ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ನೋಡಿ! – ದೇಗುಲದಲ್ಲಿ ಫ್ಲೆಕ್ಸ್ ಹಾಕಿದ್ಯಾರು?
ಮೇ 5 ರಂದು ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ಬಿಡುಗಡೆಯಾಗಿದ್ದು, ದಿನಕಳೆದಂತೆ ಪರ, ವಿರೋಧ ಚರ್ಚೆಗಳು ಕೂಡ ಹೆಚ್ಚಾಗುತ್ತಿದೆ. ಒಂದೆಡೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿರುವ ಘಟನೆಯೂ ನಡೆದಿದೆ. ಅಲ್ಲದೇ ತೆರಿಗೆ ವಿನಾಯಿ ನೀಡಿರುವ ಬೆಳವಣಿಗೆಯೂ ನಡೆದಿದೆ. ಅಷ್ಟೇ ಅಲ್ಲದೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಮೀರಿದ ಕಮಾಯಿ ಮಾಡಿದೆ.
ಇದನ್ನೂ ಓದಿ: ಟ್ರಾಫಿಕ್ ಮಧ್ಯೆ ಸಿಲುಕಿದ ಅಮಿತಾಭ್ ಬಚ್ಚನ್ – ಶೂಟಿಂಗ್ ಸ್ಪಾಟ್ ಗೆ ತೆರಳಲು ಮಾಡಿದ್ದೇನು ಗೊತ್ತಾ?
‘ದಿ ಕೇರಳ ಸ್ಟೋರಿ’ ಸಿನಿಮಾ ಸಿನಿಮಾವನ್ನು ಒಂದು ಬಾರಿಯಾದರೂ ನೋಡಿ. ಮತಾಂತರ ಪಿಡುಗಿನ ಬಗ್ಗೆ ಅರಿತುಕೊಳ್ಳಿ ಎಂದು ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳು ಸಂದೇಶ ರವಾನಿಸುತ್ತಿದ್ದಾರೆ. ಇದೀಗ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ! ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಪ್ರಸಿದ್ಧ ಕೊಲ್ಲೂರು ಮೂಕಾಂಬಿಕ ಕ್ಷೇತ್ರಕ್ಕೆ ದೇಶದ ನಾನಾ ಭಾಗಗಳಿಂದ ಆಗಮಿಸುತ್ತಾರೆ. ಕೇರಳ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದನ್ನೇ ಟಾರ್ಗೆಟ್ ಮಾಡಿರುವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಿನಿಮಾ ಕುರಿತಾಗಿ ದೇವಾಲಯ ದ್ವಾರ ಹಾಗೂ ಆರವಣ ಬಳಿ ಬ್ಯಾನರ್ ಅಳವಡಿಸಿದ್ದಾರೆ. ಈ ಬ್ಯಾನರ್ ನಲ್ಲಿ ‘ಮಲಯಾಳಿ ಭಕ್ತರಿಗೆ ಸ್ವಾಗತ, ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ದಿ ಕೇರಳ ಸ್ಟೋರಿ ಸಿನಿಮಾ ನೋಡಿ’ ಎಂದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ.
ದೇಗುಲದ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ಮುಂತಾದವರ ನೇತೃತ್ವದಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಫ್ಲೆಕ್ಸ್ ಕೊಲ್ಲೂರು ದೇವಸ್ಥಾನಕ್ಕೆ ಬರುವ ಭಕ್ತರ ಗಮನ ಸೆಳೆಯುತ್ತಿದೆ.