ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುಂಬೈಗೆ ಅಪ್ಪಳಿಸಲಿದೆ ‘ತೇಜ್‌’ ಚಂಡಮಾರುತ!

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುಂಬೈಗೆ ಅಪ್ಪಳಿಸಲಿದೆ ‘ತೇಜ್‌’ ಚಂಡಮಾರುತ!

ಮುಂಬಯಿ: ಕರ್ನಾಟಕದಲ್ಲಿ ಈವರೆಗೆ ದುರ್ಬಲಗೊಂಡಿರುವ ಮಳೆ ಮತ್ತೆ ಚುರಕುಗೊಳ್ಳುವ ಲಕ್ಷಣಗಳು ಕಂಡುಬರುತ್ತಿದೆ. ಒಂದೆಡೆ ಹಿಂಗಾರು ಮಳೆ ಸಕ್ರಿಯಗೊಳ್ಳುತ್ತಿದೆ. ಮತ್ತೊಂದೆಡೆ ಅರಬ್ಬಿ ಸಮುದ್ರ ವಾಯುಭಾರ ಕುಸಿತಗೊಂಡಿದ್ದು, ಪ್ರತಿಕೂಲ ವಾತಾವರಣ ತೀವ್ರಗೊಂಡಲ್ಲಿ ಮುಂದಿನ ಎರಡು ದಿನಗಳಲ್ಲಿ ‘ತೇಜ್‌’ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಲಕ್ಷಣಗಳು ಕಾಣಿಸಿಕೊಂಡಿದ್ದು, ವಾಯುಭಾರ ಕುಸಿತವು ಮುಂದಿನ ಎರಡು ದಿನಗಳಲ್ಲಿ ಚಂಡಮಾರುತದ ತೀವ್ರತೆ ಪಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಚಂಡಮಾರುತ ಸೃಷ್ಟಿಯಾದಲ್ಲಿ ಅಕ್ಟೋಬರ್‌ 21ರ ಹೊತ್ತಿಗೆ ಮುಂಬಯಿ ಕಡಲ ತೀರದ ಮೇಲೆ ಪರಿಣಾಮ ಬೀರಲಿದೆ. ಚಂಡಮಾರುತದ ಅಬ್ಬರ ಜೋರಾದಲ್ಲಿ ಮುಂಬಯಿ, ಪುಣೆ ಹಾಗೂ ಕೊಂಕಣ ಭಾಗಕ್ಕೆ ತೀವ್ರ ಹಾನಿಯಾಗಲಿದೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಶಿರಸಿ -ಕುಮಟಾ ಹೆದ್ದಾರಿ ಬಂದ್‌ ಬರೋಬ್ಬರಿ 7 ತಿಂಗಳು ಬಂದ್‌! – ಬದಲಿ ಮಾರ್ಗ ಯಾವುದು?

ಅರಬ್ಬಿ ಸಮುದ್ರದಲ್ಲಿನ ಪ್ರತಿಕೂಲ ಹವಾಮಾನವು ಚಂಡಮಾರುತವಾಗಿ ಮಾರ್ಪಟ್ಟರೆ, ಗಾಳಿಯು ಗಂಟೆಗೆ 60 ಕಿಮೀ ವೇಗದಲ್ಲಿ ಬೀಸಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಮೂರು ನಾಲ್ಕು ದಿನ ಆಳ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಸಿದೆ. ಇತ್ತೀಚಿನ ಹವಾಮಾನ ಮಾಹಿತಿಗಳನ್ನು ತಿಳಿಯುತ್ತಿರುವಂತೆ ಹಾಗೂ ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮಹಾರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ ಕರಾವಳಿಯ ನಿವಾಸಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ಐದು ದಿನಗಳ ಕಾಲ ಮುಂಬಯಿ ಸೇರಿದಂತೆ ಕೊಂಕಣ್‌ ಕರಾವಳಿ ಭಾಗದ ಕೆಲವು ಕಡೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

Shwetha M