ಖಾಸಗಿ ಸಂಸ್ಥೆಗಳ ಅಸಾಧ್ಯವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೋಮವಾರ ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಕ್ತಿ ಯೋಜನೆಯಿಂದ ಖಾಸಗಿಯವರಿಗೆ ಆಗುವ ನಷ್ಟ ತುಂಬಿಕೊಡಲು ಆಗಲ್ಲ. ಅಸಾಧ್ಯವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅನುಕೂಲವಾಗಲಿ ಎಂದು ‘ಶಕ್ತಿ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಖಾಸಗಿ ಬಸ್ ನವರು ನಷ್ಟ ಎನ್ನುತ್ತಿದ್ದಾರೆ. ಆ ನಷ್ಟವನ್ನು ತುಂಬಿಕೊಡಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಖಾಸಗಿಯವರಿಗೆ ಆಗುವ ನಷ್ಟ ತುಂಬಿಕೊಡಲು ಆಗಲ್ಲ. ಅಸಾಧ್ಯವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಆದರೆ, ಯಾವುದೇ ತೊಂದರೆಯಾಗದೆ ಶಾಂತಯುತವಾಗಿ ಪ್ರತಿಭಟನೆ ಮಾಡಲಿ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಚಾಲಕನಿಗೆ ಬಲವಂತದ ಸನ್ಮಾನ – ಮುಖಕ್ಕೆ ಉಗಿದು ಅವಮಾನ!
ಇನ್ನು ಬೆಂಗಳೂರು ಬಂದ್ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸಾರಿಗೆ ಒಕ್ಕೂಟಗಳಿಂದ ನಡೆಸಲಾಗುತ್ತಿರುವ ಬಂದ್ ರಾಜಕೀಯ ಪ್ರೇರಿತವಾಗಿದ್ದು, ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದಲೂ ಸಾರಿಗೆ ಸಂಸ್ಥೆಗಳ ಬೇಡಿಕೆಗಳಿವೆ. ಕಾಂಗ್ರೆಸ್ ಸರ್ಕಾರ ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ಜಾರಿಗೆ ತಂದಿದೆ. ಖಾಸಗಿಯವರ ಬೇಡಿಕೆ ಈಡೇರಿಕೆ ಸಂಬಂಧ ಯಾರೋ ಅಧಿಕಾರಿ ಏನೋ ಹೇಳಿದ್ದಾರೆ ಎಂದು ಸಿಎಂ ಜೊತೆಗಿನ ಸಭೆಯಲ್ಲಿ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿಲ್ಲ. ಕಾನಾನೂತ್ಮ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕೆಲವು ಪ್ರಕರಣಗಳು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಲ್ಲಿದ್ದು, ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಶಕ್ತಿ ಯೋಜನೆಯಿಂದ ಆಗುವ ನಷ್ಟವನ್ನು ಪ್ರಾಯೋಗಿಕವಾಗಿ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದರು.