಿಸಿಎಂ, ಸಚಿವ ಸ್ಥಾನಕ್ಕೆ ಲಾಬಿ – ಕಾಂಗ್ರೆಸ್ ಪಾಳಯದಲ್ಲಿ ಜೋರಾಯ್ತು ಫೈಟ್!

ಸಿಎಂ ಕುಸ್ತಿ ನಡುವೆಯೇ ಡಿಸಿಎಂ, ಸಚಿವ ಸ್ಥಾನಕ್ಕೆ ಲಾಬಿ – ಕಾಂಗ್ರೆಸ್ ಪಾಳಯದಲ್ಲಿ ಜೋರಾಯ್ತು ಫೈಟ್!

ಕಾಂಗ್ರೆಸ್ ಪಾಳಯದಲ್ಲಿ ಈಗ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಗ್ಗಂಟಾಗಿದೆ. ಪಕ್ಷದ ಬಲಿಷ್ಠ ನಾಯಕರಾದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಕೂಡ ಸಿಎಂ ಕುರ್ಚಿಗಾಗಿ ಬಿಗಿಪಟ್ಟು ಹಿಡಿದಿದ್ದಾರೆ. ಕುಸ್ತಿ ಕಿತ್ತಾಟ ಹೈಕಮಾಂಡ್ ಅಂಗಳ ತಲುಪಿದ್ದು, ಕರ್ನಾಟಕದ ಸಿಎಂ ಯಾರಾಗ್ತಾರೆ ಎಂದು ಇಡೀ ದೇಶವೇ ಕುತೂಹಲದಿಂದ ನೋಡ್ತಿದೆ. ಹೀಗೆ ಮುಖ್ಯಮಂತ್ರಿ ಆಯ್ಕೆ ಕಸರತ್ತಿನ ನಡುವೆಯೇ ಶಾಸಕರು ಡಿಸಿಎಂ ಮತ್ತು ಸಚಿವ ಸ್ಥಾನಕ್ಕೆ ಟವೆಲ್ ಹಾಕುತ್ತಿದ್ದಾರೆ. ಬೆಂಬಲಿಗರ ಮೂಲಕ ಲಾಬಿಯನ್ನೂ ಶುರು ಮಾಡಿದ್ದಾರೆ.

ಸಿದ್ದರಾಮಯ್ಯ ಡಿಕೆಶಿ ಸಿಎಂ ಗದ್ದುಗೆ ಗುದ್ದಾಟದ ನಡುವೆಯೇ ತುಮಕೂರಿನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ರನ್ನ ಈ ಬಾರಿ ಸಿಎಂ ಮಾಡಬೇಕೆಂದು ಬೆಂಗಲಿಗರು ಆಗ್ರಹಿಸಿದ್ದಾರೆ. ತುಮಕೂರಿನ ಟೌನ್ ಹಾಲ್ ಮುಂದೆ ಪರಮೇಶ್ವರ್ ಫೋಟೋ ಹಿಡಿದು ಜೈಕಾರ ಕೂಗಿದ್ದಾರೆ.

ಇದನ್ನೂ ಓದಿ : ಸಿಎಂ ಆಯ್ಕೆ ಕಸರತ್ತಿನಲ್ಲಿರುವ ಖರ್ಗೆಗೆ ಬಿಗ್ ಶಾಕ್ – ಎಐಸಿಸಿ ಅಧ್ಯಕ್ಷರಿಗೆ ಕೋರ್ಟ್ ನಿಂದ ಸಮನ್ಸ್ 

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಈ ಬಾರಿ ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಂತಿದೆ. ಜಮೀರ್ ಬೆಂಬಲಿಗರು ತಮ್ಮ ನಾಯಕರನ್ನ ಡಿಸಿಎಂ ಮಾಡಬೇಕೆಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ನಿವಾಸದ ಮುಂದೆ ಜಮೀರ್ ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ದಾರೆ.

ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ಕೂಡ ತಾವೂ ಕೂಡ ಸಿಎಂ ರೇಸ್ ನಲ್ಲಿ ಇರೋದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಲ್ಲಿ ಯಾರು ಸಿಎಂ ಆಗಬೇಕು ಎಂಬ ಪ್ರಶ್ನೆಗೆ ಸಾಮಾನ್ಯ ವ್ಯಕ್ತಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ನನಗೂ ಇದೆ. ಆದರೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದಿದ್ದಾರೆ.

ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಅನ್ನೋದನ್ನ ಹೊರ ಹಾಕಿದ್ದಾರೆ. ಹಾಗೇ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸುತ್ತಾರೆ. ಟಗರು ಬರುತ್ತೆ ಗುಮ್ಮುತ್ತೆ ಎನ್ನುವ ಮೂಲಕ ಸಿದ್ದುಗೆ ಬೆಂಬಲ ಘೋಷಿಸಿದ್ದಾರೆ. ಹಾಗೇ ಕೊಟ್ಟಿರೋ ಭರವಸೆ ಈಡೇರಿಸಬೇಕಿದೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.

ಸಿದ್ದು ನಿವಾಸದ ಬಳಿ ಮಾತನಾಡಿದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಸಿಎಂ ಆಯ್ಕೆಯನ್ನ ಹೈಕಮಾಂಡ್ ಮಾಡುತ್ತೆ. ನಾನೇನು ಸನ್ಯಾಸಿಯಲ್ಲ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

suddiyaana