80 ವರ್ಷಗಳ ಬಳಿಕ ದೇಗುಲಕ್ಕೆ ಕಾಲಿಟ್ಟ ದಲಿತರು – ಅಸಮಾನತೆಗೆ ಕೊನೆಗೂ ಮುಕ್ತಿ
ತಿರುವಣ್ಣಾಮಲೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ತೆನ್ಮುಡಿಯನೂರ್ ಗ್ರಾಮದಲ್ಲಿ ಶ್ರೀ ಮುತಾಳಮ್ಮನ ದೇವಾಲಯಕ್ಕೆ ಸುಮಾರು 80 ವರ್ಷಗಳಿಂದ ದಲಿತರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸೋಮವಾರ 200ಕ್ಕೂ ಹೆಚ್ಚು ದಲಿತರನ್ನು ದೇವಾಲಯದೊಳಗೆ ಜಿಲ್ಲಾಡಳಿತ ಕರೆದೊಯ್ದಿದೆ.
ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ದಲಿತರಿಗೆ ದೇವಾಲಯದೊಳಗೆ ಪ್ರವೇಶ ನಿಷೇಧಿಸಿದ್ದರ ಕುರಿತ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಆ ಪ್ರದೇಶದ ಪ್ರಬಲ ಸಮುದಾಯಗಳೊಂದಿಗೆ ಸಭೆ ನಡೆಸಿದ ನಂತರ ಈ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳಲಾಗಿದೆ. ಆದರೂ ಆ ಗ್ರಾಮದಲ್ಲಿ 12 ಪ್ರಬಲ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಹೊರಗೆ ಭಾರೀ ಪೊಲೀಸ್ ನಿಯೋಜಿಸಿ, ಸುಮಾರು 200 ಜನರನ್ನು ದೇವಾಲಯದೊಳಗೆ ಜಿಲ್ಲಾಡಳಿತ ಕರೆದೊಯ್ದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನರಿಗೆ ಗಾಯದ ಮೇಲೆ ಮತ್ತೆ ಬರೆ – ಲೀಟರ್‌ಗೆ 262 ರೂಪಾಯಿ ದಾಟಿದ ಡೀಸೆಲ್ ದರ
ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು 500 ಪರಿಶಿಷ್ಟ ಜಾತಿ ಕುಟುಂಬಗಳು ನೆಲೆಸಿವೆ. ಈ ಗ್ರಾಮದ 200 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ 80 ವರ್ಷಗಳಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಪೊಲೀಸ್ ಬಿಗಿ ಭದ್ರತೆಯೊಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತೆ ಪ್ರಬಲ ಸಮುದಾಯಗಳ ಮನವೊಲಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ ನಡೆದಿತ್ತು. ಆದರೂ ಪ್ರಬಲ ಸಮುದಾಯದ 750ಕ್ಕೂ ಹೆಚ್ಚು ಮಂದಿ ಜಿಲ್ಲಾಡಳಿತದ ಈ ನಡೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದರು. ಅಲ್ಲದೇ ದೇವಾಲಯವನ್ನು ಸೀಲ್ ಮಾಡಲು ಒತ್ತಾಯಿಸುತ್ತಿದ್ದರು. ಹೀಗಾಗಿ ದೇವಸ್ಥಾನದ ಹೊರಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇದು ಪೊಂಗಲ್ ಆಚರಣೆಯ ಭಾಗವಾಗಿದ್ದು, ಪೊಲೀಸರು ಯೋಜಿಸಿದಂತೆ ಎಲ್ಲವೂ ನಡೆದರೆ, ಪರಿಶಿಷ್ಟ ಜಾತಿಯ ಜನರನ್ನು ದೇವಾಲಯದ ಒಳಗೆ ಕರೆದೊಯ್ದು ಪೊಂಗಲ್ ತಯಾರಿಸಿ ಪೂಜೆ ಮತ್ತು ಧಾರ್ಮಿಕ ಕ್ರಿಯೆಗಳನ್ನು ಮಾಡಲು ಅವಕಾಶ ನೀಡಲಾಗುತ್ತದೆ. ದಲಿತ ಸಮುದಾಯದ ಸುಮಾರು 15 ರಿಂದ 20 ಕುಟುಂಬಗಳು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ಮುಂದೆ ಬಂದಿದ್ದು, ಇದು ಹೊಸ ಆರಂಭವಾಗಬಹುದು ಎಂದು ಪೊಲೀಸರು ಭಾವಿಸಿದ್ದಾರೆ. ಇತರರು ಸಹ ಇನ್ನು ಮುಂದೆ ಬರುತ್ತಾರೆ. ಇದು ‘ಕೋಮು ವಿಭಜನೆ’ಯನ್ನು ಮುರಿಯಬಹುದು ಎಂದು ಜಿಲ್ಲಾಧಿಕಾರಿ ಡಾ.ಪಿ.ಮುರುಗೇಶ್ ತಿಳಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡನೇ ಘಟನೆ ಇದಾಗಿದೆ. ಪುದುಕ್ಕೊಟ್ಟೈ ಜಿಲ್ಲೆಯಲ್ಲೂ ದೇವಾಲಯ ಪ್ರವೇಶ ನಿರಾಕರಿಸಿದ ಪ್ರತಿನಿಧಿಗಳ ಗುಂಪನ್ನು ಜಿಲ್ಲಾಧಿಕಾರಿ ನೇತೃತ್ವ ವಹಿಸಿದ್ದರು. ಪರಿಶಿಷ್ಟ ಜಾತಿಯ ಸಮುದಾಯಕ್ಕೆ ನೀರು ಸರಬರಾಜು ಮಾಡುವ, ಕುಡಿಯುವ ನೀರಿನ ತೊಟ್ಟಿಯಲ್ಲಿ ಮಲವಿಸರ್ಜನೆಯ ಬಗ್ಗೆ ವರದಿಯಾದ ನಂತರ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಖಚಿತಪಡಿಸಿದ್ದರು.
Dalit people in Thenmadiyanur village in Tiruvannamalai district were let inside a Muthumariyamman temple belonging to HR&CE dept after 80 yrs. Dalits in the village were denied entry inside the temple ever since it was constructed 80 years ago. pic.twitter.com/LYWgVbuwrs
— Prabhakar Tamilarasu || பிரபாகர் தமிழரசு (@pkr_madras) January 30, 2023