ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮುನ್ನ ಎಚ್ಚರ! – ಇನ್ನುಮುಂದೆ ನಿಮ್ಮ ಬಾಸ್ಗೇ ದೂರು ನೀಡುತ್ತಾರೆ ಪೊಲೀಸರು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಿಕ್ಕ ಸಿಕ್ಕಲ್ಲಿ ವಾಹನಗಳಲ್ಲಿ ನುಗ್ಗಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದನ್ನು ತಡೆಯಲು ನಗರದ ಸಂಚಾರಿ ಪೊಲೀಸರು ಹೊಸ ಹೊಸ ರೂಲ್ಸ್ ಜಾರಿ ಮಾಡುತ್ತಲೇ ಇದ್ದಾರೆ. ಆದ್ರೂ ಕೂಡ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ. ಇದೀಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು ವಿನೂತನ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ. ಇನ್ನುಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಿಮ್ಮ ಬಾಸ್‌ಗೆ ದೂರು ಹೋಗುತ್ತೆ.
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್! – ಇನ್ನುಮುಂದೆ ಇಂತಹ ಸಿನಿಮಾಗಳನ್ನು ಪ್ರಸಾರ ಮಾಡಲ್ಲ!
ಹೌದು, ರಾಜ್ಯ ರಾಜಧಾನಿ ಬೆಂಗಳೂರು ಪೊಲೀಸರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಕಂಪನಿಗೆ ಮಾಹಿತಿ ರವಾನಿಸಿ ಅವರ ಬಾಸ್ಗಳಿಂದಲೇ ಬುದ್ಧಿ ಹೇಳಿಸುವ ಕೈಂಕರ್ಯಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಹೊರ ವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರದೇಶದ ಬಹು ನಾಗರಿಕರ ಸಂಘಟನೆಗಳ ಸದಸ್ಯರು ಈ ಅಭಿಯಾನವನ್ನು ನಡೆಸುವಂತೆ ಸಲಹೆ ನೀಡಿದ್ದರು ಎಂದು ಪೊಲೀಸ್ ಉಪ ಕಮಿಷನರ್ (ಪೂರ್ವ) ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ. ಪ್ರಸ್ತುತ, ಈ ಅಭಿಯಾನವು ಒನ್ ವೇ ರೂಲ್ಸ್ ಬ್ರೇಕ್ ಮಾಡುವವರನ್ನು ಮಾತ್ರ ಕೇಂದ್ರೀಕರಿಸಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೇಗೆ ಕಾರ್ಯ ನಿರ್ವಹಿಸಲಿದೆ ಅಭಿಯಾನ?
ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ತಕ್ಷಣ ದಂಡ ವಿಧಿಸಲಾಗುತ್ತದೆ. ವ್ಯಕ್ತಿಯ ಸಾಮಾನ್ಯ ವಿವರಗಳು ಮತ್ತು ಅವರು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯನ್ನು ಕಂಪನಿ ಐಡಿ ಕಾರ್ಡ್ಗಳಿಂದ ಕಲೆಹಾಕಲಾಗುತ್ತದೆ. ಪ್ರತಿ ದಿನದ ಕೊನೆಯಲ್ಲಿ, ಈ ಮಾಹಿತಿಯನ್ನು ಆಯಾಯ ವ್ಯಕ್ತಿಗಳ ಕಂಪನಿಗಳಿಗೆ ಇಮೇಲ್ ಮಾಡಲಾಗುತ್ತದೆ.
ಕಳೆದ ವಾರ, ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಸುಮಾರು 200 ಮಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವವರನ್ನು ಹಿಡಿದು, ದಂಡ ವಿಧಿಸಲಾಗಿದೆ. ಜತೆಗೆ ಅವರ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ. ಈ ತಪಾಸಣೆಗಳು ಪೀಕ್ ಅವರ್‌ಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಬೆಳಿಗ್ಗೆ 8 ರಿಂದ 10 ರವರೆಗೆ ಮತ್ತು ಸಂಜೆ 6 ರಿಂದ 8 ರವರೆಗೆ ನಡೆಯುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.