ಚಾಲಕನಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡ – ಮೋಟಾರು ವಾಹನ ಕಾಯ್ದೆಯಲ್ಲೇನಿದೆ..?
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಟ್ರಕ್ ಸೇರಿದಂತೆ ವಾಹನಗಳ ಚಾಲಕರು ಮತ್ತು ಮಾಲೀಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಕಠಿಣ ಶಿಕ್ಷೆ ಮತ್ತು ಭಾರಿ ದಂಡಕ್ಕಿಂತ ಕಳವಳಕಾರಿಯಾದ ವಿಷಯವೊಂದು ಭಾರತೀಯ ನ್ಯಾಯ ಸಂಹಿತೆಯಲ್ಲಿದೆ. ನೂತನ ಸಂಹಿತೆಯಲ್ಲಿ ಅಪಘಾತ ಮಾಡಿ ಪರಾರಿಯಾಗುವ ಕೃತ್ಯದ ವ್ಯಾಖ್ಯಾನವನ್ನೇ ಬದಲಿಸಲಾಗಿದೆ. ಈ ವ್ಯಾಖ್ಯಾನವು ಮೋಟಾರು ವಾಹನ ಕಾಯಿದೆ ಮತ್ತು ಸಂಚಾರ ನಿಯಂತ್ರಣ ಅಧಿನಿಯಮದಲ್ಲಿರುವ ವ್ಯಾಖ್ಯಾನಕ್ಕೆ ವ್ಯತಿರಿಕ್ತವಾಗಿದೆ. ಅಷ್ಟಕ್ಕೂ ಹೊಸ ಕಾನೂನಿನಲ್ಲಿ ಏನಿದೆ..? ಚಾಲಕರ ಆಕ್ರೋಶಕ್ಕೆ ಕಾರಣವೇನು ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ರೈತರಿಗೂ ತಿಂಗಳಿಗೆ ₹3 ಸಾವಿರ ಪಿಂಚಣಿ – ಸರ್ಕಾರದ ಹಣ ಪಡೆಯಲು ಏನು ಮಾಡಬೇಕು?
10 ವರ್ಷ ಜೈಲು!
ಐಪಿಸಿ ಸೆಕ್ಷನ್ 106(1)- ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವಿಗೆ ಕಾರಣವಾಗುವ ಚಾಲಕನಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು ಮತ್ತು ದಂಡವನ್ನೂ ವಿಧಿಸಬಹುದು. ಸೆಕ್ಷನ್ 106(2)-ವ್ಯಕ್ತಿಯೊಬ್ಬ ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವನ್ನು ಉಂಟು ಮಾಡಿದ್ದು, ಆ ಬಗ್ಗೆ ಪೊಲೀಸರಿಗೆ ಅಥವಾ ಮ್ಯಾಜಿಸ್ಪ್ರೇಟ್‌ಗೆ ಶೀಘ್ರವೇ ಮಾಹಿತಿ ನೀಡದೆ ಪರಾರಿಯಾದರೆ ಆತನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಬಹುದು. ಆದರೆ, ಟ್ರಕ್ ಚಾಲಕರು ಹೇಳುವಂತೆ 7 ಲಕ್ಷ ದಂಡ ವಿಧಿಸುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ನೀಡುವ ಶಿಕ್ಷೆಯು ಟ್ರಕ್ ಚಾಲಕರಿಗಷ್ಟೇ ಅನ್ವಯಿಸುವುದಿಲ್ಲ. ದ್ವಿಚಕ್ರ ವಾಹನ, ಆಟೊ, ಟ್ರ್ಯಾಕ್ಟರ್, ಕಾರು, ಬಸ್ ಚಾಲಕರಿಗೂ ಅನ್ವಯಿಸುತ್ತದೆ.
ಆದ್ರೆ ಹಿಟ್ ಆ್ಯಂಡ್ ರನ್‌ನ ಬಹುತೇಕ ಪ್ರಕರಣಗಳಲ್ಲಿ ಚಾಲಕರನ್ನು ಬಲಿಪಶು ಮಾಡಲಾಗುತ್ತದೆ. ಕಠಿಣ ಶಿಕ್ಷೆಗೆ ಹೆದರಿ ಹಲವರು ಡ್ರೈವರ್ ಆಗಲು ಹಿಂದೇಟು ಹಾಕುತ್ತಾರೆ ಎನ್ನಲಾಗುತ್ತಿದೆ. ದೇಶದಲ್ಲಿ ಈಗಲೇ ಶೇಕಡಾ 30ರಷ್ಟು ಚಾಲಕರ ಕೊರತೆಯಿದ್ದು, ಭಾರತೀಯ ನ್ಯಾಯ ಸಂಹಿತೆಯಲ್ಲಿ ವಿಧಿಸಿರುವ ಕಠಿಣ ಶಿಕ್ಷೆಗೆ ಹೆದರಿ ಚಾಲಕ ವೃತ್ತಿಗೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಕಾನೂನಿನ ಭಯದಿಂದ ಚಾಲಕರ ಮಕ್ಕಳೂ ಈ ವೃತ್ತಿಗೆ ಬರುವುದಿಲ್ಲ. ಭಾರತದಲ್ಲಿ 2 ಕೋಟಿಯಷ್ಟು ಚಾಲಕರಿದ್ದು, ಇವರ ಕೊರತೆ ಉಂಟಾದರೆ ದೇಶದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತದೆ. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ವಾಹನಗಳಡಿ ಬಿದ್ದು ಸಾವಿಗೀಡಾಗುತ್ತಾರೆ. ಅದಕ್ಕೂ ಸಂಬಂಧಪಟ್ಟ ವಾಹನ ಚಾಲಕನನ್ನೇ ಹೊಣೆಗಾರನನ್ನಾಗಿಸುವುದು ಸರಿಯಲ್ಲ ಎನ್ನುವುದು ಚಾಲಕರು ಹಾಗೂ ಮಾಲೀಕರ ವಾದ. ಆದ್ರೆ ಮೋಟಾರು ವಾಹನ ಕಾಯ್ದೆ ಚಾಲಕರ ಪರವಾಗಿದೆ.
ಮೋಟಾರು ವಾಹನ ಕಾಯ್ದೆಯಲ್ಲೇನಿದೆ..?
ಮೋಟಾರು ವಾಹನ ಕಾಯಿದೆಯ 134ನೇ ಸೆಕ್ಷನ್‌ನಲ್ಲಿ ಅಪಘಾತ ನಡೆದಾಗ ವಾಹನ ಚಾಲಕನ ಕರ್ತವ್ಯಗಳನ್ನು ಪ್ರಸ್ತಾಪಿಸಲಾಗಿದೆ. ಅಪಘಾತವನ್ನುಂಟು ಮಾಡಿದ ಚಾಲಕನು ಗಾಯಗೊಂಡವರಿಗೆ ವೈದ್ಯಕೀಯ ನೆರವು ಒದಗಿಸಬೇಕು. ಅಲ್ಲದೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಎರಡೂ ಕರ್ತವ್ಯಗಳನ್ನು ನಿರ್ವಹಿಸದಿರುವುದು ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧ. ಈ ಕರ್ತವ್ಯಗಳಿಂದ ಚಾಲಕನಿಗೆ ವಿನಾಯಿತಿಯನ್ನೂ ಇದೇ ಕಾಯಿದೆ ನೀಡಿದೆ. ಕಾಯಿದೆಯ 134 (ಎ) ಸೆಕ್ಷನ್‌ನಲ್ಲಿ ಅಪಘಾತದ ಸ್ಥಳದಲ್ಲಿ ಜನ ಗುಂಪುಗೂಡಿ ವಾಹನಕ್ಕೆ ಹಾನಿ ಮಾಡುವ ಸಂದರ್ಭ ಎದುರಾದರೆ ಅಥವಾ ಚಾಲಕನ ಮೇಲೆ ಹಲ್ಲೆಗೆ ಮುಂದಾದಾರೆ ಆತ ಅಲ್ಲಿಂದ ತಪ್ಪಿಸಿಕೊಳ್ಳಬಹುದೆಂದು ವಿವರಿಸಲಾಗಿದೆ. ಈ ಮೇಲಿನ ಕಾರಣಗಳಿಂದ ಪರಾರಿಯಾದರೂ, ಅಪಘಾತ ನಡೆದ 24 ಗಂಟೆಯೊಳಗೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲೇಬೇಕೆಂದು 134(ಬಿ) ಸೆಕ್ಷನ್ ಹೇಳುತ್ತದೆ. 24 ಗಂಟೆಯೊಳಗೆ ಮಾಹಿತಿ ನೀಡದಿದ್ದಲ್ಲಿ ಆ ಕೃತ್ಯವನ್ನು ‘ಹಿಟ್ ಆ್ಯಂಡ್ ರನ್’ ಎಂದು ಪರಿಗಣಿಸಲಾಗುತ್ತದೆ. ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ನಡೆದ ಅಪಘಾತದಿಂದ ಅನ್ಯರ ಸಾವು ಸಂಭವಿಸಿದಾಗಲೂ ಚಾಲಕನಿಗೆ ಈ ಕರ್ತವ್ಯಗಳು ಮತ್ತು ಕರ್ತವ್ಯದಿಂದ ವಿನಾಯಿತಿ ಅನ್ವಯವಾಗುತ್ತದೆ.
ಆದ್ರೀಗ ಕಾನೂನುಗಳಿಗೆ ವ್ಯತಿರಿಕ್ತವಾಗಿರುವ ಅಂಶಗಳನ್ನು ಕೇಂದ್ರ ಸರಕಾರವು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೇರಿಸಿದೆ. ನಿರ್ಲಕ್ಷ್ಯದ ಮತ್ತು ಅಜಾಗರೂಕ ಚಾಲನೆಯ ಕಾರಣದಿಂದ ಸಂಭವಿಸಿದ ಅಪಘಾತದಲ್ಲಿ ಸಾವು ಸಂಭವಿಸಿದರೆ, ಆ ವಾಹನದ ಚಾಲಕನು ಅಪಘಾತ ನಡೆದ ತಕ್ಷಣವೇ ಪೊಲೀಸರಿಗೆ ಅಥವಾ ಮ್ಯಾಜಿಸ್ಪ್ರೇಟ್‌ಗೆ ಮಾಹಿತಿ ನೀಡಬೇಕು. ಹಾಗೆ ಮಾಡದಿದ್ದರೆ ಆತನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜನರ ಹಲ್ಲೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಾಲಕ ಪರಾರಿಯಾದರೂ ಈ ಶಿಕ್ಷೆ ಅನ್ವಯವಾಗುತ್ತದೆ. ಅಪಘಾತ ನಡೆದ ನಂತರ ಎಂಥಹದ್ದೇ ಸ್ಥಿತಿ ಇದ್ದರೂ, ಚಾಲಕನು ಪೊಲೀಸರಿಗೆ ಮಾಹಿತಿ ನೀಡಲೇಬೇಕಾದ ಅನಿವಾರ್ಯತೆಯನ್ನು ನ್ಯಾಯ ಸಂಹಿತೆ ಸೃಷ್ಟಿಸಿದೆ. ಹೀಗಾಗಿ ಚಾಲಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಆದ್ರೆ ಸರ್ಕಾರ ಚಾಲಕರ ಪರ ನಿಲ್ಲುತ್ತೋ ಅಥವಾ ತಿದ್ದುಪಡಿ ಕಾನೂನನ್ನ ಜಾರಿಗೊಳಿಸುತ್ತೋ ಕಾದು ನೋಡ್ಬೇಕು.