ಕಾಂತಾರ ಚಾಪ್ಟರ್ 1 ವೀಕ್ಷಣೆ ವೇಳೆ ಹುಚ್ಚಾಟ! – ಅಭಿಮಾನಿಗಳಿಗೆ ಡಿವೈನ್ ಸ್ಟಾರ್ ವಾರ್ನ್!

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ಕಾಂತಾರ: ಚಾಪ್ಟರ್ 1 ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನ ಕಳೆದಂತೆ, ಕಲೆಕ್ಷನ್‌ನಲ್ಲಿ ಏರಿಕೆ ಕಂಡು ಬಂದಿದೆ. ಈಗಾಗಲೇ ಈ ಚಿತ್ರದ ಗಳಿಕೆ 300 ಕೋಟಿ ರೂ. ದಾಟಿದೆ. ಈ ವರ್ಷ ಕನ್ನಡ ಯಾವ ಸಿನಿಮಾವೂ ಮಾಡಿರದಂತಹ ಸಾಧನೆಯನ್ನು ‘ಕಾಂತಾರ: ಚಾಪ್ಟರ್ 1’ ಮಾಡಿದೆ. ಅಲ್ಲದೇ, ಭಾರತ ವಿವಿಧ ಭಾಷೆಗಳ ಪ್ಯಾನ್ ಇಂಡಿಯಾ ಸಿನಿಮಾಗಳ ದಾಖಲೆ ಕೂಡ ಛಿದ್ರವಾಗಿದೆ. ಆದ್ರೆ ಕೆಲವರು ಸಿನಿಮಾ ನೋಡಿದ ಬಳಿಕ ದೈವ ಆವಾಹನೆ ಆದಂತೆ ನಟಿಸುತ್ತಿದ್ದಾರೆ. ಇನ್ನೂ ಕೆಲವರು ವೇಷ ತೊಟ್ಟು ಅತಿರೇಕವಾಗಿ ವರ್ತಿಸ್ತಿದ್ದಾರೆ. ಈ ಬೆನ್ನಲ್ಲೇ ನಟ ರಿಷಭ್ ಶೆಟ್ಟಿ ಆಂಡ್ ಟೀಮ್ ಅಭಿಮಾನಿಗಳಿಗೆ ಖಡಕ್ ವಾರ್ನ್ ಮಾಡಿದ್ದಾರೆ.
ಇದನ್ನೂ ಓದಿ:ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್ – ರಿಷಭ್ ಶೆಟ್ಟಿ ಮ್ಯಾಜಿಕ್ ಸೂಪರ್ ಎಂದ ಕನ್ನಡಿಗ ಕ್ರಿಕೆಟರ್
ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸುವಾಗ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ನಟ ರಿಷಭ್ ಶೆಟ್ಟಿಗೆ ಬೆಂಗಳೂರು ತುಳುಕೂಟ ಪತ್ರ ಬರೆದು ಅಭಿಮಾನಿಗಳಿಗೆ ಬುದ್ದಿ ಹೇಳುವಂತೆ ಮನವಿ ಮಾಡಿದ್ರು. ಇದೀಗ ಅತೀರೇಕದ ವರ್ತನೆ ತೋರಿದವರ ವಿರುದ್ಧ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನ ರಿಷಭ್ ಶೆಟ್ಟಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ರಿಷಭ್ ಅಭಿಮಾನಿಗಳಿಗೆ ವಾರ್ನ್ ಮಾಡಿದ್ದಾರೆ.
ರಿಷಭ್ ಶೆಟ್ಟಿ ಪೋಸ್ಟ್‌ನಲ್ಲಿ ಏನಿದೆ?
ಸಿನಿಪ್ರಿಯರೇ,
ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗೆಗಿನ ಅಪಾರ ಗೌರವ ಮತ್ತು ಅಚಲ ಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನೆಮಾದಲ್ಲಿ ತೋರಿಸಿದ್ದೇವೆ. ತುಳು ಮಣ್ಣಿನ ಮಹತ್ವ ಹಾಗೂ ಪರಂಪರೆಯನ್ನು ಇಡೀ ಜಗತ್ತಿಗೆ ಸಾರುವಲ್ಲಿ ನಮ್ಮದ್ದಾದ ಕೊಡುಗೆಯನ್ನು ಕೊಟ್ಟಿದ್ದೇವೆ. ಆದರೆ ಕೆಲವರು ಸಿನೆಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು, ಅಕ್ಷಮ್ಯ ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ ಅದುದರಿಂದ ಚಿತ್ರಮಂದಿರ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ.

ನೋಡಿರಿ

