ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ!
ಕೊಚ್ಚಿ: ಕೇರಳದ ವಿಶ್ವವಿದ್ಯಾಲಯವೊಂದು ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ನಿರ್ಧರಿಸಿದೆ.
ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ, ವಿದ್ಯಾರ್ಥಿನಿಯರಿಗೆ ಋತುಚಕ್ರದ ವೇಳೆ ರಜೆ ನೀಡಬೇಕೆಂದು ಕೇಳಿಕೊಂಡಿತ್ತು. ಕೊನೆಗೂ ಈ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ. ಇದರಿಂದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಚಳಿಗೆ ನಡುಗಿದ ರಾಷ್ಟ್ರ ರಾಜಧಾನಿ – ಹೃದಯಾಘಾತ, ರಕ್ತದೊತ್ತಡ ಸಮಸ್ಯೆ ಹೆಚ್ಚಳ
ಕುಸಾಟ್‌ನಲ್ಲಿರುವ ಮಹಿಳಾ ವಿದ್ಯಾರ್ಥಿನಿಯರಿಗೆ ಅವರ ಹಾಜರಾತಿಯಲ್ಲಿ ಒಂದು ತ್ರೈಮಾಸಿಕಕ್ಕೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಪ್ರಸ್ತುತ ಶೇ. 75ರಷ್ಟು ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್ ಪರೀಕ್ಷೆ ಬರೆಯಬಹುದು. ಇದಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಉಪಕುಲಪತಿಗಳಿಗೆ ಅರ್ಜಿ ಸಲ್ಲಿಸಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ಮುಟ್ಟಿನ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನೇತೃತ್ವದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟವು ವಿಶ್ವವಿದ್ಯಾನಿಲಯಕ್ಕೆ ಋತುಚಕ್ರದ ರಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿತ್ತು. ಒಕ್ಕೂಟದ ಮಧ್ಯಸ್ಥಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆದೇಶವು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ಎಲ್ಲಾ ಸ್ಟ್ರೀಮ್‌ಗಳ ವಿದ್ಯಾರ್ಥಿನಿಯರಿಗೆ ಅನ್ವಯಿಸುತ್ತದೆ ಮತ್ತು ತಕ್ಷಣದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.