ಟಿಆರ್ಎಸ್ ಶಾಸಕರ ಖರೀದಿ ಯತ್ನ ಕೇಸ್: ಬಿ.ಎಲ್.ಸಂತೋಷ್ಗೆ ಸಂಕಷ್ಟ!
₹100 ಕೋಟಿ ಆಫರ್? ಬಿಜೆಪಿ ನಾಯಕನ ವಿರುದ್ಧ ಕೇಸ್!
ಹೈದರಾಬಾದ್: ತೆಲಂಗಾಣದ ಟಿಆರ್ಎಸ್ ಪಕ್ಷದ ಶಾಸಕರ ಕುದುರೆ ವ್ಯಾಪಾರಕ್ಕೆ ಷಡ್ಯಂತ್ರ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕೇಸ್ ದಾಖಲಾಗಿದೆ. ತೆಲಂಗಾಣ ಹೈಕೋರ್ಟ್ ಆದೇಶದಂತೆ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಎಸ್ಐಟಿ ಬಿ.ಎಲ್. ಸಂತೋಷ್ಗೆ ಎರಡನೇ ಬಾರಿಗೆ ನೋಟಿಸ್ ಕೂಡ ನೀಡಿದೆ. ನವೆಂಬರ್ 26 ಅಥವಾ ನವೆಂಬರ್ 28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದೆ. ಬಿ.ಎಲ್. ಸಂತೋಷ್ ಮಾತ್ರವಲ್ಲ ಕೇರಳ ಮೂಲಕ ಜಗ್ಗು ಸ್ವಾಮಿ, ತುಷಾರ್ ವೆಲ್ಲಪಲ್ಲಿ ಮತ್ತು ಬಿ.ಶ್ರೀನಿವಾಸ್ ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಆರ್ಎಸ್ ಪಕ್ಷದಿಂದ ಹೊರಬನ್ನಿ. ಬಳಿಕ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವದಾದರೆ 100 ಕೋಟಿ ರೂಪಾಯಿ ನೀಡುವುದಾಗಿ ನನಗೆ ಆಮಿಷ ಒಡ್ಡಿದ್ದರು ಅಂತಾ ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಎಂಬುವವರು ಆರೋಪಿಸಿದ್ದರು. ಹೀಗಾಗಿ ತೆಲಂಗಾಣ ಸರ್ಕಾರ ಏಳು ಮಂದಿಯ ಎಸ್ಐಟಿ ವಿಶೇಷ ತಂಡವನ್ನು ರಚಿಸಿ ಶಾಸಕರ ಕುದುರೆ ವ್ಯಾಪಾರ ಯತ್ನಕ್ಕೆ ಸಂಬಂಧಿಸಿ ತನಿಖೆಗೆ ಸೂಚನೆ ನೀಡಿತ್ತು. ತನಿಖೆ ವೇಳೆ ಬಿ.ಎಲ್. ಸಂತೋಷ್ ಹೆಸರು ಕೂಡ ತಳುಕುಹಾಕಿಕೊಂಡಿದ್ದು, ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ಗೆ ಸಂಕಷ್ಟ ಎದುರಾಗಿದೆ.