ChatGPT ಬಳಸಿ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ಸಾ*ವು! – IIT ಬಾಂಬೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಮುಂಬೈನ ಐಐಟಿ ಬಾಂಬೆ ಪವಾಯಿ ಕ್ಯಾಂಪಸ್ನಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೆಪ್ಟೆಂಬರ್ 18ರಂದು ಎರಡನೇ ವರ್ಷದ ಎನರ್ಜಿ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೊಬೈಲ್ ಬಳಸುತ್ತಿದ್ದದ್ದು ಪತ್ತೆಯಾಗಿತ್ತು. ಐಐಟಿ ಬಾಂಬೆ ನೀಡಿರುವ ಮಾಹಿತಿಯಂತೆ, ವಿದ್ಯಾರ್ಥಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ChatGPTಗೆ ಅಪ್ಲೋಡ್ ಮಾಡಿ ಉತ್ತರ ಪಡೆಯಲು ಪ್ರಯತ್ನಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:ತುಳು ಭಾಷೆಗೆ ಅಧಿಕೃತ ಮಾನ್ಯತೆ! ದಶಕಗಳ ಹೋರಾಟಕ್ಕೆ ಜಯ?
ಘಟನೆಯ ಬಳಿಕ ವಿದ್ಯಾರ್ಥಿಯೊಂದಿಗೆ ಪರೀಕ್ಷಾ ಬೋಧಕರು ಹಾಗೂ ವಿಭಾಗದ ಮುಖ್ಯಸ್ಥರು ಮಾತನಾಡಿದ್ದರು. ಸಂಸ್ಥೆಯ ಹೇಳಿಕೆಯ ಪ್ರಕಾರ, ಆತನ ವಿರುದ್ಧ ಯಾವುದೇ ಔಪಚಾರಿಕ ಶಿಸ್ತು ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ, ಈ ಘಟನೆ ಆತನ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಬಳಿಕ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೊಠಡಿಗೆ ತೆರಳಿದ್ದಾನೆ. ಸಂಜೆ ವೇಳೆಗೆ ಆತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಾವಿನ ನಿಖರ ಕಾರಣ ಮತ್ತು ಇತರ ಪರಿಸ್ಥಿತಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಬಳಿಕ ಐಐಟಿ ಬಾಂಬೆ ಕ್ಯಾಂಪಸ್ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಆಡಳಿತದಿಂದ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರಗಳನ್ನು ಒತ್ತಾಯಿಸಿದ್ದಾರೆ. ವರದಿಗಳ ಪ್ರಕಾರ, ಪವಾಯಿ ಕ್ಯಾಂಪಸ್ನಲ್ಲಿ ಕಳೆದ ಆರು ತಿಂಗಳಲ್ಲಿ ಇದು ಮೂರನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮಿಡ್-ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಒತ್ತಡ, ಮಾನಸಿಕ ಆರೋಗ್ಯ ಹಾಗೂ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ನೋಡಿರಿ

