ಸಚಿನ್ Vs ಲಾರಾ.. ಗೆಲ್ಲೋದ್ಯಾರು? – ಮಾಸ್ಟರ್ಸ್ ಲೀಗ್ ಫೈನಲ್ ಫೈಟ್  

ಸಚಿನ್ Vs ಲಾರಾ.. ಗೆಲ್ಲೋದ್ಯಾರು? – ಮಾಸ್ಟರ್ಸ್ ಲೀಗ್ ಫೈನಲ್ ಫೈಟ್  

90 ದಶಕದಲ್ಲಿ ಕ್ರಿಕೆಟ್ ಅಂದ್ರೆ ಥಟ್ ಅಂತಾ ನೆನಪಾಗ್ತಾ ಇದ್ದದ್ದೇ ಸಚಿನ್ ತೆಂಡೂಲ್ಕರ್. 16ನೇ ವಯಸ್ಸಲ್ಲೇ ಅಂತಾರಾಷ್ಟ್ರೀಯ ಅಖಾಡಕ್ಕೆ ಧುಮುಕಿದ ಸಚಿನ್ ಹಿಂತಿರುಗಿ ನೋಡಿದ್ದೇ ಇಲ್ಲ. ಅದೇ ಟೈಮಲ್ಲಿ ಸೂಪರ್ ಸ್ಟಾರ್ ಆಟಗಾರನಾಗಿ ಮೆರೆದ ಮತ್ತೊಬ್ಬ ಪ್ಲೇಯರ್ ಬ್ರಿಯಾನ್ ಲಾರಾ. ಸೌತ್ ಆಫ್ರಿಕಾ ತಂಡದ ದಂತಕತೆ. ಈಗ ಇದೇ ಲೆಜೆಂಡರಿ ಕ್ರಿಕೆಟರ್ಸ್ ಮತ್ತೊಮ್ಮೆ ಮುಖಾಮುಖಿಯಾಗ್ತಿದ್ದಾರೆ.

ಇದನ್ನೂ ಓದಿ : ದ್ವಿಪಕ್ಷೀಯ ಸರಣಿಗಳನ್ನ ಆಡುವಂತೆ ಭಾರತಕ್ಕೆ ಪಾಕ್ ಸವಾಲ್ – ಪಂಥಾಹ್ವಾನ ಒಪ್ಪುತ್ತಾ ಟೀಂ ಇಂಡಿಯಾ?

ಕ್ರಿಕೆಟ್​ಗೆ ವಿದಾಯ ಹೇಳಿ ಮೈದಾನದಿಂದ ಹಿಂದೆ ಸರಿದಿದ್ದ ಸೂಪರ್ ಸ್ಟಾರ್ ಪ್ಲೇಯರ್​ಗಳೆಲ್ಲಾ ಮಾಸ್ಟರ್ಸ್ ಲೀಗ್ ಮೂಲಕ ಒಟ್ಟುಗೂಡಿದ್ದಾರೆ. ಬ್ಯಾಟ್, ಬಾಲ್ ಹಿಡಿದು ಗ್ರೌಂಡ್​ಗೆ ಇಳಿದು ಏಜ್ ಅನ್ನೋದು ಜಸ್ಟ್ ನಂಬರ್ ಅಷ್ಟೇ, ನಮ್ಮಲ್ಲಿನ್ನೂ ಆಡೋ ಗತ್ತು, ತಾಕತ್ತು ಎರಡೂ ಇದೆ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ. ಅದ್ರಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವ್ರ ಬ್ಯಾಟಿಂಗ್ ಮಿಸ್ ಮಾಡಿಕೊಂಡವ್ರಿಗೆ ದೇವರ ಆಟವನ್ನ ಮತ್ತೊಮ್ಮೆ ನೋಡೋ ಸುವರ್ಣಾವಕಾಶ ಸಿಕ್ಕಿದೆ. ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್​ನ ಚೊಚ್ಚಲ ಆವೃತ್ತಿಯಲ್ಲೇ ಸಚಿನ್ ನೇತೃತ್ವದ ಭಾರತ ಮತ್ತು ಬ್ರಿಯಾನ್ ಲಾರಾ ನಾಯಕತ್ವದ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ.

ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯೋ ಮೂಲಕ ಭಾರತ ಫಿನಾಲೆಗೆ ಲಗ್ಗೆ ಇಟ್ಟಿತ್ತು. ಗುರುವಾರ ನಡೆದ ಐಎಂಎಲ್‌ನ ಮೊದಲ ಸೆಮಿಫೈನಲ್‌ನಲ್ಲಿ ಇಂಡಿಯಾ ಮಾಸ್ಟರ್ಸ್ ತಂಡ ಆಸ್ಟ್ರೇಲಿಯಾ ಮಾಸ್ಟರ್ಸ್ ಅನ್ನು 94 ರನ್‌ಗಳಿಂದ ಸೋಲಿಸಿತು. ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 220 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಯಿತು.  ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಲಾರಾ ಅವರ 41 ರನ್‌ಗಳ ಇನ್ನಿಂಗ್ಸ್ ಮತ್ತು ದಿನೇಶ್ ರಾಮ್ದಿನ್ ಅವರ ಅಜೇಯ 50 ರನ್‌ಗಳ ನೆರವಿನಿಂದ ವೆಸ್ಟ್ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಮಾಸ್ಟರ್ಸ್ 9 ವಿಕೆಟ್‌ ಕಳೆದುಕೊಂಡು 173 ರನ್‌ಗಳಿಸಿತು. ದಿನೇಶ್ ರಾಮ್ದಿನ್ ಅವರ ಅರ್ಧಶತಕ, ಬ್ರಿಯಾನ್ ಲಾರಾ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಟಿನೊ ಬೆಸ್ಟ್ ಅವರ ನಾಲ್ಕು ವಿಕೆಟ್‌ಗಳ ನೆರವಿನಿಂದ ಶ್ರೀಲಂಕಾ ತಂಡವನ್ನು ಸೋಲಿಸುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಯಿತು.

ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್ ನಲ್ಲಿ ಭಾರತವನ್ನ ಸಚಿನ್ ತೆಂಡೂಲ್ಕರ್ ಲೀಡ್ ಮಾಡ್ತಿದ್ರೆ ವೆಸ್ಟ್ ಇಂಡೀಸ್​ನ ಬ್ರಿಯಾನ್ ಲಾರಾ ಮುನ್ನಡೆಸ್ತಾ ಇದ್ದಾರೆ. ಮಾರ್ಚ್ 16ರ ಭಾನುವಾರ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಮಾಸ್ಟರ್ಸ್ ಲೀಗ್​ನಲ್ಲಿ 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಚಿನ್ ತೆಂಡೂಲ್ಕರ್ 156 ರನ್ ಗಳನ್ನ ಕಲೆ ಹಾಕಿದ್ದಾರೆ. ಇನ್ನು ಬ್ರಿಯಾನ್ ಲಾರಾ 4 ಪಂದ್ಯಗಳಿಂದ 107 ರನ್ ಗಳನ್ನ ಗಳಿಸಿದ್ದಾರೆ. ಒಂದು ಕಾಲದಲ್ಲಿ ಕ್ಯಾಪ್ಟನ್ಸ್ ಆಗಿ ಅಷ್ಟೇನು ಶೈನ್ ಆಗದೇ ಇದ್ರೂ ಆಟಗಾರರಾಗಿ ಇಡೀ ಕ್ರಿಕೆಟ್ ಜಗತ್ತನ್ನೇ ಆಳಿದ ಈ ಇಬ್ಬರು ಮತ್ತೊಮ್ಮೆ ಎದುರು ಬದುರಾಗ್ತಿದ್ದಾರೆ.

ಸಚಿನ್ ತೆಂಡೂಲ್ಕರ್ 1989 ರಿಂದ 2013 ರವರೆಗೆ ಒಟ್ಟು 24 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಂದರ್ಭಗಳಲ್ಲಿ ಭಾರತದ ಪರ ಸಚಿನ್ 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಹಲವು ದಾಖಲೆಯನ್ನು ಸೃಷ್ಟಿಸಿದ್ದಾರೆ. ಸಚಿನ್ ಮೂರು ಮಾದರಿ ಕ್ರಿಕೆಟ್‌ಗಳಿಂದ 100 ಅಂತಾರಾಷ್ಟ್ರೀಯ ಶತಕಗಳೊಂದಿಗೆ 34,357 ರನ್ ಗಳಿಸಿದ್ದಾರೆ. ಇದರೊಂದಿಗೆ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಮಾತ್ರ ಆಡಿದ್ದಾರೆ.

ವೆಸ್ಟ್ ಇಂಡೀಸ್​ನ ದಂತಕತೆ ಬ್ರಿಯಾನ್ ಲಾರಾ ಕೂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ರು. ಜಗತ್ತು ಕಂಡ ಪರಮಶ್ರೇಷ್ಠ ಕ್ರಿಕೆಟಿಗರಲ್ಲಿ ಇವರೂ ಒಬ್ಬರು. ಇವರ ಹೆಸರಲ್ಲಿ ಅನೇಕ ದಾಖಲೆಗಳಿದ್ದರೂ ಸಹ, 2 ದಾಖಲೆಗಳನ್ನು ಮಾತ್ರ ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ. ಬ್ರಿಯಾನ್ ಲಾರಾ ದೇಶೀಯ ಕ್ರಿಕೆಟ್‌ನಿಂದಲೇ ಸಂಚಲನ ಸೃಷ್ಟಿಸಿದ್ದರು. 1994 ರಲ್ಲಿ ಇಂಗ್ಲಿಷ್ ಕೌಂಟಿಯಲ್ಲಿ  501 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು, ಕಳೆದ 30 ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.  ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಲವು ತ್ರಿಶತಕಗಳು ದಾಖಲಾಗಿವೆ. ಆದರೆ ಇದುವರೆಗೂ ಲಾರಾ ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಇಂದಿಗೂ ಅವರ ಹೆಸರಿನಲ್ಲಿ 400 ರನ್‌ಗಳ ದಾಖಲೆ ಇದೆ.  2004ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 400 ರನ್​ಗಳನ್ನ ಗಳಿಸಿ ನಾಔಟ್ ಆಗಿ ಉಳಿದಿದ್ರು. ಒಟ್ಟಾರೆಯಾಗಿ ಟೆಸ್ಟ್​ನಲ್ಲಿ 11,953 ರನ್ ಹಾಗೇ ಏಕದಿನದಲ್ಲಿ 10,405 ರನ್ ಕಲೆ ಹಾಕಿದ್ದಾರೆ.

Shantha Kumari